ನನ್ನ ಹೊಸ ಬಿಕ್ಕಿದ ಸಾಲುಗಳು


ನನ್ನ ಹೊಸ ಬಿಕ್ಕಿದ ಸಾಲುಗಳಿವು. ಕೆಲಸದ ಒತ್ತಡದಿಂದ ಬ್ಲಾಗ್ ನ್ನು ಸಕಾಲದಲ್ಲಿ ಹೊಸ ಪೋಸ್ಟ್ ಗಳನ್ನು ಹಾಕಲು ಆಗಲಿಲ್ಲ. ಈ ಹೊಸ ಪೋಸ್ಟ್ ಓದಿ ಅಭಿಪ್ರಾಯ ವ್ಯಕ್ತಪಡಿಸಿ.

ಬೆಳಕಿನ ಜಾತ್ರೆಯಲ್ಲಿ
ಕತ್ತಲೆ
ಒಬ್ಬಂಟಿ
**

ತಾವರೆ ಅರಳುವ ಮುನ್ನ
ಸೂರ್ಯನಿಗೆ ಹೇಳಿತಂತೆ
ನೀನಿರುವಷ್ಟು ಹೊತ್ತು
ನಾನು
ಸೂರ್ಯ ಮುಳುಗುವಾಗ
ಹೇಳಿದನಂತೆ
ನೀನಿರುವಷ್ಟೇ ಹೊತ್ತು
ನಾನೂ ಸಹ
****

ಈ ಬೇಸಗೆ
ಮತ್ತಷ್ಟು ಸೆಕೆ
ಅವಳಿಲ್ಲ
ಅವನೂ ಇಲ್ಲ
ಅವಳೂ ಇಲ್ಲ

***
ಬಯಲಲ್ಲಿ ಇದ್ದೂ ಇದ್ದೂ
ಸಾಕಾಗಿದೆ
ಪಡಸಾಲೆಯಲ್ಲಿ ಯಾರೂ
ಇಲ್ಲವೆಂದೇ
ಅಲ್ಲಿಗೆ ಹೋಗಿದ್ದೆ
ಈಗ ಪಡಸಾಲೆಗೆ ಬರುವ ತವಕ
ಇಲ್ಲೂ ಯಾರೂ ಇಲ್ಲ, ಕತ್ತಲೆ
ಕಣ್ಣೂ ಸಹ ತೋರುತ್ತಿಲ್ಲ
**

ಹೂವು ಹೆಣೆದವಳು
ಮಾರಾಟಕ್ಕಿಟ್ಟಳು
ಮುಡಿ ಇಲ್ಲದವಳು
ಕೊಂಡು ಹೋದಳು
ಗುಡಿಯೊಳಗಿನ ದೇವರು ನಗುತ್ತಿದ್ದ
ಇವಳು
ದೇವರ ತಟ್ಟೆಯಲ್ಲಿ ಇಟ್ಟು ಬಿಟ್ಟಳು
ಅರ್ಚಕ ವಿಗ್ರಹದ ಮುಡಿಗೇರಿಸಿದ
ಈಕೆಗೆ ಹೂವನ್ನು ಸ್ವರ್ಗಕ್ಕೆ ಸೇರಿಸಿದ ಭಾವ
ಹೂವಿಗೆ ನರಕದ್ದೇ ನೆನಪು,
ಪರಿಮಳಗಳ ಸಂತೆಯಂಥ ಸ್ವರ್ಗಕ್ಕಿಂತ
**

ಕತ್ತಲೆಯನ್ನು ಸೀಳುವ
ಕಣ್ಣಿಗೂ
ಈಗ ಸುಸ್ತು
**

ಅವಳು ಬಂದಳು
ಎದುರು ನಿಂದು
ಒಲವಿನ ಆಹ್ವಾನ ಕೊಟ್ಟಳು
ಅಚ್ಚರಿ ಎನಿಸಲಿಲ್ಲ
ಸಂತೋಷ ತುಂಬಿ ಬಂತು
ಒಪ್ಪಿಗೆ ಕೊಟ್ಟೆ
ಅಷ್ಟೇ,
ನನ್ನ ಒಲವಿನ ಮಾತು
ಕೇಳಿಸಿಕೊಳ್ಳಲೂ ಆಕೆ
ನಿಲ್ಲಲಿಲ್ಲ
ನಾನೀಗ
ಅವಳ ನಗುವಿನ ನೆರಳನ್ನೇ
ಹಿಂಬಾಲಿಸುತ್ತಿದ್ದೇನೆ
**

ಎಲ್ಲರಿಗೂ
ಮುಕ್ತರಾಗುವ ಬಯಕೆ
ಎಲ್ಲದರಿಂದ
ಬುದ್ಧನಂತೆ
ಅದಕ್ಕೇ ಇನ್ನೂ ಮುಕ್ತರಾಗಬೇಕಾದ
ಬಯಕೆಯ ಪಟ್ಟಿಯನ್ನು
ಅಖೈರುಗೊಳಿಸಿಲ್ಲ
**

ಬುದ್ಧ
ನಗುತ್ತಾ ನಗುತ್ತಾ
ಮೌನದ ಒಳ
ಹೊಕ್ಕುವಾಗ
ಮಾತು ಹೇಳಿತಂತೆ
ನೋಡು, ನೀನು
ನನ್ನನ್ನು ನಿರ್ಲಕ್ಷ್ಯಿಸುತ್ತಿದ್ದೀಯಾ
ಬುದ್ಧ ಪ್ರತಿಯಾಗಿ
ಏನೂ ಹೇಳಲಿಲ್ಲ
ಮತ್ತೊಮ್ಮೆ ನಕ್ಕಿದ
ಮಾತಿಗೆ ಅರ್ಥವಾಯಿತು
ಈತ ಮೌನದ ಮೋಹಿ
**

ಮೌನಕ್ಕೆ ಭಾಷ್ಯ
ಬರೆಯಲು ಹೋದ
ಮಾತಿಗೆ
ಆಯಸ್ಸು ತೀರಿತು
**

ಮತ್ತೆ ಸಿಕ್ಕ ಸಾಲುಗಳು

ನೀನು ಬಿಟ್ಟು ಹೋದ
ನೆನಪಿಗೆ
ಎಂಥಾ ಶಕ್ತಿ ಹೇಳು
ನನ್ನ ಕಾಯುತ್ತಿದೆ
ಇಂದಿಗೂ
ಹಗಲೂ ಇರುಳು !
***
ಆ ದಾರಿಯಲಿ
ನೀನು
ಬರಬೇಡ
ನನಗೀಗ
ಆ ಹಾದಿ
ನೆನಪಿಲ್ಲ
***

ನೆನಪಿರದ
ಹಾದಿಯಲಿ
ಎಷ್ಟು ಬಾರಿ ಬಂದರೂ
ನೀನು
ಮರೆತು ಹೋಗುತಿ
***
ಬೆಳಕು ಮುಗಿವ ಮುನ್ನ
ನನ್ನೊಳಗೆ
ಬಂದು ಬಿಡು
ಹೊತ್ತಿಕೊಳ್ಳಲಿ ದೀಪ

ಆ ಮೂಲೆಯೊಳಗೆ
ನೀನಿರಲು
ಹೊರಗೇಕೆ ಬೇಕು
ಮತ್ತೆ
ಆ ಕಣ್ಣುಕುಕ್ಕುವ
ಬೆಳಕು
***
ಕತ್ತಲೆಯ ಕಂಡವರು
ಬೆಳಕನ ಹುಡುಕುವರು
ಕತ್ತಲೆಯಲಿ ಕರಗಿದವರು
ಬೆಳಕಾಗಿ ಬಂದರು

ಇದು ಹಾಯ್ಕುಗಳೋ…ನೀವೇ ಹೇಳಿ !

ಹೀಗೆ ಹೊಳೆದ ಸಾಲುಗಳನ್ನು ಬರೆದೆ. ಬಿಕ್ಕಿದ ಸಾಲುಗಳು ಎನ್ನುವುದಕ್ಕೆ ಕಷ್ಟವಾಯಿತು. ಹಾಯ್ಕುಗಳೋ ಅರ್ಥವಾಗಲಿಲ್ಲ. ಹೆಣೆದ ಸರವನ್ನು ಇಲ್ಲಿ ತೂಗು ಹಾಕಿದ್ದೇನೆ, ಬೀರುವ ಸೌಂದರ್ಯ ಕಂಡು ನೀವೇ ಹೇಳಿ. 

*

ಸುರಗಿಗೆ 

ಯಾಕೋ 

ಬೇಸರ

ಯಾರ ಮುಡಿಗೂ

ಏರಲು

ಸಿದ್ಧವಿಲ್ಲ

*

ಕೈಯಲ್ಲಿ ಹಿಡಿದ 

ಕೋಲು

ಅವನ 

ಕೇಳಿತು

ಯಾರು

ಅತಂತ್ರ ?

*

ನಗು

ವಂಚಿಸಿತು

ಹಾಗೆಂದು 

ಅಳೂ ಸಹ

ಸತ್ಯ ಹೇಳಲಿಲ್ಲ

ನಾನೀಗ

ಮೌನಿಯಾಗಬೇಕು

ಕಣ್ಣುಮುಚ್ಚಿ 

ಕುಳಿತುಕೊಳ್ಳುತ್ತೇನೆ

ಬಾಯಿಯನ್ನಲ್ಲ 

*

ಬಹಳ ದಿನಗಳ ನಂತರದ ಬಿಕ್ಕಿದ ಸಾಲುಗಳು

ಬಹಳ ದಿನಗಳ ನಂತರ ಒಂದಿಷ್ಟು ಬಿಕ್ಕಿದ ಸಾಲುಗಳನ್ನು ಬರೆದಿದ್ದೇನೆ. ಇದು ನನಗೆ ಖುಷಿ ಕೊಡುವ ಸಾಲುಗಳು.  ನಿಮಗೂ ಇಷ್ಟವಾದರೆ ಹೇಳಿ.

ನಕ್ಕ ನಕ್ಷತ್ರದ
ಮೊಗದಲಿ
ಬಿದ್ದ ಗುಳಿ ತೋರಲೇ ಇಲ್ಲ
*
ಬೆಳಕು
ಕತ್ತಲೆಯ ಹೊದ್ದು
ಮಲಗಿತು
ಕತ್ತಲೆಗಂದು
ಜಾಗರಣೆ
*
ಕಪ್ಪು
ಮದುವೆಯಾಗಲು
ಬಯಸಿತು
ಬಿಳಿ
ಒಪ್ಪಿಕೊಳ್ಳಲಿಲ್ಲ
ಕೆಂಪನ್ನು
ಕಪ್ಪು ಒಪ್ಪಲಿಲ್ಲ
ಹಸಿರು, ಹಳದಿ…
ಯಾರೂ ಇಷ್ಟವಾಗಲಿಲ್ಲ
ಕಪ್ಪು ಇಂದಿಗೂ ಬ್ರಹ್ಮಚಾರಿ
*
ಅಂಗಳದಲಿ
ಬಿದ್ದ
ಬೆಳಕಿನಲ್ಲಿ
ಆತ
ಅವಳನ್ನು
ಹುಡುಕುತ್ತಿದ್ದ
*
ವರ್ಷಗಟ್ಟಲೆ
ಅವನಿಗಾಗಿ
ಕಾದವಳು

ತಿಂಗಳೂ
ಕಾದಳು !
*
ಹೆಜ್ಜೆಗಳು ಪರಸ್ಪರ
ಚರ್ಚಿಸತೊಡಗಿದವು
ತಮ್ಮ
ಪಯಣದ ಬಗ್ಗೆ
ಅಲ್ಲಿ…ಇಲ್ಲಿ.. ಅದೂ…ಇದೂ
ದಾರಿ ತಪ್ಪಿದವು

ಎಲ್ಲವೂ ಮುಗಿದಿದೆ…

ಅವನ ಬಳಿ ಹೇಳುವುದೇನಿಲ್ಲ
ಎಲ್ಲವೂ ಮುಗಿದಿದೆ

ನನ್ನದೆಲ್ಲವನ್ನೂ ಕಳೆದುಕೊಂಡು
ಅವನಿಂದ ಪಡೆದದ್ದನ್ನೇ
ನನ್ನದೆಂದುಕೊಂತಿಡ ಕ್ಷಣದಿಂದ
ಹೀಗನಿಸಿದ್ದು ನಿಜ
ನಾನು ಅವನಿಗೆ ಅರ್ಥವಾಗಿದ್ದೇನೆ !

ಅವನೂ ಹಾಗೇ ಅಂದುಕೊಂಡನೇನೋ?
ನನಗೆ ಗೊತ್ತಿಲ್ಲ
ಅಂದಿನಿಂದ ನನ್ನ ಹೆಜ್ಜೆಯ
ನೆರಳನ್ನೂ ನೋಡಲು ಹೋಗಲಿಲ್ಲ
ಆತನ ನೆರಳು
ನನ್ನ ಹೆಜ್ಜೆಯೊಂದಿಗೆ ಕೂಡಿ
ನಡೆಯುತ್ತಿರಬಹುದೆಂದುಕೊಂಡೆ

ಪ್ರತಿ ಮಾತಿನ ಮಧ್ಯೆ ಉದ್ಭವವಾಗುತ್ತಿದ್ದ
ಪುಟ್ಟ ಮೌನಕ್ಕೆ ದೊಡ್ಡ ಅರ್ಥ ಕಲ್ಪಿಸಲಿಲ್ಲ
ಮೌನದ ನಾದವನ್ನು ಸವಿದೆ
ಅರ್ಥವಾಗದ್ದೂ ಅರ್ಥವಾಯಿತೆಂಬ
ಭಾವ ನನಗೆ ಕಲಿಸಿದ್ದು ಅದೇ ಇರಬೇಕು
ಎಂಬುದೀಗ ಅರ್ಥವಾಗಿದೆ

ಅವನೀಗ ನನ್ನೊಂದಿಗೆ ಮಾತು
ನಿಲ್ಲಿಸುವವನಿದ್ದಾನೆ,
ನಾಳೆ, ಆತ ಕೊಟ್ಟದ್ದನ್ನೆಲ್ಲಾ ವಾಪಸು
ಪಡೆಯಲು ಬರುತ್ತಾನೆ
ಸರಿ, ಅದನ್ನೆಲ್ಲಾ ಮರಳಿಸಲು
ಮನಸ್ಸೂ ಸಿದ್ಧವಿದೆ
ಕಳೆದುಕೊಂಡ ನನ್ನದನ್ನು
ಮರಳಿಸಿಕೊಳ್ಳಲು ತಯಾರಿಲ್ಲ

ಆ ಕ್ಷಣ,
ಮನದೊಳಗೆ ವಿಷಾದದ ಸಸಿ
ಹುಟ್ಟಬಹುದು
ಚಿಗುರಿದ್ದಾಗಲೇ ಕೊಲ್ಲುವ
ಅಭ್ಯಾಸವನ್ನೂ ಆತನೇ ಕಲಿಸಿದ್ದಾನೆ
ಜತೆಗೆ ವಿಷಾದದ ಚಿತ್ರಕ್ಕೆ
ಹೊಸ ಬಣ್ಣ ಹಾಕುವುದನ್ನೂ ಸಹ
ಅವನ ಆ ಉಪಕಾರಕ್ಕೆ
ನಾನು ಋಣಿ

ಆಕೆ ಯಾರಿಗೆ ರೂಪಕ !

ಆಕೆ…ಆಕೆ
ಯಾರಿಗೆ ರೂಪಕ ?
ಅವನಿಗೋ ?
ಪ್ರೀತಿಗೋ?

ಅಂಗಳದಿ ಅರಳಿದ ಹೂವ
ಕಂಡು ಸೊಗಸ
ಕಣ್ಣ ತುಂಬಿಕೊಂಡಳಲ್ಲ,
ಬರಿದೇ ಇರಲಿಲ್ಲ
ಮನದೊಳಗೂ ತುಂಬಿಹೋದದ್ದು
ಅರಿವೇ ಬರಲಿಲ್ಲ

ಕಣಿವೇಲಿ ನಡೆಯುವಾಗ
ಆದ ಹೆಜ್ಜೆಯ ಸದ್ದ
ಆಲಿಸಿದ್ದಷ್ಟೇ,
ಕಣ್ಣನೆತ್ತಿಯೂ ನೋಡಲಿಲ್ಲ,
ಅದೆಂಥದೋ ಭಾವ
ಅವಳ ಬಿಡಲಿಲ್ಲ

ತಣ್ಣನೆ ಹರಿಯುವ ಝರಿ,
ಸುಮ್ಮನೆ ಬೀಸುವ ಗಾಳಿ,
ಮಧ್ಯೆ ತೇಲಿ ಬರುವ ಕೊಳಲ
ಉಸಿರಿನೋನ್ಮಾದ
ಮೋಹಗೊಳ್ಳಲಿಲ್ಲ ಆಕೆ,
ಕರಗಿ ಹೋದಳು

ಅವನ ಪಡೆಯಲಿಲ್ಲ ಆಕೆ,
ಅದನೂ ಬಯಸಿದವಳಲ್ಲ
ಹೂವ ಮುಡಿದು
ಚೆಲುವೆಯಾಗ ಮನಸು ಒಪ್ಪಲಿಲ್ಲ್ಲ

ಏಕೋ ಏನೋ ಆಕೆಗೂ
ತಿಳಿಯದು
ಹೂವ ಸೊಬಗ ಅಷ್ಟೇ ಸಾಕು,
ಅವನು ಸಿಕ್ಕಿದ ಹಾಗೆ

ಆಕೆ…ಆಕೆ..
ಯಾರಿಗೆ ರೂಪಕ ?
ಪ್ರೀತಿಗೋ? ಅವನಿಗೋ ? ( ಈ ಪದ್ಯ ನನಗೂ ತೃಪ್ತಿ ನೀಡಿಲ್ಲ. ಸುಮ್ಮನೆ ಸಾಲುಗಳು ಬಂದವು, ಜೋಡಿಸಿಟ್ಟಿದ್ದೇನೆ)

ಬಿಕ್ಕಿದ ಸಾಲುಗಳು ಹೊಸತು

ನಡೆದ
ಪಾದಗಳು
ಸವೆದಿವೆ
ಒಂದೆರಡೂ ಗೆರೆಗಳು
ಉಳಿದಿಲ್ಲ
ನನ್ನದೆಂದು
ಹೇಳಲಿಕ್ಕೆ
***
ಮೌನದೊಳಗೆ
ಹೊಕ್ಕು
ಒಂದಾಗಿ ಬಿಡಲು
ಮಾತು
ಬಿಡುತ್ತಿಲ್ಲ
***
ಅವಳ
ಮುಂದೆ
ಎಲ್ಲವನ್ನೂ
ತೆರೆದಿಡಲು
ಹೋದೆ
ಯಾಕೋ
ಮನಸ್ಸಾಗಲಿಲ್ಲ
ನನ್ನೊಳಗೇ
ಅವಿತುಕೊಂಡ
ನನಗೆ
ಅವಳೂ
ಕಾಣದಾದಳು !

ಹೊಸ ಪದ್ಯ-ಮತ್ತೆ ಗಾಳಿ ಬೀಸುವವರೆಗೆ

ನೆನಪು ಹಳೆಯದಾಯಿತು…
ಇಬ್ಬರೂ ಕೂಡಿ ಇಟ್ಟ ಹೆಜ್ಜೆಗೂ
ವಯಸ್ಸಾಯಿತು
ಬರುವ ಮುಂದಿನ ಗಾಳಿಗೆ
ಇದರ ಆಯಸ್ಸು ತೀರಬಹುದು

ಹೊಸ ಗುರುತು ಮೂಡಿಸುವ
ಹುಮ್ಮಸ್ಸು ಇಬ್ಬರಲ್ಲೂ ಉಳಿದಿಲ್ಲ
ಹಳೆಯದ್ದರ ಜಾಡು ಹಿಡಿದು
ಹೊರಟಿದ್ದೇವೆ, ಏನೂ ಸಿಗುತ್ತಿಲ್ಲ
ನಾವು ಬದುಕಿದ್ದೇವೆ ಎಂಬುದಕ್ಕೆ
ಪ್ರಮಾಣಪತ್ರಗಳ ಬಿಟ್ಟರೆ
ಬೇರೇನೋ ಉಳಿದಿಲ್ಲ

ಇಬ್ಬರೂ ಕಲೆತು ಹರಟಿದ
ಕಲ್ಲು ಬೆಂಚುಗಳು ಜೀರ್ಣಗೊಂಡಿವೆ
ಸದಾ ಗುರಾಯಿಸುತ್ತಿದ್ದ ಕಾವಲುಗಾರನದ್ದೂ
ಹೊಸ ಪೀಳಿಗೆ, ಅಪರಿಚಿತ

ಉಸುಕಿನ ಮೇಲೆ
ನಡೆದೂ ನಡೆದೂ ಅಭ್ಯಾಸ
ಇತಿಹಾಸ ಸೃಷ್ಟಿಸುವ ಹಠವೂ ಇರಲಿಲ್ಲ
ಇಬ್ಬರೂ ಕೊಟ್ಟದ್ದು-ಪಡೆದದ್ದಕ್ಕೆ
ಸಾಕ್ಷ್ಯ ಉಳಿದಿಲ್ಲ
ಒಲವು ಸಾಕ್ಷ್ಯವಾಗುವುದಿಲ್ಲ
ಎಣ್ಣೆ ಮುಗಿಯುವವರೆಗೆ
ದೀಪ ಆರುವುದಿಲ್ಲ

ಮತ್ತಷ್ಟು ದೂರ ನಡೆಯಬಲ್ಲೆವು
ಅಲ್ಲಿಯವರೆಗೆ…
ಮೂಡಿದರೆ ನಾಲ್ಕಾರು ಹೆಜ್ಜೆ
ಮತ್ತೆ ಗಾಳಿ ಬೀಸುವವರೆಗೆ

ಬಿಕ್ಕಿದ ಸಾಲುಗಳು-ಕೊನೆಯ ಕಂತಲ್ಲ

ಮಳೆ ನಿಂತ
ಮೇಲೆ
ಹನಿ ಉದುರಿತು

ಅದು ಬಿಕ್ಕಿ ಬಿಕ್ಕಿ
ಅತ್ತ
ಮುಗಿಲಿನ
ಕೊನೆ ಹನಿ
****
ದೀಪ ಆರದಿರಲಿ
ಎಂಬುದು
ನನ್ನ ಕಾಳಜಿ

ಅದರೊಳಗೆ
ಅವನಿದ್ದಾನೆ
ಕಣ್ಣತುಂಬುತ್ತಾನೆ

ಆರಿದ ಹೊತ್ತು
ನಾನೂ
ಕಣ್ಣ ಮುಚ್ಚುತ್ತೇನೆ !
****
ಕಣ್ಣಂಚಿಗೆ
ಬಂದು ನಿಂತ
ಹನಿಗೂ
ಅವಳ ಮೇಲೆ
ಕರುಣೆ
ಉದುರಿ ಹಗುರವಾಗಿಸಿತು !
*****

ಬಿಕ್ಕಿದ ಸಾಲುಗಳು ಹೊಸ ಕಂತು

ಕೊಳದಲ್ಲಿ
ಕಾಲುಚಾಚಿ
ಕುಳಿತಿದ್ದೆ

ತಣ್ಣನೆಯ
ಸ್ಫರ್ಶ
ಅವಳನ್ನೇ
ನೆನಪಿಸುತ್ತಿತ್ತು

ಪುಟ್ಟ ಪುಟ್ಟ
ಮೀನುಗಳೂ
ಅದನ್ನೂ ಕಿತ್ತು ತಿನ್ನುತ್ತಿದ್ದವು !
***
ಮಳೆಯ ಮೊದಲ
ಹನಿ
ಬಿದ್ದ ಕ್ಷಣ
ಮಾತು ಮುಸುಕೆಳೆದು
ಮಲಗಿತು
ನನ್ನೊಳಗಿನ
ಮೌನ
ಅಂಗಳಕೆ ಜಿಗಿಯಿತು
ಅದಕೆ
ಹನಿಗಳೆಲ್ಲಾ
ಮುತ್ತಾಗುವುದ ನೋಡುವ
ತವಕ
***
ಕನಸು ಕಟ್ಟುವ
ಸಮಯದಲ್ಲಿ
ಬರೀ ಕತ್ತಲೆ
ನನಸಾಗುವಾಗಲೆಲ್ಲಾ
ಭಾರೀ ಬೆಳಕು
ಬೆಳಕ ಹಿಡಿದವ
ಸಾಗಿ ಮುಟ್ಟಿದ್ದು
ಮತ್ತೆ ಕತ್ತಲೆಗೆ !