ಪ್ರೆಸ್ ಕಾರ್ಡ್ ಏನು ಇನ್ಸುರೆನ್ಸ್ ಕಾರ್ಡಾ ?

ಹರ್ಷನ ಪ್ರಸಂಗ ನೆನಪಿಸುವಾಗ ನನ್ನ ಪ್ರಸಂಗ ನೆನಪಾಯಿತು. ಆದರೆ ನನ್ನ ಪ್ರಸಂಗ ಕಲಿಸಿದ್ದು ಬಹಳ ಇದೆ. ಆ ಪಾಠ ಹೇಳಿದವನನ್ನು ಮಾರನೇ ದಿನ ಹುಡುಕಿಕೊಂಡು ಅದೇ ಸರ್ಕಲ್ಲಿಗೆ ಹೋದೆ. ಸಿಗಲಿಲ್ಲ…ಇಂದಿಗೂ ಸಿಕ್ಕಿಲ್ಲ.

ಗಾಂಧಿಗಿರಿ ಪ್ರದರ್ಶಿಸಿದ ಹರ್ಷರ ಕಥೆ ಕೇಳಿದಿರಿ. ಮಾರನೇ ದಿನ ಆ ಪೋಲಿಸ್ ಸ್ಟೇಷನ್ ಅವರಿಗೆ ಇದು ಯಾರ ಸೈಕಲ್ ಅಂತಾ ಗೊತ್ತಾಗಿ, ಫೋನ್ ಮಾಡಿ ತಂದುಕೊಡುವಂಥ ಪರಿಸ್ಥಿತಿ. ಈ ಪ್ರಸಂಗ ನಮಗಂತೂ ಒಂದು ವಾರದ ಹೂರಣವಾಗಿದ್ದು ಸುಳ್ಳಲ್ಲ. ಹರ್ಷ ಹಾಗೆಲ್ಲಾ ಮತ್ತೊಬ್ಬರ ಮನಸ್ಸು ನೋಯಿಸಿದ್ದಿಲ್ಲ, ಅವನಿಗೇ ಸಿಟ್ಟು ಬಂತೆಂದರೆ ಆ ಪೇದೆ ಹೇಗೆ ಆಡಿಸಿರಬಹುದು ? ಇದೇ ಪ್ರಸಂಗ ನಮ್ಮಲ್ಲಿ ಯಾರ ಎದುರಿಗೂ ನಡೆದಿದ್ದರೂ ಒಂದಲ್ಲ ಒಂದು ಅನಾಹುತವಾಗಿರುತ್ತಿತ್ತು, ಅದರಲ್ಲಿ ಸುಳ್ಳಲ್ಲ.

ನನಗೆ ಮುಂಗೋಪ. ಸಿಟ್ಟು ಬರುವುದಿಲ್ಲ, ಬರುವುದಿಲ್ಲವೆಂದೇ ಒಮ್ಮೊಮ್ಮೆ ಬರಿಸಿಕೊಳ್ಳುವವನು. ನನಗೆ ಇಷ್ಟೆಲ್ಲಾ ಆಗಿರ್ಲಿಲ್ಲ ಬಿಡಿ, ಆದರೆ ಕ್ರೈಮ್ ರಿಪೋರ್ಟರ್ ಆದ ಶುರುವಿನಲ್ಲಿ, ಒಮ್ಮೆ ಹೀಗೆ ಸುದ್ದಿಗಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿದ್ದೆ. ಅಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ಹೋಗಿ ನಮಸ್ಕಾರ ಹೊಡೆದು, ಏನೆಂದು ಕುಶಲವನ್ನು ವಿಚಾರಿಸಿ ನಮ್ಮ ಆಯಕಟ್ಟಿನ ಸ್ಥಾನ (ಕಮೀಷನರ್ ಕಚೇರಿಯ ಮೀಡಿಯಾ ರೂಂ)ಕ್ಕೆ ಬಂದು ಕುಳಿತುಕೊಳ್ಳುತ್ತಿದ್ದೆವು. ಅಂದು ನನ್ನ ವೃತ್ತಿಯ ನಾಲ್ಕನೇ ದಿನ. ನಾನೇನೂ ಅಷ್ಟೊಂದು ಪರಿಚಯವಾಗಿರಲಿಲ್ಲ. ಮೊದಲೆರಡು ದಿನ ನಾನು ಅಬ್ಬೇಪಾರಿ. Continue reading

ಬ್ರಹ್ಮಚಾರಿಯ ಪುಟಗಳಲ್ಲಿ ನಮ್ಮ ಸಾಹೇಬರ ಗಾಂಧಿಗಿರಿ !

ನನ್ನ ಬರವಣಿಗೆಯ ಪಯಣ ಮತ್ತೆ ಬ್ರಹ್ಮಚಾರಿಗಳ ಪುಟಗಳಿಂದಲೇ ಆರಂಭ. ಇದು ಒಂದು ಪ್ರಸಂಗದ ಕಥೆ. ಇದರಲ್ಲಿ ಪತ್ರಕರ್ತ, ಪತ್ರಿಕೋದ್ಯಮ..ಹೀಗೆ ಎಲ್ಲೆಲ್ಲೋ ಹರಿದು ಕೊನೆಗೆ ನಿಂತದ್ದು ನಮ್ಮ ನಮ್ಮ ನೆಲೆಯಲ್ಲಿಯೇ. ಓದಿ ಅಭಿಪ್ರಾಯಿಸಿ.

ಪತ್ರಕರ್ತರೆಂದರೆ ನಿಶಾಜೀವಿಗಳು ಎನ್ನುವ ಮಾತಿತ್ತು, ನಾವು ಕೆಲಸ ಮಾಡುವಾಗ. ಅದರಲ್ಲೂ ನಾವು ಕ್ರೈಂ ರಿಪೋರ್ಟರ್ ಗಳು. ಸಾಮಾನ್ಯವಾಗಿ ಎಲ್ಲರ ಕೆಲಸ (ಸರಕಾರಿ ನೌಕರರು, ಖಾಸಗಿ ಕಚೇರಿ ಇತ್ಯಾದಿ) ಸಂಜೆ ಆರಕ್ಕೋ, ಏಳಕ್ಕೋ ಮುಗಿದರೆ ಪತ್ರಕರ್ತರದ್ದು ಶುರುವಾಗುವುದೇ ಆವಾಗ. ಎಲ್ಲರ ಪತ್ರಕರ್ತರ ಕಥೆ ಹೀಗಾದರೆ ಕ್ರೈಂ ರಿಪೋರ್ಟರ್ ಗಳ ಕಥೆಯೇ ಬೇರೆ.

ರಾತ್ರಿ…ಕಡುರಾತ್ರಿ..ಹೀಗೆ ಡೆಡ್ ಲೈನ್ ಮುಗಿಯುವವರೆಗೂ ಕಾಯ್ತಾನೇ ಇರ್ತಾರೆ, ಇರಲೇಬೇಕನ್ನಿ. ಇನ್ನೇನು ಅಂಗಡಿ ಮುಚ್ಚಿದವು ಎನ್ನೋವಾಗಲೂ, ಅದಕ್ಕೆ ಹತ್ತು ನಿಮಿಷ ಇದ್ದಾಗಲೂ ಎಲ್ಲಾದರೂ ಬೆಂಕಿ ಹೊತ್ತಿಕೊಂಡಿದ್ದರೆ ಕಚೇರಿಯಿಂದ ಪೋನ್ ಬರುತ್ತೆ, ಇಲ್ಲವೇ ನಾವೇ ಮಾಡ್ತೇವೆ…”ನೋಡ್ರೀ, ಎಲ್ಲಿಗೋ ಬೆಂಕಿ ಹತ್ತಿಕೊಂಡಿದೆಯಂತೆ, ಮೇಜರ್ರೋ…ಹತ್ತು ನಿಮಿಷದಲ್ಲಿ ಎರಡು ಪ್ಯಾರಾ ಕೊಟ್ಬಿಡಿ…ಫ್ರಂಟ್ ಪೇಜ್ ನಲ್ಲಿ ಹಾಕಿಕೊಳ್ತೇವೆ. ನಾಳೆ ಫಾಲೋ ಅಪ್ ಮಾಡಿ’ ಎಂಬ ಸೂಚನೆ ನೈಟ್ ಶಿಫ್ಟ್ ನಲ್ಲಿರೋ ಮುಖ್ಯಸ್ಥರಿಂದ ಬರುತ್ತೆ. ಮತ್ತೆ ಶುರು ಹಚ್ಚಿಕೊಳ್ಳಬೇಕು..ಪೋಲೀಸರು…ಫೈರ್ ಬ್ರಿಗೇಡರ್…ಸೋರ್ಸ್ ಗಳು…ಹೀಗೆ…!

ಅದಕ್ಕೇ ಸುದ್ದಿಮನೆಯೊಳಗೆ ಮತ್ತೊಂದು ಕಥೆ ಇರುತ್ತೆ. ಬೇರೆ ಬೀಟ್ ನವರು (ಪೊಲಿಟಿಕಲ್, ಎಜುಕೇಷನ್, ಸಿಟಿ ಇತ್ಯಾದಿ) ರಾತ್ರಿ 9 ಕ್ಕೆ ಅಂಗಡಿ ಮುಚ್ಚಿಕೊಂಡು “ಬರ್ಲಾ ಸ್ವಾಮಿ..’ ಎಂದು ಹೇಳಿ ಹೋಗುವಾಗ ನಾವು ಬರೀ ಸನ್ನೆ ಮಾಡೋ ಸ್ಥಿತಿಯಲ್ಲಿರುತ್ತಿದ್ದೆವು. ಈಗಲೂ ಆ ಕಾಟ ತಪ್ಪಿಲ್ಲ ಅನ್ನಿ. ಈಗಿನ ಕ್ರೈಂ ರಿಪೋರ್ಟರ್ ಗಳದ್ದು ಸ್ವಲ್ಪ ಕಥೆ ಬೇರೆ. ಮನೆಗಳಲ್ಲಿ ಕಂಪ್ಯೂಟರ್ ಇದೆ, ಕೆಲವರಲ್ಲಂತೂ ಲ್ಯಾಪ್ ಟಾಪ್ ಗಳೂ ಬಂದಿವೆ. ಆದ ಕಾರಣ ಮನೆಯಲ್ಲೂ ಕುಳಿತು ಕಾರ್ಯಾಚರಣೆ ನಡೆಸಬಹುದು. ನಮಗೆ ಆಗ ಲ್ಯಾಪ್ ಟಾಪ್ ಇರಲಿ, ಮನೆಯಲ್ಲಿ ಲ್ಯಾಂಡ್ ಲೈನ್ ಇರಲಿಲ್ಲ. ಆಮೇಲೆ ಬಂದರೂ, ಸಿಕ್ಕಾಪಟ್ಟೆ ಫೋನ್ ಮಾಡಿದರೆ ಕಟ್ಟೋದಕ್ಕೆ ದುಡ್ಡೂ ಇರ್ತಿರಲಿಲ್ಲ. ನಾಲ್ಕೈದು ಮಂದಿ ಒಟ್ಟೊಟ್ಟಿಗೆ ಬದುಕಿದರೂ ಅವೆಲ್ಲಾ ಸಂಗತಿಗಳು ಮಿಲಿಟರಿ ಸಿಸ್ಟಂ.

ಹೀಗೆ ಕಥೆ ಸಾಗುತ್ತಿರುವಾಗ ಬ್ರಹ್ಮಚಾರಿಗಳ ಪುಟಗಳಲ್ಲಿನ ಒಬ್ಬ ಹೀರೋ ಹರ್ಷ ಎದುರಾಗುತ್ತಾನೆ. ಈಗಾಗಲೇ ಹೇಳಿದಂತೆ ಹರ್ಷ ರಾವ್ ಬಹಳ ಒಳ್ಳೆಯ ಹುಡುಗ. ಅತ್ಯಂತ ನವಿರಾಗಿ ಹೇಳುವುದಾದರೆ, ಗುಲಾಬಿಗೆ ಮುಳ್ಳೇ ನೋವು ಮಾಡಿದ್ದರೂ ಅದನ್ನೇ ಕ್ಷಮಿಸಿಬಿಡಬಲ್ಲ ಮನುಷ್ಯ. ಎಂದಿಗೂ ಯಾವುದೋ ಸಣ್ಣ ಸಣ್ಣ ಸಂಗತಿಗಳನ್ನು ಮನದೊಳಗೆ ಇಟ್ಟುಕೊಂಡು ಕೊಳೆಸಿ ಕಾರಿದ್ದು ಎಂದೂ ಇಲ್ಲ, ಇಂದೂ ಇಲ್ಲ. ಅಂಥವನೇ ಇಕ್ಕಟ್ಟಿಗೆ ಸಿಲುಕಬೇಕಾದ ಪ್ರಸಂಗ ನಡೆದರೆ ಹೇಗಿರಬೇಕು ?

ಒಂದು ರಾತ್ರಿ ನಾನು ಹೊಸದಿಗಂತದಲ್ಲಿ ಕೆಲಸ ಮಾಡುತ್ತಿದ್ದೆ. ಹರ್ಷ ಕ್ವೀನ್ಸ್ ರಸ್ತೆಯಲ್ಲಿರುವ ಎಕ್ಸ್ ಪ್ರೆಸ್ ಆಫೀಸಿನಲ್ಲಿದ್ದ. ನವೀನ್ ಆಗ ಉದಯವಾಣಿಯ ವರದಿಗಾರ. ನಾವೆಲ್ಲಾ ಇದ್ದದ್ದು ಬೆಂಗಳೂರಿನ ಹಲಸೂರಿನ ಮನೆಯಲ್ಲಿ. ಅಂದು ಹೆಚ್ಚು ಸುದ್ದಿಯಿರಲಿಲ್ಲ. ಸರಿ, ಹರ್ಷನಿಗೆ ಫೋನ್ ಮಾಡಿ ಮನೆಗೆ ಹೊರಟೆ. ಹಾಗೆಯೇ ನವೀನ್ ಗೂ ತಿಳಿಸಿದ್ದೆ. ಹರ್ಷ ಯಾವಾಗಲೂ ಸೈಕಲ್ ಸವಾರಿ. ನವೀನ್ ಗೆ ನಡೆದು ಬರುವಷ್ಟು ದಾರಿ. ಜತೆಗೆ ಯಾರಾದರೂ ಗೆಳೆಯರು ಸಿಕ್ಕುತ್ತಿದ್ದುದ್ದರಿಂದ ವಾಹನವೇರುವ ಯೋಜನೆ ಹೊಂದಿರಲಿಲ್ಲ. ನನ್ನದು ಸ್ಥಿತಿಯೇ ಬೇರೆ ಆಗಿತ್ತು. Continue reading

ಬ್ರಹ್ಮಚಾರಿಯ ಪುಟಗಳಲ್ಲಿ ಬಹುಮತದ ಪ್ರಜಾಪ್ರಭುತ್ವ

ಗೆಳೆಯರೇ, ಬ್ರಹ್ಮಚಾರಿಗಳ ಪುಟಗಳನ್ನು ಮತ್ತೆ ಮುಂದುವರಿಸಿದ್ದೇನೆ. ಕೆಲ ಕಾರಣಗಳಿಂದ ಮಧ್ಯೆ ನಿಂತು ಹೋಗಿತ್ತು. ಈಗ ಮತ್ತೆ ಆರಂಭಿಸಿದ್ದೇನೆ. ಓದಲು ಮರೆಯಬೇಡಿ. ಅಂದ ಹಾಗೆ, ನಮ್ಮದು ಪ್ರಜಾಪ್ರಭುತ್ವ !

ಪುಟ -13

“ನೋಡಯ್ಯಾ, ನಗರಕ್ಕೆ ಬಂದ ಮೇಲೆ ಏನಾದರೂ ಮಾಡಬೇಕು. ಸುಮ್ನೆ ಇದ್ದರೆ ಊರಲ್ಲೇ ಇರಬಹುದಿತ್ತಲ್ಲಾ?’-ಬೆಳಗ್ಗೆ ಊರಿನಿಂದ ಬೆಂಗಳೂರು ಬಸ್ ಸ್ಟ್ಯಾಂಡ್‌ನಲ್ಲಿ ಬಸ್ಸಿನಿಂದ ಇಳಿದಾಗ ಮೊದಲು ಅನಿಸಿದ್ದು. ಇದು ಬಿಡಿ, ಎಲ್ಲರನ್ನೂ ಕಾಡುತ್ತಲೇ ಇರುತ್ತೆ. ಮೊದಲು, ದೊಡ್ಡದ ನಗರದಲ್ಲಿ ಚಿಕ್ಕದೊಂದು ಬಾಡಿಗೆ ಮನೆ ಹಿಡಿಯಲು ತೊಡಗಿದಾಗಲೇ ಆ ಸರ್ಕಸ್ಸಿನ ಮಜ-ಕಷ್ಟ ಎರಡೂ ಅರ್ಥವಾಗೋದು. 

ನಮ್ಮ ಹಲಸೂರಿನ ಮನೆ ಅಂಥವರಿಗೆ ಒಂದು ವೇದಿಕೆಯಾಗಿತ್ತು. ನಮ್ಮೂರಿನ ಅಥವಾ ಬೇರೆ ಊರಿನ ಯಾರಾದರೂ ಪರಿಚಯಸ್ಥರು ಹೇಳಿ ಕಳುಹಿಸಿದರೆ ಸಾಕು. ಬೆಂಗಳೂರಿನಲ್ಲಿ ಪುಟ್ಟದೊಂದು ಕೆಲಸ ಹುಡುಕಿಕೊಳ್ಳುವವರೆಗೆ (ಅಂದರೆ ಎರಡು-ಮೂರು ತಿಂಗಳು) ನಮ್ಮಲ್ಲಿ ವಾಸ್ತವ್ಯ. ಅಷ್ಟೇ ಅಲ್ಲ. ಇದನ್ನು ಹೆಗ್ಗಳಿಕೆ ಎನ್ನುವುದಕ್ಕೂ ಹೇಳುತ್ತಿಲ್ಲ. ಅವರಿಂದ ಊಟಕ್ಕಾಗಲೀ, ವಾಸ್ತವ್ಯಕ್ಕಾಗಲೀ ಹಣ ಪಡೆಯುತ್ತಿರಲಿಲ್ಲ. ಅವರ ವೆಚ್ಚವನ್ನು ನಾವೇ ಎಲ್ಲರೂ ಸಮಪಾಲಿನಿಂದ ಭರಿಸುತ್ತಿದ್ದೆವು. ಅವನೊಬ್ಬನಿಂದ ಬೀಳುವ ವೆಚ್ಚ ನೂರು ರೂ.ಎಂದಿಟ್ಟುಕೊಳ್ಳಿ. ನಾವೆಲ್ಲಾ ೧೫ ರೂ. ಭರಿಸುತ್ತಿದ್ದೆವು. ಹೀಗೆ ಖುಷಿಯಿಂದ ಹಂಚಿಕೆಯ ಕೆಲಸ ಮತ್ತು ಖುಷಿಯನ್ನು ಹಂಚುವ ಕೆಲಸ. 

ಸುಮಾರು ಮಂದಿ ಹೀಗೆ ವಾಸ್ತವ್ಯವಿದ್ದರು. ಕಾರಣವಿಷ್ಟೇ. ನಾವೂ ಹೀಗೆ ಎಷ್ಟೋ ಮಂದಿಯಿಂದ ಬೆಳೆದು ಬಂದಿದ್ದು. ನಾನು ಪತ್ರಿಕೋದ್ಯಮಕ್ಕೆ ಬರಲು ಕಾರಣವಾಗಿದ್ದು, ಉತ್ಸಾಹ ತುಂಬಿದ್ದು ನನಗೆ ಗುರುತು ಪರಿಚಯವಿಲ್ಲದವರಿಂದ. ನಾನು ಆ ಮೊದಲು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲಿ ಪರಿಚಯವಾದವರಿಂದ. ಅದಕ್ಕೇ, ಇಂಥವರನ್ನು ಕಂಡಾಗ ಮನುಷ್ಯರ ಮೇಲಿನ ನಂಬಿಕೆ ಮತ್ತಷ್ಟು ದೃಢಗೊಳ್ಳುತ್ತದೆ. 

ಒಂದೊಂದು ಕಡೆಯಿಂದ, ಒಂದೊಂದು ಹಿನ್ನೆಲೆಯಿಂದ ಬಂದ ನಾವೆಲ್ಲರೂ ಸೇರಿ ನಡೆಸುತ್ತಿದ್ದುದೇ ಸೌಹಾರ್ದದ ನಾವೆ. ನಮಗೆ ಅದು ಬದುಕನ್ನು ಅರ್ಥೈಸಿದೆ, ಬದುಕುವುದನ್ನು ಕಲಿಸಿಕೊಟ್ಟಿದೆ. ಒಂದಂತೂ ನಿಜ. ಯಾರನ್ನೂ ನಮ್ಮಲ್ಲಿ ಸೋಮಾರಿಯಾಗಲು ಬಿಡುತ್ತಿರಲಿಲ್ಲ. ಹಾಗೆ ಎಲ್ಲರಿಗೂ ಕೆಲಸದ ಹಂಚಿಕೆಯಾಗುತ್ತಿತ್ತು. 

ನಾನು ಸ್ವಲ್ಪ ವಯಸ್ಸಿನಲ್ಲಿ ದೊಡ್ಡವ (ಬಹಳ ಅಲ್ಲ, ಮೂರು ವರ್ಷವಿರಬಹುದು). ಹಾಗಾಗಿ ಸ್ವಲ್ಪ ಗೌರವ ಇತ್ತು. ಒಮ್ಮೊಮ್ಮೆ ಲಘುವಾಗಿ ಕಾಲೆಳೆಯುತ್ತಿದ್ದರು ಅನ್ನಿ, ನಮ್ಮ ಅದೃಷ್ಟಕ್ಕೆ ಅದು ಗ್ರಾನೈಟ್ ನೆಲವಾಗಿರಲಿಲ್ಲ. ಬೀಳುತ್ತಿರಲಿಲ್ಲ. ಕಡಪ ಕಲ್ಲಿನ ಮನೆ. ಖುಷಿ ಕೊಡುವ ನಂದನವನ. 

ಬೆಳಗ್ಗೆ ಗೆಳೆಯರಿಗೆಲ್ಲಾ ಉಪಾಹಾರ ಮಾಡುವುದು ನನ್ನ ಹೊಣೆ. ನನಗೆ ಹರ್ಷ, ನವೀನ, ರಮೇಶ್ ನನ್ನ ತಂಡದಲ್ಲಿ. ಹಾಗೆಯೇ ಸಂಜೆ ಅರವಿಂದ ಸಿಗದಾಳ್ ಮತ್ತು ಅರುಣ ಊಟದ ಸಿದ್ಧತೆಯನ್ನು ನಡೆಸುತ್ತಿದ್ದರು. ಅವರಿಗೆ ಸಂಜೆ ಯಾರು ಮನೆಯಲ್ಲಿರುತ್ತಿದ್ದರೋ ಅವರು ಸಹಕಾರ ನೀಡುತ್ತಿದ್ದರು. 

ನನ್ನನ್ನು ಹೆಚ್ಚು ನನ್ನ ಗೆಳೆಯರು ಸಿಟ್ಟು ಮಾಡಿಕೊಳ್ಳುತ್ತಿದ್ದುದು ಒಂದು ಸ್ವಭಾವಕ್ಕೆ. ಬೆಳಗ್ಗೆಯ ತಿಂಡಿಗೆ ಏನು ಬೇಕು (ಪೂರಕವಾಗಿ) ಎಂಬುದನ್ನೆಲ್ಲಾ ಬೆಳಗ್ಗೆಯೇ ಹೇಳುತ್ತಿದ್ದೆ.  ಆ ಹೊತ್ತಿಗೆ ಅಂಗಡಿ ತೆಗೆದಿರುವುದಿಲ್ಲ, ದೂರ ಹೋಗಬೇಕು ಎಂಬುದು ಗೆಳೆಯರ ದೂರ. ಹಾಗಾಗಿ ಮಧ್ಯಾಹ್ನವೇ ನಾಳೆಗೆ ಏನು ಬೇಕೆಂದು ಹೇಳಿದರೆ ತರಬಹುದು ಎಂಬುದು ಸಲಹೆ. ಆದರೆ ನಾನು ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದುದರಿಂದ ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ. 

ಹಾಗಾಗಿ ಎಷ್ಟೋ ಬಾರಿ ಬೆಳಗ್ಗೆ ಉಪ್ಪಿಟ್ಟಿಗೆ ರವೆ ಹುರಿಯುವಾಗ ಕರಿಬೇವಿನ ಸೊಪ್ಪು ತರಿಸಲು ಕಳಿಸಿದ್ದಿದೆ. ಅದನ್ನು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ “ಹಾಗೆಯೇ ಮೆಣಸಿನಕಾಯಿ ತಾ’ ಎಂದು ವಾಪಸು ಕಳಿಸಿದ್ದಿದೆ. ವಿಚಿತ್ರವಾದ ಜನ ಬಿಡಿ ನೀವು ಎಂದುಕೊಂಡು ಎಲ್ಲ ಗೆಳೆಯರು ಸಹಕರಿಸಿದ್ದರು, ನಿಜಕ್ಕೂ ಅದನ್ನು ನೆನೆಸಿಕೊಂಡರೆ ತಮಾಷೆ ಎನಿಸುತ್ತದೆ. 

ಇಷ್ಟೆಲ್ಲಾ ಆದ ಮೇಲೆ ಕೆಲ ತಿಂಡಿ ಕೆಲವರಿಗೆ ಹಿಡಿಸುತ್ತಿರಲಿಲ್ಲ, ಅಂದರೆ ಒಬ್ಬರಿಗೆ ವಾಂಗೀಭಾತ್ ಬೇಡ ಎಂದಾದರೆ, ಇನ್ನು ಕೆಲವರಿಗೆ ಪೊಂಗಲ್ ಎಂದರೆ ದೂರ. ನಾವು ಬಹುಮತದ ಸರಕಾರದ ಆಡಳಿತ ನಡೆಸುತ್ತಿದ್ದೆವು. ಅಂದರೆ, ಐದು ಮಂದಿಗೆ ವಾಂಗೀಭಾತು ಆಗುವುದಾದರೆ, ಮತ್ತೊಬ್ಬ ಸಹಿಸಬೇಕು !

ಮುಂದುವರಿದ ಬ್ರಹ್ಮಚಾರಿಗಳ ಪುಟಗಳು

ಅಧ್ಯಾಯ 12

ಅನಂತದಿಂ ದಿಗಂತಂ ಎಂಬ ಹಾಡು ನೆನಪಾಗಿ ಹರ್ಷನಿಗೆ ಫೋನ್ ಹಚ್ಚಿ ಮಾತನಾಡಿದೆ. ಪಕ್ಕದಲ್ಲಿ ಪಿ. ಕಾಳಿಂಗರಾಯರ “ರಾಜಹಂಸ’ ದ ಗೀತೆಗಳು ನನ್ನ ಸಿಸ್ಟಮ್ ನಲ್ಲಿ ಬರ್ತಾ ಇತ್ತು. ಹರ್ಷನ ಡ್ಯಾನ್ಸ್..ಒಮ್ಮೆ ಕುಣಿಯಲು ಹೋದಾಗ ಕಾಲು ಉಳುಕಿ ನೋವಾಗಿದ್ದು…ಎಲ್ಲಾ ನೆನಪಾಯಿತು. ಒಂದು ಹಲಸೂರಿನ ಮನೆ-ಅದರೊಳಗಿನ ಸಂಬಂಧ-ಬಂಧ ಎಲ್ಲವೂ ನಮ್ಮನ್ನು ಎಷ್ಟು ಕ್ರಿಯಾಶೀಲವಾಗಿಸಿಟ್ಟಿತ್ತು ಎಂಬುದು ಜ್ಞಾಪಕಕ್ಕೆ ಬಂದು ಹೀಗಿರುವ ಪರಿಸ್ಥಿತಿಯ ಕಂಡು ಬೇಸರವಾಗಿದ್ದೂ ನಿಜ.
ಆಗಕ್ಕೂ ಈಗಕ್ಕೂ ಒಂದೇ ವ್ಯತ್ಯಾಸ. ಆಗ ನಮಗ್ಯಾರಿಗೂ ಮದುವೆಯಾಗಿರಲಿಲ್ಲ ; ಈಗ ಆಗಿದೆ. ಜತೆಗೆ ಮಕ್ಕಳು ಆಗಿವೆ. ಅಂದರೆ ಗೃಹಸ್ಥಾಶ್ರಮದ ಎಲ್ಲಾ ಸಾಧ್ಯತೆಗಳೂ ಸಾಕಾರವಾಗಿವೆ. ಆದರೆ ಕ್ರಿಯಾಶೀಲತೆ ಬಗ್ಗೆ ಕೇಳಿದರೆ ಸ್ವಲ್ಪ ಕಡಿಮೆ ಎನ್ನಬಹುದು.
ನಮ್ಮ ಒಂದು ಹಲಸೂರಿನ ಮನೆಯೊಳಗೆ ಏನೆಲ್ಲಾ ನಡೆಯುತ್ತಿತ್ತು ಗೊತ್ತೇ ? ಯಾವುದೋ ಊರಿನಿಂದ ಬಂದವರು ಅತಿಥಿಗಳಾಗಿ ಒಂದಿಷ್ಟು ದಿನ ಇದ್ದು ಹೋಗುತ್ತಿದ್ದರು. ವಾರದಲ್ಲಿ ಎರಡು ದಿನ ಯಕ್ಷಗಾನ ತಾಲೀಮು ನಡೆಯುತ್ತಿತ್ತು. ವರ್ಷಕ್ಕೊಮ್ಮೆ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ಅಕ್ಕಪಕ್ಕದವರೆಲ್ಲಾ ಊಟ ಮಾಡಿಕೊಂಡು ಹೋಗುತ್ತಿದ್ದರು. ಯಾವುದಾದರೂ ಕಷ್ಟದ ಪರಿಸ್ಥಿತಿ ಕಂಡರೆ ಸಹಾಯ ಹೋಗುತ್ತಿತ್ತು.
ಇದರ ಮಧ್ಯೆ ನಮ್ಮ ಹುಡುಗತನವೂ ಕಡಿಮೆ ಇರಲಿಲ್ಲ. ಅದಕ್ಕೇನು ಸೋಲು ಆಗಿರಲಿಲ್ಲ. ಆಗಾಗ್ಗೆ ಅವುಗಳ ಪ್ರದರ್ಶವನೂ ನಡೆಯುತ್ತಿತ್ತು. ನಮ್ಮೊಳಗೇ ಯಾವುದೋ ವಿಷಯಕ್ಕೆ ಸಂಬಂಧಿಸಿ ಪರಸ್ಪರ ಅಭಿಪ್ರಾಯಭೇದ ಬಂದು ಮಾತು ಬಿಡುತ್ತಿದ್ದ ಪ್ರಸಂಗಗಳೂ ಇತ್ತು. ಈ ಸಂದರ್ಭದಲ್ಲಿ  ಇನ್ಯಾರೋ ಮಧ್ಯಸ್ಥಿಕೆ ವಹಿಸಿ ಬಂದು ಪರಿಸ್ಥಿತಿಯನ್ನು ತಹಬದಿಗೆ ತರುತ್ತಿದ್ದರು. ಹೀಗೆ ಒಂದೇ ಎರಡೇ.
ಇನ್ನು ತಮಾಷೆಯ ಪ್ರಸಂಗ ಬಹಳಷ್ಟಿವೆ. ನಮ್ಮ ಮನೆಯ ಮಾಲೀಕರಿಗೆ ಹಾಗೂ ಅವರ ತಲೆಗೆ (ಬುದ್ಧಿವಂತಿಕೆಗೆ)ಮೊದಲ ಬಾರಿಗೆ ಮನಸ್ಪೂರ್ವಕವಾಗಿ ಥ್ಯಾಂಕ್ಸ್ ಹೇಳಿದ್ದು ಯಾವಾಗ ಗೊತ್ತೆ? ಹೇಳಬಾರದೋ ಹೇಳಬೇಕೋ ತಿಳಿಯುತ್ತಿಲ್ಲ. ಆದರೂ ಹೇಳಿ ಬಿಡ್ತೇನೆ. ಅದ್ರಲ್ಲೂ ಥ್ಯಾಂಕ್ಸ್ ಅಷ್ಟೇ ಅಲ್ಲ. ಅತ್ಯಂತ ನಾಜೂಕಾದ ಹಾಗೂ ಕಷ್ಟಕರವಾದ ಸನ್ನಿವೇಶವನ್ನು ನಿಭಾಯಿಸಬಲ್ಲೆವು ಎಂದು ಗೊತ್ತಾಗಿದ್ದೂ ಅಂದೇ. ಅಂದರೆ ಟೈಮ್ ಮ್ಯಾನೇಜ್ ಮೆಂಟ್ ಅಥವಾ ಸಿಚುಯೇಷನ್ ಮ್ಯಾನೇಜ್‌ಮೆಂಟ್ ಎಂದು ಹೇಳ್ತೀರೋ ಗೊತ್ತಿಲ್ಲ.
ಒಮ್ಮೆ ಮಧ್ಯಾಹ್ನ ೧೧ ರ ಹೊತ್ತಿಗೆ ಚಂದೂ ಮಾಮ ಸ್ನಾನಕ್ಕೆಂದು ಹೋದರು. ಅವರದ್ದು ಗಂಭೀರ ಸ್ನಾನ (ತಮಾಷೆಗಾಗಿ). ಯಾವ ಸದ್ದೂ ಇಲ್ಲ…ಕಿವಿಗೊಟ್ಟು ಕೇಳಿದರೆ ಮೆಲ್ಲನೆ ನೀರು ಭುವಿಯನ್ನು ಸೋಕಲು ತೊಡಗಿದ ಸದ್ದು ಕೇಳುತ್ತೆ. ನಮ್ಮ ಗೆಳೆಯ ನವೀನನಿಗೆ ಅದೇ ಸಮಯದಲ್ಲಿ “ಫಾರೆನ್’ ಗೆ ಹೋಗಬೇಕಾಗಿ ಬರಬೇಕೇ ? ಏನು ಮಾಡುವುದು ? ….”ಚಂದೂ ಮಾಮಾ’  ಬೇಗ ಬನ್ನಿ’ ಎಂದು ಕರೆದದ್ದೇ ಕರೆದದ್ದು ನವೀನ.
ಪಾಪ. ಚಂದೂ ಮಾಮವೇನು ಮಾಡೋಕಾಗುತ್ತೆ, ಅವರ ಆಗ ತಾನೇ ಸ್ನಾನಕ್ಕೆಂದು ಹೋದದ್ದು. ನೋಡಿ, ಸುಮ್ನೆ ತಮಾಷೆಗಲ್ಲ. ಅನಿವಾರ್‍ಯತೆ ಸಂಶೋಧನೆಗೆ ಕಾರಣ ಅಂತಾರೆ, ಹಾಗೆಯೇ ಕೊರತೆಯೇ ಸಂಶೋಧನೆಗೆ ಮೂಲ ಎನ್ನುತ್ತಾರೆ. ಇವೆರಡೂ ಅವತ್ತಿನ ಘಟನೆಗೆ ಸತ್ಯವೇ.
ಅಲ್ಲಿಯವರೆಗೂ ನಾವು ನಮ್ಮ ಮನೆಯಿಂದ “ಫಾರಿನ್’ (ಪಾಯಖಾನೆಗೆ ನಮ್ಮೂರೆಲ್ಲಾ ಹಿಂದೆಲ್ಲಾ ಹೀಗೇ ಹೇಳ್ತಿದ್ದೋರು. ಮೊದ್ಲು ಪಾಯಖಾನೆಗೆ ಹೋಗೋದಕ್ಕೆ “ಬಾಂಬೆ’ ಗೆ ಹೋಗೋದು ಅನ್ನುತ್ತಿದ್ದರು. ನಂತರ ಮುಂಬಯಿ ನಮ್ಮತ್ರನೇ ಬರೋದಿಕ್ಕೆ ಶುರು ಮಾಡಿದ್ಮೇಲೆ, ನಮ್ಮವರೂ ಸಾಕಷ್ಟು ಮಂದಿ ಹೋದ ಮೇಲೆ, ನಮ್ಮ ಪಾಯಖಾನೆ ಇನ್ನಷ್ಟು ದೂರ ಹೋಯುತ. ಫಾರೆನ್ ಆಯ್ತು)ಗೆ ಹೋಗೋದಿಕ್ಕೆ ಇನ್ನೊಂದು ದಾರಿ ಇದೇ ಅಂತಲೇ ತಿಳಿದಿರಲಿಲ್ಲ.
ನಮ್ಮ ಬುದ್ಧಿವಂತ ಚಂದೂ ಮಾಮಾನ ಕಿಟಕಿಯಿಂದ ಕರೀಬೇಕು ಅಂತ ಹೊರಗೆ ಹೋದವನೇ ನೋಡ್ತಾನೆ. ಅದರ ಪಕ್ಕದಲ್ಲೇ ಇದ್ದ ಬಾಗಿಲು ತೆಗಿಯಲಿಕ್ಕೆ ಬರುತ್ತೆ….! ಅಚ್ಚರಿಯೋ ಅಚ್ಚರಿ..! ಅಂದಿನಿಂದ ಏಕಕಾಲದಲ್ಲಿ ಎರಡೂ ನಡೆಯೋ ಕಾಲ ಬಂದಿತು. ವಾಸ್ತವವಾಗಿ ಹೇಳಬೇಕಾದರೆ ಅಂದು ಖುಷಿಯ ಪರ್ವ.
*
ಚಿತ್ರೋತ್ಸವ, ಕೆಲಸದ ಒತ್ತಡ ಇತ್ಯಾದಿಯಿಂದ ಬ್ರಹ್ಮಚಾರಿಯ ಪುಟಗಳನ್ನು ಅಪ್ ಟು ಡೇಟ್ ಮಾಡಲಿಕ್ಕೆ ಆಗಿರಲಿಲ್ಲ. ಇನ್ನು ಮುಂದೆ ವಾರಕ್ಕೊಮ್ಮೆಯಾದರೂ ಒಂದು ಪುಟಗಳನ್ನು ಹಾಕಬೇಕೂಂತ ಶಪಥ ಮಾಡಿಕೊಂಡಿದ್ದೇನೆ.

ಬ್ರಹ್ಮಚಾರಿಗಳ ಪುಟ ಹೊಸತು-ಹನ್ನೊಂದು

ಪುಟ ಹನ್ನೊಂದು
ಹರ್ಷನ ರಸಮಂಜರಿ ಆಗಾಗ್ಗೆ ನಡೆಯುತ್ತಲೇ ಇತ್ತು. ವರದಿಗಾರರಾಗಿದ್ದರಿಂದ ಬೆಳಗ್ಗೆ ೧೧. ೩೦ ವರೆಗೆ ಆರಾಮ್. ಪೊಲೀಸ್ ಕಮೀಷನರ್ ಕಚೇರಿಯ “ಮೀಡಿಯಾ ಸೆಂಟರ್’ನಿಂದಲೇ ನಮ್ಮ ನಿತ್ಯದ ಕೆಲಸ ಆರಂಭ. ಒಂದುವೇಳೆ ಏನಾದರೂ ಬೆಳಗ್ಗೆ ಬೆಳಗ್ಗೆಯೇ ದೊಡ್ಡ ಅಪಘಾತ-ಆಕಸ್ಮಿಕಗಳು ನಡೆದರೆ ಅಲ್ಲಿಗೆ ದೌಡಾಯಿಸಬೇಕು. ಘಟನಾ ಸ್ಥಳಕ್ಕೆ ಭೇಟಿ ನೀಡದೇ ಬರೆಯುವವರು ಇವತ್ತಿಗೂ ನಮ್ಮ ಪತ್ರಿಕೋದ್ಯಮದಲ್ಲಿ ಇದ್ದಾರೆ.
ಅವರಂಥವರಲ್ಲಿ ಎರಡು ವಿಧ. ಘಟನಾ ಸ್ಥಳಕ್ಕೆ ಹೋಗದೇ ಅವರಿವರತ್ತಿರ ಕಾಡಿಬೇಡಿ ಪಡೆದು, ಕೊಟ್ಟಷ್ಟೇ ಸಾಕೆಂಬ ಧೋರಣೆಯಲ್ಲಿ ಸುದ್ದಿ ಕೊಟ್ಟು ಕೈ ತೊಳೆದುಕೊಳ್ಳುವವರು ಒಂದು ಬಗೆಯವರು. ಮತ್ತೊಂದು ಬಗೆ ತೀರಾ ಭಿನ್ನ. ಅಸಲಿಗಿಂತ ಅಪಾಯಕಾರಿ. ಘಟನಾ ಸ್ಥಳಕ್ಕೆ ಹೋದವರಿಂದಲೇ ಮಾಹಿತಿ ಪಡೆದು, ತಾವೇ ಘಟನಾ ಸ್ಥಳದಿಂದ ನೇರ (ಲೈವ್) ವರದಿ ಮಾಡುತ್ತಿದ್ದೇವೆ ಎನ್ನುವಂತೆ ಕಲ್ಪಿಸಿಕೊಂಡು ಬರೆಯುವವರಿದ್ದಾರೆ. ಇವರಿಂದ ಅಸಲಿಗೇ ಅಪಾಯ.
ಎಷ್ಟೋ ಬಾರಿ ಇಂಥ ಪ್ರಸಂಗ ನಡೆದದ್ದಿದೆ. ನಮ್ಮಿಂದ ಮಾಹಿತಿ ಪಡೆದು ಬರೆದವನ ಸುದ್ದಿಯನ್ನೇ ನೋಡಿ ನಮ್ಮ ಸೀನಿಯರ್ರು “ನೋಡ್ರಿ. ಈ ಸುದ್ದಿ ಎಷ್ಟು ಚೆನ್ನಾಗಿದೆ’ ಎಂದ ಪ್ರಸಂಗಗಳೂ ಇವೆ. ಆದರೆ ನಮಗೇನೋ ಒಂದು ಖುಷಿ. ಘಟನಾ ಸ್ಥಳಕ್ಕೆ ಹೋದರೆ ಬೇರೇನೋ ಮಾಹಿತಿ ಸಿಗಬಹುದು, ಯಾರಾದರೂ ಸಂಪರ್ಕಕ್ಕೆ ಸಿಗಬಹುದೆಂಬ ಹುರುಪಿನಿಂದಲೇ ತೆರಳುತ್ತಿದ್ದೆವು. ಆದರೆ ನಮ್ಮ ಮನೆಯಲ್ಲಿ ನಾಲ್ಕೈದು ಮಂದಿ ವರದಿಗಾರರಿದ್ದರಿಂದ, ಅದರಲ್ಲೂ ಎಲ್ಲರೂ ಬೇರೆ ಬೇರೆ ಪತ್ರಿಕೆಯಲ್ಲಿದ್ದರಿಂದ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತು. ಯಾರಾದರೂ ಇಬ್ಬರು ಘಟನಾ ಸ್ಥಳಕ್ಕೆ ತೆರಳಿದರೆ, ಮನೆಯಲ್ಲಿ ಅವರ ಕೆಲಸವನ್ನು ಉಳಿದವರು ಮಾಡುತ್ತಿದ್ದೆವು. ಒಟ್ಟಿನಲ್ಲಿ ಸಂತೋಷದಿಂದಲೇ ಇರುತ್ತಿದ್ದೆವು ಅನ್ನಿ. ಹೀಗೆ ಸಂತೋಷದಿಂದ ಇರುವಾಗಲೇ ಹರ್ಷ ಇದ್ದಕ್ಕಿದ್ದಂತೆ ಹುರಿದುಂಬಿ ಹಾಡುತ್ತಿದ್ದ. ಕುಣಿಯುತ್ತಿದ್ದ. ನಮ್ಮಲ್ಲೂ ಕೆಲವರು ಹೆಜ್ಜೆ ಹಾಕುತ್ತಿದ್ದೆವು. ಇನ್ನೂ ಕೆಲವರು ಚಪ್ಪಾಳೆ ತಟ್ಟುತ್ತಾ ಖುಷಿ ಪಡುತ್ತಿದ್ದೆವು.
ಏನೋ ಆ ಹಾಡೆಂದರೆ ಅವನಿಗೆ ಬಹಳ ಇಷ್ಟ. ಅದೇಕೋ ಗೊತ್ತಿಲ್ಲ. ಅವನನ್ನೇ ಕೇಳಿ ಹೇಳಬೇಕು. ಹಾಗೆಂದು ಹರ್ಷ ಗಾಯಕನಲ್ಲ ; ಒಳ್ಳೆ ಹುಡುಗ. ನಿಜವಾಗಲೂ ಹೂವಿನ ಮನಸ್ಸಿನವನು. ಅವನ ಹೆಸರಿನಂತೆಯೇ ಹರ್ಷವಾಗಿರಲು ಅವನೊಬ್ಬನೇ ಪ್ರಯತ್ನಿಸುತ್ತಿರಲಿಲ್ಲ. ಉಳಿದೆಲ್ಲರೂ ಹರ್ಷ ಚಿತ್ತರಾಗಿರಬೇಕೆಂದು ಬಯಸುತ್ತಿದ್ದವ. ಸುಮ್ಮನೆ ಅವನನ್ನು ಸ್ತುತಿ ಮಾಡಲು ಹೇಳುತ್ತಿಲ್ಲ. ಆದರೆ ಖುಷಿಯಿಂದ ಹೇಳುತ್ತಿದ್ದೇನೆ. ಅವನು ಒಳ್ಳೆಯ ಗೆಳೆಯ.
ಇಂಥವನೊಳಗೆ “ಹರ್ಷ’ ತುಂಬುತ್ತಿದ್ದ “ಅನಂತದಿಂ..ದಿಗಂತದಿಂ..ನೋಡು ನೋಡು ನೋಡೆ ಗೋಪುರ, ಮುಗಿಲಿನೆತ್ತರ…” ಗೀತೆ ಬಗ್ಗೆಯೇ ಮಜಾ ಇದೆ. ಆಗ ಯಾಕೆ ಈ ಗೀತೆ ಇಷ್ಟ ಎಂದು ಕೇಳಿರಲಿಲ್ಲ. ಮೊನ್ನೆ ಊರಿಗೆ ಹೋದಾಗ ಕೇಳಿದೆ. ವಿವರಿಸಿದ.
ಕುದುರೆಮುಖದಲ್ಲಿ ಓದ್ತಾ ಇದ್ದಾಗ ಶಾಲೇಲಿ ಸ್ಪರ್ಧೆ ಹಾಡು ಹೇಳೋಕೆ. ಇವನ ಸಂಗೀತ ಟೀಚರ್ರು ಎರಡು ಗೀತೆಗಳನ್ನು ಹೇಳಿಕೊಟ್ಟಿದ್ದರಂತೆ. ಒಂದು “ಘಲ್ಲು ಘಲ್ಲುನೆತಾ..ಗೆಜ್ಜೆ..’ ಹಾಗೂ “ಅನಂತದಿಂ…ದಿಗಂತದಿಂ’. ಸ್ಪರ್ಧೆಯಲ್ಲಿ ಮೊದಲು ಘಲ್ಲು ಘಲ್ಲುನೆತಾ ಹಾಡು ಹೇಳಿದನಂತೆ. ಸ್ಪರ್ಧೆಯಲ್ಲಿ ಗೆಲ್ಲಲಿಲ್ಲ. ಮತ್ತೊಂದು ವರ್ಷದಲ್ಲಿ “ಅನಂತದಿಂ…ದಿಗಂತದಿಂ’ ಗೀತೆಯನ್ನು ಭಾವಪೂರ್ಣವಾಗಿ (ವಿತ್ ಆಕ್ಷನ್ಸ್) ಹಾಡಿದನಂತೆ. ತಗೊಳ್ಳಿ…ಬಹುಮಾನ ಬಂದುಬಿಟ್ಟಿತಂತೆ. ಅಂದಿನಿಂದ ಇವನ ಗೀತೆಯಾಗಿ ಬಿಟ್ಟಿತು, ಅದು.
ನೀವೂ ಒಮ್ಮೆ ಅವನ ಆ ಹಾಡನ್ನು ಕೇಳಬೇಕು. ಒಳ್ಳೆ ಎಂಜಾಯ್ ಮಾಡ್ತೀರೀ. ಚಿಕ್ಕವನಿದ್ದಾಗ ಸ್ವಲ್ಪ ಕಾಲಿಗೆ ಪೆಟ್ಟು ಬಿದ್ದಿದ್ದರೂ ಈತನಿಗೆ ಈ ಹಾಡು ಬಾಯಲ್ಲಿ ಬಂತೆಂದರೆ ಕುಣಿಯಲು ತೊಡಗುತ್ತಾನೆ. “ಹುಷಾರ್, ಮಾರಾಯ…ಕಾಲು’ ಎಂದರೂ “ಇರಲಿ..ಬಿಡಿ ’ ಎಂದು ದನಿ ಏರಿಸುತ್ತಾನೆ.  ಆ ದನಿ “ಅನಂತವಾಗಿ’ ದಿಗಂತದವರೆಗೂ ಮುಟ್ಟುವಂತೆ. ಹೀಗೆ ಬ್ರಹ್ಮಚಾರಿಗಳೆಲ್ಲರೂ ಪ್ರತಿಭಾವಂತರೇ. ಮುಂದಿನ ಅಧ್ಯಾಯಗಳಲ್ಲಿ ಉಳಿದವರ ಪ್ರತಿಭೆಯೂ ಬೆಳಕಿಗೆ ಬರಲಿದೆ, ಹುಷಾರ್, ಕಣ್ಣಿಗೆ ಕೋರೈಸಬಹುದು…ಹ್ಹ…ಹ್ಹ…ಹ್ಹ….!

ನಮ್ಮ ಸ್ವಾತಂತ್ರ್ಯ ದಿನಾಚರಣೆ !

ಪುಟ ಹತ್ತು
ಇಂಥ ಸಹಕಾರಿಗಳಾದ ನಮ್ಮದು ವಿಚಿತ್ರ ತಮಾಷೆಯ ಬದುಕು. ಹಲವು ಘಟನೆಗಳು ಮಾಸಿ ಹೋಗಿರುವಾಗ ರಾತ್ರೆಯಷ್ಟೇ ಹರ್ಷನಿಗೆ ಫೋನ್ ಮಾಡಿದ್ದೆ. ಒಂದೊಂದೇ ನೆನಪಿನ ಗರಿ ಷೋಕೇಸ್‌ನಲ್ಲಿಡತೊಡಗಿದ. ಒಂದರ ಬಣ್ಣವೂ ಮಾಸಿರಲಿಲ್ಲ. ಹಾಗೆಯೇ ಫಳ ಫಳ ಹೊಳೆಯುತ್ತಿತ್ತು.
ಆಗಸ್ಟ್ ೧೫ ಕ್ಕೆ ಇನ್ನೇನು ಒಂಬತ್ತು ದಿನ ಬಾಕಿಯಿದೆ. ಅದಕ್ಕೇ ಸಂಬಂಧಿಸಿದ ಒಂದು ಘಟನೆಯನ್ನು ವಿವರಿಸುತ್ತೇನೆ. ಅದು ನಮ್ಮ “ಗುಣಾವಗುಣ’ಗಳನ್ನು ಹೇಳಬಹುದು ಎಂಬುದು ನನ್ನ ಲೆಕ್ಕಾಚಾರ. ಆಗಸ್ಟ್ ೧೫ ಎಂದಿನಂತೆಯೇ ಬಂತು ಎಲ್ಲರಿಗೂ, ಆದರೆ ನಮಗೆ ಮಾತ್ರ ಅಲ್ಲ. ಮೊದಲೇ ಹೇಳಿದಂತೆ ನಮ್ಮದು ಚಿಕ್ಕ ಗಲ್ಲಿ. ಆದರೆ ಆ ಗಲ್ಲಿ ಇದ್ದದ್ದು ಮುಖ್ಯರಸ್ತೆಗೆ ಹೊಂದಿಕೊಂಡಂತೆಯೇ. ನಮ್ಮ ಮನೆಯಲ್ಲಿ ಉಪ್ಪರಿಗೆ ಎಂಬುದೊಂದಿತ್ತು. ಇನ್ನೊಂದು ಲೆಕ್ಕದಲ್ಲಿ ಹೇಳುವುದಾದರೆ ಅದು ಬೇಸಿಗೆ ಅರಮನೆ. ಮಹಾರಾಜರ ಕಾಲದಲ್ಲಿದ್ದಂತೆಯೇ. ಬೇಸಿಗೆ ಕಾಲದಲ್ಲಿ ಅಲ್ಲಿ ಮಲಗಲು ಬೇಡಿಕೆ ಹೆಚ್ಚುತ್ತಿತ್ತು.
ಆ ಆ. ೧೫ ರಂದು ಬೆಳಗ್ಗೆ ಬೇಗ ಎದ್ದೆವು. ನಮ್ಮ ಲೀಡರ್ ಟೈಲರ್ ರಮೇಶ್ ಅವರ ಮನೆಗೆ ಕೆಲವರು ಹೋಗಿ ಕರೆ ತಂದೆವು. ಅವರೇ ನಮ್ಮ ಅತಿಥಿ. ನಾವು ಎಂಟೂ ಮಂದಿ ರಸ್ತೆಯಲ್ಲಿ ಅಂದರೆ ಮನೆ ಮುಂದೆ ಸಾಲಾಗಿ ನಿಂತೆವು.
ಉಪ್ಪರಿಗೆ ಮೇಲೆ ಹೋದ ರಮೇಶ್ ಬಾವುಟ ಹಾರಿಸಿದರು. ರಸ್ತೆಯಲ್ಲಿ ಸಾಲಾಗಿ ನಿಂತ ನಾವು “ಜನಗಣಮನ’ ರಾಷ್ಟ್ರಗೀತೆ ಹಾಡಿದೆವು. ಇದ್ದಕ್ಕಿದ್ದಂತೆ ಮನೆ ಎದುರು ರಾಷ್ಟ್ರಗೀತೆ ಗಾಯನ ಕೇಳಿಬಂದದ್ದಕ್ಕೆ ಅಚ್ಚರಿಪಟ್ಟ ಪಕ್ಕದ ಮನೆಯವರು ಹೊರಗೆ ಬಂದರು. ನಗುವುದೊಂದೇ ಬಾಕಿ.
ರಸ್ತೆ ಮೇಲೆ ಹೋಗುತ್ತಿದ್ದವರೂ ನಮ್ಮ ಸಾಲು ಕಂಡು ದಂಗಾಗಿ ನಿಂತರು. ನಾವ್ಯಾರೂ ನಗಲಿಲ್ಲ. ಶಿಸ್ತಿನಿಂದ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವ ಮಕ್ಕಳ ಹಾಗೆ ಅತ್ತ ಇತ್ತ ನೋಡದೇ ಹಾಡಿದೆವು. …ಜಯಹೇ ….ಜಯಹೇ ಎಂದು ಮುಗಿಸಿ ಹಿಂದೆ ತಿರುಗಿ ನೋಡುತ್ತೇವೆ…ಪಕ್ಕದ ಮನೆಯ ಗೆಳೆಯನ ತಂದೆ, ಚಿಕ್ಕ ತಮ್ಮ, ಅಮ್ಮ ಎಲ್ಲರೂ ಸಾಲಾಗಿ ನಿಂತು ಧ್ವಜ ವಂದನೆ ಸಲ್ಲಿಸುತ್ತಿದ್ದರು. ನಿಜವಾಗಲೂ ಆಗ ನಗು ಬಂದದ್ದು ನಮಗೇ ನಮ್ಮನ್ನು ಕಂಡು.
ಗೆಳೆಯ ಹರ್ಷ ಮತ್ತು ಇತರರು ತಕ್ಷಣವೇ ತಂದ ಚಾಕಲೇಟ್ ನ್ನು ಎಲ್ಲರಿಗೂ ಹಂಚಿದರು. ರಸ್ತೆಯಲ್ಲಿ ನಿಂತವರಿಗೂ ಕೊಟ್ಟರು. ಪಕ್ಕದಲ್ಲೇ ಇದ್ದ ನರ್ಸರಿ ಶಾಲೆಯ ಹೋಗಿ ಮಕ್ಕಳಿಗೆ ಚಾಕಲೇಟ್ ಹಂಚಿದೆವು. ಅಲ್ಲಿನ ಟೀಚರ್…”ಎಲ್ಲಿಯದು?’ ಎಂದು ಕೇಳಿದ್ದಕ್ಕೆ ಅಲ್ಲಿಯದು ಎಂದು ತೋರಿಸಿದ ಗೆಳೆಯರ ಬೆರಳನ್ನೇ ನೋಡುತ್ತಾ ದಂಗಾಗಿ ನಿಲ್ಲುವ ಸರದಿ ಟೀಚರ್ ನದ್ದಾಗಿತ್ತು.
ಬಾವುಟ ಹಾರಿಸಿದ ಅತಿಥಿಗಳಿಗೆ ಉಪಾಹಾರ ಸತ್ಕಾರವೂ ಆಯಿತು. ಉಪ್ಪಿಟ್ಟು ಮಾಡಿದ್ದೆವು. ಎಲ್ಲರೂ ಕುಳಿತು ಅತಿಥಿಗಳೊಂದಿಗೆ ಕುಳಿತು ಹರಟುತ್ತಾ, ನಮ್ಮನ್ನು ನಾವೇ ಗೇಲಿ ಮಾಡಿಕೊಳ್ಳುತ್ತಾ, ಒಬ್ಬೊಬ್ಬರೂ ಹಾಡಿದ ರಾಷ್ಟ್ರಗೀತೆಯಲ್ಲಿನ ಸ್ಪೆಲ್ಲಿಂಗ್ ಮಿಸ್ಟೇಕ್ಸ್ ಅನ್ನು ಎತ್ತಿ ಹಾಡುವಾಗ ಮಧ್ಯಾಹ್ನ ೧೨ ಕಳೆದದ್ದು ತಿಳಿಯಲಿಲ್ಲ.
ಸರಕಾರಿ ರಜೆ ಇದ್ದರೆ ನಮ್ಮ ಆಫೀಸಿಗೆ ರಜೆ ಇರುವುದಿಲ್ಲ. ಆದರೆ ಸುದ್ದಿ ಮಾಡುವವರ ಮತ್ತು ಸುದ್ದಿಯಾಗುವವರು ಅಂದು ವಿರಾಮ ಘೋಷಿಸಿರುತ್ತಾರೆ. ಆದ್ದರಿಂದ ನಮಗೂ ಕೊಂಚ ಆರಾಮ.
ನಿಧಾನಕ್ಕೆ ಅನ್ನ-ಸಾಂಬಾರ್ ಮಾಡಿಕೊಂಡು ಊಟ ಮಾಡಿ ಒಂದು ನಿದ್ರೆ ಮಾಡಿ ಆಫೀಸಿಗೆ ಹೊರಟೆವು. ನಮ್ಮ ದುರಾದೃಷ್ಟ ಕಚೇರಿಗೆ ಬಂದಾಗಲೇ ಗೊತ್ತಾಗಿದ್ದು…ನಗರದಲ್ಲಿ ಒಂದು ಕೊಲೆಯಾಗಿದೆ ಎಂಬುದು !
ಇಷ್ಟರ ಮಧ್ಯೆ ಹರ್ಷನ ರಸಮಂಜರಿಯಲ್ಲಿ ಬಹಳ ಪ್ರಸಿದ್ಧವಾದ ಹಾಡು ಯಾವುದು ಗೊತ್ತೇ ?…!

ಬ್ರಹ್ಮಚಾರಿಗಳ ಪುಟ ಒಂಬತ್ತು

ಅಧ್ಯಾಯ ಒಂಬತ್ತು

ಚುನಾವಣೆ ಸೇರಿದಂತೆ ಹತ್ತು ಹಲವು “ಬ್ಯುಸಿ’ ನಡುವೆ ಕಳೆದು ಹೋಗಿದ್ದೆ. ಆಗಾಗ್ಗೆ ಬೇರೆ ಬರಹಗಳನ್ನು ಹಾಕುತ್ತಿದ್ದರೂ ಧಾರಾವಾಹಿ ಮುಂದುವರಿಸಲು ಆಗಿರಲಿಲ್ಲ. ಇನ್ನು ಮುಂದೆ ವಾರಕ್ಕೊಮ್ಮೆ ಧಾರಾವಾಹಿ ಅಪ್‌ಟುಡೇಟ್ ಮಾಡುವ “ಶಪಥ’ ಮಾಡಿದ್ದೇನೆ. ನೋಡಬೇಕು…
ಅಂದ ಹಾಗೆ ಈ “ಸ್ಕೂಪ್’ ಪ್ರಕರಣ ನಮ್ಮೊಳಗೆ ತುಂಬಿದ ಆತ್ಮವಿಶ್ವಾಸ ಅಪಾರ. ಅಷ್ಟೇ ಅಲ್ಲ. ನಮ್ಮ ನಡುವಿನ ಬಂಧವನ್ನೂ ಇನ್ನಷ್ಟು ಬಿಗಿಯಿತು. ಹೊಸ ಕನಸು ಅರಳಿಕೊಂಡಿದ್ದ ಬಗೆಯೂ ಹಾಗೆಯೇ. ಎಲ್ಲರೂ ಒಟ್ಟಿಗಿದ್ದರೆ ಚೆಂದವಾದೀತೆಂಬ ಅನಿಸಿಕೆಯೂ ನಮ್ಮದಾಗಿತ್ತು. ಸಿಗದಾಳನೊಡನೆ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಹಲಸೂರಿನ ಆ ಮನೆಯನ್ನು ಸೇರುವುದೆಂದು ನಿರ್ಧರಿಸಿದೆವು. ಹರ್ಷ ಮತ್ತು ನವೀನರ ಪ್ರಸ್ತಾಪವನ್ನು ಒಪ್ಪಿದೆವು. ಸರಿ, ದಿನ ನೆನಪಿಲ್ಲ. ಆ ಮನೆಗೆ ಪ್ರವೇಶ ಮಾಡಿದೆವು. ಅಲ್ಲಿಗೆ ತ್ಯಾಗರಾಜನಗರದ ಸಂಬಂಧ ಕಡಿದುಕೊಂಡಿತು. ಸಿಗದಾಳನ ಗೆಳೆಯರು ಕೆಲವರು ಅಲ್ಲಿದ್ದದ್ದರಿಂದ ಅವನೇನೋ ಹೋಗಿ ಬರುತ್ತಿದ್ದ. ನಾನಂತೂ ತೀರಾ ಕಡಿಮೆ.
ಹಲಸೂರಿನ ಜೋಗುಪಾಳ್ಯದ ಒಂದು ರಸ್ತೆ. ಮನೆಯನ್ನು ಹುಡುಕಲು ಬಹಳ ಸಲೀಸು. ಜೋಗುಪಾಳ್ಯದ ಕಡೆ ತಿರುಗಿ ಕೊಂಚ ಮುಂದಕ್ಕೆ ಹೋಗಿ ಎರಡನೇ ರಸ್ತೆಯಲ್ಲಿ ಬಲಕ್ಕೆ ತಿರುಗಿದರೆ ಮತ್ತೆ ಬಲಕ್ಕೆ ಮೊದಲ ಮನೆಯೇ ನಮ್ಮ ಮನೆ. ಎದುರಿಗೆ ಮಲಯಾಳಿಗಳ ಮನೆಯೊಂದಿತ್ತು. ತಮಾಷೆಯೆಂದರೆ ಅದರಲ್ಲಿದ್ದವರೂ ನನ್ನ ಹಳೆಯ ಗೆಳೆಯರು. ನಂತರ ಒಂದು ಶಾಲೆ.
ಮೊದಲೇ ಹೇಳಿದಂತೆ ಆ ಮನೆಯಲ್ಲಿ ಬದುಕುತ್ತಿದ್ದವರು ಎರಡು ಬಗೆಯ ಜನರು. ವರದಿಗಾರರಾಗಿದ್ದ ನಾವು ನಿಶಾಚರರು. ಉಳಿದವರು ಪರವಾಗಿಲ್ಲ, ಬಿಡಿ. ನಾನು, ನವೀನ, ಹರ್ಷ ಬರುತ್ತಿದ್ದುದೇ ರಾತ್ರಿ ೧೨ ರ ಮೇಲೆಯೇ.
ಆಗಲೇ ಹೇಳಿದಂತೆ ಶಿಸ್ತು ಇರಲಿಲ್ಲ ಎಂದು ತಿಳಿಯುವ ಅಗತ್ಯವಿಲ್ಲ. ನಾವು ಅಲ್ಲಲ್ಲಿ ಶಿಸ್ತಿನ ಬೆಂಚುಗಳನ್ನು ಹಾಕಿದ್ದೆವು, ಕುಳಿತುಕೊಳ್ಳುವುದು ಕಡಿಮೆ ಎನ್ನಿ.
ಮನೆಗೊಂದು ವೇಳಾಪಟ್ಟಿಯಿತ್ತು. ಅಡುಗೆಮನೆಯಲ್ಲಿ ಯಾವ್ಯಾವ ದಿನ ಬೆಳಗ್ಗೆ ಏನೇನು ತಿಂಡಿ ಎನ್ನುವ ಮೆನು ಪಟ್ಟಿಯನ್ನೂ ತೂಗು ಹಾಕಿದ್ದೆವು. ಅದರಂತೆಯೇ ತಿಂಡಿಯ ತಯಾರಿ. ಬೆಳಗ್ಗೆ ಒಂಬತ್ತಕ್ಕೆ ಕಚೇರಿಗೆ ಹೊರಡುವವರಿದ್ದರಿಂದ ಅವರಿಗೆ ನಾನು, ಹರ್ಷ, ನವೀನ ಸೇರಿ ತಿಂಡಿ ಮಾಡಿಕೊಡಬೇಕು. ಬೆಳಗ್ಗೆ ತಿಂಡಿ ಹೋದವರು ರಾತ್ರಿ ನಾವು ಬರುವಾಗ ನಮಗೆ ಊಟ ಸಿದ್ಧಪಡಿಸಿರುತ್ತಾರೆ. ಇಂಥದೊಂದು ಕರಾರು.
ಪಾತ್ರೆ ತೊಳೆಯುವ, ಕಸ ಗುಡಿಸುವವ ಹೊಣೆ ಬೇರೆ ಬೇರೆಯವರಿಗೆ ನೀಡಲಾಗಿತ್ತು. ಇಷ್ಟೆಲ್ಲಾ ಆದ ಮೇಲೂ ಮನೆಯಲ್ಲಿ ಪಾತ್ರೆ ತೊಳೆಯುವುದಕ್ಕಾಗಲೀ, ಬಟ್ಟೆ ಒಗೆಯುವುದಕ್ಕಾಗಲೀ ಮನೆಯಾಳನ್ನು ಇಟ್ಟುಕೊಂಡಿರಲಿಲ್ಲ. ವಾಷಿಂಗ್ ಮೆಷಿನ್ ಬಂದೇ ಇರಲಿಲ್ಲ ಬಿಡಿ. ನಾನು ಸ್ವಲ್ಪ ಹಿರಿಯ. ಅಂದರೆ ಒಂದೆರಡು ವರ್ಷವಿರಬಹುದು. ಅದಕ್ಕೇ ಸ್ವಲ್ಪ ಹೆಚ್ಚಿನ ಗೌರವ ಸಿಗುತ್ತಿತ್ತು. ಏನೋ…ಮನೆಯ ನಿಭಾಯಿಸುವಿಕೆಯ ಹೊಣೆ ವಹಿಸಿದ್ದರು. ಹಾಗೆಯೇ ಸಿಗದಾಳ್ ಲೆಕ್ಕಗಾರ. ಹಾಗಾಗಿ ಮನೆಯ ಲೆಕ್ಕವನ್ನೆಲ್ಲಾ ಲೆಕ್ಕ ಮಾಡಿ ಹಂಚುವುದು ಅವನ ಕೆಲಸವಾಗಿತ್ತು.
ಪ್ರತಿ ತಿಂಗಳ ಮೊದಲ ವಾರದಲ್ಲಿ ನಮ್ಮ ಪಾವತಿ ಪಟ್ಟಿ ಸಿದ್ಧವಾಗುತ್ತಿತ್ತು. ಮನೆ ಬಾಡಿಗೆ, ದಿನಸಿ ಸಾಮಾನು…ಇತ್ಯಾದಿ ವೆಚ್ಚವನ್ನು ಯಾರಿಗೆ ಮೊದಲು ಸಂಬಳ ಬರುತ್ತಿತ್ತೋ ಅವರು ಕೊಡುತ್ತಿದ್ದರು. ನಂತರ ಊರಿನವರು ತಮ್ಮ ತಮ್ಮ ಪಾಲನ್ನು ಸಂಬಳ ಬಂದ ಕೂಡಲೇ ಕೊಡಬೇಕಿತ್ತು. ಒಮ್ಮೊಮ್ಮೆ ಈ ಶಿಸ್ತನ್ನು ಉಲ್ಲಂಘಿಸಿ ಕೊಟ್ಟರಾಯಿತು ಎಂದು ನಿಲುವು ತಳೆದದ್ದೂ ಇದೆ. ಆಗ ಮೊದಲು ಕೊಟ್ಟವ ಕೋಡಂಗಿಯಂತಾಗಿ ಮುಂದಿನ ಬಾರಿ ಜಪ್ಪಯ್ಯ ಎಂದರೂ ಕೊಡಲಾರೆ ಎಂಬ ನಿಲುವಿಗೂ ಬಂದದ್ದಿದೆ. ಎಲ್ಲಿಯೂ ಹಗ್ಗ ಹರಿದು ಹೋಗದಂತೆ ಸೂಕ್ಷ್ಮತೆ, ನಾಜೂಕುತನ ಪ್ರದರ್ಶಿಸಲಾಗಿತ್ತು. ಅದಕ್ಕೇ ಏನೋ ? ಮೂರು ವರ್ಷ ಒಟ್ಟಿಗೆ ಬದುಕಿದೆವು. ಆಮೇಲೆ ನಮ್ಮ ನಮ್ಮ ವಯಸ್ಸಿನ ಅಗತ್ಯ (ಮದುವೆ) ಬಂಧವನ್ನು ಮುರಿಯುತ್ತಾ ಬಂದಿತೇ ಹೊರತು ಇನ್ಯಾವ ಲೆಕ್ಕಾಚಾರಗಳೂ ಅಲ್ಲ.
ಸೋಮವಾರ ಪೊಂಗಲ್, ಮಂಗಳವಾರ ಚಪಾತಿ, ಬುಧವಾರ ಹೀಗೆಯೇ ಪುಳಿಯೋಗರೆ ಅಥವಾ ಚಿತ್ರಾನ್ನ, ಗುರುವಾರ ಬಿಸಿಬೇಳೆಬಾತ್, ಶುಕ್ರವಾರ ವಾಂಗೀಬಾತ್, ಶನಿವಾರ ಉಪ್ಪಿಟ್ಟು, ಭಾನುವಾರ ಮಾತ್ರ ವಿಶೇಷ ತಿಂಡಿ. ಒಮ್ಮೊಮ್ಮೆ ನಮ್ಮ ನೀರು ದೋಸೆ ಸ್ಥಾನ ಪಡೆಯುತ್ತಿತ್ತು. ಸಾಲುಗಟ್ಟಿ ತಿನ್ನುತ್ತಿದ್ದರು. ಮೊದಲು ಬಂದವರಿಗೆ ಮೊದಲು ಆದ್ಯತೆ ಎನ್ನುವುದಕ್ಕಿಂತಲೂ ಮೊದಲು ಬಂದವರಿಗೆ ಹೆಚ್ಚು ಎಂಬಂತಾಗುತ್ತಿತ್ತು.
ನನಗೆ ಸ್ವಲ್ಪ ಅಡುಗೆ ಬರುತ್ತಿದ್ದುದ್ದರಿಂದ ತಿಂಡಿಯ ನೇತೃತ್ವ ವಹಿಸುತ್ತಿದ್ದೆ. ಹರ್ಷ, ನವೀನ ಎಲ್ಲರೂ ಸಹಕರಿಸುತ್ತಿದ್ದರು. ನಾನು ಮಾಡುತ್ತಿದ್ದ ವಾಂಗೀಬಾತ್‌ಗೆ ಮಾತ್ರ ಯಾಕೋ ಡಿಮ್ಯಾಂಡೇ ಇರುತ್ತಿರಲಿಲ್ಲ. ಮುಖ ಕಪ್ಪಿಟ್ಟುಕೊಂಡೇ ಕೆಲವರು ತಿನ್ನುತ್ತಿದ್ದರು. ಇನ್ನು ಕೆಲವರಿಗೆ ಚೆನ್ನಾಗಿಲ್ಲದಿದ್ದರೂ ಅನಿವಾರ್ಯ ಕರ್ಮ. ಇನ್ನೂ ಕೆಲವರಂತೂ ಬೆಳಗ್ಗೆ ಬೇಗನೆ ಮನೆ ಬಿಡುತ್ತಿದ್ದುದುಂಟು.
ಉಪ್ಪಿಟ್ಟು ಮಾಡಿದಾಗಲೂ ಸ್ವಲ್ಪ ಬೇಸರವೇ. ಪೊಂಗಲ್, ಪುಳಿಯೋಗರೆ ಎಲ್ಲಾ ಓಕೆ. ಇನ್ನು ರಾತ್ರಿಯ ಮೆನು ಕೇಳಬೇಡಿ. ಮಾರುಕಟ್ಟೆ ಆಧರಿಸಿ ನಿರ್ಧಾರವಾಗುತ್ತಿತ್ತು. ಅದರ ಹೊಣೆ ಸಿಗದಾಳ್‌ಗೆ, ಯೋಗೀಶ್, ಅರುಣ್ ಅವರೆಲ್ಲಾ ಸಹಕಾರಿಗಳು.
ಈ ಅರ್ಥದಲ್ಲಿ ಹೇಳುವುದಾದರೆ ನಾವೆಲ್ಲಾ ಒಂದರ್ಥದಲ್ಲಿ “ಸಹಕಾರಿ”ಗಳು (ಕೋಆಪರೇಟಿವ್ಸ್) !

ಬ್ರಹ್ಮಚಾರಿಯ ಪುಟಗಳು ಎಂಟು

ಅಂದಿನ ರಾತ್ರಿ ಕಳೆದ ಬಗೆ ಇನ್ನೂ ಚೆನ್ನಾಗಿ ನೆನಪಿದೆ. ಯಾವುದೂ ಮಾಸಿಲ್ಲ. ನಮ್ಮ ವೃತ್ತಿಯ ರೋಚಕ ಅನುಭವ. ನನಗಂತೂ ಸಹಜವಾಗಿಯೇ ವಿದೇಶದಲ್ಲಿ ಬದುಕುವವರ ಜೀವನಶೈಲಿ-ಆಹಾರ-ವಿಹಾರದ ಬಗ್ಗೆ ಕುತೂಹಲವಿತ್ತು. ಅದರಂತೆ ಬಹಳ ಆಸಕ್ತಿಯಿಂದಲೇ ಅವನು ಗಮನಿಸುತ್ತಿದ್ದೆ.

ಅವತ್ತು ರಾತ್ರಿಯೇನೋ ಅವನನ್ನು ಮನೆಗೆ ಕರೆದುತಂದೆವು. ಅವನಿಗೆ ಕೊಡಲು ಏನೂ ಇರಲಿಲ್ಲ. ರಾತ್ರಿ ಹತ್ತರ ಸಮಯ. ಏನು ಅಂತ ತರೋದು. ಅಂಗಡಿಗೆ ಹೋದೆ. ಅವನಿಗೆ ಏನು ರುಚಿಸುತ್ತೆ ಎಂದು ಕೇಳಿದೆವು. ಸುಮ್ಮನೆ ನಕ್ಕ. ತಕ್ಷಣವೇ ನೆನಪಿಗೆ ಬಂದದ್ದು ನೂಡಲ್ಸ್.

ತಮಾಷೆಯೆಂದರೆ ನೂಡಲ್ಸ್ ಮಾಡುವ ಬಗೆ ನನಗೆ ಗೊತ್ತಿರಲಿಲ್ಲ. ಆದರೆ ಶಾವಿಗೆ ಬಾತ್ ತಿಳಿದಿತ್ತು. ಅಂಗಡಿಯಿಂದ ಸಿಗದಾಳನಿಗೆ ಶಾವಿಗೆ ತರಲು ಹೇಳಿದೆ. ಜತೆಗೆ ಕ್ಯಾರೆಟ್, ಬೀನ್ಸನ್ನೂ ತಂದ. ಅವೋ ಒಣಗಿದ್ದವು. ಇದ್ದದ್ದು ಇರಲಿ ಎಂದು ಕತ್ತರಿಸಿ ಅರ್ಧ ಗಂಟೆಯಲ್ಲಿ ಬಾತ್ ಸಿದ್ಧವಾಯಿತು. ಕೊಂಚ ಎಣ್ಣೆ ಕಡಿಮೆ ಹಾಕಿದ್ದೆ. ಚೈನೀಸ್ ಡಿಶ್ ತರವೇ ಬೀನ್ಸ್‌ನ್ನು ಕತ್ತರಿಸಿದ್ದೆ.

ಅವನು ನೂಡಲ್ಸ್ ಮಾದರಿಯಲ್ಲೇ ತಿಂದ. “ಚೆನ್ನಾಗಿದೆ’ ಎಂದೂ ಹೇಳಿದ. ನಮಗೋ ಕರೆದು ತಂದ ತಪ್ಪಿಗೆ ಅವನನ್ನು ಮರುದಿನ ಸಂಜೆವರಗೆ ಸಾಗ ಹಾಕಿದರೆ ಸಾಕು ಎಂದಾಗಿತ್ತು. ಬ್ರೆಡ್ ಪಡೆದು ತಿಂದು, ನೀರು ಕುಡಿದು ಮಲಗಿದ. ಬೆಳಗ್ಗೆ ಆಗುವುದನ್ನೇ ಕಾಯುತ್ತಿದ್ದೆವು. ಸಿಗದಾಳನಿಗೆ ಸೋಮವಾರ ಬೆಳಗ್ಗೆ ತುಸು ಬೇಗ ಆಫೀಸಿಗೆ ಹೋಗಬೇಕಿತ್ತು. ನಾವೂ ಬೇಗ ಎದ್ದು  ಹೋಟೆಲ್‌ನಲ್ಲಿ ತಿಂಡಿ ತಿಂದೆವು. ಹರ್ಷ ಮತ್ತು ನವೀನ್ ಅವನನ್ನು ವಾಪಸು ಮನೆಗೆ ಕರೆ ತಂದು ಉಸ್ತುವಾರಿ ವಹಿಸಿಕೊಂಡರು.

ಮಧ್ಯಾಹ್ನ ಮತ್ತೆ ಶಾವಿಗೆ, ಬ್ರೆಡ್ ಕಥೆ. ಬೇಕೆಂದೇ ನಾನು ಅಂದು ಸ್ವಲ್ಪ ಬೇಗ ಕಮೀಷನರ್ ಕಚೇರಿಯ ಮಾಧ್ಯಮ ಕೇಂದ್ರಕ್ಕೆ ಬಂದೆ. ನನಗೆ ನಮ್ಮ ವಿರೋಧಿ ಗುಂಪಿನ ಇಂಗು ತಿಂದ ಮಂಗನ ಕಥೆ ನೋಡಬೇಕಿತ್ತು. ವಿರೋಧಿ ಗುಂಪಿನ ನಾಯಕ ಬುಸುಗುಡುತ್ತಲೇ ಒಳಗೆ ಬಂದ. ಅವನ ಗುಂಪಿನ ಕೆಲವರನ್ನೇ “ಹೆಂಗ್ ಮಿಸ್ಸಾಯ್ತು, ಆ ಸ್ಟೋರಿ? ನಿಮಗೆ ಗೊತ್ತಾಗಲಿಲ್ವಾ?’ ಎಂದು ಬಡಬಡಿಸತೊಡಗಿದ. ಅವನ ಧ್ವನಿಯಲ್ಲಿ ಅಸಹನೆ ಇತ್ತು.

ಬಹಳ ದಿನಗಳಾದ ಮೇಲೆ ಕೊಟ್ಟ ಚೋಕ್ ಅದು. ಜತೆಗೆ ಆ ಸ್ಟೋರಿ ಅವನ ಗುಂಪಿಗೆ ಮಹತ್ವವಲ್ಲದಿದ್ದರೂ ಅವನಿಗೆ ಅತ್ಯಂತ ಮುಖ್ಯ. ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಬಂದ ಸ್ಟೋರಿ ನೋಡಿ ಅವರ ಚೀಫ್ ಕೆಂಡಮಂಡಲವಾಗಿದ್ದರು. ಯಾಕೆಂದ್ರೆ ಅವನ ಪತ್ರಿಕೆಯ ಲಂಡನ್ ಎಡಿಷನ್ ಇತ್ತು. ಅದಕ್ಕೆ ಲೀಡ್ ಸ್ಟೋರಿ. ಕ್ರೆಗ್ ಆರ್ಕೆಲ್ ಅಲ್ಲಿಯವನೇ. ಅದೆಲ್ಲವೂ ಅವನ ಧ್ವನಿಯಲ್ಲಿ ಕಾಣುತ್ತಿತ್ತು. ನನ್ನನ್ನು ಕಂಡು ಗುರಾಯಿಸಿ ಹೊರಟ.

ಅವನು ವಿರೋಧಿ ಗುಂಪಿಗೆ ಸಿಗದಂತೆ ನೋಡಿಕೊಂಡೆವು. ನಾನು ಮಧ್ಯಾಹ್ನ ಆದದ್ದನ್ನೆಲ್ಲಾ ಕಚೇರಿಗೆ ಹೋಗಿ ಹರ್ಷ, ನವೀನ್‌ರಿಗೆ ವರದಿ ಕೊಟ್ಟೆ. ಸಂಜೆಯಷ್ಟೊತ್ತಿಗೆ ಅವನನ್ನು ಇಂಡಿಯನ್ ಎಕ್ಸ್‌ಪ್ರೆಸ್ ಆಫೀಸಿಗೆ ಹರ್ಷ ಕರೆದು ತಂದ. ಸಂತೋಷದ ಸಂಗತಿಯೊಂದಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ಆಫೀಸ್‌ಗೆ ಫೋನ್ ಮಾಡಿದ ಸಾರ್ವಜನಿಕರೊಬ್ಬರು ಅವನ ಪ್ರಯಾಣಕ್ಕೆ5 ಸಾವಿರ ರೂ. ಕೊಡುವುದಾಗಿ ಘೋಷಿಸಿದ್ದರು. ಹೀಗೆ ನಮ್ಮ ಆಫೀಸ್‌ಗಳಿಗೂ ಕೆಲವು ಕರೆಗಳು ಬಂದಿದ್ದವು. ಅಂತಿಮವಾಗಿ ಅವನಿಗೆ ಸುಮಾರು 10 ಸಾವಿರ ರೂ. ಗಳು ಹೊಂದಿಕೆಯಾದಂತೆ ನೆನಪು.

ಸಂಜೆ ಬಾಂಬೆಗೆ ಹೋಗುವ ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ಅವನನ್ನು ಕೂರಿಸಿ, ಪಕ್ಕದ್ದಲ್ಲಿದ್ದವರಿಗೆ ಪರಿಚಯ ಮಾಡಿಸಿದೆ. ಕೆಲ ಕ್ಷಣಗಳಲ್ಲಿ ರೈಲು ಹೊರಟಾಗ ಅವನು ನನ್ನೆಡೆ ಅಭಿಮಾನದಿಂದ ಕೈ ಬೀಸಿದ. ಯಾವುದೋ ಸಂಬಂಧ ನಮ್ಮನ್ನು ಬೆಸೆದಿತ್ತು.

ಕೊನೆಗೂ ಸ್ವಲ್ಪ ದಿನಗಳ ನಂತರ ಅವನ ಊರಿನಿಂದ ನಮಗೆ ಕಾಗದ ಬಂತು. ಅವನು ಆರಾಮಾಗಿ ತಲುಪಿದ ಬಗೆಯನ್ನು ವಿವರಿಸಿ, ನಮ್ಮೆಲ್ಲರ ನೆರವನ್ನು ಕೊಂಡಾಡಿದ್ದ. ನಮಗೆ ಕೃತಾರ್ಥ ಭಾವನೆ ಮೂಡಿತ್ತು. ನಮ್ಮ ಸ್ಟೋರಿಗಾಗಿ ಸ್ವಾರ್ಥದಿಂದ ವರ್ತಿಸಿದೆವೇನೋ ಎನಿಸಿದರೂ, ಜತೆಗೆ ಮಾನವೀಯತೆಯಿಂದ ನಡೆದುಕೊಂಡೆವು ಎಂಬ ಸಮರ್ಥನೆ ಇತ್ತು. ನಿಮಗೆ ಏನನ್ನಿಸುತ್ತದೋ ಗೊತ್ತಿಲ್ಲ.

ಅವನ ಪತ್ರದ ಒಕ್ಕಣಿಕೆ ಹೀಗಿತ್ತು. ಮಿ. ಹ್ಯಾಪಿ, ಮಿ. ಲೋಟಸ್ 1, ಲೋಟಸ್ 2, ಮಿ. ನ್ಯೂ… ನಮ್ಮ ಭಾರತೀಯ ಹೆಸರುಗಳು ಅವನಿಗೆ ಉಚ್ಚರಿಸಲು ಬರುತ್ತಿರಲಿಲ್ಲ. ಹಾಗಾಗಿ ನಮ್ಮ ಹೆಸರಿನ ಅರ್ಥ ಅವನ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದೆವು. ಹಾಗಾಗಿ ಹರ್ಷ ಎಂಬವ ಮಿ. ಹ್ಯಾಪಿ ಆಗಿದ್ದ, ನವೀನ್ ಮಿ. ನ್ಯೂ, ಅರವಿಂದ ಸಿಗದಾಳ ಮಿ. ಲೋಟಸ್ 1 ಹಾಗೂ ಅರವಿಂದ ಮಿ. ಲೋಟಸ್ 2…!

ಎಲೆಕ್ಷನ್ ಗಲಾಟೆ ಧಾರಾವಾಹಿಯ ಮುಂದಿನ ಕಂತು ಬರೆಯಲು ತಡವಾಯಿತು. ಕ್ಷಮಿಸಿ. (ಸಶೇಷ)

ಬ್ರಹ್ಮಚಾರಿಗಳ ಪುಟಗಳು ಏಳು

ತಕ್ಷಣವೇ ನವೀನ ಮತ್ತು ಹರ್ಷ ಸೌತ್ ಡಿಸಿಪಿ ಗೆ ಫೋನ್ ಮಾಡಿದರು. ನನಗೋ ಕುತೂಹಲ. ಆ ಬದಿಯಿಂದ ಶುರುವಾದ ಸಂಭಾಷಣೆ ಇವರಿಬ್ಬರ ಮುಖದಲ್ಲೂ ಗೆಲುವು ತರಲಿಲ್ಲ. ಕೆಲ ಕ್ಷಣಗಳ ನಂತರ ನವೀನ್ ಫೋನ್ ಆಫ್ ಮಾಡಿ ಇದು ಕೊಲೆಯಲ್ಲವಂತೆ ಎಂದು ಹೇಳಿದ. ನಿಜ, ನಮಗಿಬ್ಬರಿಗೂ ಬೇಸರವಾಗಿತ್ತು. ಒಳ್ಳೆ ಸ್ಕೂಪ್ ಸಿಗಬಹುದೆಂದು ನಿರೀಕ್ಷಿಸಿದ್ದವರಿಗೆ ಸಿಂಗಲ್ ಕಾಲಂ ಸುದ್ದಿ ಸಿಕ್ಕಿತ್ತು.

ಆ ಹೆಣದ ಕುಲಗೋತ್ರ ಗೊತ್ತಿರಲಿಲ್ಲ. ಪತ್ರಿಕಾ ಭಾಷೆಯಲ್ಲಿ ಅದರಲ್ಲೂ ಕ್ರೈಮ್ ಬೀಟ್‌ನಲ್ಲಿ ಇದನ್ನು ಯುಡಿಆರ್ ಎಂದು ಪರಿಗಣಿಸಿ ಪುಣ್ಯಾರ್ಥವಾಗಿ ಹಾಕೋ ಸುದ್ದಿ. ಇವನ ಸಂಬಂಧಿಕರ್‍ಯಾರಾದರೂ ಗುರುತು ಪರಿಚಯ ಹಚ್ಚಿ ಹೆಣ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡ್ಲಿ ಎನ್ನೋ ಧಾಟಿಯಲ್ಲಿ ಹಾಕ್ತೀವಿ. ಅದಕ್ಕೆ ಕೊಡೋ ಶೀರ್ಷಿಕೆಯೂ ಅದೇ ತೆರನಾದದ್ದು. ಯಾವುದೋ ಪುಟದ, ಕಾಲಮ್ಮಿನ ಫಿಲ್ಲರ್ ಆಗಿ “ಅಪರಿಚಿತ ಶವ ಪತ್ತೆ’ ಎನ್ನೋ ಶಿರೋನಾಮೆಯಲ್ಲಿ ಮಾರನೇ ದಿನ ಸುದ್ದಿ ಪ್ರಕಟವಾಗುತ್ತದೆ.

ಇಷ್ಟೆಲ್ಲಾ ಆದ್ಮೇಲೆ ಆ ಹೆಣದ ಪೂರ್ವಾಪರ ತಿಳಿದ ನಮಗೆ ಅದು ಭಿಕ್ಷುಕನ ಹೆಣ ಅಂತ ತಿಳೀತು. ಇನ್ನೇನೂ ಮಾಡುವಂತಿರಲಿಲ್ಲ. ಸುಮ್ಮನೆ ಹೊರಟೆವು ಅಲ್ಲಿಂದ ಕಚೇರಿಗಳಿಗೆ. ಭಾನುವಾರವಾದರೇನು ? ಸೋಮವಾರವಾದರೇನು ? ದೇವಸ್ಥಾನಕ್ಕೆ ಹೋಗೋಕೆ ವಾರವಿದೆಯಾ? ಅನ್ನೋ ಹಾಗಿ ಕಮೀಷನರ್ ಕಚೇರಿಯತ್ತ ಹೊರಟೆವು. ಕಚೇರಿಗೆ ಹೋಗಿ ಕುಳಿತು ಬರೆಯೋವಷ್ಟು ಸುದ್ದಿ ಇರಲಿಲ್ಲ.

ಸಂಡೇ ಎಂದರೆ ಒಂದು ಬಗೆಯಲ್ಲಿ ಡ್ರೈ ಡೇ. ಸಾಮಾನ್ಯವಾಗಿ ರಾತ್ರಿ ಎಂಟರವರೆಗೂ ಒಂದು ಪ್ಯಾರಾ ಸುದ್ದಿಯೂ ಇರೋದಿಲ್ಲ. ಎಲ್ಲೂ ಅಪಘಾತ ಆಗಿರೋದಿಲ್ಲ, ಯಾರೂ ಕುಡಿದು ಟೈಟಾಗಿ ಬಿದ್ದು ಸತ್ತಿರೋದಿಲ್ಲ, ಯಾರ ಮಧ್ಯೆಯೂ ಮಾರಾಮಾರಿ ನಡೆದಿರೋದಿಲ್ಲ. ಆದರೆ ಎಂಟಾಗುತ್ತಿದ್ದಂತೆ ಅಪರಾಧದ ಟಿಆರ್‌ಪಿ (ರೇಟ್) ಏರುತ್ತಾ ಹೋಗುತ್ತದೆ. ಒಂದೊಂದು ಭಾನುವಾರವಂತೂ ನಮ್ಮ ಹೆಣ ಬಿದ್ದು ಹೋಗುವಷ್ಟು ಅಪರಾಧಗಳು ನಡೆದಿರುತ್ತವೆ. ನಮ್ಮ ಚೀಫ್ ರಿಪೋರ್ಟರ್ ಸೇರಿದಂತೆ ವರದಿಗಾರರ ಎಲ್ಲರೂ ಮನೆಯಲ್ಲಿ ಹೋಗಿ ಉಂಡು ಮಲಗಿದ್ದಾಗಲೂ ನಮ್ಮ ಕೆಲಸ ನಡೆಯುತ್ತಲೇ ಇರುತ್ತದೆ.

ಇಂಥದ್ದರ ನಡುವೆ ಮಾಡಲು ಕೆಲಸವಿಲ್ಲವಾದ್ದರಿಂದ ಸೀದಾ ಕಮೀಷನರ್ ಕಚೇರಿ ಒಳಗೆ ಹೋಗುತ್ತಿದ್ದಂತೆ ಒಬ್ಬ ಮಿಕ ಕಂಡು ಬಂದ. ಬೆಳ್ಳಗಿನ ಚರ್ಮ, ಕೆಂಚನೆಯ ಕೂದಲು, ಕುರುಚಲು ಗಡ್ಡ. ವಿದೇಶಿ ಪ್ರಜೆ ಎಂಬುದು ಪಕ್ಕ ಆಯಿತು. ಕಮೀಷನರ್ ಕಚೇರಿಯಲ್ಲಿಯೇ ವಲಸಿಗರ ಕುರಿತ ಮಾಹಿತಿ ಕಚೇರಿ ಇರುವುದರಿಂದ ವಿದೇಶಿಯರ ಆಗಮನ ಸಾಮಾನ್ಯ. ಹಾಗಾಗಿ ಇವನೂ ಬಂದಿರಬಹುದು ಎಂದು ನಾನು ಸುಮ್ಮನೆ ಮುಂದಕ್ಕೆ ಹೋದೆ. ಹರ್ಷ, ನವೀನನೂ ಹಿಂಬಾಲಿಸಿದ.

ಅಷ್ಟರಲ್ಲಿ ಒಬ್ಬ ಪರಿಚಿತ ಪೇದೆ ಬಂದವನೇ, “ಸಾರ್, ಯಾರೋ ಇಂಗ್ಲೆಂಡ್‌ನವನು ಬಂದವ್ನೆ. ಏನೋ ಇಂಗ್ಲಿಷ್ ನಲ್ಲಿ ಹೇಳ್ತಾನೆ’ ಎಂದ. ಹೆಲ್ಪ್ ಮಾಡೋ ದೃಷ್ಟಿಯಿಂದ ನಾವು ಅತ್ತ ಸಾಗಿದೆವು. ಹರ್ಷ ಮಾತನಾಡಿಸಲು ಶುರು ಮಾಡಿದ. ಒಂದೊಂದೇ ವಿವರ ಹೊರಬಂತು. ಅದೆಲ್ಲವೂ ದೊಡ್ಕ ಸ್ಕೂಪ್ ಆಗಿಬಿಡಬೇಕೇ ?

ಇಂಗ್ಲೆಂಡ್‌ನ ಗ್ಲುಕೋಸ್ಟೈರ್ ಪ್ರದೇಶದವನು ಆತ. ಅವನ ಹೆಸರು ಕ್ರೆಗ್ ಆರ್ಕೆಲ್. ವಯಸ್ಸು ಸುಮಾರು ೨೮. ಕೆಲಸವೇನೂ ಇಲ್ಲ. ಹೀಗೆ ಊರೂರು ತಿರುಗಿ ಅಲ್ಲಿನ ಅನುಭವದ ಬಗ್ಗೆ ಪುಸ್ತಕ ಬರೆಯೋದು. ಹಾಗೆಯೇ ಭಾರತಕ್ಕೂ ಬಂದಿದ್ದ. ಮುಂಬಯಿಗೆ ಬಂದವ, ಹೀಗೆ ದಾರಿ ಹಿಡಿದು ಬೆಂಗಳೂರಿಗೂ ಬಂದಿದ್ದ. ಆದರೆ ಮುಂಬಯಿಯ ರೈಲಿನಲ್ಲಿ ಅವನ ಭವಿಷ್ಯವನ್ನೇ ಬದಲಿಸಿತ್ತು. ಯಾರೋ ಅವನಿಗೆ ಟೋಪಿ ಹಾಕಿದ್ದರು.

ಅವನ ಸ್ಥಿತಿ ಹೇಗಿತ್ತೆಂದರೆ ಮುಂಬಯಿಗೆ ವಾಪಸು ಹೋಗುವ ಟ್ರೈನಿನ ಟಿಕೇಟೂ ಸಹ ಇರಲಿಲ್ಲ. ಕೈಯಲ್ಲಿದ್ದ ಎಲ್ಲ ಹಣ ಕಳೆದುಕೊಂಡಿದ್ದ. ಅಗತ್ಯ ದಾಖಲೆಗಳೂ ಕಾಣೆಯಾಗಿದ್ದವು. ತೀರಾ ಹತಾಶನಾಗಿ ಕಮೀಷನರ್ ಅವರ ಸಹಾಯ ಕೋರಲು ಬಂದಿದ್ದ. ಎಲ್ಲ ವಿವರ ಪಡೆದಾಗ ನಮ್ಮ ಮುಖದಲ್ಲಿ ಗೆಲುವು ಕಂಡು ಬಂದಿದ್ದು ಸತ್ಯ.

ಅಂದು ಭಾನುವಾರ. ಯಾವ ಅಧಿಕಾರಿಯೂ ಸಿಗಲಾರರು. ಸೋಮವಾರದವರೆಗೂ ಆತ ಕಾಯಬೇಕು. ನಮ್ಮೊಳಗೆ ಒಮ್ಮೆಲೆ ಸ್ಕೂಪ್ ಪ್ರಜ್ಞೆ ಮತ್ತು ಮಾನವೀಯತೆ ಎರಡೂ ಜಾಗೃತವಾಯಿತು. ಎರಡನ್ನೂ ನಿರ್ವಹಿಸುವುದು ಹೇಗೆ ಎಂಬ ಜಿಜ್ಞಾಸೆಯೂ ಎದುರಾಯಿತು.

ಅಷ್ಟರಲ್ಲಿ ಮೂವರೂ ಸೇರಿ ಒಂದು ಮಾಸ್ಟರ್ ಪ್ಲಾನ್ ಮಾಡಿದೆವು. ಅವನಿಗೆ ಒಂದು ಪಂಚತಾರಾ ಹೋಟೆಲ್‌ನಲ್ಲಿ ರೂಮ್ ಮಾಡಿಸಿ ಕೂರಿಸಲು ಒಂದು ದಿನದ ಕೋಣೆಯ ಬಾಡಿಗೆಯಷ್ಟೂ ಸಂಬಳ ನಮಗೆ ಬರುತ್ತಿರಲಿಲ್ಲ. ಅವನನ್ನು ಹಾಗೆಯೇ ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ಇದೆಲ್ಲದರ ಜತೆಗೆ ನಮ್ಮ ಎದುರಿನ ಗುಂಪಿಗೆ ಮಿಸ್ ಮಾಡುವ ಸ್ಕೆಚ್ ನ್ನೂ ರೂಪಿಸಲಾಯಿತು. ಅದರಂತೆ ಹರ್ಷ ಕ್ರೆಗ್‌ನನ್ನು ಕರೆದೊಯ್ದು ತನ್ನ ಕಚೇರಿಯ ವಿಸಿಟರ್ ಲಾಂಜ್‌ನಲ್ಲಿ ಕುಳ್ಳಿರಿಸಿದ.

ಎರಡೂ ಗುಂಪು ಪರಸ್ಪರ ಮಣಿಸಲು ಹಣಾಹಣಿ ನಡೆಸುತ್ತಿದ್ದರಿಂದ ಪತ್ತೇದಾರಿಕೆ ನಡೆಯುತ್ತಲೇ ಇತ್ತು. ಅವನಿಗೆ ಇವತ್ತು ಯಾವ ಸುದ್ದಿ ಸಿಕ್ಕಿರಬಹುದು? ನಮಗೆ ಯಾವುದು? ಹೀಗೆ ಫಾಲೋ ಮಾಡುತ್ತಲೇ ಇದ್ದವು. ನಮ್ಮ ನೆರವು ಕೋರಿದ್ದ ಪೇದೆಗೆ ಈ ವಿಷಯ ಯಾರಿಗೂ ತಿಳಿಸದಂತೆ ಹೇಳಿದ್ದೆವು. ನಾನು ಮತ್ತು ನವೀನ್ ನಮ್ಮಮ್ಮ ಕಚೇರಿಗೆ ಹೋಗಿ ಸುದ್ದಿ ಬರೆದೆ. ನನ್ನಲ್ಲಿ “ಆದರ್ಶ ಭಾರತ ಕಾಣಲು ಬಂದ, ಮೋಸ ಹೋದ’ ಎಂದು ಶೀರ್ಷಿಕೆ ಕೊಟ್ಟು ಸುದ್ದಿ ಬರೆದಾಯಿತು.

ಎಲ್ಲ ಮುಗಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಬಸ್ ಸ್ಟಾಪ್‌ಗೆ ನಾನು ಬಂದೆ. ಕ್ರೆಗ್ ಆರ್ಕೆಲ್ ಅನ್ನು ನಮ್ಮೊಡನೆ ಎನ್ ಆರ್ ಕಾಲೋನಿಯ ಮನೆಗೆ ಕರೆದೊಯ್ದೆವು. ನಮ್ಮ ಮಾನವೀಯತೆಯ ಉಪಚಾರಕ್ಕೆ ಅವನು ಸೋತು ಹೋದ. ಅಂದು ಮಲಗಿದ್ದು ತೆರೇಸಿನಲ್ಲಿ. ಕಣ್ಣು ಬಿಟ್ಟರೆ ಆಕಾಶ, ಎಣಿಸಲಿಕ್ಕೆ ಸಾಕಷ್ಟು ತಾರೆ. ರಾತ್ರಿ ಕಳೆದದ್ದೇ ತಿಳಿಯಲಿಲ್ಲ !

ಬೆಳಗಾಗುವಷ್ಟರಲ್ಲಿ  ಉದಯವಾಣಿ, ಹೊಸದಿಗಂತ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಸುದ್ದಿ ಪ್ರಕಟವಾಗಿತ್ತು. ನಮ್ಮ ಮುಖದಲ್ಲಿ ಕಾಂತಿ ಫಳಫಳಿಸುತ್ತಿತ್ತು ! (ಬ್ರಹ್ಮಚಾರಿಯ ಪುಟಗಳು ಆರನೆಯದನ್ನು ಬೇರೆ ಶೀರ್ಷಿಕೆಯಲ್ಲಿ ಹಾಕಿದ್ದೆ. ಆದರೆ ಓದುಗರಿಗೆ ಕಮ್ಯುನಿಕೇಷನ್ ಆಗಲಿಲ್ಲವೆಂದು ತೋರುತ್ತದೆ. ಅದಕ್ಕೇ ಹಳೇ ಶೀರ್ಷಿಕೆಯಲ್ಲೇ ಮುಂದುವರಿಸಿದ್ದೇನೆ)    

ಹೆಣ ನಮ್ಮ ಕೈ ಬಿಟ್ಟಿರಲಿಲ್ಲ… !

ಬ್ರಹ್ಮಚಾರಿಯ ಪುಟಗಳು ಆರು 

ಅಂದು ಭಾನುವಾರ. ಇದು ಮಾತ್ರ ಸರಿಯಾಗಿ ನೆನಪಿದೆ. ಸಾಮಾನ್ಯವಾಗಿ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಹರ್ಷ ಮತ್ತು ನವೀನ್ ನಮ್ಮ ಎನ್. ಆರ್. ಕಾಲೋನಿ ಮನೆಗೆ ಬರುತ್ತಿದ್ದರು. ಈ ಹಿಂದೆಯೇ ಹೇಳಿದಂತೆ ಅಂದು ಚೆಂದವಾದ ಊಟ. ರಾತ್ರಿ ಅಡುಗೆ ಗೆಳೆಯ ಸಿಗದಾಳ್ ಮುಗಿಸಿಡುತ್ತಿದ್ದ. ಬೆಳಗ್ಗೆ ಅವನಿಗೆ ನಾನು ತಿಂಡಿ ಮಾಡಿಕೊಡುತ್ತಿದ್ದೆ. ಒಮ್ಮೊಮ್ಮೆ ಸೋಮಾರಿ ಎನಿಸಿ ತಡವಾಗಿ ಎದ್ದು, ಏಳಲು ಮನಸ್ಸಾಗದಿದ್ದಾಗ ಸುಳ್ಳನೊಂದು ಕಾಯಿಲೆ (ತಲೆನೋವು, ಯಾಕೋ ಸುಸ್ತು) ಹೇಳಿ ಸಾಗ ಹಾಕುತ್ತಿದ್ದ ದಿನಗಳೂ ಇದ್ದವು.

ಅದರಲ್ಲಿ ಸಿಗದಾಳ್ ಒಳ್ಳೆ ಮನುಷ್ಯ. ರಾತ್ರಿ ಅಡುಗೆ ಮಾಡಿಡುತ್ತಿದ್ದ. ಕೈಲಾಗದ ದಿನ ಮೊದಲೇ ಹೇಳುತ್ತಿದ್ದ. ಎಲ್ಲೋ ಬೇಕರಿಯಲ್ಲಿ ತಿಂದು ದಿನ ದೂಡುತ್ತಿದ್ದೆವು. ಆದರೆ ಶನಿವಾರ ಸ್ವಲ್ಪ ಸ್ಪೆಷಲ್ಲು. ಅಂಥದ್ದೇ ಒಂದು ಶನಿವಾರದ ರಾತ್ರಿ ಸುಮಾರು ೧೧. ೩೦ ಗೆ ಹರ್ಷ, ನವೀನ್ ಇಬ್ಬರೂ ಮನೆಗೆ ಬಂದರು. ಅವತ್ತು ಬದನೆಕಾಯಿ ಹುಳಿ ಮಾಡಿದ್ದ ಸಿಗದಾಳ್. ಸೆಂಡಿಗೆ ಬೇಕಿತ್ತು, ಆದರೆ ಇರಲಿಲ್ಲ. ನಾನು ಕಚೇರಿಯಿಂದ ಬರುವ ಹಾದಿಯಲ್ಲಿ ಸ್ವಲ್ಪ ಕಡ್ಲೇಬೇಳೆ ವಡೆ (ಚಟ್ಟಂಬಡಿ) ತಂದಿದ್ದೆ.

ಎಲ್ಲರೂ ಹಂಚಿಕೊಂಡು ತಿಂದೆವು. ಒಂದಷ್ಟು ಹೊತ್ತು ಹರಟಿದೆವು. ಎರಡು ದಿನದ ಹಿಂದೆಯಷ್ಟೇ ನಮ್ಮ ಎದುರಿನ ಗುಂಪಿಗೊಂದು ಶಾಕ್ ಕೊಟ್ಟಿದ್ದೆವು. ಪೊಲೀಸ್ ಅಧಿಕಾರಿಯೊಬ್ಬರ ಎತ್ತಂಗಡಿ ಸುದ್ದಿ ಬರೆದು ಗಪ್‌ಚುಪ್ ಎನ್ನುವಂತೆ ಮಾಡಿದ್ದೆವು. ಅದೇ ಝೂಮ್‌ನಲ್ಲಿದ್ದ ನಾವೆಲ್ಲಾ ಮತ್ತೊಂದು ಸ್ಕೂಪ್‌ನ ಅನ್ವೇಷಣೆಯಲ್ಲಿದ್ದೆವು. ಈ ಮಧ್ಯೆ ಸಿಗದಾಳ್ ಲೆಕ್ಕಾಚಾರ (ಅಕೌಂಟೆಂಟ್) ದ ವ್ಯಕ್ತಿ. ಅವನಿಗೆ ನಮ್ಮ ಕ್ಷೇತ್ರವೂ ಹೊಸತು.

ಹಾಗಾಗಿ, ಮಧ್ಯೆ ಮಧ್ಯೆ ಡಿಕ್ಟೇಷನ್ ನಡುವೆ “ಏನಂದ್ರಿ?’ ಎಂದು ಕೇಳುವ ಹಾಗೆ ಆಗಾಗ್ಗೆ “ಹಂಗಂದ್ರೆ’ ಎಂದು ಕೇಳುತ್ತಿದ್ದ. ಅತ್ಯಂತ ಕುತೂಹಲದ ಜೀವಿ. ಪುಸ್ತಕ ಅವನ ಚಟ. ಭೈರಪ್ಪನನ್ನು ಅರೆದು ಕುಡಿದಿದ್ದ. ಹಾಗೆ ಹೇಳುವುದಾದರೆ ಭೈರಪ್ಪನಿಂದಲೇ ಅವನು ನನಗೆ ಸಿಕ್ಕಿದ್ದು ಗೆಳೆಯನಾಗಿ. ಇಂದಿಗೂ ಜೀವದ-ಜೀವನದ ಗೆಳೆಯನಾಗಿದ್ದಾನೆ ಕೂಡ. ಅವನು ಗೆಳೆಯನಾದ ಪರಿ ಮತ್ತೊಮ್ಮೆ ಹೇಗಾದರೂ ಉಲ್ಲೇಖಿಸುತ್ತೇನೆ. ಇಂಥ ಸಿಗದಾಳನಿಗೆ ಇದೇನೂ ಕಷ್ಟಕರವಾದ ವಿಷಯವಾಗಿರಲಿಲ್ಲ.

ಆದರೆ ಮಾತಿನ ಮಧ್ಯೆ ಕೋಡ್ ವರ್ಡ್‌ಗಳು, ವ್ಯಕ್ತಿಗಳು ಬಂದಾಗ ಸ್ವಲ್ಪ ವಿಚಲಿತನಾಗುತ್ತಿದ್ದ. ಎಂದಿಗೂ “ನೀವೇನು ಬೇಕಾದ್ರೂ ಮಾಡ್ಕೊಳ್ರೋ’ ಎಂದು ರಗ್ಗು ಹೊದ್ದು ಮಲಗಿಕೊಂಡವನಲ್ಲ. ಅಂದೂ ರಾತ್ರಿ ಎರಡೂವರೆವರೆಗೆ ಚರ್ಚಿಸಿದೆವು. ನಾವು ಇದ್ದದ್ದು ಮೊದಲ ಅಂತಸ್ತಿನಲ್ಲಿ (ಆ ಮನೆಗೆ ಇದ್ದದ್ದು ಒಂದೇ ಅಂತಸ್ತು ಬಿಡಿ). ಅಂತೂ ಮಲಗಲೇ ಬೇಕೆಂದು ನಿರ್ಧರಿಸಿ ತಾರಸಿಯ ಬಯಲಿನಲ್ಲಿ ನಾಲ್ಕೂ ಮಂದಿ ಮಲಗಿಕೊಂಡೆವು.

ಬೆಳಗ್ಗೆ ಎದ್ದಾಗ ಎಂಟೂವರೆ. ಅಂದು ಬಿಸಿಬೇಳೇಬಾತ್ ನಮ್ಮ ಮೆನು. ಜತೆಗೆ ಪಕೋಡವಿರಲಿಲ್ಲ. ಬೆಳಗ್ಗೆ ಎದ್ದವನೇ ಸಿಗದಾಳ್ ಹೋಗಿ ಬೀನ್ಸ್, ಕ್ಯಾರೆಟ್ ತಂದ. ಅಷ್ಟರಲ್ಲಿ ಈರುಳ್ಳಿ ಬಿಡಿಸಲು ಹರ್ಷ ಎದ್ದು ಬಂದ. ಬಿಸಿಬೇಳೆ ಭಾತ್ ಮುಗಿಯುವಷ್ಟರಲ್ಲಿ ನವೀನ, ಎರಡು ಬಾರಿ ಬಂದ ಪತ್ರಿಕೆಗಳನ್ನೆಲ್ಲಾ ತಿರುವಿ ಹಾಕಿ ಮಿಸ್ ಆದದ್ದು ಎಷ್ಟು ? ಮಿಸ್ ಮಾಡಿದ್ದು ಎಷ್ಟು ? ಎಂದು ಪಟ್ಟಿ ಮಾಡಿದ್ದ. ನಮಗೆ ಒಂದು ಯುಡಿಆರ್ (ಅಪರಿಚಿತನ ಆತ್ಮಹತ್ಯೆ ಎಂದು ಹೇಳಲು ಪೊಲೀಸರು ಬಳಸುವ ಕೋಡ್) ಮಿಸ್ ಆಗಿತ್ತು. ಅಂಥದ್ದೇ ಚಿಕ್ಕಪುಟ್ಟ ಎರಡು ಕಳ್ಳತನಗಳು ನಮ್ಮಲ್ಲೂ ಬಂದಿದ್ದವು.

ಆದರೆ ಯುಡಿಆರ್ ತಲೆ ಕೆಡಿಸಿದ್ದು ನಿಜ. ಅದೂ ನನ್ನ ಎದುರಿನ ಗುಂಪಿನವರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ತಲೆ ಕೆಡಿಸಿಕೊಳ್ಳಲು ಮೂಲ ಕಾರಣ.  ಬಿಸಿಬೇಳೆಭಾತ್ ನ ತರಕಾರಿಗಳು ಗಂಟಲಿನಿಂದ ಕೆಳಗಿಳಿಯಲಿಲ್ಲ. ನವೀನ ಆಗಲೇ ಲೆಕ್ಕ ಶುರು ಮಾಡಿದ್ದ. ಹರ್ಷನೂ ಸುಮ್ಮನಿರಲಿಲ್ಲ. ನಾನು ಭಾತ್ ಬಡಿಸೋದರಲ್ಲಿ ನಿರತನಾಗಿದ್ದೆ.

ಕೊನೆಗೆ ಒಂದು ನಿರ್ಧಾರಕ್ಕೆ ಬಂದೆವು. ಅಷ್ಟರಲ್ಲಿ ನವೀನನ ಫೋನ್ ಬೊಬ್ಬೆ ಹಾಕತೊಡಗಿತು. ಬಹಳ ಬೇಸರದಿಂದ ತೆಗೆದುಕೊಂಡವನೇ …ಹೌದಾ…ಎಲ್ಲಿ…? ನಿನ್ನೆಯೇ…? ಕಾರಣವೇನು…?’ ಹೀಗೆ ಪ್ರಶ್ನೆಗಳ ಸುರಿಮಳೆಯನ್ನು ಹಾಕಿದ. ನಮಗೆಲ್ಲರಿಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಎಲ್ಲಾ ಮುಗಿದ ಮೇಲೆ ಫೋನ್ ಇಟ್ಟವನೇ ಬಟ್ಟಲಿನತ್ತ ಬಂದ.

ಏನಯ್ಯಾ…? ಎಂದು ಕೇಳಿದೆ. ಒಂದು ಮರ್ಡರ್ ಆಗಿದೆಯಂತೆ ಎಂದ. ಎಲ್ಲಿ? ಎಂದು ಕೇಳಿದ್ದಕ್ಕೆ ಬಸವನಗುಡಿ ಪೊಲೀಸ್ ಸ್ಟೇಷನ್ ಲಿಮಿಟ್ಸ್ ಎಂದು ಉತ್ತರಿಸಿದ. ಏನಾದ್ರೂ ಕ್ಲೂ ? ಎಂದು ಕೇಳಿದ್ದಕ್ಕೆ ಹೊಸತೊಂದು ಸ್ಕೂಪ್ ಸಿಕ್ಕಿದ ಸಂಭ್ರಮದಲ್ಲಿ ನವೀನ, “ಅದೇನೂ ಗೊತ್ತಿಲ್ಲ. ಹುಡುಕಬೇಕು, ಈಗಲೇ ಹೊರಡೋಣ’ ಎಂದು ಅಪ್ಪಣೆ ಹೊರಡಿಸಿದ. ನಾವೂ ತಿರುಗೇಟು ನೀಡಲು ಕಾಯುತ್ತಿದ್ದಕ್ಕೆ ಸಿಕ್ಕಿದ್ದೇ ಸೀರುಂಡೆ ಎನ್ನುತ್ತಾ ಹೊರಟೆವು.

ಪಾಪ, ಸಿಗದಾಳನೊಂದಿಗೆ ಕಳೆಯಬೇಕಾದ ಭಾನುವಾರಕ್ಕೆ ಖೋತಾ ಆಯಿತು. ಮನೆಯಿಂದ ನಡೆದು ಹೊರಟ ನಾವು ಯಡಿಯೂರು ಸರ್ಕಲ್‌ನ ಬಳಿ ಮತ್ತೊಂದು ಕೆಲಸ ಮುಗಿಸಿಕೊಂಡು ಅಲ್ಲಿನ ಕೆನರಾ ಬ್ಯಾಂಕ್ ಕಚೇರಿ ಎದುರು ನಿಂತೆವು. ನಮಗೆ ಬಂದ ಮಾಹಿತಿ ಪ್ರಕಾರ ಅದರ ಮಹಡಿ ಮೇಲೆ ಕೊಲೆಯಾಗಿ ಬಿದ್ದ ಹೆಣವಿತ್ತು. ಹೆಂಗಸೋ, ಗಂಡಸೋ ಗೊತ್ತಿಲ್ಲ. ಯಾವಾಗ ಕೊಲೆಯಾದದ್ದು ಎಂಬುದೂ ಸ್ಪಷ್ಟವಾಗಿ ತಿಳಿದಿರಲಿಲ್ಲ.

ಅಂದು ಭಾನುವಾರವಲ್ಲವೇ? ಬ್ಯಾಂಕ್‌ಗೆ ರಜ. ಅವರೋ ಬರೀ ಬ್ಯಾಂಕ್ ಬಾಗಿಲಿಗೆ ಬೀಗ ಜಡಿದಿರಲಿಲ್ಲ. ಅದರ ಗೇಟಿಗೂ ಬೀಗ ಜಡಿದಿದ್ದರು. ಜತೆಗೆ ಹಳೆ ಕಟ್ಟಡ. ಮೇಲೆ ಹತ್ತುವುದು ಹೇಗೆ? ಹೆಣವನ್ನು ಪತ್ತೆ ಹಚ್ಚುವುದು ಹೇಗೆ ? ಎಂದೆಲ್ಲಾ ಪ್ರಶ್ನೆಗಳೊಡನೆ ನಮ್ಮ “ಚಾರಣ’ದ ಮಾರ್ಗ ಗುರುತಿಸಿಕೊಂಡೆವು. ನವೀನ ಹತ್ತಲು ಸಿದ್ಧನಾದ. ನಾವು ಮೇಲಿಂದ ಅವನು ಕೊಡೋ ಡೀಟೇಲ್ಸ್ ನ್ನ ಸ್ಟೋರ್ ಮಾಡಿಕೊಳ್ಳೋಕೆ ಸಿದ್ಧವಾದೆವು.

ಕೊನೆಗೂ ಮೇಲೆ ಹತ್ತಿ ನೋಡಿದರೆ….ಇಡೀ ಮಹಡಿ ಖಾಲಿ ಖಾಲಿ. ಅಲ್ಲಿ ಹೆಣವಿರಲಿ, ಅದರ ಬಟ್ಟೆಯೂ ಇರಲಿಲ್ಲ ! ಬೇಸ್ತು ಬಿದ್ದದ್ದು ನಾವು…ಬೇಸರದಿಂದ ಕಟ್ಟಡದ ಹಿಂದೆ ಇಣುಕಿದರೆ ಅಲ್ಲೊಂದು ಹೆಣವಿತ್ತು..ಅದೂ ಅಪರಿಚಿತವೇ… ನಮಗೆ ಆಶ್ಚರ್ಯ. ಕೊನೆಗೂ ಹೆಣ ನಮ್ಮ ಕೈ ಬಿಟ್ಟಿರಲಿಲ್ಲ….!’