ಹೊಸ ವರ್ಷದ ಸಂಕಲ್ಪ

ಧರ್ಮವೇ ಜಯವೆಂಬ ದಿವ್ಯಮಂತ್ರ || ಪ ||
ಮರ್ಮವನರಿತು ಮಾಡಲಿಬೇಕು ತಂತ್ರ || ಅ.ಪ ||

ವಿಷವಿಕ್ಕಿದವನಿಗೆ ಷಡುರಸವನುಣಿಸಲಿಬೇಕು
ದ್ವೇಷ ಮಾಡಿದವನ ಪೋಷಿಸಲಿಬೇಕು
ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು
ಮೋಸ ಮಾಡುವನ ಹೇಸರು ಮಗನಿಗಿಡಬೇಕು || 1 ||

ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
ಬಂಧನದೊಳಿಟ್ಟವರ ಬೆರೆಯಬೇಕು
ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು
ಕುಂದೆಣಿಸುವವರ ಗೆಳೆತನ ಮಾಡಬೇಕು || 2 ||

ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ
ಕೊಂಡಾಡಿ ತಾ ಧನ್ಯನಾಗಬೇಕು || 3 ||

ಬದಲಾಗುತ್ತಿದ್ದೇವೆ…ಪತ್ರಿಕೋದ್ಯಮ ಶಿಕ್ಷಣಕ್ಕೆ ಹೊಸ ಬ್ಲಾಗ್ !

ಬಹಳ ದಿನಗಳಾಯ್ತು ಬ್ಲಾಗಿನ ಕಡೆ ಮುಖ ಹಾಕಿರಲಿಲ್ಲ. ಬದಲಾಗುವ ಸನ್ನಿವೇಶದಲ್ಲಿ ಹೊಸದೊಂದು ರೀತಿಯಲ್ಲಿ ಏನಾದರೂ ಕೈಗೊಳ್ಳಬೇಕೆಂದು ಯೋಚಿಸುತ್ತಿದ್ದೆ. ಆ ದಿಕ್ಕಿನಲ್ಲಿ ಕಾರ್ಯ ಮಗ್ನನಾಗಿದ್ದೆ. ಬ್ಲಾಗ್ ಹೊರತಾದ ಒಂದೆರಡು ಅಸೈನ್ ಮೆಂಟಗಳಿದ್ದವು. ಅದರಲ್ಲಿ ತೊಡಗಿಕೊಂಡಿದ್ದೆ. ಅದೂ ಮುಕ್ಕಾಲುವಾಸಿ ಮುಗಿದಿದೆ.

ಬ್ಲಾಗ್ ಅನ್ನು ಒಂದು ಸದ್ದುದ್ದೇಶಕ್ಕೂ ಈಡೇರಬೇಕು ಎಂದು ವಾದಿಸುತ್ತಾ ಬಂದವನಲ್ಲಿ ನಾನೂ ಒಬ್ಬ. ಈ ಹಿನ್ನೆಲೆಯಲ್ಲಿ ಹೊಸ ಹೆಜ್ಜೆಗೆ ಅಡಿಯಿಡುತ್ತಿದ್ದೇನೆ.

ಇದು ನನ್ನ ಹಲವು ದಿನಗಳ ಕನಸೂ ಸಹ. ನನ್ನ ಕ್ಷೇತ್ರ ಪತ್ರಿಕೋದ್ಯಮ. ಈ ಕ್ಷೇತ್ರದತ್ತ ಒಲವಿಟ್ಟು ಬರುವವರ ಸಂಖ್ಯೆಯೂ ದೊಡ್ಡ ಪಾಲಿದೆ. ಇವತ್ತು ಪತ್ರಿಕೋದ್ಯಮ ತರಗತಿಗಳಲ್ಲಿ ಪ್ರಾಯೋಗಿಕ ನೆಲೆಯ ಜ್ಞಾನ ಸಿಗುತ್ತಿರುವುದು ತೀರಾ ಕಡಿಮೆ. ಇದರೊಂದಿಗೆ ಪತ್ರಿಕೆಗಳಲ್ಲೂ ಹೊಸಬರಿಗೆ ಬರೆಯಲು ಅವಕಾಶ ಸಿಗುತ್ತಿರುವುದೂ ಅಪರೂಪವೇ. ಈ ಆರೋಪ ಇಂದಿನದಲ್ಲ ; ಬಹಳ ಹಿಂದಿನದು.

ಅನುಭವವಿಲ್ಲದೇ ಕೆಲಸ ಸಿಗದು, ಕೆಲಸ ಸಿಗದೇ ಅನುಭವ ದೊರಕದು ಎಂಬ ಮಾತೂ ಸಹ ಬಹಳ ಹಿಂದಿನದು. ಹೋಟೆಲ್ ವೊಂದರಲ್ಲಿ ಸಪ್ಲೆಯರ್ ಕೆಲಸ ಪಡೆಯಲು ಹೋದವನಿಗೆ ಮಾಲೀಕ ಕೇಳಿದ ಮೊದಲ ಪ್ರಶ್ನೆ…”ಎಲ್ಲಾದ್ರೂ ಕೆಲಸ ಮಾಡಿದ್ಯಾ, ಅನುಭವವಿದೆಯಾ?’, ಅದಕ್ಕೆ ಆತ “ಇಲ್ಲ, ಇದೇ ಮೊದಲು’ ಎಂದ. ಮತ್ತೆ, ಸಪ್ಲೆಯರ್ ಕೆಲಸ ಕೇಳ್ತಿದ್ಯಾ, ಅದರ ಬಗ್ಗೆ ಗೊತ್ತಿದೆಯಾ ಎಂದು ಪ್ರಶ್ನೆ ಹಾಕಿದ. ಅದಕ್ಕೆ ಕೆಲಸ ಬಯಸಿದವ, “ಮಾಡ್ತೀನಿ ಎನ್ನೋ ವಿಶ್ವಾಸ. ನೋಡಿ ಕಲಿತುಕೊಳ್ತೇನೆ” ಎಂದು ಹೇಳಿದ.

ಇದು ಸಪ್ಲೆಯರ್ ನ ಕಥೆ. ಇಲ್ಲಿ ಮೂರು ಮಂದಿ ತರಹದ ಮಾಲೀಕರಿರುತ್ತಾರೆ. ಒಂದು ವರ್ಗವೆಂದರೆ…”ಸರಿ, ನೋಡೋಣ. ಒಂದು ವಾರ ಕೆಲಸ ನೋಡ್ತೀನಿ, ಆಮೇಲೆ ಸಂಬಳ ಫಿಕ್ಸ್. ಕೆಲಸ ಬರದೇ ಇದ್ರೆ ಕಳಿಸ್ತೀನಿ’ ಅಂತಾರೆ. ಎರಡನೇ ವರ್ಗದವರು, “ಅನುಭವ ಇಲ್ಲದೇ ಇದ್ರೆ ನಿನ್ನಂಥವನು ತೆಗೆದುಕೊಂಡು ನಾನೇನು ಮಾಡೋದು ? ಬೇರೆ ಹೋಟೆಲ್ ನಲ್ಲಿ ಹುಡುಕು, ನಮ್ಮಲ್ಲಿಲ್ಲ” ಎಂದು ಹೇಳಿ ಬಿಡೋರು. ಅಂದರೆ ಬೇರೆಹೋಟೆಲ್ ನವನಿಗೆ ಆ ಕಷ್ಟ ವರ್ಗವಾದರೆ ಸಾಕು.

ಕೊನೆ ವರ್ಗದವರು, “ನೋಡಯ್ಯ, ಸಪ್ಲೆಯರ್ ಕೆಲಸ ಕಷ್ಟ. ಮೊದಲೇ ಏನೂ ಗೊತ್ತಿಲ್ಲ ಅಂತೀದ್ದೀಯಾ, ಸ್ವಲ್ಪ ಓದಿದೀನಿ ಅಂತ ಬೇರೆ ಪ್ರವರ ನಿಂದು. ಒಂದು ಕೆಲಸ ಮಾಡು, ಒಂದೆರಡು ತಿಂಗಳು ಕ್ಲೀನಿಂಗೋ, ಸ್ಟಾಲೋ, ತಿಂಡಿ ಅಸಿಸ್ಟೆಂಟೋ ಕೆಲಸ ಮಾಡು. ಸಪ್ಲೆಯರ್ ಕೆಲಸ ತಿಳಿದುಕೊ, ನಂತರ ಕೆಲಸ ನೀಡೋಣ’ ಎಂದು ಹೇಳಿ ಕೆಲಸ ಕೊಡ್ತಾನೆ. ಮೊದಲ, ಮೂರನೇ ವರ್ಗದವರು ಪರವಾಗಿಲ್ಲ, ಹಾಗೆಂದು ಎರಡನೇ ವರ್ಗದವರನ್ನೂ ದೂರುವಂತಿಲ್ಲ.

ಇಂದು ಇದು ಬರಿಯ ಹೋಟೆಲ್ ನವನ ಕಥೆಯಲ್ಲ. ಎಲ್ಲ ಕ್ಷೇತ್ರಗಳದ್ದು…ನಮ್ಮ ಪತ್ರಿಕೋದ್ಯಮದ್ದೂ ಸಹ. ಸುದ್ದಿಮನೆಗಳಲ್ಲಿರುವ ಮಂದಿ ವಿದ್ಯಾರ್ಥಿ ಸಮುದಾಯವನ್ನು ಒಳಗೊಳ್ಳುವ ಕೆಲಸವೇನಾದರೂ ಮಾಡಬೇಕು ಎಂಬುದು ನನ್ನ ಪ್ರತಿಪಾದನೆಯೂ ಸಹ. ಅವರಿಗೆ ಒಂದಿಷ್ಟು ತರಗತಿಗಳಲ್ಲಿ ಸಿಗದ ಜ್ಞಾನವನ್ನು ಕೊಡಲು ಸಾಧ್ಯವೇ ಎಂಬುದೂ ನನ್ನ ಆಲೋಚನೆ.

ಇದರೊಂದಿಗೇ ಹೊಸ ತಲೆಮಾರಿನ ಹುಡುಗರ ಆಲೋಚನಾ ಪರಿಯನ್ನು ಅರ್ಥೈಸಿಕೊಳ್ಳುತ್ತಲೇ, ನನಗೆ ವಯಸ್ಸಾಗದಂತೆ ನೋಡಿಕೊಳ್ಳೋದು ಎಚ್ಚರಿಕೆಯೂ ಸಹ. ಹೀಗಾಗಿಯೇ ಒಂದಿಷ್ಟು ಹೊತ್ತು ಇದಕ್ಕೆ ಯೋಜಿಸಲು ಹೊರಟಿದ್ದೇನೆ. ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು, ಪತ್ರಕರ್ತ ಸಮುದಾಯವನ್ನು ಮುಂದಿಟ್ಟುಕೊಂಡು ನನ್ನ ಗೆಳೆಯರು ಬ್ಲಾಗ್ ಶುರು ಮಾಡುತ್ತಿದ್ದಾರೆ. ಅದಕ್ಕೆ ನನ್ನದೂ ಕೊಡುಗೆ ಕೊಡುವ ಉದ್ದೇಶ.

ನ. 1 ರಿಂದ ಹೊಸ ಬ್ಲಾಗ್ ಶುರು. ಹೆಸರು www.5wonly1h.blogspot.com . ಒಮ್ಮೆ ಭೇಟಿಕೊಡಿ.

ಬಣ್ಣದ ಹಸಿವು

ನೀಲನೆಯ ಆಕಾಶ. ಅದಕ್ಕೆ ಹತ್ತಿರವಾಗುವಂತೆ ಹಾರಿ ಹೋಗುತ್ತಿದ್ದ ಹಕ್ಕಿ ದೂರದಲ್ಲಿ ಚುಕ್ಕಿಯಂತೆ ಕಾಣುತ್ತಿತ್ತು. ಹಾರುತ್ತಾ…ಹಾರುತ್ತಾ ಹೋದ ಹಕ್ಕಿಗೆ ಕೆಳಗೆ ಹಸಿರು ಕಂಡಿತು. ಜೀವನೋತ್ಸಾಹ ಉಕ್ಕಿ ಬಂತು. ಮೆಲ್ಲಗೆ ಕೆಳಗಿಳಿಯತೊಡಗಿತು ; ಪುಟ್ಟನೊಬ್ಬ ಅಂಗಳದಲ್ಲಿ ನಿಂತು ಹಾರಿಸಿದ ಗಾಳಿಪಟವನ್ನು ಅತ್ಯಂತ ನಾಜೂಕಿನಿಂದ ಕೆಳಗಿಳಿಸಿಕೊಳ್ಳುತ್ತಿದ್ದ ಹಾಗೆ. ಚೂರು ಆತುರ ಪಟ್ಟರೂ ಗಾಳಿಪಟ ಯಾವುದಾದರೂ ಮರಕ್ಕೋ, ಕಂಬಕ್ಕೋ ಸಿಕ್ಕು ಹಾಳಾಗಿ ಬಿಡಬಹುದೆಂಬ ಕಾಳಜಿ. ಒಟ್ಟೂ ಗಾಳಿಪಟದ ಜೀವ ಉಳಿಸುವ ತವಕ.
blue bird
ಹಾಗೆಯೇ ಈ ಹಕ್ಕಿಯೂ ಸಹ. ಮುಂದೆ ಹಾದಿ ತೋರುತ್ತಿರಲಿಲ್ಲ, ಹಾಗೆಯೇ ಹೆಜ್ಜೆಯೂ ಮೂಡುತ್ತಿರಲಿಲ್ಲ. ಹಾರಿ ಹಾರಿ ಬಂದು ಕೆಳಗಿಳಿದು ಹಸಿರ ಕಂಡು ಉತ್ಸಾಹವನ್ನು ತುಂಬಿಕೊಂಡಿತು. ಕ್ಷಣ ಕಾಲ ಕಣ್ಣುಮುಚ್ಚಿ ಆಯಾಸ ಕಳೆದುಕೊಳ್ಳುವ ಪ್ರಯತ್ನ ಅದರದ್ದು. ಹಾಗೇ ಸುಮ್ಮನೆ ಎನ್ನುವಂತೆ ಕಣ್ಣು ಮುಚ್ಚಿತು. ಒಳಗೆಲ್ಲಾ ಕತ್ತಲೆ ಎನಿಸಿದಾಗ, ಇದೇ ಸುಖ ಎನಿಸಿತು. ಒಂದೆರಡು ಕ್ಷಣ ಹೆಚ್ಚಿಗೆ ಇದ್ದರೆ ಏನೂ ನಷ್ಟವಿಲ್ಲ ಎಂದು ಇನ್ನೂ ಒಂದೆರಡು ಕ್ಷಣ ಬಿಟ್ಟು ಕಣ್ತೆರೆಯಿತು.

ಹಸಿರೆಲ್ಲಾ ಸಂಭ್ರಮದಿಂದ ಕುಣಿಯುತ್ತಿದೆ. ಹಸಿರಿನ ತುದಿಯಲ್ಲೆಲ್ಲಾ ಹತ್ತು ಹಲವು ಬಣ್ಣ. ಉದ್ಯಾನದ ಹೂವುಗಳೆಲ್ಲಾ ಒಂದೇ ದಿನ, ಒಂದೇ ಕ್ಷಣ ಪರಸ್ಪರ ಮಾತನಾಡಿಕೊಂಡ ಹಾಗೆ ಥಟ್ಟನೆ ಅರಳಿದಂತೆ. ಇಡೀ ಹಸಿರಿನ ಬಸಿರಲ್ಲಿ ಬಣ್ಣ ಬಣ್ಣದ ಹೂವುಗಳೆಲ್ಲಾ ಮೂಡಿ ಬಂದಿದ್ದವು. ವಿಚಿತ್ರ ಎನಿಸಿತು ಹಕ್ಕಿಗೆ. ಕೆಲ ಕ್ಷಣಗಳಲ್ಲೇ ಹೀಗೆ ಬದುಕು ಅರಳುತ್ತದೆಯೇ? ಎಂಬ ಪ್ರಶ್ನೆ ಅದರದ್ದು.

ಒಂದೊಂದೇ ಬಣ್ಣವನ್ನು ನುಂಗ ತೊಡಗಿತು ಹಕ್ಕಿ. ಬೆಳ್ಳನೆಯ ಹೂವು…ಬಿಳಿಯ ಬಣ್ಣ ಗಾಯಬ್. ಹಾಗೆಯೇ ಕೆಂಪು…ನೀಲಿ…ಹಳದಿ…ತಿಳಿ ನೀಲಿ…ಗೊರಟೆ ಹೂವಿನ ಕಡು ನೀಲಿ ಬಣ್ಣ…ಕಂದು…ಕಡುಗೆಂಪು…ಬಣ್ಣವೇ ಇಲ್ಲದಂತೆ ತೋರುವ ತಿಳಿಯಾದ ಮತ್ತೊಂದು ಬಣ್ಣ…ಎಲ್ಲಾ ಬಣ್ಣ ನುಂಗಿದ ಹಕ್ಕಿಯ ಬಣ್ಣ ಈಗ ಸಂಪೂರ್ಣ ಕಪ್ಪು.

ಹಕ್ಕಿ ಮೊದಲು ಬಿಳಿಯ ಬಣ್ಣ ನುಂಗಿದಾಗ ತನ್ನ ಬಣ್ಣ ಬಿಳಿಯಾಗುವುದನ್ನು ಕಂಡಿತ್ತು. ಎಂಥಾ ಮೋಹ ಬಣ್ಣದ ಮೇಲೆ ಅದಕ್ಕೆ . ಅದೊಂದೇ ಬಣ್ಣ ನುಂಗಿ ಸುಮ್ಮನಾಗಲಿಲ್ಲ.

ಈಗ ಮತ್ತೆ ಹಸಿರೆ ಕಣ್ಣಿಗೆ ಕಾಣುತ್ತಿದೆ. ಹೂವುಗಳೆಲ್ಲಾ ಬಣ್ಣ ಕಳೆದುಕೊಂಡು ಬಿಳಿಚಿಕೊಂಡಿವೆ. ಅದರೆದುರು ಎಲ್ಲಾ ಬಣ್ಣ ನುಂಗಿದ ಹಕ್ಕಿ ಕುಳಿತಿದೆ. ಅಷ್ಟರಲ್ಲಿ ರಂಗು ರಂಗಿನ ಚಿಟ್ಟೆ ಮಧುವ ಅರಸಿಕೊಂಡು ಬಂತು. ಅದಕ್ಕೆ ತಲೆ ತಿರುಗುವ ಕ್ಷಣ. ಬರೀ ಹಸಿರೇ ಕಾಣುತ್ತಿದೆ, ಅದರ ತುದಿಯಲ್ಲಿ ಒಂದೂ ಹೂವು ಕಾಣುತ್ತಿಲ್ಲ. ಬಿಳಿಚಿಕೊಂಡವೆಲ್ಲಾ ಹೂವೇ…ಅಲ್ಲವೇ ? ಎಂಬ ಅನುಮಾನ.

ಹೀಗೇ ಹತ್ತಾರು ಹಸಿರಿನ ಮೇಲೆ ಲ್ಯಾಂಡ್ ಆಗಲು ಸ್ಥಳ ಹುಡುಕುವ ಹೆಲಿಕಾಪ್ಟರ್ ನಂತೆ ತಿರುಗಿದ ಚಿಟ್ಟೆ, ಹೂವೆಂದುಕೊಂಡ ಹೂವಿನ ಮೇಲೆ ಕುಳಿತಿತು. ಹಸಿರು ಮೆಲ್ಲಗೆ ತಲೆದೂಗುವಂತೆ ಮೈಯ ಅಲುಗಾಡಿಸಿತು. ಕೆಲವೇ ಕ್ಷಣ…ಬಣ್ಣಕ್ಕಾಗಿ ಹಪಹಪಿಸುತ್ತಿದ್ದ ಹಕ್ಕಿ ಆ ಚಿಟ್ಟೆಯನ್ನೂ ನುಂಗಿತು…ಆದರೂ ಬಣ್ಣ ಬದಲಾಗಲಿಲ್ಲ.
ಚಿತ್ರಕೃಪೆ : www.ukrsov.kiev.ua

ತ್ರಿವರ್ಣ ಧ್ವಜ ಹಾರಿಸುವಾಗ ನನ್ನನ್ನು ನಾನೇ ನಂಬಲಿಲ್ಲ

ಈ ಲೇಖನದೊಂದಿಗೆ ಎವರೆಸ್ಟ್ ಪ್ರವಾಸದ ಮಾಲಿಕೆ ಮುಗಿಯಿತು. ಎವರೆಸ್ಟ್ ಹತ್ತಿ ಕನ್ನಡದ ಬಾವುಟ ಹಾರಿಸಿದ ಪಿ.ಎನ್. ಗಣೇಶ್ ಈಗ ಮತ್ತೊಮ್ಮೆ ಏಕಬಾರಿಗೆ ಎರಡು ಪರ್ವತ ಹತ್ತುವ ಸಾಹಸಕ್ಕೆ ಇಳಿದಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಅಗತ್ಯವಿದೆ. ಈ ಸಂದರ್ಭದಲ್ಲೇ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತಲೇ ಈ ಮಾಲಿಕೆ ಮುಗಿಸುತ್ತಿದ್ದೇನೆ. ಪಿ.ಎನ್. ಗಣೇಶ್ ಅವರ ಮೊಬೈಲ್ ಸಂಖ್ಯೆ 98453 99705

ಮೇ 30 ರಂದು ಸಮಿಟ್‌ಗೆ ಪ್ರಯತ್ನಿಸುವುದಾಗಿ ಚೈತನ್ಯ ಹೇಳಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿದ್ದರು. ಮೇ 21,22 ರ ಹವಾಮಾನ ನಿರೀಕ್ಷೆಯಲ್ಲೇ ಮೇ 18 ಕ್ಕೆ ಮೇಲಕ್ಕೆ ಹೊರಟೆ. ಅರ್ಧ ದಾರಿಗೆ ಹೋದೆ. ಗ್ಲೌಸ್ ಹಾಕಿಕೊಂಡಿದ್ದರೂ ತಣ್ಣಗೆ ಹೆಚ್ಚಾಗುತ್ತಿತ್ತು. ಮನಸ್ಸಲ್ಲೇಕೋ ಅಂಜಿಕೆ ಶುರುವಾಯಿತು. ಹೇಗೂ ಇರಲಿ ಎಂದು ವಾಪಸು ಬಂದವನು ಮತ್ತೆ ಹೊರಟದ್ದು 20 ರಂದೇ. ಕೆಲವರು ಸಮಿಟ್‌ಗೆ ಪ್ರಯತ್ನಿಸಿ ವಿಫಲರಾದರು. ನಾನು ಹೋಗದಿದ್ದುದೇ ಸೂಕ್ತ ಎನಿಸಿ ಸುಮ್ಮನೆ ಕುಳಿತುಕೊಂಡೆ.

ರಾತ್ರಿ ಮಲಗುವೆಂದದರೂ ಯಮಹಿಂಸೆಯೇ. ಸಾಮಾನ್ಯವಾಗಿ ಸಮಿಟ್ ಮಾಡಬೇಕೆಂದರೆ -10 ಉಷ್ಣಾಂಶ ಇದ್ದರೆ ಪರ ವಾಗಿಲ್ಲ. ಒಂದುವೇಳೆ -15 ಇದ್ದರೂ ಸುಧಾರಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿದ್ದರೆ ಸಾಧ್ಯವಿಲ್ಲ. ಆರೋಗ್ಯ ಕುಸಿಯುತ್ತದೆ. ಗಾಳಿಯೂ 100 ಕ್ಕಿಂತ ಹೆಚ್ಚು ವೇಗದಲ್ಲಿದ್ದರೆ ಅತ್ಯಂತ ಕಷ್ಟ. ಆ ಅನುಕೂಲಕರ ಹವಾಮಾನಕ್ಕೆ ಕಾಯುವುದೇ ದೊಡ್ಡ ಪ್ರಯಾಸ.

ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್

ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್


ಮೇ 20 ಕ್ಕೆ ಹೊರಟು 70 ಡಿಗ್ರಿ ಕೋನದಲ್ಲಿ ನಾರ್ತ್‌ಕೋಲ್‌ಗೆ ಹೋದೆ. ಅಲ್ಲಿಂದ ಕ್ಯಾಂಪ್ 2 ಕ್ಕೆ ಹೋಗುವಾಗ ನನಗೆ ದಾರಿ ತಪ್ಪಿತು. ಕಡಿದಾದ ದಾರಿಯಲ್ಲಿ ಹಿಮ ಸುರಿಯುತ್ತಿತ್ತು. ಆಮ್ಲಜನಕ ಕೊರತೆ ಬಾಧಿಸತೊಡಗಿತು. ವಾಸ್ತವವಾಗಿ ನಾವು ಪರ್ವತ ಹತ್ತುವಾಗ ದಾರಿ ತೋರಿಸುವುದು ಹೆಜ್ಜೆಗಳೇ. ಹೆಜ್ಜೆ ಇರುವಲ್ಲಿಯೇ ದಾರಿ. ಮಂಜು ಸುರಿಯುತ್ತಲೇ ಇದ್ದರೆ ಯಾವ ಹೆಜ್ಜೆ ಗುರುತುಗಳೂ ಇರುವುದಿಲ್ಲ. ನಡೆದುಹೋದ ಮರುಕ್ಷಣವೇ ಮಂಜಿನಿಂದ ಅಳಿಸಿಹೋಗುತ್ತದೆ. ನಾನು ಊಹಿಸಿಕೊಂಡು ಮುನ್ನಡೆದೆ. ಅದು ಬೇರೆಲ್ಲೋ ಹೋಗುತ್ತಿದ್ದೆ.

ಶೆರ್ಪಾನಿಗೂ ಗೊತ್ತಾಗಲಿಲ್ಲ. ಒಂದಷ್ಟು ದೂರ ಹೋದಮೇಲೆ ಅನುಮಾನವಾಯಿತು. ಕೇಳುವುದಾದರೂ ಯಾರಿಗೇ ? ಅಲ್ಲಿ ಯಾರೂ ಇರುವುದಿಲ್ಲ. ಅಷ್ಟರಲ್ಲಿ ನ್ಯೂಜಿಲೆಂಡ್‌ನ ಇಬ್ಬರು ಆರೋಹಿಗಳು ಹಿಂಬಾಲಿಸಿಕೊಂಡು ಬಂದು “ರಸ್ತೆ ಇದಲ್ಲ, ಈ ಬದಿಗೆ ಬನ್ನಿ’ ಎಂದು ಕರೆದೊಯ್ದರು. ಅವರು ಬೈನಾಕ್ಯುಲರ್ ಸಹಾಯದಿಂದ ನಾನು ದಾರಿ ತಪ್ಪಿರುವುದನ್ನು ಖಚಿತಪಡಿಸಿ ಕೊಂಡರು.

ಆಕಸ್ಮಾತ್ ಅವರ ಸಹಾಯ ಸಿಗದಿದ್ದರೆ ನಾನು ಮೌಂಟ್ ಎವರೆಸ್ಟ್‌ನ ಯಾವ ತುದಿಗೆ ಹೋಗುತ್ತಿದ್ದೇನೋ ? ಸರಿದಾರಿಗೆ ಬಂದವನು ಮತ್ತೆ ಮೇಲೆ ಹೋಗಲಿಲ್ಲ. ನೇರವಾಗಿ ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ಗೆ ಬಂದೆ. ಮೇ 30 ರವರೆಗೆ ಅಲ್ಲೇ ಠಿಕಾಣಿ. ಜೂನ್ ಮೂರು ನನ್ನ ಗುರಿಯಿರಿಸಿಕೊಂಡ ದಿನ. ಆದರೆ ಜಂಘಾಬಲವನ್ನೇ ಕೊಲ್ಲುವ ಸುದ್ದಿ ಬರಸಿಡಿಲಿನಂತೆ ಬಡಿಯಿತು.

ಮೇ 30 ರಂದು ಸಮಿಟ್ ಹೋದ ಚೈತನ್ಯ ಕಣ್ಮರೆಯಾಗಿದ್ದರು. ತುದಿಯವರೆಗೆ ಹೋದಮೇಲೆ ಏನಾಯಿತೋ ಗೊತ್ತಿಲ್ಲ. ಅವರು ಸಮಿಟ್ ಹೊರಟ ಸಂದರ್ಭದಲ್ಲಿ ಸ್ವಲ್ಪ ಕೆಮ್ಮವೂ ಇತ್ತು. ಅದೇನಾದರೂ ಆಕ್ಸಿಜನ್ ಸ್ವೀಕರಿಸುವಾಗ ತೊಂದರೆ ಕೊಟ್ಟು ಬಿದ್ದರೆ ? ಗಾಳಿ ಹೊಡೆದುಕೊಂಡು ಹೋಯಿತೇ ? ಗೊತ್ತಿಲ್ಲ. ಅವರು ಶೆರ್ಪಾನನ್ನೂ ಕರೆದೊಯ್ದಿರಲಿಲ್ಲ. ಒಂದುವೇಳೆ ಶೆರ್ಪಾನನ್ನು ಕರೆದೊಯ್ದಿದ್ದರೆ ಅವನು ಸಹಾಯ ಮಾಡುತ್ತಿದ್ದ ಎಂಬ ನಂಬಿಕೆ ಕ್ಯಾಂಪ್‌ನಲ್ಲಿದ್ದ ಎಲ್ಲರದ್ದಾಗಿತ್ತು.

ನನಗೆ ಇದ್ದ ಎಲ್ಲ ಧೈರ್ಯ ಕುಸಿಯಿತು. ನನಗಾಗಿ ಕಾಯುತ್ತಿರುವ ಸಂಸಾರ ಎಲ್ಲವೂ ಕಣ್ಮುಂದೆ ಬಂತು. ನೇಪಾಳಕ್ಕೆ ಹೊರಡಲು ಅನುವಾದೆ. ಶೆರ್ಪಾನಿಗೆ ಗಂಟು ಕಟ್ಟಲು ಸಹಕರಿಸುವಂತೆ ಕೋರಿದೆ. ಆಗ ವೆಚ್ಚ ಸರಿದೂಗಿಸಲು ಗೆಳೆಯರು ಪಟ್ಟ ಕಷ್ಟವೂ ನೆನಪಾಯಿತು. ಅದರೊಂದಿಗೆ ನಾನೂ ವಾಪಸ್ಸಾದರೆ ಇನ್ನು ಮುಂದೆ ಎಲ್ಲ ಕನ್ನಡಿಗರೂ “ಪರ್ವತಾರೋಹಣ ಜೀವಕ್ಕೆ ಅಪಾಯ’ ಎಂದು ವ್ಯಾಖ್ಯಾನಿಸಿ ದೂರ ಉಳಿದಾರೆಂದೆನಿಸಿತು. ಸರಿ ಮತ್ತೆ ಧೈರ್ಯ ತಂದುಕೊಂಡೆ. ರಾತ್ರಿಯೆಲ್ಲಾ ಅದೇ ಕನಸು, ಧ್ಯಾನಿಸಿದ್ದಾಳೆ.

ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ

ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ


ಮಗ ಸುಘೋಷ್ “ಅಮ್ಮಾ, ಅಪ್ಪಾ ಬರುವುದು ಯಾವಾಗ ? ’ ಎಂದು ಕೇಳುತ್ತಿದ್ದನಂತೆ. ಮಗಳು ಸಾಗರಿಕಾ (ಸಾಗರ್‌ಮಾತಾ ನೆನಪಿಗೆ ಇಟ್ಟದ್ದು) ನನ್ನನ್ನು ಬಿಟ್ಟು ಇರುವವಳಲ್ಲ. ಅವಳನ್ನೂ ಬಿಟ್ಟು ಎರಡೂವರೆ ತಿಂಗಳು ಇರಬೇಕಾಯಿತು.

ಅದೂ ವಾಪಸು ಹೋದೆನೆಂಬ ಗ್ಯಾರಂಟಿಯಿಲ್ಲದೇ. ನನಗಿಂತಲೂ ನನ್ನನ್ನು ಅವಲಂಬಿಸಿದವರಿಗೆ ಹಾಗೆ ಎಣಿಸಿಕೊಂಡು ಬದುಕುವುದು ಕಷ್ಟ. ಬೇಸ್‌ಕ್ಯಾಂಪ್‌ನವರೆಗೆ ಹೋಗುವವರೆಗೆ ಪತ್ನಿಯೊಂದಿಗೆ ಮಾತನಾಡುತ್ತಿದ್ದೆ. ನಂತರ ಇಲ್ಲ. ಚೈತನ್ಯ ಕಣ್ಮರೆಯಾಗಿ ದೊಡ್ಡ ಸುದ್ದಿಯಾದಾಗ ಎಲ್ಲರೂ ಗಲಿಬಿಲಿಯಾಗಿದ್ದಾರೆ.

ಕೆಲವರು “ನಿಮ್ಮ ಪತಿಯೂ ಅವರೊಂದಿಗಿದ್ದರಂತೆ’ ಎಂದು ಸುದ್ದಿ ಹಬ್ಬಿಸಿದಾಗ ನನ್ನ ಸಂಸಾರಕ್ಕೆ ದಿಗಿಲಾಗಿದೆ. ಸುಮಂಗಲಾ ದೇವರ ಕೋಣೆ ಬಿಟ್ಟು ಬರುವ ಪರಿಸ್ಥಿತಿಯಿರಲಿಲ್ಲ. ನಂತರ ಸತ್ಯ ತಿಳಿದಾಗ ಕೊಂಚ ಹಗುರವಾಯಿತು. ವಾಸ್ತವವಾಗಿ ತಿಳಿಯಾದದ್ದು ಜೂ. ೩ ರಂದು ಗುರಿ ಮುಟ್ಟಿ, ಜೂ. 8 ರಂದು ನೇಪಾಳಕ್ಕೆ ವಾಪಸು ಬಂದು ದೂರವಾಣಿ ಮಾಡಿದಾಗಲೇ ನಿರಾಳ (ಇದೆಲ್ಲಾ ಬೆಂಗಳೂರಿಗೆ ಬಂದಾಗ ಹೆಂಡತಿ ವಿವರಿಸಿದಳು).
pn ganes-3
8,300 ಮೀಟರ್‌ನವರೆಗೂ ನಾವು ಸಾಮಾನ್ಯವಾಗಿ ಬೆಳಗ್ಗೆಯೇ ಪ್ರಯಾಣಿಸುತ್ತೇವೆ. ಹಗಲಿನಲ್ಲಿ ಸ್ವಲ್ಪ ಹೆಚ್ಚು ಪ್ರಯಾಣಿಸ ಬಹುದು. ಆದರೆ ತುದಿ ಮುಟ್ಟುವ (ಸಮಿಟ್) ಕೆಲಸಕ್ಕೆ ಮಾತ್ರ ಸಿದ್ಧವಾಗುವುದು ರಾತ್ರಿಯೇ. ಕಾರಣವಿಷ್ಟೇ ರಾತ್ರಿ 11 ರ ಸುಮಾರಿ ಗೆ ಹೊರಟರೆ ಬೆಳಗ್ಗೆ 8 ರಿಂದ 9 ಗಂಟೆಯೊಳಗೆ 148 ಮೀಟರ್ ಕ್ರಮಿಸಿ ತುದಿ ಮುಟ್ಟಬಹುದು. ಬೆಳಗ್ಗೆ 10 ರ ನಂತರ ಕ್ಷಣ ಕ್ಷಣ ಕ್ಕೂ ಹವಾಮಾನ ಬದಲಾಗಬಹುದು. ಆದರೆ ಒಂಬತ್ತರಷ್ಟೊತ್ತಿಗೆ ಸಾಮಾನ್ಯವಾಗಿ ಮೋಡಗಳ ರಾಶಿ ಇರುವುದಿಲ್ಲ. ಒಳ್ಳೆ ಬೆಳಕು ಇರುತ್ತದೆ. ಹಾಗಾಗಿ ರಾತ್ರಿ ಪ್ರಯಾಣವನ್ನು ನಾವು ಯೋಜಿಸಿಕೊಳ್ಳುತ್ತೇವೆ.

ಜೂ. 1 ಕ್ಕೆ ಹೊರಟವ ಎಲ್ಲೂ ವಾಪಸು ಬರಲಿಲ್ಲ. ನಾರ್ತ್‌ಕೋಲ್‌ಗೆ ಹೋದವನೇ ಆರಾಮ ತೆಗೆದುಕೊಂಡು ಕ್ಯಾಂಪ್ 2 ಕ್ಕೆ ಹೋದೆ. ಅಲ್ಲಿಂದ ಜೂ. 2 ರ ಸಂಜೆ 4.30 ರಷ್ಟೊತ್ತಿಗೆ 8,300 ಅಡಿಯಲ್ಲಿರುವ ಸಮಿಟ್ ಕ್ಯಾಂಪ್‌ಗೆ ಬಂದೆ. ರಾತ್ರಿ 11 ವರೆಗೆ ಮಲಗಿಕೊಂಡೆ. ನಂತರ ಹೆಡ್‌ಟಾರ್ಚ್ ಸಹಾಯದಿಂದ 548 ಮೀಟರ್ ಕ್ರಮಿಸಲು ನಿರ್ಧರಿಸಿದೆ. ನನ್ನಲ್ಲಿ ಮತ್ತೊಂದು ಸಮಿಟ್ ಆಕ್ಸಿಜನ್ ಟ್ಯಾಂಕ್ ಇರಲಿಲ್ಲ. ಸಮಿಟ್ ಟ್ಯಾಂಕ್‌ಗೆ ದುಬಾರಿ. ಆದ್ದರಿಂದ ಶೆರ್ಫಾನನ್ನು ಅಲ್ಲಿಯೇ ಇರಲು ಹೇಳಿದೆ. ಅಷ್ಟರಲ್ಲಾಗಲೇ ಪುನರೂ ಕೆಲ ವಸ್ತುಗಳನ್ನು ವಾಪಸು ತೆಗೆದುಕೊಂಡು ಕೆಳಗಿಳಿದ್ದಿದ್ದ. ಆದರೆ ಅಂಗ್ರಿತಾ ಸ್ವಲ್ಪ ದೂರ ಬಂದು ನಿಂತುಕೊಂಡ. ರಸೆಲ್‌ಪ್ರೈಸ್ ಮೇಲೆ ಹೋಗುತ್ತಿದ್ದರು. ಇದನ್ನೇ ಬಳಸಿಕೊಂಡು ರಾತ್ರಿ 11 ಕ್ಕೆ ಮೇಲೆ ಹತ್ತಲು ಶುರುಮಾಡಿದವನಿಗೆ ಬೆಳಗ್ಗೆ ಹತ್ತರವರೆಗೆ ನಡೆಯಬೇಕಾಯಿತು.

ಭಾರತೀಯ ಕಾಲಮಾನ ಜೂ. 3 ರ ಬೆಳಗ್ಗೆ ಸುಮಾರು 10 ರಷ್ಟೊತ್ತಿಗೆ ನನ್ನ ಮೊದಲ ಹೆಜ್ಜೆಯಿದ್ದದ್ದು ಪ್ರಪಂಚದ ಅತ್ಯಂತ ಎತ್ತರದ ಪ್ರದೇಶದ ಮೇಲೆ (ಚೀನಾ ಕಾಲಮಾನ ಮಧ್ಯಾಹ್ನ 12)ಮನಸ್ಸಿನಲ್ಲಿ ಖುಷಿ ಉಕ್ಕಿ ಹರಿದಿತ್ತು. ಕೃತಕ ಆಕ್ಸಿಜನ್‌ನಿಂದ ಉಸಿರಾಡುತ್ತಿದ್ದೆ. ಕಣ್ಣನ್ನು ಗಾಗಲ್ಸ್ ಸುತ್ತುವರಿದ್ದಿದ್ದವು. ಒಮ್ಮೆ ಕೂಗೋಣ ಎಂದರೆ ಕೂಗಲಾಗದ ಸ್ಥಿತಿ. “ಅಭಿನಂದನೆ’ ಹೇಳಲಿಕ್ಕೆ ಯಾರೂ ಇರಲಿಲ್ಲ. ರಾಷ್ಟ್ರ ಧ್ವಜ, ಕನ್ನಡ ಧ್ವಜವನ್ನೆಲ್ಲಾ ಹಿಡಿದು ನಿಂತೆ.

ರಸೆಲ್ ಪ್ರೈಸ್ ಸ್ನೇಹಿತರು ಫೋಟೋ ಕ್ಲಿಕ್ಕಿಸಿದರು. ಆಗ ಉಕ್ಕಿ ಬಂದ ಸಂತೋಷವನ್ನೂ ಹೇಗೂ ವರ್ಣಿಸಲಾಗದು ; ಅನುಭವಿಸಿಯೇ ತೀರಬೇಕು. ಸುತ್ತಲೂ ಕಂಡ ಪರ್ವತಗಳ ಸಮುದ್ರದ ಮಧ್ಯೆ ದೊಡ್ಡ ಅಲೆಯ ಮೇಲೆ ನಾನು ನಿಂತಂತೆ ಭಾಸವಾಯಿತು. ಒಂದೆರಡು ಕ್ಷಣ ಕಣ್ಣುಮುಚ್ಚಿಕೊಂಡು ಆನಂದಿಸಿದೆ. ಸುಮಾರು ಹನ್ನೆರಡು ನಿಮಿಷ ಇದ್ದದ್ದೇ ಕಷ್ಟ. ಕೆಳಗಿಳಿಯುತ್ತಾ ಬಂದೆ. ಒಂದಷ್ಟು ಕೆಳಗೆ ಬಂದ ಮೇಲೆ ಅಂಗ್ರಿತಾ ಸಿಕ್ಕ. ಗುರಿ ಮುಟ್ಟಿದ ತೃಪ್ತಿಯಲ್ಲಿ ಇಳಿದು ಬಂದೆ.

ಎಲ್ಲೋ ಓದಿದ ಸಾಲುಗಳು ನೆನಪಾಗುತ್ತಿದ್ದವು. “ಮನುಷ್ಯ ನಿಸರ್ಗವನ್ನು ಗೆಲ್ಲುತ್ತಾನೆ. ಆದರೆ ಗೆದ್ದು ನಿಲ್ಲುವುದಿಲ್ಲ, ಇಳಿದು ಬರುತ್ತಾನೆ, ಮತ್ತೆ ನಿಸರ್ಗಕ್ಕೆ ಶರಣಾಗಿ ಬದುಕುತ್ತಾನೆ’. ಆ ಸಾಲುಗಳು ಆಪ್ತವೆನಿಸಿದವು. ಸತ್ಯದರ್ಶನ !

ನಿಯಮದ ಪ್ರಕಾರ ಬೇಸ್‌ಕ್ಯಾಂಪ್‌ನಲ್ಲಿರುವ ಚೀನಾ ಟಿಬೆಟ್ ಪರ್ವತಾರೋಹಿಗಳ ಸಂಘಕ್ಕೆ ಯಶಸ್ವಿಯಾಗಿ ಗುರಿ ಮುಟ್ಟಿ ವಾಪಸು ಬಂದು ಪ್ರಮಾಣ ಪತ್ರ ಪಡೆಯಬೇಕು ಎನ್ನುತ್ತಾರೆ. ಅದಿರಲಿ. ಎವರೆಸ್ಟ್ ಏರಿದ ಮೊದಲ ಕನ್ನಡಿಗ ಯಾರೆಂಬ ಚರ್ಚೆ ಆರಂಭವಾಗಿದೆ. ಆದರೆ ನನಗೆ ಹಾಗೆನ್ನಿಸುವುದಿಲ್ಲ. ಚರ್ಚೆಯಾಗುವ ಸಂಗತಿಯೂ ಅಲ್ಲ. ಕೀರ್ತಿಯೆಲ್ಲಾ ಚೈತನ್ಯರಿಗೇ ಇರಲಿ ; ನಮಗೆ ಮತ್ತೆ ಪರ್ವತ ಏರುವ “ಚೈತನ್ಯ’ವಿರಲಿ, ಪ್ರತಿ ಕನ್ನಡಿಗನಲ್ಲೂ ಆ “ಚೈತನ್ಯ’ ತುಂಬಲಿ, ಅಷ್ಟೇ ಸಾಕು, ಅಲ್ಲಿಗೆ ನಾನು ಧನ್ಯ !

ಹಜಾರಕ್ಕೊಂದು ಹೊಸ ಬಣ್ಣ !

ಮತ್ತೆ ಒಂದಷ್ಟು ಚಿತ್ರಿಕೆಗಳನ್ನು ಆರಂಭಿಸಿದ್ದೇನೆ. “ಚಿತ್ರಿಕೆ” ಗಳು ನನಗೆ ಬಹಳ ಇಷ್ಟವಾದುದು. ಒಂದು “ಚಿತ್ರಿಕೆ” (ಇಮೇಜ್) ಸುತ್ತ ದೃಷ್ಟಿ ಹರಿಸುತ್ತಾ, ಕಣ್ಣಿಗೆ ಕಟ್ಟಿಕೊಳ್ಳುವುದು ಒಂದು ಸೊಗಸು. ಒಮ್ಮೊಮ್ಮೆ ಅಮೂರ್ತವೆನ್ನುವಂತೆಯೂ, ಮತ್ತೊಮ್ಮೆ ತೀರಾ ಡಾಳಾಗಿಯೂ ಕಾಣು ವುದುಂಟು. ನನಗೆ ಅಮೂರ್ತಗೊಳಿಸುವುದೆಂದರೆ ಮತ್ತಷ್ಟು ಖುಷಿಯ ಕೆಲಸ. ಹೊಸ ಚಿತ್ರಿಕೆಗಳನ್ನು ಓದಿ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿ.

*

ಊರ ಮನೆಗಳ ಹಜಾರ ಖಾಲಿಯಾಗಿವೆ. ಈಗ ನೀವಂದುಕೊಂಡ ಹಾಗಿಲ್ಲ. ಸಂಪೂರ್ಣ ಬದಲು. ಯಾವುದು ಎಲ್ಲಿರಬೇಕಿತ್ತೋ ಅದರ ಸ್ಥಾನ ಬದಲಿ. ಹಜಾರದ ಖಾಲಿ ಜಾಗ ಹೊಸ ಶೂನ್ಯ ಸೃಷ್ಟಿಸುತ್ತಿದೆ. ಆ ಶೂನ್ಯಕ್ಕೆ ಒಂಟಿತನ ಎಂಬ ನಾಮಕರಣ. ಶೂನ್ಯ ತುಂಬುವವರ ಕೊರತೆ ಮಧ್ಯೆ ದಿನಗಳ ಉರುಳಾಟ. ದಿನಗಳೊಂದಿಗೆ ನಮ್ಮದೂ ಉರುಳೇ. ಹಜಾರದ ಜಂತಿಗೆ ಬಡಿದ ಹೊಸ ಬಣ್ಣದಲ್ಲಿ ಹಳೆಯ ಬಣ್ಣದ ಮೆರುಗು ಮಾಯ.

ನಮ್ಮಲ್ಲೆಲ್ಲಾ ಹಜಾರದ ಮೂಲೆಗೆ ಇದ್ದಷ್ಟು ಲವಲವಿಕೆ ಬೇರೆ ಯಾವ ಕೋಣೆಗೂ ಇರುತ್ತಿರಲಿಲ್ಲ. ಅದಕ್ಕಿದ್ದ ಘನತೆ, ಹಿರಿತನ, ಕಾಳಜಿ ಇನ್ಯಾರಿಗೂ ಇರುತ್ತಿರಲಿಲ್ಲ. ಇದೂ ಒಂದು ನಮೂನೆಯ ಪ್ರಧಾನಮಂತ್ರಿ ಸೀಟು. ಅಲ್ಲಿಂದ ಬಿದ್ದ ಹ್ಞೂಂಕಾರಕ್ಕೆ ಮೇರೆಯೇ ಇಲ್ಲ. ಉಳಿದವರೆಲ್ಲಾ ಸಾಲು ಹಿಡಿದು ಅನುಸರಿಸುವುದಷ್ಟೇ ಬಾಕಿ. ಅಗ್ನಿಪರೀಕ್ಷೆಯ ಕ್ಷಣದಲ್ಲೂ ಚಕಾರವೆತ್ತುವಂತಿರಲಿಲ್ಲ. ಮೂಲೆಯ ಆದೇಶವೆಂದರೆ ಅಷ್ಟೊಂದು ಮರ್ಯಾದೆ.

ಮಂತ್ರಿ ಪದವಿಗೆ ಒಂದಷ್ಟು ಲಾಬಿ, ಮತ್ತೊಂದಿಷ್ಟು ಜನಬಲ, ಜೈಕಾರ ಪಡೆ, ಘೋಷಣೆಗಳ ಹರಿಕಾರರು-ಎಲ್ಲರನ್ನೂ ಸುತ್ತಿಟ್ಟು(ಸುತ್ತ ಇಟ್ಟು) ಕೊಂಡು ಓಡಾಡಬೇಕು. ಅವೆಲ್ಲವೂ ಇದ್ದರೆ ಉಳಿದೆಲ್ಲವೂ. ಆದರೆ ಮೂಲೆ ಸೀಟಿಗೆ ಇದ್ಯಾವುದೂ ಗಣ್ಯವಿಲ್ಲ. ಅಷ್ಟಕ್ಕೆ ನಗಣ್ಯ ಎಂದು ತಿಳಿದುಕೊಳ್ಳುವುದು ಬೆಂಕಿನುಂಡೆ ತುಳಿಯುವ ಕಾಯಕ. ಅದು ಸುಗ್ರೀವಾಜ್ಞೆ ಪೀಠಕ್ಕೆ ಸಮಾನ. ಇಲ್ಲಿ ಆeಧಾರಕರು ಒಒರೇ. ಅನುಸರಿಸುವವರು ಮಿಕ್ಕವರು.

ಹಜಾರದ ಜಂತಿಗಳೆಲ್ಲಾ ಈಗ ಅನಾಥ. ಅದನ್ನು ದಿಟ್ಟಿಸುವವರೂ ಇಲ್ಲ ; ಉಪಚರಿಸುವವರೂ ಇಲ್ಲ. ಎಲ್ಲಾ, ಬಣ್ಣದ ಪೆಟ್ಟಿಗೆಯ ಬಣ್ಣಕ್ಕೆ ಮರುಳಾಗಿದ್ದಾರೆ. ಅದಕ್ಕಾಗಿ ಮೂಲೆಯಲ್ಲಿರುವ ಹಿರಿ ಜೀವಿಗೆ ಸ್ಥಾನಾಂತರ. ಕೋಲು ಹಿಡಿದು ‘ಏನೋ ವಾಸ, ಕೊಯ್ಲು ಮುಗೀತೇನೋ?, ಎಷ್ಟು ಮುಡಿಯಾಗಿದೆ?’ಎಂದು ಕೇಳುವ ಅಜ್ಜ, ಅಜ್ಜಿಯರು ಮೂಲೆಪಾಲು. ಅವರ ಆಜ್ಞೆಗಳು ಕಿಮ್ಮತ್ತು ಕಳೆದುಕೊಂಡ ಕಿಲುಬುಕಾಸು. ಪಡೆದ ಅನುಭವ ಸಂಪತ್ತಿಗೆ ಬಿದ್ದ ವಯೋಮಾನದ ಮೊಹರಿಗೂ ಬೆಲೆ ಇಲ್ಲ!

ಈಗ ಹಜಾರದಲ್ಲಿ ಯಾವಾಗಲೂ ಬೆಳಕೇ. ಒಬ್ಬೊಬ್ಬರೂ ಒಂದೊಂದು ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಸೊಸೆ ತನ್ನಷ್ಟಕ್ಕೇ ಗೊಣಗುತ್ತಾ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತ್ತಾಳೆ. ಮಗಳು ಉಪ್ಪರಿಗೆ ಕೋಣೆಯಲ್ಲ್ಲಿ ಮೊದಲ ಪಿಯುಸಿ ಪಾಠಕ್ಕೆ ಶರಣಾಗಿದ್ದಾಳೆ. ಮಗ ಪೇಟೆ ತುಕ್ಕಲಿಕ್ಕೆ ಹೋದವ ಇನ್ನೂ ಬಂದಿಲ್ಲ. ಅಪ್ಪನಿಗೆ ಇನ್ನೂ ಪಟ್ಟಾಂಗ ಮುಗಿದಿಲ್ಲ. ಅಜ್ಜ- ಅಜ್ಜಿಯರ ಮುಖಗಳೂ ಹಾಗೆ. ಕಳೆಗುಂದಿದ ಜಂತಿಗಳಂತೆ. ಕುಟುಂಬದ ಸೀರೆ ನೂಲುಗಳು ಒಂಟಿಯಾಗುವ ಮುನ್ನ ನೇಯ್ಗೆಗಾರರು ಬೇಕು ; ಶೂನ್ಯಕ್ಕೊಂದು ಅರ್ಥ ಮತ್ತು ಹಜಾರಕ್ಕೊಂದು ಹೊಸ ಬಣ್ಣವೂ ಬೇಕು.

ರುಕ್ಕು ಎಂದರೆ ಭಗೀರಥೆ !

ಬದುಕಿನ ಪಟದಲ್ಲಿ ಯಾರೆಲ್ಲಾ ಮುಖ್ಯ ? ಬದುಕು ಕೊಟ್ಟವನು-ಬೆಳೆಸಿದವನು-ಬದುಕು ರೂಪಿಸಿದವನು-ಬದುಕಿಗೆ ಹಾರೈಸಿದವನು, ಸುಂದರ ಬಾಳಿಗೆ ಸಹಾಯವಾದವನು, ತಪ್ಪು ನಡೆಯ ತಿದ್ದಿ ಮತ್ತಷ್ಟು ದೂರ ಸಾಗುವಿಕೆಗೆ ಅಣಿಗೊಳಿಸಿದವನು, ಕಷ್ಟವೋ-ಸುಖವೋ, ಅಷ್ಟು ದೂರದವರೆಗೆ ಜತೆಗೆ ಸಾಗಿ ಬಂದವರು, ಇವರೆಲ್ಲರ ಮಧ್ಯೆ ಪಥದ ಪಯಣವನ್ನು ವಿಮರ್ಶೆ ಮಾಡಿ ಇಷ್ಟು ಸರಿ, ಇಷ್ಟು ತಪ್ಪು ಎಂದು ಮಾರ್ಕ್ಸ್ ಹಾಕಿದವರು ? ಇವರೆಲ್ಲಾ….

ಊರಿನ ಉಪ್ಪರಿಗೆಯ ಮನೆಯಲ್ಲಿ ಹುಟ್ಟಿದ ರುಕ್ಕು ಇವತ್ತು ಮೂವರು ಮೊಮ್ಮಕ್ಕಳಿಗೆ ಅಜ್ಜಿ. ರಜೆಗೆ ಬಂದ ಮೊಮ್ಮಕ್ಕಳಿಗೆಲ್ಲಾ ಕಥೆಯ ಉಣಬಡಿಸುವಾಗ ಹೀಗೇ ಆಲೋಚಿಸುತ್ತಾಳೆ. ಮಕ್ಕಳ ಬಳಿ ಇದೆಂಥಾ ಪ್ರಶ್ನೆ ? ಎಂದು ಕಒಳ್ಳುವ ಅರವತ್ತಾದ ರುಕ್ಕು ತನ್ನ ಅರಳು ಮರಳಿಗೆ ಪಿಚ್ಚೆನ್ನುತ್ತಾಳೆ. ಪಕ್ಕದ ಕೇರಿ ಭಟ್ಟರ ಎದುರು ಕೂತು ತರ್ಕ ಮಂಡಿಸುವುದಕ್ಕೆ ಸ್ವಲ್ಪ ಹಿಂಜರಿಕೆ. ಇನ್ನು..

ಊರ ದೇವಸ್ಥಾನದಲ್ಲಿ ದಾಸರು ಬದುಕಿನ ಬಗ್ಗೆ ವಿಚಾರ ಮಂಡಿಸುವಾಗ ಈಕೆಗೆ ಪುರಸೊತ್ತಿಲ್ಲ. ಕೊಟ್ಟಿಗೆಯ ದನ ಬಿಚ್ಚಿ ಸಗಣಿ ಎತ್ತಿ ಹಾಕುವಷ್ಟರಲ್ಲಿ ಸೂರ್ಯ ದೊಡ್ಡವನಾಗಿರುತ್ತಾನೆ. ತಿಂಡಿ ತಿಂದು ತೋಟದ ಹಾದಿ ಹಿಡಿದರೆ ಬರುವಾಗ ಸೂರ್‍ಯನಿಗೆ ತುಂಬು ಯೌವ್ವನ. ಪುನ ಃ ಗದ್ದೆ-ತಫಟ. ಸಂಜೆಗೆ ದನಗಳೆಲ್ಲಾ ಕೊಟ್ಟಿಗೆ ಬಾಗಿಲಲ್ಲಿ ಧರಣಿ. ಅವುಗಳ ಷೋಡಶೋಪಾಚಾರ ಎನ್ನುವಷ್ಟರಲ್ಲಿ ಪೇಟೆಯಿಂದ ವಾಪಸ್ಸಾಗುವ ಮಗನ ಕುಶಲೋಪರಿ.

ಹುಟ್ಟಿದ ಹೊತ್ತಲ್ಲಿ ಅಮ್ಮ ಮುಖ್ಯವಾದಳು, ನಂತರ ಅಪ್ಪ ಮುಖ್ಯವಾದ. ಬೆಳೆಯುತ್ತಿದ್ದಾಗ ಜತೆಗಿದ್ದ ಅಣ್ಣ, ಅಕ್ಕ ಸಹ್ಯವಾದರು. ನಾಲ್ಕನೇ ಇಯತ್ತೆವರೆಗೆ ಮೂರು ಕಿ. ಮೀ. ಗುಡ್ಡೆ ಹತ್ತಿ ಇಳಿದು ಶಾಲೆಗೆ ಹೋಗುವಾಗ ಸೀತೂ ಭಟ್ಟರ ಗದ್ದೆಯ ಎಳೆ ಅಲಸಂದೆ ಕೋಡು ಇಷ್ಟವಾಗಿತ್ತು. ಎಷ್ಟು ಬಾರಿ ಓದಿದರೂ ತಲೆಗೆ ಹೋಗದ ಪಾಠ ಮತ್ತೆ ಹೇಳುವ ಮೇಸ್ಟ್ರು, ಒಬ್ಬಳೇ ನಡೆಯುವ ಒಂಟಿತನ ಹಂಚಿಕೊಳ್ಳುವ ನೆರೆ ಮನೆಯ ಭಟ್ಟರ ಮಾಣಿ ವೆಂಕೂ…

ಶಾಲೆ ಬಿಟ್ಟಾಗ ಮನೆಯ ಹೊಣೆ ಕೊಟ್ಟ ಅಪ್ಪ, ಯಾವುದೋ ಚಟಕ್ಕೆ ಎಲ್ಲವೂ ಮಾರಿದಾಗ ಆಶ್ರಯ ಕೊಟ್ಟ ಭಾಗೀರಥಮ್ಮ, ಬದುಕೇ ಬೇಡ ಎಂದ ಅಮ್ಮನಿಗೆ ಪುನಃ ಬದುಕು ಕಟ್ಟುವ ಹುರುಪು ತುಂಬಿದ ಗಂಗೊಳ್ಳಿಯ ಶಾರದೆ, ಮದುವೆಯಾಗಿ ಸ್ವಲ್ಪ ದೂರ ಬಂದ ಪತಿ, ಈಗ ಮಕ್ಕಳು, ಮೊಮ್ಮಕ್ಕಳು…ಇವರೆಲ್ಲರ ಮಧ್ಯೆ ನಡೆಯ ಸರಿ, ತಪ್ಪು ತಾಳೆ ಹಾಕುವ ಪ್ರವೃತ್ತಿ ರೂಪಿಸಿದ ಪ್ರಕೃತಿ. ಒಬ್ಬರೇ…ಇಬ್ಬರೇ…
ಎಂಬತ್ತು ತುಂಬಿದ ರುಕ್ಕುಗೆ ಉತ್ತರದ ಗಂಗೆ ಕರೆ ತಂದು “ಭಗೀರಥೆ’ ಯಾಗುವ ಬಯಕೆ. ಅಲ್ಲಿಗೆ ಯಾರು ಮುಖ್ಯರು ?

ಕಳೆಯುವುದಕ್ಕೂ ಒಂದು ರೀತಿ ನೀತಿ

ಕಳೆದು ಹೋಗುವುದು ಎಷ್ಟು ಸುಲಭ? ಅದೂ ಬೆಂಗಳೂರಿನಂತಹ ಮನುಷ್ಯರ ಸಂತೆಯಲ್ಲಿ. ಬಹಳ ಸುಲಭ. ನಿರಾಯಾಸ, ಕಂಗ್ಲಿಷ್ ಕಲ್ಚರ್ ನಲ್ಲಿ ಹೇಳೋದಾದರೆ ಬಹಳ  ಈಸಿ. ಒಂದು ಥರಾ ಕಸಿವಿಸಿ. ಇಲ್ಲಿ ಕಳೆದು ಹೋಗುವುದಕ್ಕೂ ಒಂದು ವ್ಯವಸ್ಥೆ, ಒಂದು ಸ್ಟ್ರಕ್ಚರ್. ಎಲ್ಲಾ  ವ್ಯವಸ್ಥಿತ, ಅದಕ್ಕೂ ಒಂದು ನಿರ್ದಿಷ್ಟತೆ.

ಸಾಲಿಗ್ರಾಮ ಜಾತ್ರೆಯಲ್ಲಿ ಕೇಶು ಕಾರಂತರ ಮಗ ಕಳೆದು ಹೋದ. ಕ್ಷಣದಲ್ಲಿಯೇ ದೊಡ್ಡ ಸುದ್ದಿ. ಎಲ್ಲೆಲ್ಲೂ ಅದೇ ಮಾತು. ‘ಕೇರಿ ಅಂಚಿನ ಗದ್ದೆ ಒಡೇರ ಮಗ ಕಾಣೆಯಂತೆ’ ವೆಂಕೂ ಐತಾಳರ ಮನೆ ಆಳು ರುಕ್ಕಿ  ಕೇರಿಗೆಲ್ಲಾ ಪ್ರಸಾರ ಮಾಡಿದ್ಳು. ದೇವಸ್ಥಾನದ ಬದಿಯಲ್ಲಿದ್ದ ಕೊಂಕಣಿ ಹೋಟೆಲಿನಲ್ಲಿ ಚಹಾ ಕುಡಿಯುವವರ ಚರ್ಚೆಯ ಚಾವಡಿಯಲ್ಲಿ ಇದೇ ವಿಷಯ.

ಊರಲ್ಲಿದ್ದ ಎಲ್ಲಾ ಪೊಲೀಸರಿಗೂ ಮಗು ಹುಡುಕುವ ಕೆಲಸ. ಅವರಿಗಷ್ಟೇ ಅಲ್ಲ, ಮಗು ಪತ್ತೆ ಹಚ್ಚುವ ಹೊಣೆ ಎಲ್ಲರದ್ದೂ. ಅದೊಂದು ಊರಿನ ಕೆಲಸ. ಅದಕ್ಕೆ ಜಾತ್ರೆಯಲ್ಲಿ ಎಲ್ಲರೂ ಮಗು  ಪತ್ತೆ ಹಚ್ಚಿದ್ದಾರೆ. ತಮಗೆ ತಿಳಿದ ಜಾಗಗಳಲ್ಲಿ, ಎಲ್ಲಾ ಹುಡುಕಿ ‘ಸಿಗಲಿಲ್ಲ’ ಎಂಬ ಉತ್ತರ ಬರುವಾಗ ಮೂಲೆಯಲ್ಲೆಲ್ಲೋ ಮಗುವಿನ ಸದ್ದು ಕೇಳಿ ಬರುತ್ತದೆ. ಮಗ ಸಿಗುತ್ತಾನೆ, ಅಪ್ಪನ ತೆಕ್ಕೆಗೆ  ಜೋತು ಬೀಳುತ್ತಾನೆ.

ಬೆಂಗಳೂರಿನಲ್ಲಿ ಏನೂ ಮಾಡುವುದು ಬೇಡ. ನಿಂತಲ್ಲೇ ಕೆಲವು ಘಳಿಗೆ ನಿಂತುಕೊಳ್ಳಿ. ಅಲ್ಲಿಗೆ ಕಳೆದು ಹೋದಿರಿ. ಅವರು ಬಂದರು, ಇವರು ಹೋದರು, ಇನ್ಯಾರೋ ಹೊರಡುತ್ತಿದ್ದಾರೆ. ಮತ್ತ್ಯಾರೋ ಬರುತ್ತಿದ್ದಾರೆ. ಹಾಗಾದರೆ ಅಲ್ಲಿಯೇ ನಿಂತುಕೊಂಡವರು ಯಾರು. ನಮ್ಮೊಬ್ಬರನ್ನು ಬಿಟ್ಟು.  ಕ್ಷಣಕ್ಷಣಕ್ಕೂ ಮುಖಗಳೇ ಬದಲಾಗುವ ಊರು. ಕಳೆದು ಹೋಗುವುದೆಂದರೆ ನಮಗೆ ನಾವೇ ಅಪರಿಚಿತರಾಗುವುದು, ಕಣ್ಣು ಪಿಳಿ ಪಿಳಿ ಬಿಟ್ಟು ಊರೇ  ಹೊಸದೆನಿಸುವುದು.

ಮೊದಲಿಗೆ ರಾಜಧಾನಿಗೆ ಬಂದಾಗ ನನಗೆ ಅನ್ನಿಸಿದ್ದು ಇಷ್ಟೇ. ಮೆಜೆಸ್ಟಿಕ್‌ನ ಮೇಲು ಸೇತುಗೆ ಮೇಲೆ ಮಲ್ಲೇಶ್ವರ ಬಸ್ಸಿನ ಫ್ಲಾಟ್‌ಫಾರಂಗೆ ಇಳಿಯುವಾಗ ಯಾರೂ ಗೊತ್ತೇ ಇಲ್ಲ. ಸಮುದ್ರದ ಅಲೆಯೋಪಾದಿಯಲ್ಲಿ ನುಗ್ಗಿ ಬರುವ ಜನ, ಕ್ಷಣದಲ್ಲೇ ಕರಗಿ ಹೋಗುವ ಮಂದಿ. ಅದರೆ ನಡುವೆ ನನಗೆ ಪ್ರತಿ ಹೆಜ್ಜೆಯೂ ಭಾರ. ಕಳೆದು ಹೋಗುವುದೆಂದರೆ ನಮ್ಮ ಜನ  ನಮಗೇ ಹೊರಗಿನವರೆನಿಸುವುದು, ಕಳೆಯುವುದಕ್ಕೂ ಒಂದು ರೀತಿ ನೀತಿ.

‘ಸ್ಟ್ಯಾಚೂ’ ಆಟ

‘ಸ್ಟ್ಯಾಚೂ’ ಆಟದ ಬಗ್ಗೆ ಗೊತ್ತಾ ? ಅದೇ ‘ಮೂರ್ತಿ’ಯಾಟ. ಇದು ಲಗೋರಿ, ಚಿph-1.jpgನ್ನಿದಾಂಡು, ಗೋಲಿ ಆಟದಂತಲ್ಲ. ಸ್ವಲ್ಪ ಆಧುನಿಕತೆಯ ಆಟ. ನನಗೂ ಮುಂಚೆ  ಗೊತ್ತಿರಲಿಲ್ಲ. ಇದ್ದಕ್ಕಿದ್ದಂತೆ ಶಾಲೆಯ ದಿನಗಳಲ್ಲಿ ಒಂದು ದಿನ ನನ್ನೆದುರು ಕುಳಿತುಕೊಳ್ಳುವ ಗೆಳೆಯನೊಬ್ಬ ಇದನ್ನು ಪರಿಚಯಿಸಿದ್ದ. ಅದರಲ್ಲೂ ಬೆಂಗಳೂರಿನಂಥ ಮಾಯಾನಗರಿಗೆ ಕಾಲಿಟ್ಟ ಮೇಲೆ ಇನ್ನಷ್ಟು ಪರಿಚಯವಾದದ್ದು. ಸುಮ್ಮನೆ ಮೋಜಿನಾಟ ; ಮಕ್ಕಳಾಟ ; ನಿಂತೇ ಬಿಡುವ ಆಟ.

ಪುಸ್ತಕಗಳ ಕಪಾಟನ್ನು ಸರಿ ಮಾಡುತ್ತಿದ್ದ ಅಜ್ಜನ ಮುಖದಲ್ಲಿ ಇದ್ದಕ್ಕಿದ್ದಂತೆ ೬೦ ಮೋಂಬತ್ತಿ ಹತ್ತಿದ ಹಾಗೆ ಬೆಳಕು. ತನ್ನಷ್ಟಕ್ಕೇ ನಗುತ್ತಾನೆ. ದೂರದಿಂದಲೇ ನೋಡುತ್ತಿದ್ದ ಪುಟ್ಟಿ ಮೊಮ್ಮಗಳಿಗೆ ಅಚ್ಚರಿ. ಅಜ್ಜ ಏಕೆ ನಗುತ್ತಿದ್ದಾನೆ ? ಪುಸ್ತಕ ರಾಶಿ ಮಧ್ಯೆ ನಗಲಿಕ್ಕೆ ಏನಿದೆ ? ಅಲ್ಲೇನಾದರೂ ನಗುವಂಥ ಫೋಜು ಇತ್ತೇ? ಎಂದೆಲ್ಲಾ ತಲೆ ಕೆರೆದುಕೊಂಡಳು.

ಅಜ್ಜ, ಅಜ್ಜಿ ಕಳುಹಿಸಿದ್ದ ಬರ್ತ್‌ಡೇ ಗ್ರೀಟಿಂಗ್ ಕಾರ್ಡ್ (ಮದುವೆಗೆ ಮುನ್ನ) ಸಿಕ್ಕಾಗ ನಗುವಿನ ಹೂವು ಅರಳಿಸಿದ್ದು ಮುಖದಲ್ಲಿ. ಈ ಸತ್ಯ ಮೊಮ್ಮಗಳಿಗೆ ತಿಳಿಯುವುದಾದರೂ ಎಂತು ? ಹತ್ತಿರ ಬಂದ ಮೊಮ್ಮಗಳು ತನ್ನ ಹೆಬ್ಬೆರಳು ಸ್ವಲ್ಪ ಹಿಂದಕ್ಕೆ ಬಾಗಿಸಿ, ತೋರು, ಮಧ್ಯಮ ಬೆರಳನ್ನೇ ಬಂದೂಕು ಮಾಡಿ ಅಜ್ಜಾ, ‘ಸ್ಟ್ಯಾಚೂ’ ಎಂದಳು. ಮೊಮ್ಮಗನ ಆಟ ಅರಿತಿದ್ದ ಅಜ್ಜ ಕ್ಷಣದಲ್ಲೇ ‘ಸ್ಟ್ಯಾಚೂ’ ಆದ. ನಗುತ್ತಿದ್ದ ಹಲ್ಲುಗಳೆಲ್ಲಾ ಹಾಗೇ. ತುಟಿ ಮೇಲಕ್ಕೆ. ಮುಖದಲ್ಲಿ ಮೂಡಿದ ನೆರಿಗೆಯೂ ‘ಸ್ಟ್ಯಾಚೂ’.

‘ಅಜ್ಜಾ, ನಾನು ಹೇಳುವವರೆಗೆ ನೀನು ಹೀಗೆ ಇರಬೇಕು’  ಎಂದ ಪುಟ್ಟಿ ಅಮ್ಮ ಕರೆದಲ್ಲಿಗೆ ಓಡಿದಳು. ಅಜ್ಜ ಹೆಚ್ಚು ಹೊತ್ತು ‘ಸ್ಟ್ಯಾಚೂ’ ಆಗಿರಲಾರ ; ಬದುಕಬೇಕೆಂದು ಬಯಸಿದವನು. ಪುನಾ ಅದೇ ಬರ್ತ್‌ಡೇ ಕಾರ್ಡ್ ತೆಗೆದುಕೊಂಡ. ಮನಸಾರೆ ನಕ್ಕ. ಬರ್ತ್‌ಡೇ ವಿಷಸ್, ಕ್ಯಾಂಡಲ್, ಕೇಕ್ ಎಲ್ಲಾ ಎದುರಿಗೆ ಮೆರವಣಿಗೆ ನಡೆಸಿದವು.  ಅದರಲ್ಲಿ ಸೇರಿ ಹೋಗುವಾಗ ಮೊಮ್ಮಗಳೂ ಅಲ್ಲಿಗೆ ಹಾಜರು.

ತಾತ, ನಾನು ಇನ್ನೂ ‘ಸ್ಟ್ಯಾಚೂ’ ತೆಗೆದೇ ಇಲ್ಲ, ನೀನು ಸೋತಿದ್ದೀಯಾ ಎಂದಳು ಪುಟ್ಟಿ. ‘ಅದು ಹಾಗಲ್ಲ…ಅಪ್ಪಿ…’ ಎಂದ ಅಜ್ಜನ ಮಾತಿಗೆ ಪುಟ್ಟಿ ಕಿವಿ ಕೊಡಲೇ ಇಲ್ಲ. ಅವಳ ಮನಸ್ಸಿನಲ್ಲಿ ಅಜ್ಜ ತಪ್ಪು ಮಾಡಿದ್ದಾನೆ. ನಾನು ಹೇಳದೇ ‘ಮೂರ್ತಿ’ ಭಂಗಿ ಬದಲಿಸಿದ್ದಾನೆ. ಅಜ್ಜ, ನಿನ್ನತ್ರ ಮಾತಾಡೋಲ್ಲ…ಠೂ…ಠೂ…ಠೂ… ಎಂದು ಟೂ ಬಿಟ್ಟು ಹೊರ ನಡೆದೇ ಬಿಟ್ಟಳು. ಅಜ್ಜ ಈಗ ನಿಜವಾದ ‘ಸ್ಟ್ಯಾಚೂ’. (ಚಿತ್ರ : ಪ್ರವೀಣ್ ಬಣಗಿ)

ಬೆಳಗ್ಗೆಗಿಂತ ಸಂಜೆಯೇ ವೇಗ…

ಪಕ್ಕದ ಮನೆಯ ಪುಟ್ಟಿ ಬೆಳಗ್ಗೆಯಾದ ಕೂಡಲೇ ಎದ್ದು ಕಣ್ಣುಜ್ಜುವಾಗ ಅಮ್ಮ ಸೀರೆ ಉಟ್ಟುಕೊಳ್ಳುತ್ತಿರುತ್ತಾಳೆ. ಅಪ್ಪ ಸ್ನಾನ ಮಾಡುತ್ತಿರುವ ಸದ್ದು ಸ್ಪಷ್ಟವಾಗುವಷ್ಟರಲ್ಲಿ ನೀರಿನ ಶಬ್ದ ನಿಲ್ಲುತ್ತದೆ. ಅಷ್ಟರಲ್ಲಿ ಟೇಬಲ್ ಮೇಲಿದ್ದ ರೇಡಿಯೋದ ಧ್ವನಿಯನ್ನು ಹೆಚ್ಚು ಮಾಡುತ್ತಾಳೆ ಅಮ್ಮ. ಹಾಡನ್ನು ಕೇಳುತ್ತಾ ಮಧ್ಯಾಹ್ನದ ಬುತ್ತಿಯನ್ನು ಕಟ್ಟಿಕೊಳ್ಳುವುದು ಆಕೆಗೆ ಅಭ್ಯಾಸ.

ದೇವರಗೂಡಿನಲ್ಲಿ ಬೆಂಕಿಕಡ್ಡಿ ಗೀರಿದ ಸದ್ದು ಕೇಳಿದರ್ಥ, “ಅಪ್ಪ ದೇವರಿಗೆ ದೀಪ ಹಚ್ಚುತ್ತಿದ್ದಾನೆ’ ಎಂದೇ.
ಮಕ್ಕಳಿಗೆ ಟಿವಿ ನೋಡೋಕೆ ಟೈಮಿದೆಯೇ? ಹಲ್ಲುಜ್ಜಿ ಬಂದ ಪುಟ್ಟಿ ಟಿವಿ ಹಾಕಿದಳು. ಅದರಲ್ಲೇನೋ ಮಕ್ಕಳನ್ನು ನಿರ್ವಹಿಸುವ ಬಗ್ಗೆ ಉಪದೇಶ. ಎಲ್ಲೂ ಕಾರ್ಟೂನ್ ನೆಟ್ ವರ್ಕ್ ಸಿಗಲಿಲ್ಲ. “ಅಮ್ಮ, ಕಾರ್ಟೂನ್ ಸಿಗ್ತಾನೇ ಇಲ್ಲ’ ಎಂದು ಪುಟ್ಟಿ ಕೂಗಿದ್ದಕ್ಕೆ ಕೋಣೆಯಿಂದಲೇ ಅಮ್ಮ “ಚಾನೆಲ್ ಬದಲಾಯಿಸು, ಬಂದೇ ಬರುತ್ತೆ’ ಎಂದು ಉತ್ತರಿಸಿದಳು.

ದೇವರಿಗೆ ಕೈ ಮುಗಿದು ಬಂದ ಅಪ್ಪನಿಗೆ ಈಗ ಮಗಳ ಮುದ್ದು ಮಾಡುವ ಸರದಿ. “ನನ್ನ ಕಂದ, ಹೇಗಿದ್ದೀಯಾ?’ ಎಂದಾಗ ಮಗಳು ಅಪ್ಪನ ಮಾತಿಗೆ ಕರಗಿದ ಬೆಣ್ಣೆ.

ಗಡಿಯಾರಕ್ಕೆ ಕೆಲಸವಿಲ್ಲ, ಬರೀ ಓಡೋದು ಬಿಟ್ಟರೆ. ಗಂಟೆ ಎಂಟೂವರೆ. ಪುಟ್ಟಿ ಸ್ನಾನಕ್ಕೆ ಸಿದ್ಧವಾಗುವಷ್ಟರಲ್ಲಿ ಅಪ್ಪ ರಸ್ತೆಯಲ್ಲಿದಾನೆ ತನ್ನ ಸವಾರಿಯ ಮೇಲೆ. ಅಲ್ಲಿ ಕುಳಿತೇ ಮಣ ಮಣ ಮಂತ್ರ. ಎರಡೇ ಮಿನಿಟ್-ಟಿವಿ ಯಲ್ಲಿ ಜಾಹೀರಾತು ಬರುವ ಹಾಗೆ ಅಮ್ಮ ಪುಟ್ಟಿಗೆ ಸ್ನಾನ ಮಾಡಿಸಿ ಬಂದಳು. ಟೇಬಲ್ ಮೇಲೆ ಇಟ್ಟ ತಿಂಡಿ ನಿಧಾನವಾಗಿ ಟಿವಿ ನೋಡುತ್ತಿದೆ. “ಪುಟ್ಟಿ, ನೀನು ನಿಧಾನ ತಿನ್ನು’ ಎನ್ನುತ್ತಾ ಅಮ್ಮ ಮೊದಲ ಹೆಜ್ಜೆ ಹೊರಗಿಟ್ಟಳು. “ಫ್ರಿಜ್‌ನಲ್ಲಿ ಎಲ್ಲಾ ಇದೆ. ಜಾಮ್, ಜ್ಯೂಸ್, ಚಾಕೋಲೇಟ್…ಎಲ್ಲವೂ’ ಇವತ್ತು ಬೇಗ ಬಂದು ಬಿಡ್ತೀನಿ ಪುಟ್ಟಿ, ಅರ್ಧಗಂಟೆ ಬೇಗ…ಹ್ಲೂಂ. ಕಾಲದ ಚಕ್ರ ಚಲಿಸಿತು.

ಟಿ.ವಿ ಯಲ್ಲಿ ಡೊನಾಲ್ಡ್ ಕುಣಿದು ಕುಪ್ಪಳಿಸುತ್ತಿದೆ. ಪುಟ್ಟಿ ತಿಂಡಿ ತಟ್ಟೆ ಹಿಡಿದು ಡೊನಾಲ್ಡ್, ಮಿಕ್ಕಿ ಮೌಸ್‌ಳೊಂದಿಗೆ ಮಾತಿಗಿಳಿದಳು. ಅವು ಮಾತನಾಡಿದ ಹಾಗೆ ಇವಳೂ ಮಾತನಾಡುತ್ತಾಳೆ. ಡೊನಾಲ್ಡ್ ಅಪಾಯದಿಂದ ತಪ್ಪಿಸಿಕೊಂಡಾಗ ಎದ್ದು ಹೋಗಿ ಮೂರ್ಖಪೆಟ್ಟಿಗೆಯೊಳಗೆ ಕುಣಿಯುತ್ತಿರುವ ಡೊನಾಲ್ಡ್‌ಗೆ “ಕಂಗ್ರಾಟ್ಸ್’ ಹೇಳಿ ಬರುತ್ತಾಳೆ. ಅಷ್ಟರಲ್ಲಿ ತೂಕಡಿಕೆ. ಅಲ್ಲೇ ಒರಗುತ್ತಾಳೆ. ಒಂದಷ್ಟು ಹೊತ್ತು, ನಂತರ ಮತ್ತೆ ಎದ್ದಳು.

ಅರ್ಧ ತಿಂದಿದ್ದ ತಿಂಡಿಯನ್ನೇ ಪೂರ್ತಿ ಮಾಡಿದಳು. ಮತ್ತೆ ಟಿ. ವಿ ಯಲ್ಲಿ ಬಂದ ಚಿತ್ರ ನೋಡುತ್ತಾ ಮೈ ಮರೆತಳು. ಪುನಾ ತೂಕಡಿಕೆ, ನಿದ್ರೆ. ಎದ್ದೇಳುವ ವೇಳೆಗೆ ಕಾಲಿಂಗ್ ಬೆಲ್‌ನ ಶಬ್ದ. ಅಮ್ಮ ಅರ್ಧ ಗಂಟೆ ತಡವಾಗಿ ಬಂದಾಗಲೂ ಮಗಳಿಗೆ ಖುಷಿ.

ಮೊದ ಮೊದಲು ಪುಟ್ಟಿ ಮಧ್ಯಾಹ್ನ ಬಂದರೆ ಇನ್ನೂ ಸಂಜೆಯಾಗಿಲ್ಲ ಎಂದು ಅಳುತ್ತಿದ್ದವಳು. ಈಗ ತೂಕಡಿಕೆ ಕಾಲದ ವೇಗವನ್ನು ಹೆಚ್ಚಿಸಿದೆ. ಅದಕ್ಕೆ ಅವಳಿಗೆ ಎರಡು ಹೊತ್ತು ಮಾತ್ರ ಗೊತ್ತು. ಬೆಳಗ್ಗೆ ಮತ್ತು ಸಂಜೆ. ಅದಕ್ಕೆ ಅವಳ ಪ್ರಾಸ ಬೇರೆ. “ಬೆಳಗ್ಗೆ ಅಮ್ಮ ಹೊರಗೆ, ಸಂಜೆ ಅಮ್ಮ ಒಳಗೆ’, ರಾತ್ರಿ ಅಪ್ಪ-ಅಮ್ಮ-ನಾನು ಒಟ್ಟಿಗೆ.
ಕಾಲಕ್ಕೂ ಮಕ್ಕಳನ್ನು ಕಂಡರೆ ಕರುಣೆ ; ಬೆಳಗ್ಗೆಗಿಂತ ಸಂಜೆಯ ವೇಗ ದುಪ್ಪಟ್ಟು !
(ಟ್ರಾಫಿಕ್, ಬ್ಯುಸಿಯ ನಡುವೆ ಕಳೆದುಕೊಳ್ಳುತ್ತಿರುವ ನಮ್ಮ ಬದುಕಿನ ಬಗ್ಗೆಯೇ ಇತ್ತೀಚೆಗೆ ಅನಿಸಿದ್ದು)

ಅವನಿಗೆ ಇವನು ಆಳು !

ಬಸ್‌ಸ್ಟ್ಯಾಂಡ್ ಎದುರಿನ ಕ್ಯಾಂಟೀನಿನಲ್ಲಿ ಗ್ಲಾಸ್ ತೊಳೆಯುತ್ತಿರುವ ಪೋರನಿಗೆ ಹನ್ನೆರಡು ತುಂಬಿದೆ. ಪಾದರಸದಂಥ ಹುಡುಗ. ಬಾಯಲ್ಲಿ ಏನಾದರೂ ಗುನುಗಿಕೊಳ್ಳುತ್ತಿದ್ದರೆ ಸಮಾಧಾನ. ಅವನ ಕೆಲಸವಿಷ್ಟೇ. ಗ್ಲಾಸ್‌ಗೆ ಸೋಪು ಹಾಕಿ ನೀರಲ್ಲಿ ಅದ್ದಿ ತೆಗೆದು ರಾಶಿ ಹಾಕುವುದು, ನೀರಿನ ತೊಟ್ಟಿಯಲ್ಲಿ ಗ್ಲಾಸನ್ನು ಅದ್ದಿ ತೊಳೆಯುವುದೆಂದರೆ ಅವನಿಗೆ ಖುಷಿ.

ಕೆಲಸವಿಲ್ಲದಿದ್ದರೆ ಮಾಡುವುದಿಷ್ಟೇ. ಗ್ಲಾಸೊಂದನ್ನು ನೀರಲ್ಲಿ ಅದ್ದುವುದು, ಉಂಟಾಗುವ ಶಬ್ದಕ್ಕೆ ಕಿಸಿ ಕಿಸಿ ನಗುವುದು. ಯಾರಾದರೂ “ಯಾಕೋ’ ಎಂದು ಕೇಳಿದರೆ “ನಮ್ಮಜ್ಜನ ನೆನಪಾಗುತ್ತದೆ’ ಎನ್ನುತ್ತಾನೆ. ಅವನಜ್ಜ ಬಾಯಿ ಮುಕ್ಕಳಿಸಿದಾಗ ಇದೇ ರೀತಿಯ ಶಬ್ದವಾಗುತಿತ್ತಂತೆ. ಅದಕ್ಕೆ ಆತನಿಗೆ ಗ್ಲಾಸೊಂದಿಗೆ ಆಟ.

ಊರಿನ ಏಕಮೇವ ಸರಕಾರಿ ಶಾಲೆಯ ಪಾಲಾಗಬೇಕಿದ್ದ ಈ ಪೋರ ಕ್ಯಾಂಟೀನಿಗೆ ಬೆಳಕಾಗಿದ್ದಾನೆ ; ತನ್ನ ಮನೆಯಲ್ಲಿ ಕತ್ತಲೆಗೆ ದಾರಿ ಮಾಡಿಕೊಟ್ಟು. ಆರನೇ ಕ್ಲಾಸಿನ ಮೊದಲ ಬೆಂಚಿನಲ್ಲಿ ಕೂತಿರಬೇಕಿತ್ತು. ಮೇಸ್ಟ್ರು ತಿದ್ದುವುದನ್ನೇ ಅಭ್ಯಾಸ ಮಾಡಿಕೊಂಡು ಪಾಠ ಒಪ್ಪಿಸಬೇಕಿತ್ತು. “ನಮ್ಮ ದೇಶದ ಮೊದಲ ಪ್ರಧಾನಿ ನೆಹರೂ…ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್…, ನಮ್ಮದ ಸ್ವತಂತ್ರ ದೇಶ…’ ಹೀಗೆ ಸಮಾಜಶಾಸ್ತ್ರ ಕಲಿಯಬೇಕಿತ್ತು.

ಶಾಲೆಯ ಆಟದ ಬಯಲಲ್ಲಿ ಆಡಿ ಮನೆಗೆ ಓಡಿಬಂದು ಅಮ್ಮನನ್ನು ಅಪ್ಪಿಕೊಳ್ಳಬೇಕಿತ್ತು. ಅಮ್ಮ ಕೊಡುವ “ತೊಡು’ ತಿಂದು “ಈಗ ಬಂದೆ’ ಎನ್ನುತ್ತಾ ಆಟದ ಎರಡನೇ ಅಧ್ಯಾಯ ಆರಂಭಿಸಬೇಕಿತ್ತು. ಅಪ್ಪನ ಬರವು ಕಂಡು ಓಡಿ ಪುಸ್ತಕ ತಿರುವು ಹಾಕುವ “ಆಟ’ದಲ್ಲಿ ಮುಳುಗಬೇಕಿತ್ತು. ಅಕ್ಟೋಬರ್, ಏಪ್ರಿಲ್ ಪರೀಕ್ಷೆಯ ಭೂತಕ್ಕೆ ಪಾಠ ಉರು ಹೊಡೆದು ಆತ್ಮವಿಶ್ವಾಸದ “ತಾಯಿತ’ ಕಟ್ಟಿಸಿಕೊಳ್ಳಬೇಕಿತ್ತು. ಈಗ ಅದೆಲ್ಲಾ ಬಿಟ್ಟು ಬಿಟ್ಟಿದ್ದಾನೆ.

ಜೀವನ ಪರೀಕ್ಷೆಗೆ ಕುಳಿತುಕೊಂಡಿರುವವನಿಗೆ ತಿಂಗಳಿಗೆ ಮುನ್ನೂರು ರೂಪಾಯಿ. ಗ್ಲಾಸು ಒಡೆದದ್ದಕ್ಕೆ ೩೦ ರೂ. ಕಡಿತ. ಕುಡಿದು ಹಾಳು ಮಾಡುವ ಅಪ್ಪನಿಗೋ ಹಣದ ಗಿರ; ಉಳಿದ ಹಣವೂ ಕೃಷ್ಣಾರ್ಪಣ.

ಮಾಲೀಕ ಕ್ಯಾಲೆಂಡರ್‌ನ ತಿಂಗಳ ಹಾಳೆ ತಿರುಗಿಸುವುದಷ್ಟರಲ್ಲಿ ಅಪ್ಪ ಹಾಜರು. ಮಾಲೀಕನ ಮುಂದೆ ಹಲ್ಲು ಗಿಂಜಿ, ಮಗನ ಹೆಸರಲ್ಲೇ ದೋಸೆ, ಕಾಫಿ ಅನುಭವಿಸಿ “ಚೆನ್ನಾಗಿ ಕೆಲಸ ಮಾಡು, ಮಗಾ’ ಎಂದು ಹೇಳಿ ಮುಖ ಎತ್ತದೇ ಮನೆ ದಾರಿ ಹಿಡಿಯೋದು ಅವನ ಜಾಯಮಾನ.

ಮಾಲೀಕನಿಗೆ ಪೋರನ ಅಪ್ಪ ಜೀತ. ಅಪ್ಪನಿಗೆ ಮಗ ಆಳು !