ಸಾಂಗತ್ಯಕ್ಕೆ ಭೇಟಿ ಕೊಡಿ

ಸಾಂಗತ್ಯ ಆರಂಭವಾಗಿದೆ. ನಾವೇ ಒಂದಷ್ಟು ಮಂದಿ ಕೂಡಿಕೊಂಡು ಕುಪ್ಪಳ್ಳಿಯಲ್ಲಿ ಎರಡು ದಿನಗಳ ಚಿತ್ರೋತ್ಸವ ನಡೆಸಿದೆವು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಬಂದಿದ್ದ ೪೦ ಮಂದಿ ಸ್ನೇಹಿತರಾದೆವು. ಖುಷಿಯಿಂದ ಕಳೆಯಿತು ಎರಡು ದಿನ. ಸುತ್ತಲೂ ಹಸಿರಿನ ಪರಿಸರ, ಜತೆಗೆ ಕಣ್ಣಿಗೆ ಕಟ್ಟುವ ಎಂಟು ಚಲನಚಿತ್ರಗಳು, ಅದರೊಂದಿಗೆ ಒಂದಿಷ್ಟು ಚರ್ಚೆ- ಎಲ್ಲವೂ ಮುಗಿದು ಮತ್ತೆ ನಾವು ನಾವು ಬದುಕಿರುವ ಊರಿನತ್ತ ಹೊರಟಾಗ ಮನಸ್ಸು ಭಾರವಾಯಿತು.
ಬೆಂಗಳೂರಿಗೆ ಪ್ರವೇಶ ದ್ವಾರವೆನ್ನುವಂತಿರುವ ‘ಜಾಲಹಳ್ಳಿ ಕ್ರಾಸ್’ ನತ್ತ ಬರುತ್ತಿದ್ದಂತೆ  ಕಂಡಕ್ಟರ್ ‘ಜಾಲಹಳ್ಳಿ ಕ್ರಾಸ್, ಜಾಲಹಳ್ಳಿ ಕ್ರಾಸ್’ ಎಂದು ಕೂಗುತ್ತಾನೆ. ಅದಕ್ಕೆ ಜಯಂತ ಕಾಯ್ಕಿಣಿ ಅವರು, ‘ನಮ್ಮ ಹೆಣ ನರಕಕ್ಕೆ ಹೋಗ್ತಿದೆ’ ಎಂದು ಹೇಳುತ್ತಿದ್ದರು. ಹಾಗೇ ನಮಗೂ ಅನ್ನಿಸಿತು. ಆದರೂ  ಅನಿವಾರ್ಯದ ಕುದುರೆ ಏರಿರುವ ನಮಗೆ ದುಃಖಿಸುವ ಹಕ್ಕೂ ಇಲ್ಲ !
ಅಂದ ಹಾಗೆ ಎರಡು ದಿನದ ಕಲಿಕೆ, ಖುಷಿ ಮುಂದುವರಿಯಲಿ ಎಂದು ‘ಸಾಂಗತ್ಯ’ ದ್ದೇ ಬ್ಲಾಗ್ ಆರಂಭಿಸಿದ್ದೇವೆ. ಸಿನಿಮಾ ಕುರಿತಂತೆ ಯಾವುದೇ ಬಗೆಯ ಮಾಹಿತಿ, ವಿಶ್ಲೇಷಣೆ, ಅನಿಸಿಕೆ ಎಲ್ಲವನ್ನೂ ಬರೆದು ಕಳುಹಿಸಬಹುದು. ಅದನ್ನು ನಾವು ಪ್ರಕಟಿಸುತ್ತೇವೆ. ಸಿನಿಮಾಗಳ ಬಗ್ಗೆ ಭಾಷೆಯ ನಿರ್ಬಂಧವಿಲ್ಲ .
ನಿಮ್ಮ ಬರಹಗಳಿಗೆ ನಾವು ಕಾಯುತ್ತಿರುತ್ತೇವೆ. ನಮ್ಮ ಬ್ಲಾಗ್ ಇದು www.saangatya.wordpress.com  ನೀವು ಕಳುಹಿಸಬೇಕಾದ ವಿಳಾಸ www.saangatya@gmail.com.

ವೇದಿಕೆ ಸಿದ್ಧ ; ಚಿತ್ರ ಮೂಡಬೇಕಷ್ಟೇ…!

ನಿಜಕ್ಕೂ ಖುಷಿಯಾಗುತ್ತಿದೆ. ನಮ್ಮ ಮುಂದಿನ ಸವಾಲು ಮತ್ತಷ್ಟು ಕಠಿಣವಾಗಿದೆ. ಸುಮ್ಮನೆ ಎಂದು ಆರಂಭಿಸಿದ “ಸಾಂಗತ್ಯ’ದ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜ.3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ ನಡೆಯುವ “ನಮ್ಮ ಚಿತ್ರೋತ್ಸವ’ ಕ್ಕೆ ಸಿಕ್ಕ ಪ್ರತಿಕ್ರಿಯೆ ಹಾಗೂ ನೋಂದಣಿ ನಿಜಕ್ಕೂ ಹೊಸ ಹುಮ್ಮಸ್ಸು ಮೂಡಿಸಿದೆ. ಈ ಹಿಂದೆ ಮಂಥನದ ಗೆಳೆಯರು ಮತ್ತು ನಾನು ಕೊಡಚಾದ್ರಿಯಲ್ಲಿ ಕುಳಿತು ಯೋಚಿಸುತ್ತಿದ್ದಾಗ ಹೊಳೆದ ಆಲೋಚನೆ ಇದು. ಅದೀಗ “ಸಾಂಗತ್ಯ’ ಎಂಬ ಹೊಸ ರೂಪ ಪಡೆದಿದೆ.

ನಾವು ನೋಂದಣಿಗೆ ಕೋರಿದ್ದೆವು. ನಾವು ನಿಗದಿಪಡಿಸಿರುವುದೇ ಮೂವತ್ತೈದು ಮಂದಿಗೆ ಮಾತ್ರ. ಆದರೆ ಸುಮಾರು ೪೫ ಕ್ಕೂ ಹೆಚ್ಚು ಮಂದಿ ಅವಕಾಶ ಕೋರಿದ್ದಾರೆ. ಹಾಗಾಗಿ ಒಮ್ಮೆ ಖಚಿತಪಡಿಸಿದವರನ್ನು ಮತ್ತೊಮ್ಮೆ ನಾವೇ ಕೇಳಿ ಹೆಚ್ಚುವರಿ ಹತ್ತು ಮಂದಿಯಲ್ಲಿ ಕೆಲವರಿಗಷ್ಟೇ ಅವಕಾಶ ಕಲ್ಪಿಸಲು ಸಾಧ್ಯವಾಗಿದೆ.

ಬಹಳ ಖುಷಿಯ ಸಂಗತಿಯೆಂದರೆ ಶೇ. 60 ಕ್ಕೂ ಹೆಚ್ಚು ಮಂದಿ ಎಲ್ಲರೂ ಹೊಸಬರು. ಕೇವಲ ಸಿನಿಮಾದ ಆಸಕ್ತಿಯಿಂದಲೇ ಒಟ್ಟಿಗೆ ಸೇರುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದಲೂ ಬರುತ್ತಿದ್ದಾರೆ. ನಿಜಕ್ಕೂ ನಮ್ಮ ಸಾಂಗತ್ಯದೊಂದಿಗೆ ನಡೆಯಲು ಹಲವರು ಸಿದ್ಧರಿದ್ದಾರೆ ಎಂಬುದೇ ಹೊಸ ಖುಷಿ.

ಸಂಖ್ಯೆಯನ್ನು ನಿಗದಿಪಡಿಸಿದ್ದಕ್ಕೆ ಒಂದು ಕಾರಣವಿದೆ. ನಾವು ಚಿತ್ರಗಳನ್ನು ನೋಡುತ್ತಿರುವ ಸ್ಟುಡಿಯೋ ೪೦ ಮಂದಿಗೆ ಹೇಳಿ ಮಾಡಿದ್ದು. ಸುಮಾರು ೩೫ ಮಂದಿ ಪಾಲ್ಗೊಳ್ಳುವವರಾದರೆ, ಸಂಘಟಕರು ಐದಾರು ಮಂದಿ. ಅಲ್ಲಿಗೆ ಕೊಠಡಿ ಹೌಸ್‌ಪುಲ್. ಇದೊಂದೇ ಕಾರಣವಲ್ಲ. ಆ ಕೊಠಡಿಯಲ್ಲಿ ಚಿತ್ರ ನೋಡುವ ಅನುಭವವೇ ವಿಶಿಷ್ಟ ಎಂಬುದು ನಮ್ಮ ಅಂದಾಜು.

ಇನ್ನೂ ಒಂದು ಕಾರಣವೆಂದರೆ, ಚಿತ್ರದ ಚರ್ಚೆಗೆ ಒಂದಿಷ್ಟೇ ಮಂದಿ ಇದ್ದರೆ ಸೂಕ್ತ ಎಂಬುದು ನಮ್ಮ ಅನಿಸಿಕೆಯೂ ಸಹ. ನಮ್ಮಲ್ಲಿ ಉಪನ್ಯಾಸಗಳು ಇರುವುದಿಲ್ಲ. ಭಾಷಣವೂ ಇರುವುದಿಲ್ಲ. ಅದರ ಬದಲಾಗಿ ಸಿನಿಮಾ ರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವ ಹಾಗೂ ಸಾಕಷ್ಟು ತಿಳಿದಿರುವ ಶ್ರೀ ಪರಮೇಶ್ ಗುರುಸ್ವಾಮಿ ಹಾಗೂ ರಂಗನಟ ಕೃಷ್ಣಮೂರ್ತಿ ಕವತ್ತಾರ್ ನಮ್ಮೊಂದಿಗೆ ಭಾಗವಹಿಸುತ್ತಿದ್ದಾರೆ. ಬೇರೊಂದು ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿರುವ ಶ್ರೀ ವಸುಧೇಂದ್ರ ಅವರು ಶೇ. 90 ರಷ್ಟು ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶ್ರೀ ಜಿ. ಎನ್. ಮೋಹನ್ ಅವರು, ಜ. 4 ರಂದು ಶಿವಮೊಗ್ಗದಲ್ಲೇ ಇರುವುದರಿಂದ ಕೆಲ ಹೊತ್ತು ನಮ್ಮೊಡನೆ ಕಳೆಯುವುದಾಗಿ ಹೇಳಿದ್ದಾರೆ. ಒಂದೆರಡು ನಿಮಿಷಗಳ ಉದ್ಘಾಟನೆಯನ್ನು ಜ. 3 ರಂದು ಬೆಳಗ್ಗೆ 9.30 ಕ್ಕೆ ಮಾಡಿಕೊಡಲು ಕುವೆಂಪು ಟ್ರಸ್ಟ್‌ನ ಹಾಗೂ ಕುಪ್ಪಳ್ಳಿಯಲ್ಲಿ ವ್ಯವಸ್ಥೆ ಕಲ್ಪಿಸಿ ಸಹಕರಿಸಿರುವ ಶ್ರೀ ಕಡಿದಾಳ್ ಪ್ರಕಾಶ್ ಒಪ್ಪಿದ್ದಾರೆ. ನಾವೇನೋ ಫಿಲ್ಮ್ ಗಳನ್ನು ಹೊತ್ತುಕೊಂಡು ಹೋಗುತ್ತೇವೆ. ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಕೊಪ್ಪದ ಸುಧೀರ್ ಕುಮಾರ್, ತೀರ್ಥಹಳ್ಳಿಯ ಮಧುಕರ್ ಮಯ್ಯ ಮತ್ತು ಗೆಳೆಯರು ಕೈಗೊಳ್ಳುತ್ತಿದ್ದಾರೆ. ಅದನ್ನು ಮರೆಯುವಂತಿಲ್ಲ. ಇವರೆಲ್ಲರಿಗೂ ಧನ್ಯವಾದಗಳು.

ಉಪನ್ಯಾಸಕ್ಕಿಂತಲೂ ಚಿತ್ರಗಳನ್ನು ನೋಡುತ್ತಾ, ಚರ್ಚಿಸುತ್ತಾ, ಅದರ ವಿಭಿನ್ನ ಆಯಾಮಗಳನ್ನು ತಿಳಿಯುತ್ತಲೇ ಸಿನಿಮಾವನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಮಾಡಿಕೊಳ್ಳಬೇಕೆಂಬ ನಂಬಿಕೆ ನಮ್ಮದು. ಅದಕ್ಕಾಗಿ ಈ ಪ್ರಯತ್ನ. ಇದೊಂದು ರೀತಿಯಲ್ಲಿ ಕಲಿಕೆಯೇ ಎಂಬುದು ನಮ್ಮ ನಂಬಿಕೆ.

ಒಂದಷ್ಟು ಮಾಹಿತಿ ಎಂದರೆ, ಎಂಟು ಚಿತ್ರಗಳ ಚರ್ಚೆಯ ನಿರ್ವಹಣೆಯನ್ನು ಎಂಟು ಮಂದಿ ಕೈಗೊಳ್ಳುತ್ತಾರೆ. ಪ್ರತಿ ಚಿತ್ರಕ್ಕೂ ಅರ್ಧ ಗಂಟೆಯಿಂದ ಒಂದು ಗಂಟೆವರೆಗೆ (ಚರ್ಚೆಯ ಓಘ ಆಧರಿಸಿ) ಚರ್ಚೆಗೆ ಅವಕಾಶವಿರುತ್ತದೆ. ಎಂಟು ವಿಭಿನ್ನವಾದ ಚಿತ್ರಗಳನ್ನು ಆಯ್ಕೆ ಮಾಡಿದ್ದು, ಅವೆಲ್ಲವೂ ಭಿನ್ನ ಭಿನ್ನ ನೆಲೆಯವೂ ಸಹ, ಭಾಷೆಯವೂ ಸಹ.

ವೇದಿಕೆ ಸಿದ್ಧಗೊಳ್ಳುತ್ತಿದೆ. ನೀವಿನ್ನು ಹೊರಡಬೇಕು. ಚಳಿ ಸಾಕಷ್ಟಿದೆಯಂತೆ (ಪಟ್ಟಣದಲ್ಲೇ ಸಾಕಷ್ಟು ಚಳಿ, ಇನ್ನು ಅರಣ್ಯದಲ್ಲಿ !) ಹೊದೆಯಲು ಎಷ್ಟಿದ್ದರೂ ಸಾಲದು. ಹೊರಡಲು ಸಿದ್ಧರಾಗಿ, ನಾವಂತೂ ನಿಮ್ಮನ್ನು ಅಲ್ಲಿ ನಿರೀಕ್ಷಿಸುತ್ತೇವೆ. ಚಿತ್ರ ಮೂಡುವ ಹೊತ್ತಿನಲ್ಲಿ ನೀವಲ್ಲಿರಿ.

ಚಿತ್ರೋತ್ಸವಕ್ಕೆ ನೋಂದಣಿ ಆರಂಭ

ಗೆಳೆಯರಿಗೆ ನಮಸ್ಕಾರ.
ಎಷ್ಟು ಚೆಂದದ ಊರು, ಪರಿಸರ ಎಲ್ಲವೂ. ಅದರಲ್ಲಿ ಕುಳಿತು ತಣ್ಣನೆಗೆ ಫಿಲ್ಮ್ ನೋಡೋದು ಅಂದ್ರೆ ನಿಜಕ್ಕೂ ಖುಷಿಯ ಸಂಗತಿ. ಈಗಾಗಲೇ ತಿಳಿಸಿದಂತೆ ಜನವರಿ 3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ “ಸಾಂಗತ್ಯ’ದ ಚಲನಚಿತ್ರೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಮೊನ್ನೆ ತಾನೇ ವಾದಿರಾಜ್, ಸುಧೀರ್ ಕುಮಾರ್, ಮಧುಕರ್ ಮಯ್ಯ ಸೇರಿದಂತೆ ಕುಪ್ಪಳ್ಳಿಗೆ ಹೋಗಿ ನೋಡಿ ಬಂದೆವು. ಪರಿಸರವಂತೂ ಅದ್ಭುತ.
ಜತೆಗೆ ನಮ್ಮ ಯೋಗ-ಭಾಗ್ಯ ನೋಡಿ. ಅಲ್ಲಿನ ದೃಶ್ಯ-ಶ್ರವ್ಯ ಸ್ಟುಡಿಯೋ ಡಿ. 29 ರಂದು ಉದ್ಘಾಟನೆಗೊಳ್ಳುತ್ತಿದೆ. ತದ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ ನಮ್ಮದೇ. ಅದೊಂದು ಹರ್ಷದ ಸಂಗತಿಯೇ ತಾನೇ.
ಎಂಟು ಬೇರೆ ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತೇವೆ. ನಮ್ಮೊಂದಿಗೆ ಚಿತ್ರ ಜಗತ್ತಿನ ಒಂದಿಬ್ಬರು ಮಂದಿ ಇರುವುದಂತೂ ಖಚಿತ. ಎರಡು ದಿನದ ಊಟ-ವಸತಿ ಎಲ್ಲವೂ ನಮ್ಮದೇ. ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಮುಕ್ತ ಮನಸ್ಸಿನೊಂದಿಗೆ ಚಿತ್ರ ವೀಕ್ಷಿಸಿ ಚರ್ಚಿಸಲು ಬನ್ನಿ. ಜ. 3 ರಂದು ಬೆಳಗ್ಗೆ 10 ಕ್ಕೆ ಚಿತ್ರೋತ್ಸವ ಆರಂಭ.

ನೋಂದಣಿ ಕಡ್ಡಾಯ
ನಮ್ಮ ಫೆಸ್ಟಿವಲ್‌ಗೆ ನೋಂದಣಿ ಕಡ್ಡಾಯ. ಕಾರಣವಿಷ್ಟೇ. ನಗರವಾದರೆ ಒಂದೈದು ಮಂದಿ ಹೆಚ್ಚು ಬಂದರೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬಹುದು. ಆದರೆ ಇದು ಶುದ್ಧ ಹಳ್ಳಿ. ಏನಾದರೂ ವ್ಯವಸ್ಥೆ ಕಲ್ಪಿಸಲು ಹದಿನೈದು-ಇಪ್ಪತ್ತು ಕಿ. ಮೀ ಗಳ ಪ್ರಯಾಣ ಅನಿವಾರ್‍ಯ. ಹಾಗಾಗಿ ನೋಂದಣಿ ಕಡ್ಡಾಯ.
ಇನ್ನೊಂದು ಮನವಿಯೆಂದರೆ ನಾವೀಗ ೩೫ ಮಂದಿಗೆ ಮಿತಿಗೊಳಿಸುತ್ತಿದ್ದೇವೆ. ಈ ಕಾರಣದಿಂದ ಒಮ್ಮೆ ನೋಂದಣಿ ಮಾಡಿಸಿದವರು ಒಂದುವೇಳೆ ಬರುವುದಿಲ್ಲವಾದರೆ ಮೊದಲೇ ತಿಳಿಸಿ. ಪ್ರಸ್ತುತ ಈಗಾಗಲೇ ೩೦ ಕ್ಕೂ ಹೆಚ್ಚು ಮಂದಿ ಕರೆ ಮಾಡಿ ತಮ್ಮ ಬರುವಿಕೆಯನ್ನು ತಿಳಿಸಿದ್ದಾರೆ. ನಮ್ಮ ಮಿತಿಯನ್ನು ಮೀರಿ ಕರೆಗಳು ಬಂದಿವೆ. ಒಂದುವೇಳೆ ನೀವು ಬರದಿದ್ದರೆ ಆ ಅವಕಾಶವನ್ನು ಬೇರೊಬ್ಬರಿಗೆ ನೀಡಬಹುದು ಎಂಬುದು ನಮ್ಮ ಅನಿಸಿಕೆಯಷ್ಟೇ.

ಇನ್ನೂರು ರೂ. ಅಷ್ಟೇ…
ನಮ್ಮ ಚಿತ್ರೋತ್ಸವಕ್ಕೆ ೨೦೦ ರೂ. ಶುಲ್ಕ ಇಟ್ಟಿದ್ದೇವೆ. ಅದನ್ನು ಅಲ್ಲಿಗೆ ಬಂದಾಗಲೇ ನೀಡಬಹುದು. ನಮ್ಮಲ್ಲಿ ಇಬ್ಬರು ಚಿತ್ರ ಜಗತ್ತಿನೊಂದಿಗಿನ ಮಂದಿಯೊಂದಿಗೆ ಎಂಟು ಚಿತ್ರಗಳನ್ನು ನೋಡುತ್ತೇವೆ. ಅದರ ಬಗ್ಗೆ ಚರ್ಚಿಸುತ್ತೇವೆ, ಹರಟುತ್ತೇವೆ. ಕವಿಶೈಲದ ಪರಿಸರದಲ್ಲಿ ಕೊಂಚ ಓಡಾಡಿಕೊಂಡು, ಹರ್ಷಪಟ್ಟುಕೊಂಡು ಎರಡು ದಿನ ಕಳೆಯುತ್ತೇವೆ.
ಈ ಮಧ್ಯೆ ಹಾಡುವವರು ಹಾಡುತ್ತಾರೆ, ಯಾರಾದರೂ ವಾದ್ಯಗಳನ್ನು ನುಡಿಸುವವರಿದ್ದರೆ ಅವರೂ ಸಮಯದ ಮಿತಿಯೊಳಗೇ ನುಡಿಸುತ್ತಾರೆ. ಇಂಥವೆಲ್ಲಾ ಇದ್ದದ್ದೇ.

ಬೆಂಗಳೂರಿಗರಿಗೆ
ಬೆಂಗಳೂರಿನಿಂದ ಹೊರಡುವವರಿಗೆ ಒಂದು ಅವಕಾಶವಿದೆ. ಬೆಂಗಳೂರಿನಿಂದಲೇ ಕುಪ್ಪಳ್ಳಿಗೆ ರಾತ್ರಿ 10.30 ಕ್ಕೆ ನೇರವಾದ ರಾಜಹಂಸ ಬಸ್ ಇದೆ. ಅದಕ್ಕೇ ಕಾದಿರಿಸಬಹುದು. ವಾಪಸು ಬರುವಾಗಲೂ ಆ ಬಸ್ ಸೌಲಭ್ಯ ಲಭ್ಯ. ಉಳಿದಂತೆ ಮೈಸೂರು ಭಾಗದವರು ಶಿವಮೊಗ್ಗಕ್ಕೆ ಬಂದು ತೀರ್ಥಹಳ್ಳಿಗೆ ತೆರಳಿ ಅಲ್ಲಿಂದ ಕೊಪ್ಪ ಮಾರ್ಗದಲ್ಲಿ ಕುಪ್ಪಳ್ಳಿಯಲ್ಲಿ (ಗಡಿಕಲ್ಲು) ಇಳಿಯಬಹುದು. ಮುಖ್ಯರಸ್ತೆಯಲ್ಲಿ ಇಳಿದು (ಮಂಗಳೂರು-ಶೋಲಾಪುರ ಹೈವೇ) ಎರಡು ಫರ್ಲಾಂಗ್ ನಡೆದರೆ ಹೇಮಾಂಗಣ ಲಭ್ಯ. ಹಾಗೆಯೇ ಹಂಪಿ-ಬಳ್ಳಾರಿ, ಹುಬ್ಬಳ್ಳಿ ಭಾಗದಿಂದ ಬರುವವರಿಗೂ ಶಿವಮೊಗ್ಗದ ಮೂಲಕವೇ ಸೂಕ್ತ.

ನೀವು ತರಬೇಕಾದದ್ದು
ಕವಿಶೈಲ ಅರಣ್ಯ ಪ್ರದೇಶ. ಹಾಗಾಗಿ ಉಳಿದೆಲ್ಲಾ ಪ್ರದೇಶಕ್ಕಿಂತ ಕೊಂಚ ಚಳಿ ಜಾಸ್ತಿ. ಆದ ಕಾರಣ ನಿಮ್ಮನ್ನು ಬೆಚ್ಚಗಿಡುವ ಉಡುಪು-ಹೊದಿಕೆ ತನ್ನಿ. ಒಂದು ಸಣ್ಣದೊಂದು ನೋಟು ಪುಸ್ತಕ, ಪೆನ್ನು ಜತೆಗಿರಲಿ. ಒಳ್ಳೆಯ ಆಲೋಚನೆಯನ್ನು ದಾಖಲಿಸಿಕೊಳ್ಳಬಹುದು.
ದೂರವಾಣಿ ಮೂಲಕ ಹೆಸರು ನೋಂದಾಯಿಸಲು (ಈಗಾಗಲೇ ಕರೆ ಮಾಡಿದ್ದರೆ ಅಂಥವರು ನಿಮ್ಮ ಬರುವಿಕೆಯನ್ನು ದಯವಿಟ್ಟು ಖಚಿತಪಡಿಸಿದರೆ ಅನುಕೂಲ) ಶ್ರೀ ಸುಧೀರ್ ಕುಮಾರ್ ಮುರೊಳ್ಳಿ 94482 45172, ಶ್ರೀ ಮಧುಕರ್  94481  54298 ಹಾಗೂ ಅರವಿಂದ ನಾವಡ 93433  81802.

ನಮ್ಮ ಚಿತ್ರೋತ್ಸವ-ಅಂತಿಮ ಕಂತು…

ನಮಸ್ಕಾರ. ಈಗಾಗಲೇ ತಿಳಿಸಿದಂತೆ ಜ. 3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ ಹಮ್ಮಿಕೊಳ್ಳುತ್ತಿರುವ ಚಿತ್ರೋತ್ಸವಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಅವಧಿಯವರು ಒಂದು ನೋಟ್ ಹಾಕಿ ಪ್ರಶಂಸಿದರು. ಹಾಗೆಯೇ ಹಲವು ಗೆಳೆಯರು ಸಲಹೆಗಳನ್ನು ನೀಡಿದರು. ಕೇಳಿದ್ದಕ್ಕೆ ಒಳ್ಳೆ ಚಿತ್ರಗಳ ಪಟ್ಟಿಯನ್ನೂ ಕೊಟ್ಟರು. ಆ ಪೈಕಿ ಕೆಲವನ್ನೂ ತೆಗೆದುಕೊಳ್ಳುತ್ತಿದ್ದೇವೆ.

ಇದೆಲ್ಲದಕ್ಕಿಂತ ಮೊದಲು ಒಂದನ್ನು ಸ್ಪಷ್ಟಪಡಿಸಬೇಕು. ಈ ಚಿತ್ರೋತ್ಸವದ ಹಿಂದೆ ನಾನೊಬ್ಬನೇ ಇಲ್ಲ. ಮಂಥನದ ವಾದಿರಾಜ್ ಮತ್ತು ಹಲವು ಗೆಳೆಯರು ಇದ್ದಾರೆ. ಚಿತ್ರೋತ್ಸವದಂಥ ಚಟುವಟಿಕೆಗಳಿಗೆಂದೇ ನಮ್ಮ ಗುಂಪಿಗೆ ಇಟ್ಟುಕೊಂಡ ಹೊಸ ಹೆಸರು ‘ಸಾಂಗತ್ಯ’-ಜತೆಗಾಗಿ ನಾಲ್ಕು ಹೆಜ್ಜೆ. ಚಿತ್ರೋತ್ಸವ ನಡೆಸುತ್ತಿರುವುದೂ ‘ಸಾಂಗತ್ಯ’ದ ಮೂಲಕವೇ. ಒಟ್ಟು ಎಂಟು ವಿಭಿನ್ನವಾದ ಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ವ್ಯವಸ್ಥೆಯೂ ಆರಂಭವಾಗಿದೆ. ಮೂವತ್ತರಿಂದ ಮೂವತ್ತೈದು ಮಂದಿಯನ್ನು ತೊಡಗಿಸಿಕೊಳ್ಳೋಣ ಎಂದಿದ್ದೇವೆ.

ಜನವರಿ 3 ರ ಬೆಳಗ್ಗೆ 9 ಕ್ಕೆ ಚಿತ್ರೋತ್ಸವಕ್ಕೆ ಚಾಲನೆ. ನಂತರ ಚಿತ್ರ, ಚರ್ಚೆ, ಅಭಿಪ್ರಾಯ ಮಂಥನವಷ್ಟೇ. ಜ. 4 ರ ಸಂಜೆ 5 ರಷ್ಟೊತ್ತಿಗೆ ನಮ್ಮ ನಮ್ಮ ಊರಿಗೆ ಹೊರಡುವುದು. ಮಾರ್ಗ ಬಹಳ ಸರಳ. ಶಿವಮೊಗ್ಗಕ್ಕೆ ಬಂದು ಅಲ್ಲಿಂದ ತೀರ್ಥಹಳ್ಳಿಗೆ -60 ಕಿ.ಮೀ- ಬರಬೇಕು. ಅಲ್ಲಿಂದ ಕೊಪ್ಪ ಮಾರ್ಗವಾಗಿ ಕುಪ್ಪಳ್ಳಿಗೆ ಬಸ್ ಹಿಡಿಯಬೇಕು. ಗಡಿಕಲ್ಲು ಎಂಬಲ್ಲಿ ಇಳಿದರೆ ಹತ್ತಿರದಲ್ಲೇ ಹೇಮಾಂಗಣ. ಹಸಿರಿನ ಮಧ್ಯೆ ಸುಮಾರು ಎರಡು ಫರ್ಲಾಂಗ್ ನಡೆಯುವುದು ಕಷ್ಟವಾಗದು. ಮಾಹಿತಿಗೆ ಹಾಗೂ ಹೆಸರು ನೋಂದಾಯಿಸಲು ಸುಧೀರ್ ಕುಮಾರ್- 94482 45172, ಮಧುಕರ್-94481 54298. ನನ್ನ ಮೊಬೈಲ್ ಸಂಖ್ಯೆ 93433 81802.

ದೇವರ ಮಕ್ಕಳು ನಾವೆಲ್ಲಾ…

ಮತ್ತೆ ಒಂದು ಚಿತ್ರದ ಬಗ್ಗೆ ಹೇಳಬೇಕೆಂದಿದ್ದೆ. ಬೇಡ ಎನಿಸಿ ಪಾತ್ರದ ಬಗ್ಗೆ ಹೇಳುತ್ತಿದ್ದೇನೆ. ನನ್ನೊಳಗೆ ಕಾಡಿದ ಪಾತ್ರ ಹಲವಿವೆ. ಆದರೆ ನನ್ನೊಳಗೆ ಅಚ್ಚೊತ್ತಿದ್ದದ್ದು ಕೆಲವೇ ಕೆಲವು. ಅದರಲ್ಲೂ “ದೇವರ ಮಕ್ಕಳು’ ಚಿತ್ರದಲ್ಲಿ ಭಿಕ್ಷೆಯ ತಟ್ಟೆ ಹಿಡಿದು ಬರುವ ಪುಟ್ಟ ಹುಡುಗನ ಪಾತ್ರ ಇಂದಿಗೂ ನನ್ನನ್ನು ಬಿಟ್ಟಿಲ್ಲ. ಅದು ಏಕೋ ನನಗೂ ಗೊತ್ತಿಲ್ಲ. ರಸ್ತೆಯಲ್ಲಿ ನಡೆಯುವಾಗಲೆಲ್ಲಾ ಬಿಂಬಗಳಂತೆ ಕಾಡುತ್ತಾನೆ. ಸತ್ಯವಾಗಲೂ ಆ ಪಾತ್ರ ನಿರ್ವಹಿಸಿದ ಹುಡುಗನಾಗಲೀ, ಅವನ ವಿವರವಾಗಲೀ ತಿಳಿದುಕೊಂಡೂ ಇಲ್ಲ.

ಇತ್ತೀಚೆಗೆ ಗೆಳೆಯ ಪ್ರವೀಣನ ಜತೆಗೆ ಡಿವಿಡಿ ಅಂಗಡಿಗೆ ಹೋದಾಗ ಅಲ್ಲಿ “ದೇವರ ಮಕ್ಕಳು’ ವಿಸಿಡಿ ಸಿಕ್ಕಿತು. ಕೊಂಡು ತಂದು ಮತ್ತೆ ನೋಡಿದೆ. ಆ ಚಿತ್ರವಿಡೀ ನೋಡಿದ ಮೇಲೂ ಕಾಡಿದ್ದು ಆ ಸನ್ನಿವೇಶ ಮತ್ತು ಆ ಹುಡುಗ. ಸರಿಯಾಗಿ ನೆನಪಿಲ್ಲ. ನಾಲ್ಕನೇ ಕ್ಲಾಸು. ಮನೆಯಲ್ಲಿ ಫಿಲ್ಮ್ ನೋಡಲು ಬಿಡುತ್ತಿರಲಿಲ್ಲ. ಕನ್ನಡ ಫಿಲ್ಮ್ ನೋಡಬೇಕೆಂದರೆ ದೆಹಲಿಯ ದೂರದರ್ಶನದವರು ಸರದಿಯ ಮೇಲೆ ನಾಲ್ಕು ತಿಂಗಳಿಗೊಮ್ಮೆ ಹಾಕುವುದನ್ನೇ ಕಾಯಬೇಕು. ಅದರಲ್ಲೂ ನಮ್ಮ ಮನೆಯಲ್ಲಿ ಟಿ. ವಿ. ಇರಲಿಲ್ಲ. ನಮ್ಮ ಕೇರಿಯ ಕೊನೇ ಮನೆಗೆ ಹೋಗಬೇಕೆಂದರೆ ದೊಡ್ಡಮ್ಮನ ಪರ್ಮಿಷನ್ ಬೇಕಿತ್ತು. ಅವಳು ಕೊಡುತ್ತಿದ್ದಳು, ಆಮೇಲೆ ಅಪ್ಪನಲ್ಲಿ “ಬರೀ ಟಿ. ವಿ. ನೋಡುತ್ತಾನೆ’ ಎನ್ನುತ್ತಿದ್ದಳು. ಅದೇನೇ ಇರಲಿ, ಹಾಕಿದ ಚಿತ್ರಗಳನ್ನೇ ಮತ್ತೆ ಹಾಕುತ್ತಿದ್ದಾಗಲೂ ಬೋರ್ ಆಗುತ್ತಿರಲಿಲ್ಲ. ನನ್ನ ನೆನಪಿನಂತೆ “ಋಷ್ಯಶೃಂಗ’ ಚಿತ್ರ ನಾಲ್ಕು ಸಾರಿ ಬಂದಿರಬೇಕು.

ಗಣಪತಿ ಹಬ್ಬದ ಸಂಭ್ರಮ. ಈ ಹಬ್ಬ ಬಂತೆಂದರೆ ನಮಗೆ ಸಿನಿಮಾ ಭೋಜನ. ಕನಿಷ್ಠ ಎರಡು ಸಿನಿಮಾ ಗ್ಯಾರಂಟಿ. ಅದರಲ್ಲೂ ರಾಜ್‌ಕುಮಾರದ್ದೇ ಹೆಚ್ಚು. ರಾತ್ರಿ ೧೦ ರ ಮೇಲೆ ರಸ್ತೆಗೇ ಅಡ್ಡಲಾಗಿ ಸ್ಕ್ರೀನ್ ಕಟ್ಟಿ, ಸಿನಿಮಾ ತೋರಿಸುತ್ತಿದ್ದರು. ನಾವೆಲ್ಲಾ ಮನೆಯಿಂದ ರಗ್ಗು ತಂದು ಹೊದ್ದುಕೊಂಡು ರಸ್ತೆಯಲ್ಲೇ ಕುಳಿತು ಸಿನಿಮಾ ನೋಡುತ್ತಿದ್ದೆವು. ಮುಗಿಯುವಾಗ ಬೆಳಗಿನ ಜಾವ ಎರಡು ಗಂಟೆ. ಯಕ್ಷಗಾನ ಪ್ರಸಂಗ (ಆಟ) ನೋಡಿಕೊಂಡು ಮಧ್ಯೆ ಒಂದು ಚಹಾ ಕುಡಿಯಲು ಹೋಗುವಾಗಿನ ಮನಸ್ಥಿತಿಯೇ ನಮ್ಮದಾಗಿರುತ್ತಿತ್ತು. ಆದರೆ ಚಹಾ ಕೊಡಿಸುವವರಿಲ್ಲ ಎನ್ನಿ.

ಸರಿ, “ದೇವರ ಮಕ್ಕಳು’ ಚಿತ್ರ ಶುರುವಾಯಿತು. ಕಣ್ಣಿಗೆ ನಿದ್ದೆ ಹತ್ತುವ ಕಾಲವಷ್ಟೇ ಅದು. ಕಷ್ಟಪಟ್ಟು ತಡೆದುಕೊಂಡು ನೋಡುತ್ತಿದ್ದೆ. ಅಷ್ಟರಲ್ಲಿ ಬಂದದ್ದು ಆ ಹಾಡು ಮತ್ತು ಸನ್ನಿವೇಶ. “ದೇವರ ಮಕ್ಕಳು ನಾವೆಲ್ಲಾ…ತಿರುಕ..ಧನಿಕ ಬೇರಿಲ್ಲ..ಓ ಅಯ್ಯಾ.. ಅಮ್ಮಯ್ಯ..ಧರ್ಮವೇ ತಾಯಿ ತಂದೆ, ಕಾಸೊಂದ ನೀಡು ಶಿವನೇ…ನಿನ್ನಂತ ದಾತರೇ…’ ಹೀಗೆ ಪದ್ಯ ಸಾಗುತ್ತದೆ. ನಿಮ್ಮಂತ ದಾತರಾದವರೇ ಇಲ್ಲವೆಂದರೆ ನಾವು ಹೋಗುವುದಾದರೂ ಎಲ್ಲಿಗೆ ಎಂದು ಕೇಳುವ ಆ ಹುಡುಗನ ದೀನದನಿ ನನ್ನ ಕಣ್ಣಲ್ಲಿ ಹನಿ ತರಿಸಿತು. ಆಗಿನ ನೆನಪು ಅಚ್ಚೊತ್ತಿದಂತಿದೆ. ಆ ಪಾತ್ರದಲ್ಲಿ ನಾನು ಇದ್ದಂತಾಗಿ “ದೇವರೇ, ಇಂಥ ಸ್ಥಿತಿ ಕೊಡಬೇಡಪ್ಪಾ’ ಎಂದು ಕೇಳಿಕೊಂಡಿದ್ದೆ.

ಅಂದಿನಿಂದ ಇಂದಿನವರೆಗೂ ಎಲ್ಲೇ ಆಗಲೀ, ಚಿಕ್ಕ ಮಕ್ಕಳು ಭಿಕ್ಷೆ ಬೇಡಲು ಬಂದಾಗಲೆಲ್ಲಾ ಆ ದೃಶ್ಯ ಕಣ್ಣೆದುರು ನಿಲ್ಲುತ್ತದೆ. ಆ ದೊಡ್ಡ ಸ್ಕ್ರೀನ್, ಅದರಲ್ಲಿ ಆ ಹಾಡು, ಆ ಹುಡುಗ ಎಲ್ಲದರ “ನೆಗೆಟಿವ್’ ಬಿಚ್ಚಿಕೊಳ್ಳತೊಡಗುತ್ತವೆ. “ನಾವು ಮಕ್ಕಳಿಗೆ ಒಮ್ಮೆ ಭಿಕ್ಷೆ ಹಾಕಿದರೆ ಅದೇ ಅವರಿಗೆ ಅಭ್ಯಾಸ ಆಗುತ್ತದೆ’ ಎಂಬ ಬೌದ್ಧಿಕ ವಾದವೂ ನನ್ನ ಮುಂದೆ ಮಂಕಾಗಿ ತೋರಿ ಕೈಯಲ್ಲಿದ್ದದ್ದನ್ನು ಕೊಡುತ್ತೇನೆ. ಒಮ್ಮೊಮ್ಮೆ ಆ ವಾದ ಸರಿಯೆಂದೆನಿಸಿ ದುಡ್ಡು ಹಾಕದೇ “ಹೋಗು…ಓದು’ ಎಂದು ಹೇಳಿದ್ದೂ ಇದೆ. ಆದರೆ ಅವನ ದೀನದನಿ, ನಿರೀಕ್ಷೆಯ ಕಣ್ಣು-ಮನಸ್ಸು ಎಲ್ಲವೂ ನನ್ನ ನೆನಪಿನ ಅಧ್ಯಾಯವನ್ನು ಒದ್ದೆ ಮಾಡುತ್ತಲೇ ಇರುತ್ತವೆ. ಒದ್ದೆಯಾದ ನೆನಪುಗಳನ್ನು ಜತನದಿಂದ ಕಾಪಾಡುವ ಎಚ್ಚರವನ್ನೂ ಹೇಳುತ್ತವೆ.

ನನ್ನೊಳಗಿನ ಅರಿವನ್ನು ತೋರಿಸುವ ಪುಟ್ಟದೊಂದು ಮೋಂಬತ್ತಿಯಂತೆ ಬೆಳಗುತ್ತಿರುತ್ತದೆ ಆ ಹಾಡು. “ದೇವರು ಮಕ್ಕಳು ನಾವೆಲ್ಲಾ..’

ಸಂಬಂಧಗಳ ಸೊಗಸಾದ ಪೋಟ್ರೈಟ್ !

ಮ್ಯಾಜಿಕ್ ಕಾರ್ಪೆಟ್‌ನಲ್ಲಿ ಸುಪ್ರೀತ್ ಚಿಲ್ಡ್ರನ್ ಆಫ್ ಹೆವನ್ (ಮಜಿದ್ ಮಜ್ದಿ) ಚಿತ್ರದ ಬಗ್ಗೆ ಹೇಳಿದ್ದಾರೆ. ನನ್ನ ಭಾವಕೋಶದೊಳಗೆ ತೀರಾ ಕಾಡಿದ ಚಿತ್ರವದು. ಯಾಕೋ, ನನಗೆ ಸ್ವಲ್ಪ ಇರಾನಿ ಚಿತ್ರಗಳೆಂದರೆ ಇಷ್ಟ. ಅದಕ್ಕೆ ಕಾರಣ ಹಲವಿವೆ. ಈ ಹಿಂದೆಯೂ ಒಂದು ಇರಾನಿ (ಸೈಲೆನ್ಸ್) ಚಿತ್ರದ ಬಗ್ಗೆಯೇ ಬರೆದಿದ್ದೆ.  ಇತ್ತೀಚೆಗೆ ನನ್ನನ್ನು ತೀರಾ ಬಾಧಿಸಿದ ಚಿತ್ರವದು.

ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಈ ಚಿತ್ರವನ್ನು ನೋಡಿದ್ದೆ. ದೊಡ್ಡ ಸ್ಕ್ರೀನ್‌ನಲ್ಲಿ ನೋಡಿದಾಗ ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು ನಿಂತಿತ್ತು !

ವಾಸ್ತವವಾಗಿ ಅಂದಿನಿಂದ ಇರಾನಿ ಚಿತ್ರದ ಬಗೆಗೆ ಬೆರಗು ಬೆಳೆಸಿಕೊಂಡದ್ದು. ಮಜಿದ್ ಮಜ್ದಿಯ ಎಲ್ಲ ಚಿತ್ರಗಳನ್ನು ನೋಡುವ ಶಪಥ ತೊಟ್ಟು ಬಹುಪಾಲನ್ನು ಮುಗಿಸಿದ್ದೇನೆ. ಇನ್ನೂ ನೋಡುವುದಿದೆ. ಮೊನ್ನೆ ಗೆಳತಿಯೊಬ್ಬಳೊಂದಿಗೆ ಇದೇ ವಿಷಯವಾಗಿ ಮತ್ತು ಇದೇ ಚಿತ್ರದ ಬಗ್ಗೆ ಹರಟುತ್ತಿದ್ದೆ.

ನಮ್ಮ ಕನ್ನಡ ಚಿತ್ರಗಳಲ್ಲಿ ವಿಷಾದವನ್ನು ಕಟ್ಟಿಕೊಡಲು ಬರುವುದೇ ಇಲ್ಲ ಎನ್ನುವುದು ನನ್ನ ತಕರಾರು. ನನ್ನ ದೃಷ್ಟಿಯಲ್ಲಿ ಎಂದಿಗೂ ದುಃಖ ವಿಷಾದವಲ್ಲ. ಅಳುವುದು ವಿಷಾದಕ್ಕೆ ಸಮನಲ್ಲ. ವಿಷಾದ ನಮ್ಮನ್ನು ಗಂಟಲು ಉಬ್ಬಿಸುವಂಥ ಸ್ಥಿತಿ. ಅಳು ಬಂದು ಧಾರೆಯಾಗಿ ಇಳಿಯುವಂಥ ಸ್ಥಿತಿ ; ಇಳಿಯುವುದಿಲ್ಲ. ಮನದೊಳಗೆಲ್ಲಾ ಒಂದು ತೀರಾ ತಣ್ಣನೆಯ ಸ್ಪರ್ಶವನ್ನು ಕೊಟ್ಟು ವಿಷಣ್ಣನಾಗಿಸಿಬಿಡುವಂಥದ್ದು. ಬಹಳಷ್ಟು ಬಾರಿ ಅತ್ತು ಹಗುರಾಗುವ ಪ್ರಕ್ರಿಯೆ ನಮ್ಮ ವಿಷಾದದ ಸನ್ನಿವೇಶಗಳಲ್ಲಿ ನಡೆಯುತ್ತದೆ. ವಾಸ್ತವವಾಗಿ ಅದಲ್ಲ.

ನಮ್ಮಲ್ಲಿ ವಿಷಾದವೆಂದರೆ ಗೊಳೋ ಎಂದು ಅಳಿಸಿಬಿಡುತ್ತೇವೆ. ಗಿರೀಶ್ ಕಾಸರವಳ್ಳಿಯವರ “ದ್ವೀಪ’ದಲ್ಲೂ ಸ್ಥಳಾಂತರದ ಅನಿವಾರ್ಯದಿಂದ ಹುಟ್ಟಿದ ವಿಷಾದ ಮಳೆಯಂತೆಯೇ ಅಳುವಾಗಿ ಮಾರ್ಪಡುತ್ತದೆ. ಇವುಗಳನ್ನೆಲ್ಲಾ ಬ್ಯಾಕ್‌ಡ್ರಾಪ್‌ನಲ್ಲಿಟ್ಟುಕೊಂಡು ನೋಡಿದಾಗ “ಸ್ವರ್ಗದ ಮಕ್ಕಳು’ ಅದ್ಭುತ ಚಿತ್ರವೆನಿಸುತ್ತದೆ. ಇದುವರೆಗೆ ಇದನ್ನು ಎಂಟು ಬಾರಿ ನೋಡಿದ್ದೇನೆ. ನೋಡಿದಾಗಲೆಲ್ಲಾ ಮನಸ್ಸಿನೊಳಗೆ ಹೊಸ ಹುರುಪು ತುಂಬಿದೆ. ಸುಂದರ ಚಿತ್ರ ಬದುಕಿಗೆ ಭಾಷ್ಯ ಬರೆಯಬಲ್ಲದು ಎಂಬುದೊಂದು ಮಾತಿದೆ. ಅದರಂತೆಯೇ ಇದು ಭಾಷ್ಯ ಬರೆದ ಚಿತ್ರವೇ ಹೌದು.

ಕಳೆದ ಶಿವರಾತ್ರಿಯಂದು ಕೊಡಚಾದ್ರಿ ಬೆಟ್ಟದ ಮೇಲಿನ ಭಟ್ಟರ ಮನೆಯಲ್ಲಿ ನಾವೆಲ್ಲಾ ಒಂದಷ್ಟು ಮಂದಿ (ವಾದಿರಾಜ್, ಹರ್ಷ, ವಿಘ್ನೇಶ್, ಪ್ರವೀಣ್, ಚೈತನ್ಯ, ಸಿಂಚನ, ಸಿರಿ, ಲಕ್ಷ್ಮೀನಾರಾಯಣ, ಗಿರಿಧರ್, ಕಾರ್ತಿಕ್, ಮಹೇಂದ್ರ ಮತ್ತಿತರರು) ಇದೇ ಚಿತ್ರವನ್ನು ನೋಡಿದೆವು ; ಚರ್ಚಿಸಿದೆವು. ಒಂದು ಒಳ್ಳೆಯ ಸಂವಾದ. ಚೇತನಾರಿಗೂ ಈ ಚಿತ್ರ ನೋಡುವಂತೆ ಸಲಹೆ ನೀಡಿದ್ದೆ. ನನಗೆ ಇರಾನಿ ಚಿತ್ರ ಇಷ್ಟವಾಗುವ ಕಾರಣ ತಿಳಿಸುತ್ತೇನೆ. ಬಹುಶಃ ಅದೇ ಈ ಸ್ವರ್ಗದ ಮಕ್ಕಳ ಚಿತ್ರದ ಬಗೆಗಿನ ವ್ಯಾಖ್ಯಾನವಾಗಬಹುದೇನೋ? ಗೊತ್ತಿಲ್ಲ.

ಮನುಷ್ಯ ಸಂಬಂಧಗಳಲ್ಲಿನ ಸೂಕ್ಷ್ಮತೆ, ನಾಜೂಕುತನವನ್ನು ಇರಾನಿ ನಿರ್ದೇಶಕರು ಅತ್ಯಂತ ನಯವಾಗಿ, ಸೊಗಸಾಗಿ ಕಟ್ಟಿಕೊಡಬಲ್ಲರು. ಅದರಲ್ಲೂ ಮಕ್ಕಳ ಮುಗ್ಧ ಭಾವನೆಗಳಲ್ಲಿನ ಹೂಗಳಂಥ ಕೋಮಲತೆಯನ್ನು ಹಾಗೆಯೇ ತಾಜಾ ತಾಜಾ ಆಗಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಚಿತ್ರದಲ್ಲಿ ಎಲ್ಲೆಲ್ಲೂ ಕಾಣುವುದು ಅಷ್ಟೇ, ಮನುಷ್ಯ ಸಂಬಂಧಗಳ ನಿರ್ವಹಣೆ. ಅದ್ರಲ್ಲೂ ನಿರ್ದೇಶಕ ತೋರಿದ ನಾಜೂಕುತನ. ಇದನ್ನು ಪುಷ್ಟೀಕರಿಸುವಂಥ ಎಷ್ಟೊಂದು ದೃಶ್ಯಗಳು ಬೇಕು ಆ ಚಿತ್ರದಲ್ಲಿ. ಪ್ರತಿ ಕ್ಷಣದಲ್ಲೂ ಆ ಕಾಳಜಿಯೇ ಇಡೀ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅಂಥ ಕೆಲವು ಸನ್ನಿವೇಶಗಳನ್ನು ಹೇಳುತ್ತೇನೆ. ಇಲ್ಲಿ ಜಹ್ರಾ ಎಂದರೆ ಶುಭ್ರ, ಹೂವ ಎಂದೆಲ್ಲಾ ಅರ್ಥವಿದೆ. ಇವು ಸ್ವರ್ಗದ ಹೂವುಗಳೇ !
 
ಮೊದಲಿಗೆ ಅಲಿ (ಅಣ್ಣ)ಯ ಮನೆಯಲ್ಲಿ ಟೀ ಗೆ ಸಕ್ಕರೆ ಇರೋದಿಲ್ಲ. ಅವನಪ್ಪ ಮಸೀದಿಯಲ್ಲಿ ಟೀ ಸರಬರಾಜು ಮಾಡುವವ. ಅದಕ್ಕೆ ಮನೆಯಲ್ಲಿ ಕುಳಿತು ಸಕ್ಕರೆ ಪುಡಿ ಮಾಡುತ್ತಿರುತ್ತಾನೆ. ಆಗ ಅಲಿಯ ತಂಗಿ ಜಹ್ರಾ, ಈ ಸಕ್ಕರೆ ಇದೆಯಲ್ಲಾ ಎಂದು ಅಪ್ಪನಿಗೆ ಕೇಳುತ್ತಾಳೆ. ಆಗ ಅಪ್ಪ “ಇದು ಮಸೀದಿಯದ್ದು, ಹಾಗೆ ಬಳಸುವಂತಿಲ್ಲ’ ಎಂದು ಹೇಳುತ್ತಾನೆ. ಇದು ಪವಿತ್ರತೆ ಇತ್ಯಾದಿಗಿಂತಲೂ ಪ್ರಾಮಾಣಿಕತೆಯನ್ನು ಅನಾವರಣಗೊಳಿಸುವ ಸನ್ನಿವೇಶ.

ಎರಡನೇ ಸನ್ನಿವೇಶದಲ್ಲಿ ತಾನು ಕಳೆದುಕೊಂಡ ಷೂ ತನ್ನ ಸಹಪಾಠಿಯೊಬ್ಬಳಲ್ಲಿ ಇದೆ ಎಂದು ಜಹ್ರಾಳಿಗೆ ತಿಳಿಯುತ್ತದೆ. ಜಹ್ರಾಳಲ್ಲಿ ಒಂದು ಬಗೆಯ ಸಿಟ್ಟು ಬರಿಸಿರುತ್ತೆ. ಆದರೆ ಒಮ್ಮೆ ಅಣ್ಣ ತಂದುಕೊಟ್ಟ ಮುದ್ದಿನ ಪೆನ್ನನ್ನು ಜಹ್ರಾ ತರುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಬಿಟ್ಟಿರುತ್ತಾಳೆ. ಅವಳ ಹಿಂದೆಯೇ ಬರುವ ಅವಳ ಸಹಪಾಠಿ ಹುಡುಗಿ ಅದನ್ನು ಎತ್ತಿಕೊಂಡು ಮರುದಿನ ಅವಳಿಗೆ ನೀಡುತ್ತಾಳೆ. ಆಗ ಜಹ್ರಾ ಅವಳನ್ನು ವಿಶ್ವಾಸದಿಂದ ನೋಡುವ ಬಗೆಯೇ ಅನನ್ಯ. ಇದೊಂದು ದೃಶ್ಯದಲ್ಲಿ ಇಬ್ಬರೊಳಗೂ ಕ್ಷೀಣಿಸಬಹುದಾದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾನೆ. ಅಂದಿನಿಂದ ಅವಳ ಬಗ್ಗೆ ಜಹ್ರಾ ಏನೂ ಅಂದುಕೊಳ್ಳುವುದಿಲ್ಲ.

ಇಂಥದ್ದೇ ಇನ್ನೊಂದು ಸನ್ನಿವೇಶ ಹೇಳುತ್ತೇನೆ. ಅಲಿ ಚೆನ್ನಾಗಿ ಅಂಕ ಗಳಿಸಿದ್ದಕ್ಕೆ ಅವನ ಮೇಸ್ಟ್ರು ಒಂದು ಚೆನ್ನಾದ ಪೆನ್ನನ್ನು ಉಡುಗೊರೆಯಾಗಿ ಕೊಟ್ಟಿರುತ್ತಾರೆ. ಶಾಲೆಯಿಂದ ಬರುವಾಗ ಪಕ್ಕದ ಮನೆಗೆ ಹೋಗ್ತಾ ಇದ್ದ ಜಹ್ರಾ ಸಿಗುತ್ತಾಳೆ ರಸ್ತೆಯಲ್ಲಿ. ಅಲಿ, ತಗೊಳೆ ತಂಗಿ ಈ ಪೆನ್ನು ನಿನಗೆ ಎಂದು ತನ್ನ ಹೊಸ ಪೆನ್ನನ್ನು ಕೊಡುತ್ತಾನೆ. ಆಕೆಗೆ ನಂಬಿಕೆ ಬರುವುದಿಲ್ಲ. ಆ ಪೆನ್ನನ್ನು ಕೈಯಲ್ಲಿಟ್ಟುಕೊಂಡು ನೋಡಿ “ಚೆನ್ನಾಗಿದೆಯಲ್ಲೋ’ ಎನ್ನುತ್ತಾಳೆ. ಆಗ ಅಣ್ಣ ಅಲಿ “ಅದು ನಿನಗೇ’ ಎಂದಾಗ ಅಚ್ಚರಿ ಮತ್ತು ಆನಂದದಿಂದ “ನನಗಾ, ನನ್ನನನ್ಗಾ’ ಎಂದು ಕೇಳುತ್ತಾಳೆ. ಆಗ ಅಲಿ, “ಹೌದೇ, ನಿನಗೇ’ ಎಂದಾಗ ಅವಳ ಮುಖದಲ್ಲಿ ನಗೆ ನದಿಯಲ್ಲಿ ಚಿಕ್ಕದೊಂದು ಗಾಳಿ ಹೊರಡಿಸುವ ತರಂಗದಂತೆ ಅರಳುತ್ತದೆ. ಜತೆಗೆ, “ಅಣ್ಣಾ, ನಾನು ಅಪ್ಪನ ಬಳಿ (ಷೂ ಕಳೆದದ್ದನ್ನು) ಹೇಳುವುದಿಲ್ಲ’ ಎಂದು ಹೇಳುತ್ತಾಳೆ. ಆಗ ಅಣ್ಣ ಹೇಳುವ ವಿಶ್ವಾಸದ ಮಾತು “ನನಗೆ ಗೊತ್ತು ಕಣೆ. ನೀನು ಹಾಗೆ ಹೇಳುವುದಿಲ್ಲ’ ಎಂದು ಹೇಳಿ ಮನೆಗೆ ಹೋಗುತ್ತಾನೆ. ಇದು ಸಂಬಂಧಗಳ ನಿರ್ವಹಣೆ.

ಅಪ್ಪನೊಂದಿಗೆ ಹೊಸ ಕೆಲಸ ಹುಡುಕಿಕೊಂಡು ಬಂದವನಿಗೆ ಕೆಲಸ ಸಿಗುವುದು ಅಂಥದೊಂದು ಸಂಬಂಧದ ಎಳೆಯಿಂದಲೇ. ಅಪ್ಪ-ಅಮ್ಮನಿಲ್ಲದೇ ಅಜ್ಜನೊಂದಿಗೆ ಬದುಕುವ ತಬ್ಬಲಿ ಮಗು ಮತ್ತು ಇವನೊಡನೆ ಸಂಬಂಧ ಬೆಳೆಯುವಂಥದ್ದು.”ನಿಮ್ಮ ಮನೆ ತೋಟದಲ್ಲಿ ಕೆಲಸವಿದೆಯೇ?’ ಎಂದು ಕೇಳುವಾಗ ಅತ್ತಲಿಂದ ಬಾಗಿಲ ಒಳಗಿಂಡಿಯಿಂದಲೇ ಆ ಮಗು “ನೀನ್ಯಾರು, ನಿನ್ನ ಹೆಸರೇನು, ಎಷ್ಟನೇ ಕ್ಲಾಸು’ ಹೀಗೆಲ್ಲಾ ಕೇಳಿ ಪರಿಚಯಿಸಿಕೊಳ್ಳುತ್ತದೆ. ನಂತರ ಅಪ್ಪ ಕೆಲಸ ಮಾಡುವಾಗ ಅಲಿ ಆ ಮಗುವಿನೊಂದಿಗೆ ಆಟವಾಡುತ್ತಾನೆ. ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ಮಧ್ಯೆ ಏರ್ಪಡುವ ಸಂಬಂಧ ಸೂಕ್ಷ್ಮ. ಮಲಗಿದ ಆ ಮಗುವನ್ನು ಬಿಟ್ಟು ಹೋಗುವಾಗ ಅವನೊಳಗೆ ಆವರಿಸಿಕೊಳ್ಳುವ ವಿಷಾದವನ್ನೂ ಮುಖದ ಭಾವ ಹೇಳುತ್ತದೆ. ಈ ಮೂಲಕ ನಗರದ ಸಂಬಂಧಗಳ ನೆಲೆಯನ್ನೂ ಅನಾವರಣಗೊಳಿಸುತ್ತಾನೆ.

ಹೀಗೆ ಮನುಷ್ಯ ಸಂಬಂಧಗಳ ನಿರ್ವಹಣೆ ಕುರಿತೇ ಬರೆಯಲು ಬಹಳಷ್ಟಿದೆ. ಇಡೀ ಚಿತ್ರದಲ್ಲಿ ಅಣ್ಣ-ತಂಗಿಯರಿಬ್ಬರನ್ನೇ ಇಟ್ಟುಕೊಂಡು ಒಂದು ಸುಂದರವಾದ ಕಥೆ ಹೆಣೆಯುವ ಮಜಿದ್ ಮಜ್ದಿ ಎಷ್ಟು ಅದ್ಭುತವಾದ ನಿರ್ದೇಶಕ ಎನಿಸಿ ಬಿಡುತ್ತಾನೆ. ಪ್ರತಿ ಚಿತ್ರದಲ್ಲೂ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನೇ ಹೇಳುತ್ತಾ, ಅದನ್ನು ಹಾಗೆಯೇ ಗಟ್ಟಿಗೊಳಿಸುವ ಬಗೆಗೆ ಕೃತಜ್ಞತೆ ಹೇಳಲೇಬೇಕು. ಇವನ ಮತ್ತೊಂದು ಚಿತ್ರ (ಕಲರ್ ಆಫ್ ಪ್ಯಾರಡೈಸ್)ವೂ ಇಂಥ ನೆಲೆಯದ್ದೇ. ಹಾಗೆಯೇ ಪ್ರತಿ ಸನ್ನಿವೇಶಗಳಲ್ಲೂ ಅದನ್ನೇ “ಫೋಕಸ್’ ಮಾಡುತ್ತಾ, ಎಲ್ಲಿಯೂ ಅದು ಭಾರ ಅಥವಾ ರೇಜಿಗೆ ಹುಟ್ಟದಂತೆ ವಹಿಸುವ ಮುತುವರ್ಜಿಯನ್ನು ಗಮನಿಸಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಅಣ್ಣ-ತಂಗಿಯಂಥ ಸೂಕ್ಷ್ಮ ಸಂಬಂಧದ ಪೋಟ್ರೈಟ್ ಇದು. ಸುಪ್ರೀತ್‌ನ ಬರಹ ಓದಿ ನನ್ನ ಭಾವವಲಯ ತೆರೆದುಕೊಂಡಿತು. ಅಲ್ಲಿ ಕಂಡ ಬಿಡಿ ಬಿಡಿ ಚಿತ್ರಗಳನ್ನು ಇಲ್ಲಿ ತೆರೆದಿಟ್ಟೆ, ಅಷ್ಟೇ. ಬಹಳ ದಿನಗಳಿಂದ ಬರೆಯಬೇಕೆಂದಿದ್ದೆ, ಈಗ ಬರೆದಿದ್ದೇನೆ.

“ಮೌನ’ದೊಳಗಿನ ಮಧುರ ಸ್ವರ !

silence.jpgsilence.jpgsilence1-a.jpgDon’t ask how I am feeling?…

ನನ್ನ ಅನುಭವಿಸುವ ಪರಿಯನ್ನು ಹೇಗೆಂದು ಕೇಳಬೇಡ…ಎಂಥಾ ಚೆಂದದ ಮಾತು. ಇರಾನಿಯನ್ ನಿರ್ದೇಶಕ ಮೊಹ್ಸೀನ್ ಮಖ್ಮಲ್ಬಫ್‌ನ  ದಿ ಸೈಲೆನ್ಸ್ (ಸೊಕೋಟ್) ಚಿತ್ರ ಕಂಡ ಮೇಲೆ ಸದಾ ಉಳಿದುಕೊಳ್ಳುವ ಮಾತು.

ಬದುಕನ್ನು ಪ್ರತಿಯೊಬ್ಬರೂ ಅನುಭವಿಸುತ್ತಾರೆ, ಅವರದ್ದೇ ಆದ ಮಾದರಿಗಳಲ್ಲಿ, ಸಾಧನ-ವಿಧಾನಗಳಲ್ಲಿ. ಆದರೆ ಅನುಭವದ ತೀವ್ರತೆ, ಅನುಸರಿಸಿದ ವಿಧಾನ, ಬಳಸಿಕೊಂಢ ಸಾಧನ, ಮಾರ್ಗ ಮತ್ತು ಬಗೆ ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನ. ಅದು ಸಹಜವೂ ಸಹ. ಅದನ್ನು ಪ್ರಶ್ನಿಸಕೂಡದು. ಅವನು ಅನುಭವಿಸಿದ್ದಾನೆ, ಅನುಭವಿಸುತ್ತಿದ್ದಾನೆ ಎಂಬುದಷ್ಟೇ ಮುಖ್ಯ. ಅದು ಹೇಗೆ ಎಂಬುದು ಗೌಣ.  ಆದ್ದರಿಂದ ನನ್ನೊಳಗಕಿನ ಅನುಭವದ ಕ್ಷಣವನ್ನು ಬಣ್ಣಿಸಲಾಗದು.

“ದಿ ಸೈಲೆನ್ಸ್’ ಹಿಡಿದು ಹೋಗುವ ಜಾಡು ಇದನ್ನೇ. ಒಮ್ಮೊಮ್ಮೆ ಮತ್ತೊಬ್ಬ ಇರಾನಿ ನಿರ್ದೇಶಕ ಮಜಿದ್ ಮಜ್ದಿಯ “ಕಲರ್ ಆಫ್ ಫ್ಯಾರಡೈಸ್’ ಮಾದರಿ ಎನಿಸುವುದಿದೆ. ಆದರೆ ಈ ಚಿತ್ರ ತೀರಾ ಭಿನ್ನ. ಏನನ್ನೋ ಹೇಳಬೇಕೆಂದು ಬಂದವ ಮಾತನ್ನು ಗಂಟಲಲ್ಲೇ ಉಳಿಸಿಕೊಂಡು ಮೌನದ ವ್ಯಾಖ್ಯಾನಕ್ಕೆ ತೊಡಗಿ ಮಾತಿಗಿಂತ ಹೆಚ್ಚಿನ ಅರ್ಥವನ್ನು ಅನಾವರಣಗೊಳಿಸುವ ಪರಿ ಈ ಚಿತ್ರದ್ದು. ಹಾಗಾಗಿ ನನಗೆ ಬಹಳ ಇಷ್ಟವಾಯಿತು. ಇದು ನನ್ನ ವಿಮರ್ಶೆಯಲ್ಲ. ನನಗೆ ಚಿತ್ರ ಇಷ್ಟವಾದ ಪರಿ ಮತ್ತು ಅದರೊಳಗಿನ ನೂರು ಸ್ವರಗಳನ್ನು ಬಿಡಿಸುವ ಪ್ರಯತ್ನವಷ್ಟೇ.

ಮಧುರ ಸ್ವರಗಳಲ್ಲಿ ಕಳೆದುಹೋಗುವವನ ಕಥೆ. ಖುರ್ಷದ್ ಪುಟ್ಟ ಬಾಲಕ ; ಅಂಧ. ಅವನ ತಾಯಿಯೊಂದಿಗೆ ತಜ್ ಕಿಸ್ತಾನದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ. ಚಿಕ್ಕಂದಿನಲ್ಲೇ ಮನೆ ನಿಭಾಯಿಸುವ ಹೊಣೆ. ಆತನಿಗೆ ಪಟ್ಟಣದ ಸಂಗೀತ ಉಪಕರಣಗಳಿಗೆ ಶ್ರುತಿ ಕೂಡಿಸುವ ಕೆಲಸ. ಅತ್ಯಂತ ಮಧುರವಾಗಿ ಹೇಳುವುದಾದರೆ ಉಪಕರಣಗಳಿಗೆ ಕಂಠ ತುಂಬುವವನು. ಐದು ದಿನದೊಳಗೆ ಬಾಡಿಗೆ ಕಟ್ಟದಿದ್ದರೆ ಮನೆಯಿಂದ ಹೊರ ಹಾಕುವುದಾಗಿ ಮಾಲೀಕ ಎಚ್ಚರಿಸಿರುತ್ತಾನೆ.

ಮಧುರ ಸ್ವರವೆಂದರೆ (ದನಿ) ಇವನಿಗೆ ಎಲ್ಲಿಲ್ಲದ ಹುಚ್ಚು. ಎಲ್ಲಿಯಾದರೂ ಮಧುರ ದನಿಯೊಂದು ಕೇಳಿಬಂದರೆ ಅದರ ಹಿಂದೆ ಹೋಗುತ್ತಾನೆ. ಅಕ್ಷರಶಃ ಕಳೆದುಹೋಗುತ್ತಾನೆ. ನಾನಿಲ್ಲಿ ಪೂರ್ತಿ ಕಥೆ ಹೇಳುವುದಿಲ್ಲ. ಚೆಂದದ ಒಂದೆರಡು ಚಿತ್ರಿಕೆ (ಇಮೇಜಸ್) ಗಳನ್ನಷ್ಟೇ ಹೇಳುತ್ತೇನೆ. ಅದು ನಿರ್ದೇಶಕನ ಸಾಮರ್ಥ್ಯವನ್ನು, ಸೂಕ್ಷ್ಮ ಗ್ರಹಿಕೆಯನ್ನು, ಮಾತುಗಳನ್ನು ಮೊಗೆ ಮೊಗೆದು ಮೌನವಾಗಿಸಿಬಿಡುವ ಕುಸುರಿಗಾರಿಕೆಯನ್ನು ಹೇಳುತ್ತದೆ.

ಚಿತ್ರಿಕೆ ಒಂದು-ಉಪಕರಣಗಳಿಗೆ ಕಂಠ ತುಂಬುವ ಕೆಲಸಕ್ಕೆ ಸಹಾಯ ಮಾಡುವಾಕೆ ಮತ್ತೊಬ್ಬಳು ಪುಟ್ಟ ಚೆಂದದ ಹುಡುಗಿ ನದೀರಾ. ಶ್ರುತಿ ಶುದ್ಧ ಪಡಿಸುವಾಗ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸರಿಯಿದೆಯೇ ? ಇಲ್ಲವೇ ? ಎಂದು ಹೇಳುವವಳು ನದೀರಾ. ಕಿವಿಗೆ ಜೋಡಿ ಚೆರಿ ಹಣ್ಣುಗಳನ್ನು ಜೋತು ಬಿಟ್ಟುಕೊಂಡು, ಮುಂದೆರೆಡು, ಹಿಂದೆರೆಡು ಉದ್ದದ ಜಡೆ ಹಾಕಿಕೊಂಡ ಮಧುರ ದನಿಯ ಹುಡುಗಿಯನ್ನು ನೋಡಲೇ ಚೆಂದ.

ಎರಡು- ಸಂಗೀತ ಶಾಲೆಯಿಂದ ಮಾಸ್ತರರು ಈ ವಾದ್ಯವನ್ನು ನಿಮ್ಮ ಮಾಲೀಕನಿಗೆ ಕೊಡು, ಇದು ಸರಿಯಿಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಅದನ್ನು ಹೊತ್ತುಕೊಂಡು ಬರುವಾಗ ಮಳೆ ಆರಂಭವಾಗುತ್ತದೆ. ಇವನು ಮಳೆಯಿಂದ ರಕ್ಷಿಸಿಕೊಳ್ಳಲು ಓಡತೊಡಗುತ್ತಾನೆ. ಕಲ್ಲೊಂದು ಕಾಲಿಗೆ ತಾಗಿ ಎಡವಿ ಬಿದ್ದಾಗ ಸಂಗೀತ (ತಾನ್‌ಪುರಿ) ಉಪಕರಣ ಕೊಂಚ ದೂರ ಅಂಗಾತವಾಗಿ ಬೀಳುತ್ತದೆ. ಅ ತಂತಿಯ ಮೇಲೆ ಬೀಳುವ ಪ್ರತಿ ಹನಿಯೂ ಲಯಬದ್ಧವೇ. 

ಖುರ್ಷದ್‌ಗೆ ಸದಾ ಕಾಡುವುದು ಬೊ…ಬೊ…ಬೊ…ಬೊಮ್ ಎಂಬ ಲಯ. ಇದು ಮನೆ ಮಾಲೀಕ ಬಂದಾಗಲೆಲ್ಲಾ ಬಾಗಿಲ ಬಡಿಯುವ ಸದ್ದು. ಅದೇ ಅವನನ್ನು ನಾದದತ್ತ ಸೆಳೆಯುವ ನಾದ ಸಹ. ಇದನ್ನು ನಿರ್ದೇಶಕ ಪ್ರತಿ ಹಂತದಲ್ಲೂ ಅನುರಣಿಸುತ್ತಾನೆ. ಅದಕ್ಕೆ ಕಳೆಗಟ್ಟುವಂತೆ ಕ್ಲೈಮಾಕ್ಸ್ ಇದೆ. ಚಿತ್ರವನ್ನು ನೋಡುತ್ತಾ ಹೋದಂತೆ ಆವರಿಸಿಕೊಳ್ಳುತ್ತದೆ. ಅಂಧ ಬಾಲಕನೊಬ್ಬ ಹೇಗೆ ಶಬ್ದದ ಮೂಲಕ ಜಗತ್ತನ್ನು ಗ್ರಹಿಸುತ್ತಾ ಹೋಗುತ್ತಾನೆ ಎಂಬುದನ್ನು ಹೇಳುತ್ತದೆ ಎನ್ನಿಸುತ್ತದೆ ಚಿತ್ರ. ಆದರೆ ನೋಡಿದಷ್ಟು ಬಾರಿ ಹೊಸ ಅರ್ಥ ಸ್ಫುರಿಸುವ ಶಕ್ತಿ ಅದಕ್ಕಿದೆ.

ಫಿಲಾಸಫಿಕಲ್ ತಟಕ್ಕೂ ನಮ್ಮನ್ನು ಕರೆದೊಯ್ಯುವ ನಿರ್ದೇಶಕ, ಲಯದ (ರಿದಮ್) ನೆಲೆಯನ್ನೇ ಶೋಧಿಸುತ್ತಾ ಹೋಗುತ್ತಾನೆ. ಆವನ ಶೋಧನೆಯ ಬಗೆ ಹಲವು ಚಿತ್ರಿಕೆ (ಇಮೇಜ್) ಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಬಹಳ ಆಪ್ತವೆನಿಸುವುದು ಲಯದ ವಿವಿಧ “ಚಿತ್ರ’ಗಳು. ಪ್ರತಿಯೊಂದೂ ಲಯ ತಪ್ಪದೇ ಇವೆ ಎಂಬುದನ್ನು ಹೇಳಲು ಬಳಸಿಕೊಂಡ ಇಮೇಜ್‌ಗಳು ವಿಶಿಷ್ಟ ಹಾಗೂ ಆಪ್ತ.

ಹಲವು ಚಿತ್ರಿಕೆಗಳನ್ನೆಲ್ಲಾ ಒಟ್ಟು ಮಾಡಿಟ್ಟ ಗುಚ್ಚದಲ್ಲಿ ಎಷ್ಟೊಂದು ಬಣ್ಣ ? ಎಷ್ಟೊಂದು ಅರ್ಥ? ಅದಕ್ಕೆ ಖುರ್ಷದ್ ಸಂಕೇತವಷ್ಟೇ. ಅಂದರೆ ಬದುಕಿನಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಗುಂಗು-ನಾದ-ಹುಚ್ಚು (ಪ್ರಟ್ಟಿ ವಾಯ್ಸ್)ನ ಹಿಂದೆ ಹೊರಡುವವರೇ, ಕಳೆದು ಹೋಗುವವರೇ ಎಂಬುದನ್ನು ಹೇಳಲು ಯತ್ನಿಸುತ್ತಾನೆ.

ಅದೇ ಸಂದರ್ಭದಲ್ಲಿ ಕಣ್ಣಿನ ಚಂಚಲತೆಯನ್ನೂ ಹೇಳದೇ ಬಿಡುವುದಿಲ್ಲ. ದೃಶ್ಯ ನಮ್ಮನ್ನು ಚಂಚಲಗೊಳಿಸಬಲ್ಲದು, ಕಣ್ಣು ಮುಚ್ಚಿ ಜಗತ್ತನ್ನು ಅನುಭವಿಸುವುದು ಮತ್ತೂ ಚೆಂದ. ಅಂದರೆ ಬರೀ ಶಬ್ದ, ಸ್ಪರ್ಶದ ಗ್ರಹಿಕೆಯಲ್ಲಿ (ಬಸ್ಸಿನಲ್ಲಿ ಹೋಗುವಾಗ ಶಾಲಾ ಮಕ್ಕಳಿಬ್ಬರು ಮತ್ತು ಖುರ್ಷದ್ ನಡುವಿನ ಪ್ರಸಂಗ) ಸಾಧ್ಯ ಎಂಬ ಪ್ರಶ್ನೆಯೊಡ್ಡುತ್ತಾನೆ. ಒಟ್ಟಂದದಲ್ಲಿ ಒಂದು ವಿಶಿಷ್ಟವಾದ ಅನುಭವವನ್ನು ನೀಡುವ ಚಿತ್ರ, ಲಾಲ್‌ಬಾಗ್‌ನಂಥ ಹೂದೋಟದಲ್ಲಿ ಅರಳಿ ನಿಂತ ಹೂಗಳ ಮಧ್ಯೆ ಒಂದು ಸುತ್ತು ಹಾಕಿ ಬಂದಂತೆ ಅನಿಸುತ್ತದೆ. ಅದೇ ಕೋಮಲ ಭಾವ ಮತ್ತು ಬಣ್ಣ ತುಂಬಿಕೊಂಡ ಕಣ್ಣುಗಳು !

ಮೂರ್ತವಾದುದು ವಾಚ್ಯ, ಅಮೂರ್ತ ಕಾವ್ಯದಂತೆ. ನಿರ್ದೇಶಕ ಮೊಹಿಸಿನ್, ಅಮೂರ್ತದ ಸೌಂದರ್ಯಕ್ಕೇ ಭಾಷ್ಯ ಬರೆಯುತ್ತಾರೆ. ಎಲ್ಲೂ ವಾಚ್ಯವೆನಿಸದಂತೆ ಎಚ್ಚರಿಕೆ ಕಾಯ್ದುಕೊಳ್ಳುತ್ತಾರೆ. ಮಧ್ಯೆ ಮಧ್ಯೆ ಬಳಸಿಕೊಂಡ ಸಂಗೀತ ಸೂಕ್ತ, ಸಂಭಾಷಣೆ ಎಲ್ಲೂ ಬರಿಯ ಮಾತೆನ್ನಿಸುವುದಿಲ್ಲ, ಮನದ ಕವಿತೆಯಂತೆ ತೋರುತ್ತದೆ. ಪ್ರತಿಯೊಂದರಲ್ಲೂ ಲಯವನ್ನು ಬಯಸುವ ಖುರ್ಷದ್ ನಂತೆ ಲಯ ನಮ್ಮನ್ನು ಹಿಂಬಾಲಿಸುತ್ತದೆ.

ಸೈಲೆನ್ಸ್  1996 ರಲ್ಲಿ ನಿರ್ಮಾಣವಾದದ್ದು. 76 ನಿಮಿಷಗಳ ಸಿನಿಮಾ. ಛಾಯಾಗ್ರಹಣವೂ ಚೆನ್ನಾಗಿದೆ (ಇಬ್ರಾಹಿಂ ಗಫೋರಿ). ಖುರ್ಷದ್ ನಾಗಿ ತಹ್ಮಿನೆ ನರ್ಮಾತೊವ, ನದೀರಾಳಾಗಿ ನದೀರೆ ಅಬ್ದಲೇವ, ದಾಸಯ್ಯನಾಗಿ ಅರಜ್ ಎಂ. ಮೊಹಮ್ಮದಿ ನಟಿಸಿದ್ದಾರೆ.

ಮೊಹಿಸಿನ್ ಬಡ ಕುಟುಂಬದಲ್ಲಿ ಟೆಹರಾನ್‌ನಲ್ಲಿ ಜನಿಸಿದ್ದು. ಚಿಕ್ಕದಿಂನಿಂದಲೇ ಶಾಲೆ ತ್ಯಜಿಸಿ ಇಸ್ಲಾಮಿಕ್ ಸಂಘಟನೆಗೆ ಸೇರಿಕೊಂಡರು. ನಂತರ ಬಂಧನಕ್ಕೊಳಗಾದಾಗ ವಯಸ್ಸು 17. ಐದು ವರ್ಷದ ನಂತರ ಇಸ್ಲಾಮಿಕ್ ಸರಕಾರ ಅಧಿಕಾರಕ್ಕೆ ಬಂದು ಇವರು ಬಿಡುಗಡೆಯಾದರು. ನಂತರ ಮೊಹಿಸಿನ್ ತೊಡಗಿಕೊಂಡಿದ್ದು ಬರಹ, ನಾಟಕ ಹಾಗೂ ಚಲನಚಿತ್ರ ನಿರ್ಮಾಣದಲ್ಲಿ. 1982 ರಿಂದ ಚಿತ್ರ ನಿರ್ಮಾಣ. 1987 ರಲ್ಲಿ ರೂಪಿಸಿದ ಪೆಡ್ಲರ್ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿತು. ನಂತರ 20 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿ, ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಬದುಕಿನ ಗತಿಯ ಹಲವು ಆಯಾಮಗಳನ್ನು ಹಿಡಿದುಕೊಡಲು ಪ್ರಯತ್ನಿಸುವುದೇ ಇವರ ವಿಶಿಷ್ಟತೆ. ಮೌನದಲ್ಲಿ ಅದ್ದಿ ತೆಗೆಯುವ ಸಾಮರ್ಥ್ಯ ಇವರದ್ದು.