ಮಳೆ ಇನ್ನೂ ನಿಂತಿಲ್ಲ…!

ಮೊನ್ನೆ ಮುಗಿದ ಮಳೆಗಾಲದ ಒಂದು ರಾತ್ರಿಯ ಕೆಲವು ಕ್ಷಣ.
ಊರ ದೀಪಗಳೆಲ್ಲಾ ಹೊತ್ತಿ ಕೊಂಡಿದ್ದವು. ಆದರೂ ಕತ್ತಲೆ ಕಳೆದಿರಲಿಲ್ಲ. ಅಲ್ಲಲ್ಲಿ ಚಂದ್ರನ ಬೆಳಂದಿಂಗಳು ಮಾಡಿಗೆ ಹೊದಿಸಿದ ತೆಂಗಿನಗರಿ (ಮಡ್ಲೆಡೆ)ಗಳ ತೂತುಗಳಿಂದ ಬಿದ್ದಂತೆ ಕತ್ತಲೆಯೂ ಅಲ್ಲಲ್ಲಿ ಹೊಳೆಯುತ್ತಿತ್ತು. ಅಷ್ಟು ಬೆಳಕಿನ ಮಧ್ಯೆ ಕತ್ತಲೆ ಹೊಳೆದಿದ್ದನ್ನು ಕಂಡದ್ದು ಅಂದೇ.
ಹತ್ತಿರದ ಪೇಟೆ ಬದಿಯಿಂದ ಮನೆಗೆ ನಡೆದು ಬರುತ್ತಿದ್ದೆ. ಚಿಕ್ಕದಾದ ದಾರಿ. ಪಕ್ಕದಲ್ಲಿ ಹರಿಯುತ್ತಿದ್ದ ತೋಡು. ಮಳೆ ಹನಿ ಬೀಳುತ್ತಿದ್ದುದು ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಯಾಕೋ, ನನಗೂ ತಿಳಿದಿಲ್ಲ. ನನ್ನ ಹೆಜ್ಜೆಗಳು ಭಾರವಾಗುತ್ತಿದ್ದವು. ಆಕಾಶದ ಕಡೆ ಬೆನ್ನು ಮಾಡಿದ್ದ ಛತ್ರಿಯೂ ಹೆಜ್ಜೆ ತಪ್ಪುತ್ತಿತ್ತು. ಆದರೂ ತ್ರಾಸಪಟ್ಟು ನಡೆಯುತ್ತಿದ್ದೆ.
***
ಈ ಮಳೆಗಾಲ ಬಂತೆಂದರೆ ಮನಸ್ಸು ಖಾಲಿಯಾಗಿ ಬಿಡುತ್ತದೆ ನನ್ನದು. ಕಳೆದ ಮಳೆಗಾಲದ ರಾತ್ರಿ ನನ್ನೊಳಗೆ ಸದಾ ರಾವಣನಂತೆ ಕುಣಿಯುತ್ತದೆ. ಎಲ್ಲ ಕಳೆದುಕೊಂಡದ್ದನ್ನು ನೆನಪಿಸಿಬಿಡುತ್ತದೆ. ಬದುಕಿನ ದೋಣಿ ಕಡಲಿನಲಿ ಸಿಕ್ಕು ಮುಳುಗಿದ್ದು ಜ್ಞಾಪಕಕ್ಕೆ ಬಂದು ಕತ್ತಲೆ ಆವರಿಸಿಕೊಳ್ಳುತ್ತದೆ. ಬಹಳ ಬೇಸರದ ಸಂಗತಿ, ಆ ರಾತ್ರಿಗಳಲ್ಲಿ ಚಂದಿರನೂ ಇಲ್ಲ, ಅವನ ಬೆಳಂದಿಗಳೂ ಇಲ್ಲ…ಆ ಕತ್ತಲೆ ಇಂದಿನಂತೆ ಹೊಳೆಯುವುದಿಲ್ಲ !
ಬರೀ ಕಳೆದುಕೊಂಡದ್ದು ಏನು ? ಮನೆ…ಮಠ….ಪೇಟೆ…ಸಂಸಾರ…ಒಂದೇ ಎರಡೇ…ಎಲ್ಲವೂ ಹೋಗಿದ್ದರೆ ನಾನು ಬದುಕಿ ಬಿಡುತ್ತಿದ್ದೆ. ಮತ್ತೆ ಗಳಿಸಿಕೊಳ್ಳುವ ಹುಮ್ಮಸ್ಸು ಅಂದು ಇತ್ತು. ಆದರೆ….ಕಣ್ಣು ತೇವವಾಗುತ್ತದೆ, ಆ ಕ್ಷಣ ಹೇಳಲು ಹೋದರೆ ಗಂಟಲು ಉಬ್ಬಿ ಬರುತ್ತದೆ…ಹೊರಗೆ ಮಳೆಯ ಸದ್ದು ಜೋರಾದದ್ದು ಕೇಳುತ್ತದೆ. ಮಳೆಯ ಸೌಂದರ್ಯದೊಳಗಿನ ಭೀಕರತೆ ನೆನಪಾಗಿ ಕಣ್ಣು ಮುಚ್ಚಿಕೊಂಡು ಬಿಡುತ್ತೇನೆ. ದುರಂತವೆಂದರೆ ಅಲ್ಲಿಯೂ…ಕಣ್ಣು ಮುಚ್ಚಿದಾಗಲೂ ಅದೇ ಎದುರಿಗೆ ಬರುತ್ತದೆ. ನಿಜ, ಕಣ್ಮುಚ್ಚಿಕೊಂಡು ಅದನ್ನು ಎದುರಿಸುವುದಕ್ಕಿಂತ ಕಣ್ಣು ತೆರೆದೇ ವಾಸಿ ಎನಿಸಿದೆ. ಹಾಗಾಗಿ ಈಗೀಗ ಕಣ್ತೆರೆದೇ ಇರುವುದನ್ನು ಅಭ್ಯಾಸ ಮಾಡಿದ್ದೇನೆ.
ನನ್ನನ್ನು ಕೈ ಹಿಡಿದು ನಡೆಸಿದವ…ಅವನು ನನ್ನೊಳಗೆ ಎಲ್ಲವನ್ನೂ ತುಂಬಿದ್ದ. ನನ್ನೊಳಗಿನ ಶೂನ್ಯಕ್ಕೂ ಭಾವ ತುಂಬಿ ಹೊಸ ಹೆಸರಿಟ್ಟಿದ್ದ. ಎಲ್ಲವೂ ಸುಸೂತ್ರವಾಗಿ ನಡೆದಿತ್ತು. ಆ ಮಳೆಗಾಲ ಮುಗಿದ ಮೇಲೆ ನನ್ನ ಕೈ ಹಿಡಿಯುವವನಿದ್ದ. ಊರಿಗೆಲ್ಲಾ ಹೊಸ ಸಿಂಗಾರ ಬಂದಿತ್ತು. ಎರಡು ದಿನಗಳಲ್ಲಿ ಮಳೆ ಮುಗಿಯುವುದರಲ್ಲಿತ್ತು. ಮನೆಯಲ್ಲಿ ಮುಹೂರ್ತ ಹುಡುಕಿದ್ದರು. ಕೇವಲ ಎರಡೇ ದಿನ…ಮಳೆ ಮುಗಿದ ಮೇಲೆ ಗೆಜ್ಜೆ ಕಟ್ಟಿಕೊಳ್ಳುತ್ತಿದ್ದೆ. ನನ್ನ ಬದುಕಿಗೆ ಸಂಭ್ರಮದ ನಾದ ಬರುತ್ತಿತ್ತು. ಮಳೆಯ ಹಾಡನ್ನು ಮರೆಯುತ್ತಿರಲಿಲ್ಲ.
****
ಮನೆಯಲ್ಲಿ ಪೂಜೆಗೆ ಕುಳಿತಿದ್ದ ಅಪ್ಪ ದೇವರಿಗೆ ಆರತಿ ಎತ್ತುತ್ತಿದ್ದ. ಮಕ್ಕಳೆಲ್ಲಾ ನಾವು ಸಾಲಾಗಿ ಕೈ ಮುಗಿದು ನಿಂತಿದ್ದೆವು. ತಮ್ಮ ಜಾಗಟೆ ಬಾರಿಸುತ್ತಿದ್ದ. ಕ್ಷಣ ಕ್ಷಣಕ್ಕೂ ಆ ನಾದದಲ್ಲಿ ಏರಿಳಿತವಾಗುತ್ತಿತ್ತು. ಒಮ್ಮೆ ಜೋರಾಗಿ ಪೆಟ್ಟು ಬಿದ್ದರೆ, ಮತ್ತೊಮ್ಮೆ ಕೈ ಸೋತು ಹೋದವನ ಹಾಗೆ ಮೆಲ್ಲಗೆ ಬಡಿಯುತ್ತಿದ್ದ. ಜಾರುವ ಜಾಗಟೆಯನ್ನು ಸರಿಯಾಗಿ ಹಿಡಿದ ಕ್ಷಣ ಶಬ್ದ ಕಿವಿಗೆ ಅಪ್ಪಳಿಸುತ್ತಿತ್ತು. ಆಗ ಅಪ್ಪ ಒಮ್ಮೆ ಹಿಂತಿರುಗಿ ನೋಡುತ್ತಿದ್ದರು. ನನ್ನಪ್ಪನಿಗೆ ನಾದದಲ್ಲಿ ಲಯವಿರಬೇಕು…ಹೀಗೆ ಒಮ್ಮೆಲೆ ಏರುವುದು, ಇಳಿಯುವುದು ಇಷ್ಟವಿಲ್ಲ. ಎಲ್ಲ ಮುಗಿದು ಕೊನೆಯ ಆರತಿ ಬರುವಾಗ ತಮ್ಮನ ಕೈ ಸೋತಿತ್ತು. ನಾನು ಪಡೆದು, ಜಾಗಟೆ ಬಾರಿಸತೊಡಗಿದೆ. ಆರಂಭ…ಶಬ್ದ ಜೋರಾಗಿತ್ತು. ಅಪ್ಪನ ಆರತಿ ಮುಗಿಯುವ ಕೊನೆ ಕ್ಷಣ ನನ್ನ ಹೊಡೆತವೂ ಜೋರಾಯಿತು. ಬಾರಿಸುವುದನ್ನು ನಿಲ್ಲಿಸುವ ಕೊನೆ ಹೊಡೆತ ಲಯಬದ್ಧವಾಗಿಯೇ ಇತ್ತು. ಅಪ್ಪ ಆರತಿ ಮುಗಿಸಿ, ನಮಸ್ಕಾರ ಹಾಕಿದರು. ನಾವೂ ನಮಸ್ಕಾರ ಮಾಡಿದೆವು. ಪ್ರಸಾದ ಪಡೆದು ಬಾಗಿಲಿಗೆ ಬರುವಷ್ಟರಲ್ಲಿ ಮಳೆಯ ಜಾಗಟೆ ಜೋರಾಗಿತ್ತು.
****
ಬಾಗಿಲನ್ನು ಸರಿಸಿ ಒಳಗೆ ಪಡಸಾಲೆಯಲ್ಲಿ ಕುಳಿತುಕೊಂಡೆ. ಹೊರಗೆ ಮತ್ತಷ್ಟು ಜೋರಾಯಿತು ಮಳೆ. ಮುಗಿಯುವ ಮೊದಲು ಹೀಗೆ…ಜೋರಾಗಿ ಎಂದುಕೊಂಡು ಸುಮ್ಮನಾದೆ. ನಿದ್ರೆಯ ಜೊಂಪು ಆವರಿಸತೊಡಗಿತು. ಅಮ್ಮ ಅಡುಗೆ ಮನೆಯಲ್ಲಿ ಎಲೆ ಹಾಕಿ ಊಟಕ್ಕೆ ಕರೆದ ಸದ್ದು ಅಸ್ಪಷ್ಟವಾಗಿ ಕೇಳಿತು. ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬಂದ ತಮ್ಮ…ಎದ್ದೇಳೇ..ಅಮ್ಮ ಅಷ್ಟೊತ್ತಿಂದ ಕರೀತಿದ್ದಾಳೆ…ಕೇಳಿಸಲ್ವೇನು? ಇಷ್ಟೊತ್ತಿಗೇ ನಿದ್ದೆ ಎಂದವನೇ ಬಿರುಗಾಳಿ ಹೋದಂತೆ ಹೋದ. ನಾನೂ ಹಿಂಬಾಲಿಸಿದೆ. ಉದ್ದಿನ ಗೊಜ್ಜು ಮಾಡಿದ್ಲು ಅಮ್ಮ. ಬೆಂಗಳೂರಿನಿಂದ ಬಂದ ಅಣ್ಣನಿಗೆ ಇದೆಲ್ಲಾ ಇಷ್ಟ. ಅವನು ಇರುವವರೆಗೆ ನಮ್ಮ ಮನೆಯಲ್ಲಿ ಸಮಾರಾಧನೆಯೇ. ಉದ್ದಿನ ಗೊಜ್ಜಿಗೆ ಸಂಡಿಗೆ ಮೆಣಸೂ ಉರಿದದ್ದು ಇತ್ತು. ಹೊರಗೆ ಮಳೆ…ಒಳಗೆ ಸಂಡಿಗೆ ಮೆಣಸು..ಮಕ್ಕಳು ಜಾಸ್ತಿ ಖಾರ ತಿನ್ನಬಾರದು ಎಂಬ ಉಪದೇಶ ಸದಾ ಇದ್ದದ್ದೇ. ಅದಕ್ಕೇ ಅಪ್ಪ ಊಟ ಮುಗಿಸುವವರೆಗೂ ಕಾಯುತ್ತಿದ್ದೆ. ಮೆಲ್ಲಗೆ…ಮೆಲ್ಲಗೆ…ತಿನ್ನುತ್ತಿದ್ದೆ.
ಅಪ್ಪನದ್ದು ಒಂದು ಒಳ್ಳೆ ಅಭ್ಯಾಸ. ಊಟ ಬಹಳ ಬೇಗ. ನಾವು ಒಂದು ಸುತ್ತು ಮುಗಿಸುವಾಗ ಅಪ್ಪನದ್ದು ಮೂರೂ ಸುತ್ತು ಮುಗಿದು, ತೋಟದಲ್ಲಿರುತ್ತಿದ್ದ. ಅಲ್ಲಿಯೇ ಕೈ ತೊಳೆದುಕೊಂಡು ಒಂದು ಸುತ್ತು ಹಾಕಿ ಬರುವುದು ಅವನ ಅಭ್ಯಾಸ. ಅಪ್ಪ ಎದ್ದು ಕೈ ತೊಳೆಯಲು ಹೊರಡುತ್ತಿದ್ದಂತೆ ಸಂಡಿಗೆ ಮೆಣಸಿನ ತಟ್ಟೆ ಎಳೆದುಕೊಂಡೆ. ಅಮ್ಮ..ಕಡಿಮೆ ತಿನ್ನೇ..ರಾತ್ರಿ ಹೊಟ್ಟೆ ಉರಿಯುತ್ತೇ ಅಂತೀ ಎಂದಳು. ಸರಿ ಎಂದುಕೊಂಡು ನನಗೆ ಎಷ್ಟು ಬೇಕೋ ಅಷ್ಟು ತಿಂದೆ. ಹೊರಗಿನ ಮಳೆಯ ತೇವಕ್ಕೆ ಈ ಊಟ ಒಳ್ಳೆ ಸಾಥ್ ಎನಿಸಿತು. ಊಟ ಮುಗಿಸಿ ಮಲಗಲು ಸಿದ್ಧತೆ ನಡೆಸಿದಾಗ ಅಣ್ಣ ಬಂದ. “ಏನೇ…ಎಲ್ಲವೂ ಸರಿಯಿದೆಯೇ?’ ಎಂದು ಕೇಳಿದವನ ಪ್ರಶ್ನೆಯಲ್ಲಿ ಎಷ್ಟೆಲ್ಲಾ ಅರ್ಥವಿತ್ತು. ಅದಕ್ಕೆ ಸರಿಯಾಗಿ ನಾನೂ ಅಷ್ಟೇ ಅರ್ಥದ “ಪರವಾಗಿಲ್ಲ’ ಎಂದು ಉತ್ತರಿಸಿದೆ.
ಅಣ್ಣ ಅವನಷ್ಟಕ್ಕೇ ಏನೋ ಅಂದುಕೊಂಡು ಟಿವಿ ಮುಂದೆ ಪೀಠಸ್ಥನಾದ. ಹೊಸದಾಗಿ ಬಂದಿದ್ದ ಮ್ಯಾಗಜೈನ್ ತೆಗೆದುಕೊಂಡು ಮಲಗುವ ಕೋಣೆಗೆ ಹೋದೆ. ಎಲ್ಲ ನಿಶ್ಶಬ್ದವಾಗಿತ್ತು, ಆದರೆ ಮಳೆಯ ಸದ್ದು ಅಡಗಿರಲಿಲ್ಲ. ಬೇಗ ಮಳೆ ನಿಂತರೆ ಸಾಕು ಎಂದುಕೊಂಡು ಓದುತ್ತಾ ನಿದ್ರೆಗೆ ಹೋದೆ. ರಾತ್ರಿಯೂ ಬಹಳ ದೀರ್ಘ ಎನಿಸಿತು…
*********
ಬೆಳಗ್ಗೆ ಏಳುವಷ್ಟರಲ್ಲಿ ಅಪ್ಪ ತಲೆಗೆ ಕೈ ಹಿಡಿದು ಕುಳಿತಿದ್ದ, ಅಮ್ಮನೂ ಸಹ. ಅಣ್ಣನ ಮುಖದಲ್ಲೂ ಕಳೆಯಿರಲಿಲ್ಲ. ಯಾರನ್ನಾದರೂ ಮಾತನಾಡಿಸಿದರೂ ಮಾತನಾಡಿಯೆರೆಂಬ ನಂಬಿಕೆ ಇರಲಿಲ್ಲ. ಅವಳೂ ಪಕ್ಕದಲ್ಲಿ ಬಂದು ನಿಂತಳು, ತುಟಿ ಬಿಚ್ಚಲಿಲ್ಲ. ನೀರವ ಮೌನದಲ್ಲಿ ಇಡೀ ಮನೆ….ಅವನ ಅಪ್ಪ ಬಂದದ್ದು, ಎಲ್ಲವನ್ನೂ ಹೇಳಿದ್ದು. ಮೌನಕ್ಕೆ ಕೊನೆ ಮೊಳೆ ಹೊಡೆದಂತೆ ಮಾತು ಅಲ್ಲಿ ಹೊರಡಲೇ ಇಲ್ಲ…
ಮತ್ತೆ ಪ್ರತಿ ವರ್ಷವೂ ಮಳೆ ಸುರಿಯುತ್ತದೆ. ಹೀಗೇ ಭಯ ತರುವ ರೀತಿಯಲ್ಲಿ…ನನ್ನ ಕನಸು ಕೊಚ್ಚಿ ಹೋದ ದಿನ, ಕ್ಷಣವೆಲ್ಲಾ ನೆನಪಾಗಿ ಹೆಜ್ಜೆ ಅದುರುತ್ತದೆ. ಕಣ್ಣ ಮುಂದಿನ ನೋಟವೆಲ್ಲಾ ಮಬ್ಬಾಗಿ ಏನೂ ತೋರುವುದಿಲ್ಲ. ದಾರಿ ತೋರಿದತ್ತ ಸಾಗುತ್ತೇನೆ.
****
ಹೊರಗೆ ಮಳೆ ಮತ್ತೆ ಜೋರಾಯಿತು. ತ್ರಾಸದ ಹೆಜ್ಜೆಗಳಿಂದ ಮನೆಯೊಳಗೆ ಕಾಲಿಟ್ಟೆ. ಒಳಗೂ ಕತ್ತಲಿತ್ತು. ಈ ಹಾಳು ಮಳೆ ಬಂದರೆ ಸಾಕು, ಕೆಇಬಿಯವರಿಗೆ ಖುಷಿ. ಕರೆಂಟು ತೆಗೆದು ಬಿಡ್ತಾರೆ ಎಂದು ಗೊಣಗಲಾರಂಭಿಸಿದೆ. ಅಡುಗೆ ಮನೆಯಲ್ಲಿದ್ದ ಅಮ್ಮ, “ಅಲ್ಲೇ ಇರು…ದೀಪ ತರ್‍ತೀದೀನಿ’ ಎಂದರು. ಆದರೂ ತಡೆಯದೇ ಮೊಬೈಲ್ ಬೆಳಕಿನಲ್ಲಿ ಅಡುಗೆ ಮನೆಯವರೆಗೂ ಹಾದು ಬಂದೆ. ದೇವರ ಎದುರು ಪುಟ್ಟದೊಂದು ದೀಪ ತನ್ನ ಮೂಲೆಯಷ್ಟನ್ನೇ ಬೆಳಗಿಕೊಂಡಿತ್ತು. ಮತ್ತೊಂದು ದೀಪ ಹೊತ್ತಿಸಿಕೊಳ್ಳುತ್ತಿದ್ದ ಅಮ್ಮನ ನೆರಳು ಅದಕೆ ಅಡ್ಡವಾಗಿತ್ತು.
ಅಮ್ಮ ದೀಪ ಹಿಡಿದು ಪಡಸಾಲೆಗೆ ಬಂದಳು. ನಾನೂ ಹಿಂಬಾಲಿಸಿ ಬಂದು ಮೂಲೆಯಲ್ಲಿ ಕುಳಿತುಕೊಂಡೆ. ದೀಪವನ್ನೇ ದಿಟ್ಟಿಸಿದೆ. ಅದರೊಳಗಿನ ಕಾಂತಿ ನನ್ನೊಳಗೂ ತುಂಬಿಕೊಂಡಿತು ; ಮನಸ್ಸು ಉಲ್ಲಸಿತವಾಯಿತು. ನನ್ನೊಳಗೂ ಬೆಳಕು ಹೊತ್ತಿಕೊಂಡಂತೆ ಭಾಸವಾಯಿತು. ಅಷ್ಟರೊಳಗೆ ನಮ್ಮ ಪರಿಶ್ರಮವನ್ನೆಲ್ಲಾ ಹಾಳುಗೆಡುವಂತೆ ಲೈಟ್ ಹೊತ್ತಿಕೊಂಡವು. ಒಮ್ಮೆಲೆ ಚಿಮ್ಮಿದ ಬೆಳಕಿನಲ್ಲಿ ಕಣ್ಣು ತೆರೆಯಲಾಗಲಿಲ್ಲ. ಮಳೆಯ ಸದ್ದು ಮಾತ್ರ ಅಡಗಿರಲಿಲ್ಲ. ಆಗಾಗ್ಗೆ ಬರುತ್ತಿದ್ದ ಮಿಂಚುಗಳು ಮಳೆಯ ಹನಿಗಳಿಗೆ ದಾರಿ ತೋರಿಸುತ್ತಿದ್ದವು. ಪಕ್ಕದ ತೋಡಿನಲ್ಲೂ ನೀರಿನ ಸದ್ದು ಜೋರಾಗಿತ್ತು. ನಾನು ನನ್ನೊಳಗೆ ಬೆಳಕು ತುಂಬಿಕೊಂಡು ಕಣ್ಣುಮುಚ್ಚಿಕೊಂಡೆ. ಒಳಗೆ ಕತ್ತಲೆ ಇರಲಿಲ್ಲ.
***

ಪೂರ್ಣಗೊಳ್ಳದ ಚಿತ್ರ

ಬಂದ ಪತ್ರದಲ್ಲಿ ಮೂರೇ ಪದಗಳಿದ್ದವು. “ಎಲ್ಲರಿಗೂ ನಮಸ್ಕಾರ, ವಂದೇ’. ಪತ್ರ ತೆರೆದವನ ಮನಸ್ಸು ವ್ಯಾಕುಲಗೊಂಡಿತು; ತೀರಾ. ಏನೂ ಹೇಳಲು ತೋಚಲಿಲ್ಲ. ಸುಮ್ಮನೆ ಗೋಡೆಯನ್ನು ನೋಡುತ್ತಾ ಕುಳಿತ.

ಗೋಡೆಯ ಎದುರು ನಾಲ್ಕೈದು ಚಿತ್ರಗಳಿದ್ದವು. ಯಾವುದಕ್ಕೂ ಬಣ್ಣ ಬಳಿದಿರಲಿಲ್ಲ. ಗೋಡೆಯ ಬಣ್ಣವನ್ನೂ ಹೊದ್ದುಕೊಂಡಿರಲಿಲ್ಲ. ಒಂದು ಮನುಷ್ಯನ ಚಿತ್ರ. ಥೇಟ್ ಅವನನ್ನೇ ಹೋಲುವಂಥದ್ದು. ಕಾಲುಗಳು ತೀರಾ ತೆಳ್ಳಗೆ, ಕೈಗಳೂ ಭಿನ್ನವಾಗಿರಲಿಲ್ಲ. ಮುಖ ಮಾತ್ರ ದಪ್ಪ. ಅದರ ಮಧ್ಯೆ ಕಣ್ಣಿಗೆ ದೃಷ್ಟಿಯೇ ಇರಲಿಲ್ಲ. ಹೀಗೆ ಏನೇನೋ ಆಗಿ ಅವನನ್ನೇ ನೆನಪಿಸುತ್ತಿತ್ತು. ಅದನ್ನು ಕಂಡು ಎಷ್ಟು ಬಾರಿ ಆತ ನಕ್ಕಿದ್ದನೋ ? ಅವನಿಗೂ ಲೆಕ್ಕವಿರಲಿಲ್ಲ.
ಪ್ರತಿ ಚೌತಿಗೆ ಬಣ್ಣ ಬಳಿಯಬೇಕೆಂದು ಯೋಜನೆ ರೂಪಿಸುತ್ತಿದ್ದ. ಆದರೆ ಮನಸ್ಸು ಬರುತ್ತಿರಲಿಲ್ಲ. ಇದು ಹದಿನೈದು ವರ್ಷದ ಕಸರತ್ತು. ಈಗ ಗೋಡೆಯೂ ಆ ಚಿತ್ರದ ಗೆರೆಗಳ ಬಣ್ಣಕ್ಕೆ ತಿರುಗಿದೆ. ಇವತ್ತಿಗೂ ಅವನಿಗೆ ತಿಳಿದಿಲ್ಲ. ಆ ಚಿತ್ರಗಳ ಮೇಲಿನ ಮೋಹದ ಬಗ್ಗೆ.

ಆ ನಿಜವನ್ನು ಒಪ್ಪಿಕೊಳ್ಳುತ್ತಾನೆ. ಅದಕ್ಕೆ ಮುಜುಗರ ಪಡುವುದಿಲ್ಲ. ಅವನೊಳಗಿನ ಬದುಕಿನ ನಂದಾದೀಪಕ್ಕೆ ಆಗಾಗ್ಗೆ ಉತ್ಸಾಹದ ಎಣ್ಣೆ ಸುರಿದಿದೆ. ಬಹುಶಃ ಆ ಕಾಂತಿಯೊಳಗೆ ಮನೆಯೂ ಕಂಗೊಳಿಸುತ್ತಿತ್ತು, ಬಣ್ಣದ ಚಿಂತೆ ಕಾಡಿರಲಿಲ್ಲ.

ಮತ್ತೊಂದು ಚಿತ್ರದ ಬಗ್ಗೆ ಹೇಳಬೇಕು. ಚಿಕ್ಕದೊಂದು ಮನೆ, ಅದರಲ್ಲಿ ಒಂದು ಡೈನಿಂಗ್ ಟೇಬಲ್. ಅಲ್ಲಿ ನಾಲ್ಕು ಆಸನ. ಅದರಲ್ಲಿ ಕುಳಿತವರು ಇವನೂ ಸೇರಿದಂತೆ ನಾಲ್ಕು ಮಂದಿ. ಊಟದ ತಟ್ಟೆ ಸಿದ್ಧವಿದೆ. ಊಟ ಬಡಿಸುವವಳು ಕಾಣೆಯಾಗಿದ್ದಾಳೆ. ಅವಳು ಬರುವವರೆಗೂ ಇವರು ಊಟ ಮಾಡುವಂತಿಲ್ಲ !

ಅದರ ಪಕ್ಕದ ಚಿತ್ರ ಇನ್ನೂ ಪೂರ್ಣಗೊಂಡಿರಲಿಲ್ಲ. ಅಷ್ಟರಲ್ಲಿ ಅವಳು ದೊಡ್ಡವಳಾಗಿದ್ದಳು. ನಂತರ ಚಿತ್ರ ಬರೆಯುವುದನ್ನೇ ನಿಲ್ಲಿಸಿದ್ದಳು. ಈಗ ಅವೆಲ್ಲವೂ ಪೂರ್ಣಗೊಂಡಿದ್ದರೆ ಹೇಗೆಂದು ಕಲ್ಪಿಸಿಕೊಳ್ಳತೊಡಗಿದ. ಹನಿಯಲ್ಲಿ ಕಣ್ಣು ತುಂಬಿ ಹೋಯಿತು. ತೇವವಾದ ಅನುಭವ ಹೃದಯಕ್ಕೂ ಅರ್ಥವಾಯಿತು. ಹೃದಯವೂ ಕಣ್ಣ ತುಂಬಿಸಿಕೊಂಡಿದ್ದು ತೋರುವುದಿಲ್ಲ !

ದೂರದ ಗಡಿಯಲ್ಲಿ ದೇಶ ಕಾಯುತ್ತಿದ್ದ ಅವಳ ಗಂಡನ ಬೆಂಬಲಕ್ಕೆ ನಿಂತವಳು. ಮೊನ್ನೆಯಷ್ಟೇ ಶತ್ರುವಿನ ಗುಂಡಿಗೆ ಇವನು ಪ್ರಾಣ ತೆತ್ತ. ಶವ ಮನೆಗೆ ಬಂತು. ಅದನ್ನು ಕಂಡವಳ ಮನಸ್ಸು ಕಲ್ಲಾಗಿ ಹೋಯಿತು. ಶತ್ರುವಿನ ಗುಂಡಿಗೆ ಅವನ ದೇಹ ಛಿದ್ರವಾದ ಸ್ಥಿತಿ ಕಂಡು ಮಾತು ಹೊರಡಲಿಲ್ಲ. ಬಹಳ ಪ್ರೀತಿಸಿ ಪಡೆದವನನ್ನು ಉಳಿಸಿಕೊಳ್ಳಲಾಗದ್ದಕ್ಕೆ ಮರುಗಿದಳು. ಮುಂದೇನು ?

ಚಿತ್ರ ಪೂರ್ಣಗೊಳಿಸಲು ಮನೆಗೆ ಹೋಗಬೇಕೇ ? ಒಂದುವೇಳೆ ಅರ್ಧಕ್ಕೆ ನಿಲ್ಲಿಸಿದ ಚಿತ್ರಗಳನ್ನು ಪೂರ್ಣಗೊಳಿಸಲು ಸಾಧ್ಯವೇ ? ಅಪ್ಪ ಯಾರಿಗಾಗಿ ದಿನಾ ಕಾಯುತ್ತಿರಬಹುದು ? ಇನ್ನೂ ಬಂದಿರಲಾರದ ಅಮ್ಮನಿಗಾಗಿಯೇ ? ಅವನ ನಿರೀಕ್ಷೆಯ ಭಾವಚಿತ್ರದೊಳಗೆ ನಾನೂ ಪಾತ್ರವಾಗಬೇಕೇ ? -ಹೀಗೆ ಪ್ರಶ್ನೆಗಳು ಅವಳನ್ನು ಬಿಡಲಿಲ್ಲ.

ತನ್ನ ಗಂಡನ ಶವವನ್ನು ತಂದಿದ್ದ ಅವನ ಮಿತ್ರರು ಕೈಗೆ ಕೊಟ್ಟು ಹೋದ ಪತ್ರವನ್ನು ತೆಗೆದಳು. “ಎಲ್ಲರಿಗೂ ನಮಸ್ಕಾರ, ವಂದೇ’ ಎಂದಿತ್ತು. ಏನೂ ತೋಚಲಿಲ್ಲ. ಅದರ ಕೆಳಗೆ ತನ್ನದೂ ಷರಾ ಬರೆದು ಪೋಸ್ಟ್ ಮಾಡಿದಳು.  ಗೋಡೆಗೆ ಈತ ಮತ್ತೆ ಬಣ್ಣ ಬಳಿಸಲೇ ಇಲ್ಲ!

ಎರಡು ಹನಿಯ ಕಥೆಗಳು

ಬೆಳಕು ಮತ್ತು ಕತ್ತಲೆ

ಬೆಳಕಿನ ಕುಡಿಯೊಂದು ಕಾಡನ್ನು ಸೀಳಿಕೊಂಡು ಮುನ್ನಡೆಯುತ್ತಿತ್ತು. ದಟ್ಟವಾದ ಕಾಡು, ಎಲ್ಲೆಲ್ಲೂ ಹಸಿರು. ಬೇಸಗೆಯಾಗಿದ್ದರೂ ಹಸಿರಿಗೆ ಕೊರತೆಯಿರಲಿಲ್ಲ. ಕೆಲವೆಡೆಯಂತೂ ಸೂರ್‍ಯನ ಬೆಳಕೇ ಬೀಳದಷ್ಟು ಕತ್ತಲೆ.
ಈ ಬೆಳಕಿನ ಕುಡಿಗೆ ಕಾಡೇನೂ ಹೊಸದಲ್ಲ. ಸಂಜೆಯಾಗುತ್ತಿದ್ದ ಸಮಯ. ನಿಂತ ಮರವೂ ನಿಂತಲ್ಲೇ ವಿಶ್ರಮಿಸಿಕೊಳ್ಳುವಂಥ ಕಾಲ. ತನ್ನೊಳಗೆ ಕಟ್ಟಿದ ಗೂಡುಗಳಲ್ಲಿ ಕಲರವ ಕೇಳುವ ಸಂಭ್ರಮದಲ್ಲಿ ಮುಳುಗುತ್ತಿತ್ತು. ಈ ಕುಡಿ ನಡೆದು ನಡೆದು ದಣಿವಾದಂತೆನಿಸಿತು. ಅಷ್ಟರಲ್ಲಿ ಒಂದು ಮಿಣುಕು ಹುಳು ಎದುರಾಯಿತು. ಕುಡಿಗೆ ಅಚ್ಚರಿ. ನನ್ನ ಹಾಗೆಯೇ ಇದ್ದೀ. ಆಗಾಗ ಹೊಳೆಯುತ್ತೀ, ನೀನ್ಯಾರು ಎಂದಿತು.
ಅದಕ್ಕೆ ಮಿಣುಕು ಹುಳು ಮಾತನಾಡಲಿಲ್ಲ. ಪಕ್ಕದಲ್ಲಿದ್ದ ಮರವೊಂದು “ನೋಡು, ಅದು ನಮ್ಮ ಕಂದೀಲು’ ಎಂದಿತು. ಬೆಳಕಿನ ಕುಡಿಗೆ ಇನ್ನೂ ಆಶ್ಚರ್ಯ. “ನಿಮ್ಮ ಕಂದೀಲಾದರೆ ನಿರಂತರವೂ ಉರಿಯುವುದಿಲ್ಲವೇಕೆ?’ ಎಂದು ಪ್ರಶ್ನಿಸಿತು. ಅದಕ್ಕೆ ಮರವೂ ಸಹ “ನಮಗೆ ಸದಾ ಉರಿಯುವ ಕಂದೀಲಿನ ಅಗತ್ಯವಿಲ್ಲ. ನಮಗೆ ಕತ್ತಲೆ ಇಷ್ಟ. ನಮಗೆ ಒಂದು ಹಿಡಿ ಬೆಳಕು ಸಾಕು. ಅದು ಈ  ಹುಳು ನೀಡಬಲ್ಲದು’ ಎಂದಿತಂತೆ.
ಈ ಮಾತು ಕೇಳಿದ ಮೇಲಂತೂ ಬೆಳಕಿನ ಕುಡಿಗೆ ಇನ್ನೂ ದಣಿವು ಹೆಚ್ಚಾಯಿತು. ಅಲ್ಲೇ ಅದೇ ಮರದ ಬುಡದಲ್ಲಿ ಒರಗಿತಂತೆ. ಕೆಲವೇ ಕ್ಷಣದಲ್ಲಿ ಅದನ್ನೂ ಕತ್ತಲೆ ಬಿಡಲಿಲ್ಲ ; ವ್ಯಾಪಿಸಿಕೊಂಡು ಬಿಟ್ಟಿತು.

ಅವರ ಅಳು ತೋರದು
ಕಾಡಿನಲ್ಲೊಂದು ದೊಡ್ಡ ಮರ ದಿಟ್ಟವಾಗಿ ನಿಂತಿತ್ತು. ನೋಡಿದರೆ ದಢೂತಿ ಆಸಾಮಿ ನಿಂತ ಹಾಗೆ. ಯಾರು ಬಂದರೂ ಅದನ್ನು ಕಂಡು ಹೆದರದೇ ಇರುತ್ತಿರಲಿಲ್ಲ. ಆದರೆ ಆ ಸಂಜೆ ಮಾತ್ರ ಅದು ಅಳುತ್ತಿತ್ತು.
“ಏನು ? ಯಾರೋ ಅತ್ತ ಸದಲ್ಲವೇ? ’ ಎಂದು ಸುತ್ತಲೂ ಕಣ್ಣರಳಿಸಿ “ಯಾರು ಅಳುತ್ತಿರುವುದು?’ ಎಂದು ಪ್ರಶ್ನೆ ಹಾಕಿತಂತೆ ಸಣ್ಣ ಮರ. ಅದಕ್ಕೆ “ಬಹಳ ಬೇಸರವಾಗಿದೆ, ಅದಕ್ಕೇ ಅತ್ತು ಹಗರಾಗುತ್ತಿದ್ದೇನೆ?’ ಎಂದಿತಂತೆ ದೊಡ್ಡ ಮರ. “ನಾವೂ ಅಳಬಹುದೇ? ಅಳಲು ಬರುತ್ತದೆಯೇ?’ ಎಂಬುದು ಸಣ್ಣ ಮರದ ಮುಂದಿನ ಪ್ರಶ್ನೆ.
“ಯಾಕೆ ? ನಮಗೆ ದುಃಖವಾಗುವುದಿಲ್ಲವೇ? ಅತ್ತರೇನು ತಪ್ಪು?’ ಎಂದು ಹೇಳಿದ್ದು ದೊಡ್ಡಮರ. ಅದರಿಂದ ವಿಚಿತ್ರ ಗೊಂದಲಕ್ಕೀಡಾದ ಸಣ್ಣ ಮರ, “ಅವರು ಅಳುವಾಗ ಕಣ್ಣಲ್ಲಿ ದಳದಳನೆ ನೀರು ಹರಿಯುತ್ತದೆ. ನಮಗೇಕಾಗುವುದಿಲ್ಲ ? ಎಂದು ಕೇಳಿತಂತೆ. ದೊಡ್ಡ ಮರ ಒಂದು ನಿಟ್ಟುಸಿರು ಬಿಟ್ಟು, “ನಾವೂ ಅಳುತ್ತೇವೆ. ನಮ್ಮ ಕಣ್ಣಲ್ಲೂ ನೀರು ಬರುತ್ತದೆ. ಆದರೆ ಅವರಿಗದು ತೋರದು’ ಎಂದು ಹೇಳಿದಾಗ ಸಣ್ಣಮರದ ಕಣ್ಣಲ್ಲೂ ನೀರು ಬಂದು ನಿಂತಿತು ; ಹರಿಯಲಿಲ್ಲ !

ತಪ್ಪಿಗೆ ಮೊಹರು ಹಾಕು ಬಾ-ಉತ್ತರಾರ್ಧ

ಕಾಲೇಜಿನಲ್ಲಿ ನಿನ್ನ ಮಾತು ಕೇಳಲಿಕ್ಕೆಂದೇ ಬರುವವರಿದ್ದರು, ಆ ಮೊದಲು ನನಗಂತೂ ಮಾತೇ ಬರುತ್ತಿರಲಿಲ್ಲ. ಅದನ್ನೂ ನಾನು ಕಲಿತದ್ದು ನಿನ್ನಿಂದಲೇ. ಕಲಿಯುತ್ತಾ ಹೋದೆ, ಕಲಿತೆ, ಮಾತೇ ಆಗಿ ಹೋದೆ. ನೀನು ಮಾತಿನ ಮಧ್ಯೆ ಮಧ್ಯೆ ನೀನು ತುಂಬುತ್ತಿದ್ದ ಮೌನದ ಲಯವನ್ನು ಕಲಿಯುವುದು ಮರೆತೇ ಹೋಯಿತು. ನಿನ್ನ ಮೌನದ ಕಸೂತಿಯ ಪಾಠ ಆಗಲೇ ಇಲ್ಲ ನನಗೆ.
ಅದಕ್ಕೇ ಇರಬೇಕು, ನನ್ನದು ಬರಿಯ ಮಾತಾಗತೊಡಗಿತು, ಅರ್ಧ ತುಂಬಿದ ಬಿಂದಿಗೆಗಳ ಸದ್ದಿನಂತೆ. ನನ್ನ ಗೆಳೆಯರು ವಾಚಾಳಿ ಎನ್ನತೊಡಗಿದ್ದರು. ಆದರೂ ಮಾತನಾಡುವುದನ್ನು ನಿಲ್ಲಿಸಿರಲಿಲ್ಲ, ಕಾರಣವಿಷ್ಟೇ. ನನಗೆ ಬರುತ್ತಿದ್ದುದು ಅದೊಂದೇ. ಮಾತಾಡಿ, ಮಾತಾಡಿ ನಾನು ಸೋತೆ. ಆದರೆ ಈಗ ಮೌನದ ಪಾಠ ಹೇಳಿಕೊಡುವವಳು ಬೇಕೆನ್ನಿಸುತ್ತಿದೆ.
ನಿನ್ನ ಹುಡುಕಿಕೊಂಡು ಬಂದೆ. ಕತ್ತಲ ಕಾನುವಿನ ನಡುವೆ ಬೆಳಕು ಹುಡುಕುತ್ತಾ ಹೊರಟೆ. ಸುತ್ತಲೂ ಬೆಳಕಿನ ಅಬ್ಬರದಲ್ಲಿ ವೃತ್ತಕ್ಕೆ ಬಂದು ನಿಂತೆ. ಎಲ್ಲೆಲ್ಲೂ ದಾರಿಗಳು, ಎಲ್ಲೆಲ್ಲೂ ಬೆಳಕು.  ಕವಲು ದಾರಿಯಲ್ಲಿ ಮನಸ್ಸೂ ಕವಲು ಕವಲಾಗಿ ಹೋಯಿತು. ಎತ್ತ ಚಲಿಸುವುದಕ್ಕೂ ಗೊತ್ತಾಗಲಿಲ್ಲ. ಸುಮ್ಮನೆ ನಿಂತು ಬಿಟ್ಟೆ.
ಮತ್ತೆ ತಪ್ಪು ಮಾಡಿದ್ದು ಅಲ್ಲೇ. ಬೆಳಕು ಹುಡುಕುವ ಹಠದಲ್ಲಿ  ವೃತ್ತದ ಅಷ್ಟೊಂದು ಬೆಳಕಿನ ಮಧ್ಯೆ ನಿನ್ನ ಹಣತೆಯ  ಕುಡಿಯನ್ನು ಗುರುತಿಸಲಾರದೇ ಹೋದೆ. ಹೋಗಲಿ, ಅದರಿಂದ ಚಿಮ್ಮುತ್ತಿದ್ದ ಬೆಳಕಿನ ಕಿಡಿಯ ಪರಿಚಯವೂ ಸಿಗಲಿಲ್ಲ. ಬಹುಶಃ ಬೆಳಕಿನೂರಿಗೆ ಬಂದವರದ್ದೆಲ್ಲಾ ನನ್ನ ಹಾಗೆಯೇ ಇರಬೇಕು. ಪ್ರಯಾಣ ಆರಂಭವಾಗಿದ್ದು, ನಿನ್ನ ಹಣತೆಯ ಬೆಳಕನ್ನು ಹುಡುಕಿಕೊಂಡೇ, ಆದರೆ ತಲುಪಿದ್ದು ಮಾತ್ರ ಬೆಳಕಿನೂರಿನ ವೃತ್ತದಲ್ಲಿ.
ಅಷ್ಟು ದೂರ ಹೋದ ಮೇಲೂ ನಿನ್ನ ಹಣತೆಯ ಮೆಲುದನಿ ಕೇಳಿಸಬಹುದೇನೋ ಎಂದು ಕಿವಿಗಳನ್ನು ತೆರೆದಿದ್ದೆ. ಆದರೂ ಕೇಳಲೇ ಇಲ್ಲ, ಹೀಗೂ ಇರಬಹುದು. ಆ ದನಿ ನನಗೆ ಕೇಳಲೂ ಇಲ್ಲವೇನೋ ? ಅಷ್ಟರಲ್ಲಿ ಬೀಸಿ ಬಂದ ಗಾಳಿಯಲ್ಲಿ ಬತ್ತಿ ಸುಟ್ಟು ಹೋದ ವಾಸನೆ ಮೂಗಿಗೆ ಬಡಿಯಿತು. ಆ ಎಣ್ಣೆಯ ಕಮಟು ವಾಸನೆ ಹಣತೆಯ ಸಾಧ್ಯತೆಯನ್ನು ಒತ್ತಿ ಹೇಳಿತು. ಮತ್ತೆ ವಾಪಸು ಬಂದೆ ನಡೆದು ಹೋದ ದಾರಿಯಲ್ಲೇ.
ಆದರೇನು, ನೀನು ಕತ್ತಲೆಯಲ್ಲಿ ಒಂದಾಗಿ ಬಿಟ್ಟಿದ್ದೆ. ಹಣತೆಯೂ ಅಷ್ಟೇ. ಯಾವುದರ ಗುರುತೂ ಸಿಗಲಿಲ್ಲ. ಬೇಸರದಿಂದ ಮತ್ತೆ ಬೆಳಕಿನೂರಿನ ವೃತ್ತದಲ್ಲೇ ಕಾಯುತ್ತಿದ್ದೇನೆ, ಮತ್ತೆ ಎಂದಾದರೂ ನೀನು ಹಣತೆ ಹಚ್ಚಿ ಬೆಳಕ ಬೀರಿ ನನ್ನನ್ನು ಒಳಗೆ ಕರೆದುಕೊಳ್ಳಬಹುದೆಂದು.
ಆದರೂ ವೃತ್ತದ ಸೀಳುದಾರಿಗಳನ್ನು ಕಂಡು ಭ್ರಮ ನಿರಸನವಾಗಿದೆ. ನನ್ನ ತಪ್ಪನ್ನು ಹೌದೆಂದು ತೀರ್ಪು ಕೊಡಲಿಕ್ಕಾಗದರೂ ಬಾ ಸಾಕು. ತಪ್ಪಿತಸ್ಥನೆಂಬ ಭಾವದಿಂದ ನೆಮ್ಮದಿಯಿಂದಲೇ ಬೆಳಕಿನೂರಿನಲ್ಲಿ ಕಳೆದುಹೋಗುತ್ತೇನೆ, ಕರಗಿಯೂ.
**********
ನೀನು ನಿನ್ನ ನಿರ್ಧಾರ ಪ್ರಕಟಿಸಿ ಹೊರಟು ಹೋದದ್ದಕ್ಕೆ ಇಂದಿಗೆ ಸರಿಯಾಗಿ ಮೂರು ವರ್ಷ. ಕ್ರಿಸ್‌ಮಸ್‌ನ ಮುನ್ನ ದಿನ ಬಂದರೆ ಅದೇ ನೆನಪು. ನನಗನ್ನಿಸಿದ್ದು ಇದೇ. ಅಲ್ಲಿಯವರೆಗೆ ನಿನ್ನ ಅಪ್ಪ ನಿನ್ನ ಮಾತನ್ನು ಕೇಳುತ್ತಿದ್ದವನು ಅದ್ಯಾಕೆ ಅದೊಂದು ದಿನ ಮಾತ್ರ ವಿರುದ್ಧ ನಿಂತ ? ನನಗೂ ಅರ್ಥವಾಗುತ್ತಿಲ್ಲ. ಬೇರೆಯವನನ್ನು ಮದುವೆಯಾಗುವುದಿರಲಿ, ಮದುವೆಯನ್ನೇ ಆಗುವುದಿಲ್ಲವೆಂದು ಹೇಳಿದೆ. ಆ ಹೊತ್ತಿನಲ್ಲಿ ಅದನ್ನು ಸಹಿಸಬಹುದಿತ್ತು. ಆದರೂ ಅಪ್ಪ ಯಾಕೆ ಕಠೋರನಾದ. ಅವನೊಳಗೆ ಯಾವ ದೈವ ಆವಾಹಿತವಾಗಿತ್ತೋ? ಒಂದೂ ತಿಳಿಯದಾಗಿದೆ.
ಪೇಟೆಗೆ ಹೋದವಳು ಕಾಣೆಯಾದವರ ಪಟ್ಟಿಗೆ ಸೇರಿಬಿಟ್ಟೆ. ಪೊಲೀಸ್ ಠಾಣೆಗೆ ದೂರು ನೀಡಿ, ಊರೆಲ್ಲಾ ದೊಡ್ಡ ಸುದ್ದಿಯಾಗಿ ಎಷ್ಟೆಲ್ಲಾ ಅವಾಂತರ. ಕೈಯಲ್ಲಿ ಓದಿದ ಸರ್ಟಿಫಿಕೇಟು ಬಿಟ್ಟು ಬೇರೇನೂ ಒಯ್ದಿರಲಿಲ್ಲ. ಆರು ತಿಂಗಳಾದರೂ ನಿನ್ನ ಪತ್ತೆಯಾಗಲಿಲ್ಲ. ಮನೆಗೆ ಒಂದು ಕಾಗದವಿಲ್ಲ, ದೂರವಾಣಿಯಂತೂ ದೂರದ ಮಾತು. ನಿನ್ನ ತಂಗಿಯ ಓದು ಅರ್ಧಕ್ಕೆ ನಿಂತಿತು.
ಊರಿನವರೆಲ್ಲಾ ಬಾಯಿಗೆ ಬಂದಂತೆ ಮಾತನಾಡತೊಡಗಿದರು. ಸಂಜೆಯಾದರೆ ಊರಿನ ಪಟ್ಟಾಂಗದ ಕಟ್ಟೆಗಳಲ್ಲಿ ಇದೇ ಮಾತು. ಅಷ್ಟೊಂದು ಓದಿಸಿದ ನಿನ್ನಪ್ಪನಿಗೆ ಬುದ್ಧಿ ಇಲ್ಲ ಎಂದು ಕೆಲವರು ಅಂದರು. ಇನ್ನು ಕೆಲವರು ಕೊಂಚ ಉದಾರವಾದಿಗಳಂತೆ, “ಓದಿಸಬಾರದೆಂದಲ್ಲ, ಅಪ್ಪನಾದವರು ಮಕ್ಕಳ ಮೇಲಿನ ಹಿಡಿತ ಬಿಡಬಾರದು’ ಅಂತ ಅಂದರು. ಒಟ್ಟೂ ನೀನು ಕಾಣೆಯಾದದ್ದಕ್ಕೆ ಇಲ್ಲಿ ನೂರೆಂಟು ಕಥೆ.
ವರ್ಷವಾದರೂ ನೀನು ವಾಪಸ್ಸಾಗದಿದ್ದಕ್ಕೆ ಊರಿನವರೆಲ್ಲಾ ಒಂದು ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ. ನೀನು ಸತ್ತಿದ್ದೀಯೆಂದು ನಿರ್ಧರಿಸಿದ್ದಾರೆ. ಅವರು ತಮ್ಮ ತೀರ್ಮಾನಕ್ಕೆ ಕೊಟ್ಟುಕೊಂಡ ಆಧಾರ “ಎಂಥದೇ ಮಕ್ಕಳಾದರೂ, ಅಪ್ಪ-ಅಮ್ಮನನ್ನು ತಿಂಗಳುಗಟ್ಟಲೇ ನೋಡ್ದೆ ಇರ್‍ತವಾ?’ ಎಂಬುದು. ಹೆಚ್ಚೂ ಕಡಿಮೆ ನಿನ್ನಪ್ಪ-ಅಮ್ಮನೂ ಅದೇ ನಿರ್ಧಾರಕ್ಕೆ ಬಂದವರಂತೆ ತೋರುತ್ತಾರೆ. ಇಬ್ಬರಲ್ಲೂ ಉತ್ಸಾಹ ಕರಗಿದೆ, ತಂಗಿ ಮನೆಯಲ್ಲಿ ಅಮ್ಮನಿಗೆ ನೆರವಾಗುತ್ತಿದ್ದಾಳೆ. ಅಪ್ಪ  ಸಂಜೆಯಾಗುವಾಗ ಮೆಲ್ಲಗೆ ತೋಟದಲ್ಲೇ ಸುತ್ತು ಹಾಕಿ ಬರುತ್ತಾನೆ.
ಪೇಟೆಗೆ ಹೋಗುವ ಅಭ್ಯಾಸ ಬಿಟ್ಟಿದ್ದಾನೆ. ಅಪರೂಪಕ್ಕೊಮ್ಮೆ ಹೋದರೂ ಯಾರನ್ನೂ ಮಾತನಾಡಿಸುವುದಿಲ್ಲ. ಯಾರಾದರೂ ಉದ್ದೇಶಪೂರ್ವಕವಾಗಿ ಮಾತನಾಡಿಸಲು “ವ್ಹಾಯ್…’ ಎಂದರೆ ತನಗೆ ಕೇಳೇ ಇಲ್ಲ ಎಂಬವನಂತೆ ಹೋಗುತ್ತಾನೆ. ತಡೆದು ನಿಲ್ಲಿಸಿದರಂತೂ ದುರುಗುಟ್ಟಿ ನೋಡಿ “ನಿಮ್ಮತ್ರ ಮಾತನಾಡಲಿಕ್ಕೆ ಎಂಥ ಉಂಟು ಅಂತಾ? ಎಂದು ಪ್ರಶ್ನೆ ಇಟ್ಟು ದುರುದುರು ನಡೆದು ಬಿಡುತ್ತಾನೆ.
ಅಂಗಳದಲ್ಲಿ ಹೂವು ಅರಳುತ್ತಿವೆ. ಅವುಗಳಲ್ಲಿ ಕಂಪಿಲ್ಲ. ಬಣ್ಣಗಳಲ್ಲೂ ಸೊಬಗಿಲ್ಲ. ತೆಂಗಿನ ಗಿಡಕ್ಕೆಲ್ಲಾ ರೋಗ ಬಂದಂತಿದೆ. ನಿನ್ನಪ್ಪ ಗಮನಿಸುತ್ತಿಲ್ಲ. ಒಟ್ಟೂ ಲಕಲಕ ಹೊಳೆಯಬೇಕಿದ್ದ ಬಾಳ ಬಾನು ಖಾಲಿ ಖಾಲಿ. ಕೊಟ್ಟಿಗೆಯಲ್ಲಿ ದನ ಹತ್ತು ಬಾರಿ ಕೂಗಿದರೆ ಅಮ್ಮ ಒಮ್ಮೆ ಗದರಿಸುತ್ತಾಳೆ. ತಂಗಿ ಹತ್ತಿರದಲ್ಲೇ ಇದ್ದ ಹುಲ್ಲನ್ನೂ ಹಾಕಲಿಕ್ಕೂ ಉದಾಸೀನ ತೋರುತ್ತಾಳೆ. ಒಟ್ಟು ನಿನ್ನ ಕಾಣೆ ಇವರೆಲ್ಲರಲ್ಲಿ ಶೂನ್ಯ ತುಂಬಿದೆ.
ಮನೆಯತ್ತಿರ ಹೋದ ನನ್ನ ಬಳಿ “ಅವಳು ಏನಾಗಿರಬಹುದು?’ ಎಂದು ನಿನ್ನಪ್ಪ ಪ್ರಶ್ನಿಸಿದ. ಆದರೆ ನನ್ನಲ್ಲಿ ಉತ್ತರವಿರಲಿಲ್ಲ. ಸುಮ್ಮನೆ “ಎಲ್ಲೋ ಚೆನ್ನಾಗಿ ಇರಬಹುದು’ ಎಂದೆ. ಆಗ ಒಂದು ಸಣ್ಣಗಿನ ಆಶಯದ ಮಿಂಚು ಹಾದು ಹೋಯಿತು. ಆದರೆ ಅದು ಮಳೆಯಾಗುವ ಲಕ್ಷಣಗಳು ಕಾಣಲಿಲ್ಲ. “ಎಂಥದೋ ಮಾರಾಯ, ನನಗೆ ನಂಬಿಕೆಯಿಲ್ಲ’ ಎಂದ ಅಪ್ಪ ಎದ್ದು ತೋಟಕ್ಕೆ ಹೋದ. ಅಮ್ಮ ಬಾಗಿಲ ಮರೆಯಲ್ಲಿ ಕುಳಿತು ಕಣ್ಣೊರೆಸಿಕೊಳ್ಳುತ್ತಿದ್ದಳು. ತಂಗಿ ಪಡಸಾಲೆಯಲ್ಲಿ ಓದುತ್ತಿದ್ದವಳು ಒಂದು ಕ್ಷಣ ನಿಲ್ಲಿಸಿ ನನ್ನ ಉತ್ತರಕ್ಕಾಗಿ ಕಾದು ಕುಳಿತಿದ್ದರು. ನಾನು ಹೆಚ್ಚು ಹೊತ್ತು ಇರಲಿಲ್ಲ.
********
ಈ ಹಿಂದೆ ಕತ್ತಲೆ ತುಂಬಿಕೊಂಡರೆ ನಕ್ಷತ್ರಗಳು ಕಾಣಬಹುದೆಂಬ ಆಸೆಯಾದರೂ ಇತ್ತು.  ಆದರೆ ಬಾನೇ ಖಾಲಿಯಾದರೆ ಕಾಣುವುದೇನು? ಆದರೂ ಪ್ರತಿ ದಿನ ರಾತ್ರಿ ಅಂಗಳಕ್ಕೆ ಬಂದು ಆಕಾಶದತ್ತ ಮುಖ ಮಾಡಿ ನಾನು ನೋಡುತ್ತೇನೆ. ಏನೂ ಕಾಣುವುದಿಲ್ಲ, ಹಾಗೆಂದು ಹತಾಶನಾಗುವುದಿಲ್ಲ.
ನನಗೆ ಬಣ್ಣ ಬಣ್ಣದ ಕಾಮನಬಿಲ್ಲು ಬೇಕಿಲ್ಲ, ಆದರೆ ಖಾಲಿ ಆಕಾಶವನ್ನು ಸಹಿಸಿಕೊಳ್ಳಲಾರೆ. ಅಲ್ಲಿ ಒಂದಾದರೂ ತಾರೆ ಹೊಳೆಯುತ್ತಿರಲಿ. ಆಗ ಕತ್ತಲಿಗೂ ಒಂದು ಕಳೆ, ಆ ಒಂದೇ ನಕ್ಷತ್ರ ನೀನೇ ಆಗಿರಲಿ ಎನ್ನುವುದು ನನ್ನೊಳಗಿನ ತುಡಿತ.
ನೀನು ಎಲ್ಲಿಯಾದರೂ ಇರು, ಒಮ್ಮೆ ಬಂದು ಕ್ಷಮಿಸಿ ಬಿಡು, ನನ್ನ ತಪ್ಪಿಗೆ ಮೊಹರು ಒತ್ತು. ತಪ್ಪೆಂಬುದು ಸಾಬೀತಾಗಿ ಬಿಡಲಿ, ಬೇಸರವಿಲ್ಲ. ವಿಚಾರಣಾ ಕೈದಿಯಂತೆ ಎಷ್ಟು ದಿನ ಬದುಕುವುದು ? ಶಿಕ್ಷೆ ವಿಧಿಸಿಬಿಡು. ತಪ್ಪು-ಸರಿಯ ಸಂಭವನೀಯತೆ ಮಧ್ಯೆ ಬದುಕುವುದು ಸಾಧ್ಯವೇ ಇಲ್ಲ.

ನೀನು ಹೊಳೆದೇ ಹೊಳೆಯುತ್ತೀಯಾ, ನನಗಂತೂ ನಂಬಿಕೆ ಇದ್ದೇ ಇದೆ. ಅಲ್ಲಿಯವರೆಗೆ ನಾನು ಕಾಯಲಾರೆ. ಕಾಯುವಿಕೆ ಮುಗಿದು ಬಿಡಲಿ, ನಿರಾಳವಾಗಲಿ ಆಗಸ. ಆದದ್ದೆಲ್ಲಾ ಆಗಲಿ, ನಾಳೆ ರಾತ್ರಿ ನೀನು ಆ ಖಾಲಿ ಆಕಾಶಕ್ಕೆ ಕಳೆ ತುಂಬು. ನನ್ನೊಳಗಿನ ಹಣತೆಗೆ ಜೀವ ತುಂಬು.

ತಪ್ಪಿಗೆ ಮೊಹರು ಹಾಕು ಬಾ

ಇವತ್ತು ನಿನ್ನ ಎಲ್ಲ ಷರತ್ತುಗಳಿಗೂ ನಾನು ಬದ್ಧ. ಬಂದು ಬಿಡು. ನೀನು ಹೇಳಿದಂತೆ ಕೇಳುತ್ತೇನೆ. ಎಲ್ಲವನ್ನೂ ಒಪ್ಪಿಕೊಳ್ಳುತ್ತೇನೆ, ಎದುರಾಡುವುದಿಲ್ಲ. ನಿನ್ನಂತೆಯೇ ನಾನೂ ಆಗಿ ಬಿಡುತ್ತೇನೆ ಅದಕ್ಕಾಗಿ ಮನಸ್ಸು-ಬುದ್ಧಿ ಎಲ್ಲವನ್ನೂ ಪಕ್ಕಾಗಿಸಿದ್ದೇನೆ. ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ ; ಉತ್ತರಕ್ಕಾಗಿಯೇ ನನ್ನ ಕಿವಿಗಳಿನ್ನು ಮೀಸಲು. ನನ್ನ ಕಣ್ಣುಗಳೂ ಎತ್ತಲೂ ಚಲಿಸುವುದಿಲ್ಲ ; ನಿನ್ನನ್ನು ಬಿಟ್ಟು. ಇದರ ಆಣೆ ಪಡೆಯಲಾದರೂ ಒಮ್ಮೆ ಬಂದು ಬಿಡು.
ಅಂದು…ನನ್ನ ಬಾಳದಿಕ್ಕು ಬದಲಾಗುವ ಲಕ್ಷಣ ಕಂಡಾಗ ಭವಿಷ್ಯವನ್ನು ಅರಿಯಬೇಕಿತ್ತು. ಅದಾಗಲಿಲ್ಲ. ಆಗ ನಾನು ಸೋತಿದ್ದು ನಿಜ, ಒಪ್ಪಿಕೊಳ್ಳುತ್ತೇನೆ. ಆದರೆ ಅದೇ ಅಪರಾಧ ? ನನ್ನ ಸಾಮಾನ್ಯ ಕಣ್ಣುಗಳಿಗೆ ಅಷ್ಟೊಂದು ದೂರದ ನೋಟ ನಿಲುಕುವುದಾದರೂ ಹೇಗೆ ? ಅದಕ್ಕೇ ನಡೆಯುವುದು ಅನಿವಾರ್ಯ. ನಡೆದೆ. ಏನೂ ಸಿಗಲಿಲ್ಲ. ವಾಪಸು ಹೋದಲ್ಲಿಗೇ ಬಂದೆ. ಅಲ್ಲೂ ಪಡೆಯಲಿಕ್ಕೆ ಏನೂ ಇರಲಿಲ್ಲ. ಆದರೂ ದಾರಿಗೆ ನಾನು ಅಪರಿಚಿತನಾಗಿ ಉಳಿಯಲಿಲ್ಲ.
ನಿನಗೆ ಎಲ್ಲಾ ಗೊತ್ತೇ ಇದೆ. ನೀನು ಹೇಳಿದಂತೆ ಕೇಳಬೇಕಾದ ಆಗ ನಾನು ನಾನಾಗಿರಲಿಲ್ಲ. ನಾನು ನಿಲ್ಲುವ ಕ್ಷಣಗಳೂ ನನ್ನದಾಗಿರಲಿಲ್ಲ. ಎಲ್ಲವೂ ಯಾರದೋ ಆಗಿರುತ್ತಿದ್ದವು. ಅಪ್ಪ…ಅಮ್ಮ…ಅಕ್ಕ…ಅಣ್ಣ… ಚಿಕ್ಕಮ್ಮ… ಚಿಕ್ಕಪ್ಪ… ಸಂಬಂಧಿಕರು…ನೆಂಟರಿಷ್ಟರು…ನೆರೆ ಹೊರೆಯವರು…ಹೀಗೆ ನನ್ನ ಗಳಿಗೆಗಳೆಲ್ಲಾ ಅವರ ಪ್ರಯೋಗಶೀಲತೆಗಿದ್ದ ಅವಕಾಶಗಳಾಗಿದ್ದವು. ಅಕ್ಷರಶಃ ನಾನೊಬ್ಬ ಮಾನವ ರೋಬೊಟ್. ಅದರಲ್ಲೂ ಮಾತು ಬರುವ, ಮೌನ ತಿಳಿದ ರೋಬೊಟ್. ಆ ಎರಡರ ಸ್ವಾತಂತ್ರ್ಯದ ಕಲ್ಪನೆಯನ್ನು ಉದ್ದೇಶಪೂರ್ವಕವಾಗಿ ಮರೆತಿದ್ದೆ. ಮರೆವು ನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದೆಂಬ ನಂಬಿಕೆ ನನ್ನದು. ಆ ಸುದ್ದಿಯನ್ನು ಈಗ ಎತ್ತುವುದು ಬೇಡ, ಬಿಡು. ಎಲ್ಲರ ಪ್ರಯೋಗ ಶಾಲೆಯಲ್ಲಿ ನನ್ನನ್ನೂ ಅರಳಿಸುತ್ತಿದ್ದರು. ಹಾಗೆ ರೂಪುಗೊಳ್ಳುವ ಸ್ಥಿತಿ ತೀರಾ ಕಷ್ಟದ್ದು.
ನನ್ನೊಳಗಿನವನು ಹೊರಬರಲು ಅಣಕುವಾಗಲೆಲ್ಲಾ ಒಳಕ್ಕೆ ತಳ್ಳಿ ಪ್ರಯೋಗಕ್ಕೊಳಗಾಗುತ್ತಿದ್ದ ಪರಿ ಇವತ್ತಿಗೂ ಅಚ್ಚರಿ ಎನಿಸುತ್ತಿದೆ. ಇಂದು ನಿಲ್ಲಲು ಕಲಿತಿದ್ದೇನೆ, ನನ್ನ ಕಾಲುಗಳ ಮೇಲೆ. ನಿನ್ನನ್ನು ಒಪ್ಪಿಕೊಳ್ಳಲು ತಯಾರಿಗಿದ್ದೇನೆ. ಅದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಹೀಗಿರುವಾಗ ಆಗ ಹಾಗಿದ್ದೇನೆಯೇ ಎನ್ನುವುದೇ ನಂಬುವುದು ಕಷ್ಟ ಎನಿಸುತ್ತದೆ. ನಿಜ, ಭವಿಷ್ಯದ ಮುಂದೆ ಭೂತ ಯಾವಾಗಲೂ ಅಮರಚಿತ್ರ ಕಥೆಯಂತೆ ತೋರುತ್ತದೆ. ಅದರಲ್ಲಿನ ಪಾತ್ರಗಳೂ ಸಹ ಅಸಹಜವೆನ್ನಿಸುವುದುಂಟು.
ಒಬ್ಬೊಬ್ಬರದ್ದು ಒಂದೊಂದು ಪ್ರಯತ್ನ ; ಪರಸ್ಪರ ಪೈಪೋಟಿ. ಎಲ್ಲರಿಗೂ “ಮಾರುಕಟ್ಟೆ’ಗೆ ನಮ್ಮದೊಂದು “ಮಾಡೆಲ್” ಬಿಡಬೇಕೆಬ ಹಪಹಪಿಕೆ. ಅಪ್ಪನಿಗೂ ಅಷ್ಟೇ, ನೆಂಟರಿಗೂ ಅಷ್ಟೇ.
ಕಾಲೇಜಿನಿಂದ ಬಂದು ಕುಳಿತಿದ್ದೇ ಅಷ್ಟೇ. ಸಾಗರದಿಂದ ಬಂದ ರಾಮಿ ಮಾವ, “ಎಂಥದೇ, ಇವನಿಗೆ ಎಂಥ ಕಲಿಸ್ತೀದ್ದೀ?’ ಎಂದು ಕೇಳಿದ್ದ. ಕೊಟ್ಟಿಗೆಯಲ್ಲಿದ್ದ ಅಮ್ಮ ಅಲ್ಲಿಂದಲೇ “ಎಂಥದೋ ಮಾರಾಯಾ, ಆರ್ಟ್ಸ್ ಅಂತೆ’ ಎಂದು ಉತ್ತರಿಸಿದ್ದಳು. ರಾಮಿ ಮಾಮಾಗೆ ಬಹಳ ಬೇಸರ ಬಂತು ಅಮ್ಮನ ಉತ್ತರ ಕೇಳಿ. “ಎಂಥದೇ, ನಿಂಗೆ ತಲೆ ಸರಿ ಇಲ್ವಾ? ಸೈನ್ಸ್‌ಗೆ ಕಳಿಸಬೇಕಿತ್ತು’ ಎಂದವನೇ ನನ್ನತ್ತ ತಿರುಗಿ, “ನಿನಗೂ ಬುದ್ಧಿ ಇಲ್ವನಾ, ಹೋಗಿ ಹೋಗಿ ಆರ್ಟ್ಸ್ ತಗೊಂಡು ಎಂಥಾ ಮಾಡ್ತೀ? ’ ಎಂದು ಕೇಳಿದ್ದ. ಆಗ ಉತ್ತರಿಸಲಿಕ್ಕೆ ನನ್ನಲ್ಲಿ ಏನೂ ಇರಲಿಲ್ಲ. ಸುಮ್ಮನೆ ಮನೆಯ ಕಂಬವನ್ನು ನೋಡುತ್ತಾ ನಿಂತೆ.
ಆರ್ಟ್ಸ್‌ನಲ್ಲಿ ಇದನ್ನೇ ಕಲಿಸೋದು, ಕಂಬ ನೋಡಲಿಕ್ಕೆ’ ಎಂದು ರಾಮಿ ಮಾಮಾ ಹಂಗಿಸಿ ಅಪ್ಪ ಬರೋದನ್ನೇ ಕಾಯುತ್ತಾ ಕುಂತ.
ಅಷ್ಟರಲ್ಲಿ ಅಂಗಳದಲ್ಲಿ ಚಪ್ಪಲಿ ಸದ್ದಾಯಿತು. ಅಪ್ಪ ಬಂದ ಎನ್ನುವುದಕ್ಕೆ ಎರಡನೇ ಸದ್ದು. ಒಂದು ಚಪ್ಪಲಿನ ಗೆರೆಸಿ ಗೆರೆಸಿ ಬರುವುದರ ಸದ್ದು, ಮತ್ತೊಂದು ಅಲ್ಲಿಂದಲೇ ಅಮ್ಮನನ್ನು “ಏಯ್…ಏಯ್’ ಎಂದು ಕೂಗುವ ಅಲಾರಾಂ. ಒಳ ಬರುತ್ತಲೇ ರಾಮಿ ಮಾಮಾನ ಆಗಮನವನ್ನು ಕಂಡು “ಎಂಥ ಮಾರಾಯಾ, ದೂರ ಬಂದಿದ್ದೀ?’ ಎಂದು ಕೇಳುತ್ತಿದ್ದಂತೆ ಅಡುಗೆ ಮನೆಯಿಂದ ಅಮ್ಮ ಕುತ್ತಂಬರಿ ಬಿಸಿನೀರು ತಂದಿಟ್ಟಿದ್ದಳು.
ರಾಮಿ ಮಾಮಾ ಮಾತನಾಡಲು ಶುರು ಮಾಡಿದ. ಅಪ್ಪನದು ಸುಮ್ಮನೇ ಕೇಳುವ ಸರದಿ. ತನ್ನ ಆಲೋಚನೆಗಳ ಸರಣಿಯನ್ನೆಲ್ಲಾ ಅಪ್ಪನ ತಲೆಗೆ ಹರಿಬಿಟ್ಟು ಹೊರಟು ನಿಂತ. ರಾತ್ರಿ ಇದ್ದು ಹೋಗು ಎಂದರೂ ಕುದುರೆ ಮೇಲೆ ಬಂದವನಂತೆ ಹೊರಟೇ ಬಿಟ್ಟ. ಮಾಮಾ ಹೋಗಿ ಎಷ್ಟು ಹೊತ್ತಾದರೂ ಅಪ್ಪನ ತಲೆಯೊಳಗೆ ಆಲೋಚನೆಗಳ ಹುಳು ಓಡಾಡುತ್ತಲೇ ಇದ್ದವು. ಯಾವುದೋ ಒಂದು ಕ್ಷಣ ಅಪ್ಪನಿಗೂ ಹೌದೆನಿಸಿತು. “ಹೌದೇ, ಇಂವ ಸೈನ್ಸ್‌ಗೆ ಹೋಗ್ಲಿ’ ಎಂದು ಫರ್ಮಾನು ಹೊರಡಿಸಿಯೇ ಬಿಟ್ಟ.
ನಾನು ಎರಡನೇ ಪ್ರಯೋಗಕ್ಕೆ ರೆಡಿಯಾಗಿ ನಿಲ್ಲುವ ಪರಿಸ್ಥಿತಿ ಎದುರಾಯಿತು. ಅಮ್ಮನಿಗೆ ಯಾವುದು ಕಲಿತರೂ ಸರಿ. ಮರುದಿನ ಎಂದಿನಂತೆ ಕಾಲೇಜಿಗೆ ಹೋದೆ. ನನಗಿಂತ ಮೊದಲೇ ಪೇಟೆ ಕಡೆಗೆ ಹೋದ ಅಪ್ಪ ಹಾಜರಿ ಹಾಕುವವನಂತೆ ಶಾಲೆ ಎದುರಿನಲ್ಲಿದ್ದ. ಮಾಸ್ತರು ಬಂದದ್ದೇ ತಡ, “ಸ್ವಾಮಿ, ಇವನ್ನ ಸೈನ್ಸ್‌ಗೆ ಸೇರಿಸ್ಕೊಳ್ಳಿ’ ಎಂದು ಕೇಳಿದವನೇ ಅವರ ಉತ್ತರ ಬರುವ ಮೊದಲೇ “ಫೀಜು ಜಾಸ್ತಿ ಆದ್ರೆ ಕೊಡ್ತೆ’ ಎಂದ.
ಆದದ್ದು ಅಷ್ಟೇ. ನಂತರದ ಕ್ಷಣದಿಂದಲೇ ನಾನು ವಿಜ್ಞಾನ ವಿದ್ಯಾರ್ಥಿ. ನೀನೇನೋ ನಿಮ್ಮಪ್ಪನಿಗೆ ಹೇಳಿ ನಿನಗಿಷ್ಟವಾದದ್ದನ್ನೇ ತೆಗೆದುಕೊಂಡೆ. ನನ್ನ ಪರಿಸ್ಥಿತಿ ಹಾಗಿರಲಿಲ್ಲ. ನಿಧಾನಕ್ಕೆ ನನ್ನೊಳಗಿನ “ರಸಾಯನ’ ಕ್ಕೆ ವಿಜ್ಞಾನದ ರಸಾಯನವೂ ಒಗ್ಗಿಕೊಳ್ಳುತ್ತಾ ಬಂತು. ಹೇಗೋ ಕಷ್ಟಪಟ್ಟು, ಗುರುನರಸಿಂಹನ ದಯೆ ಎನ್ನಬೇಕೇನೋ? ಪಿಯುಸಿಯನ್ನು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದೆ.
ಆಗಷ್ಟೇ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಬಂದ ಕಾಲ. ಅಲ್ಪಸ್ವಲ್ಪ ವಿದ್ಯೆ ಕಲಿತವರ ಮನೆಯಲ್ಲೂ ವೈದ್ಯಗಿರಿ, ಎಂಜಿನಿಯರ್‌ಗಿರಿ ಬಿಟ್ಟರೆ ಅತ್ತಲೂ ಮನಸ್ಸು ಹೊರಳುತ್ತಿದ್ದ ಸಮಯವದು. ಕಾಲೇಜುಗಳಿಗೂ ವಿದ್ಯಾರ್ಥಿಗಳೆಂಬ ಸಂಖ್ಯೆ ಬೇಕಿತ್ತು. ಅವರ ಪ್ರಯೋಗಕ್ಕೂ ನಾವು ಅಣಿಯಾದೆವು. ನಮ್ಮಪ್ಪನ ಎರಡನೇ ಕಂತಿನ ಪ್ರಯೋಗಕ್ಕೂ ವೇದಿಕೆ ಸಿದ್ಧವಾಗಿತ್ತು. ಪಕ್ಕದ್ಮನೆ ಆಚಾರಿ ಮಗ ಬೊಂಬಾಯಿಯಲ್ಲಿ ಅದನ್ನೇ ಮಾಡ್ತಾ ಇರೋದಂತೆ. ಒಳ್ಳೆ ಕೆಲಸ, ಒಳ್ಳೆ ಸಂಬಳ ಸಿಗುತ್ತಂತೆ. ನಿಮ್ಮ ಮಗನಿಗೂ ಸೇರಿಸಿ.
ಬಹುಶಃ ಮೊದಲ ಮಾತು ಅದೇ ಇರಬೇಕು ಅನ್ಸುತ್ತೆ. ಅಪ್ಪನೆದುರು  ಇದ್ದ ಧೈರ್ಯವನ್ನೆಲ್ಲಾ ಒಂದೆಡೆ ತಂದುಕೊಂಡು “ಬಹಳ ಕಷ್ಟವಾಗುತ್ತೆ’ ಎಂದುಬಿಟ್ಟಿದ್ದೆ. ಅಪ್ಪನ ಕೋಪ ನೆತ್ತಿಗೇರಿತ್ತು. ಶಾಂತವಾಗಿ ಹರಿಯುತ್ತಿದ್ದ ನದಿಯ ಮೇಲೊಂದು ಯಾರೋ ಕೇರಿ ಹುಡುಗ ಬೀಸಿದ ಕಲ್ಲು ಉಂಟು ಮಾಡುವ ತಲ್ಲಣದಂತೆ ಮನೆಯ ಪರಿಸರವೇ ತಲ್ಲಣಗೊಂಡಿತ್ತು. “ನಿನಗೇನೋ ಬೇರೆ ಕೆಲಸ ಇದೆ, ಓದೋದು ಬಿಟ್ಟು. ಈಗ ಕಷ್ಟ ಪಡದೇ ಮುದ್ಕ ಆದ್ಮೇಲೆ ಕಷ್ಟಪಡ್ತೀಯಾ? ಎಂದವನೇ ದುರು ದುರು ನೋಡುತ್ತಾ ಬಾಗಿಲಿಂದ ಹೊರಗೆ ಹೋಗಿ ನಿಂತ.
ತೆಂಗಿನ ಮರದಲ್ಲಿ ಕಾಯಿಗಳು ಹಣ್ಣಾಗಿದ್ದವು. ಕೊಯ್ಯುವವ ನಾಳೆ ಬರುವವನಿದ್ದ. ಸರಿ ಸುಮಾರು ೫೦೦ ರಿಂದ ೭೦೦ ರವರೆಗೆ ಕಾಯಿ ಸಿಗಬಹುದು. ಎಲ್ಲ ಗುಣಿಸಿ-ಭಾಗಿಸಿ, ಕೂಡು-ಕಳೆದು ಒಳ ಬಂದವನೇ ನಿರ್ಧಾರ ಪ್ರಕಟಿಸಿದ. ಶಿವಮೊಗ್ಗದಲ್ಲಿ ಈ ಕೋರ್ಸ್ ಕಲಿಸೋ ಕಾಲೇಜಿದೆಯಂತೆ. ಅಲ್ಲಿ ಇದೇ ಕೋಡಿ ಕಾರಂತರು ಇದ್ದಾರೆ. ಅವರಿಗೆ ಹೇಳ್ತೀನಿ. ಏನೋ ವ್ಯವಸ್ಥೆ ಮಾಡ್ತಾರೆ. ಹೋಗಿ ಕಲಿ ಎಂದು ಹೇಳಿದವನೇ ಪೇಟೆಗೆ ಹೊರಟ.
ನನಗೆ ಅಚ್ಚರಿಯಾದದ್ದು ಅಪ್ಪನ ಲೆಕ್ಕಾಚಾರವ ಕಂಡು. ಕೋರ್ಸ್ ಕಲಿಯೋ ಕಾಲೇಜಿಂದ ಹಿಡಿದು, ಅಲ್ಲಿನ ವ್ಯವಸ್ಥೆ ಬಗ್ಗೆ ಎಲ್ಲಾ ಅಂದಾಜು ಮಾಡಿಬಿಟ್ಟಿದ್ದಾನೆ. ಒಮ್ಮೆ ಅವನ ಕಾಳಜಿ ಬಗ್ಗೆ ಹೆಮ್ಮೆ ಎನಿಸಿದ್ದು ನಿಜ, ಆದರೆ ಹೆಚ್ಚು ಹೊತ್ತು ಇರಲಿಲ್ಲ. ನನ್ನಕ್ಕನಿಗೋ ಸಿಕ್ಕಾಪಟ್ಟೆ ಖುಷಿ. ತನ್ನ ತಮ್ಮ ಸೂಟು-ಬೂಟು ಹಾಕಿಕೊಂಡು, ಆಳು-ಕಾಳು ಇಟ್ಕೊಂಡು ಬರೋ ಠೀವಿ ನೋಡಬೇಕೆನ್ನುವ ಸಂಭ್ರಮ. ಅದನ್ನು ಕೇಳಿ ನನಗೂ ನಗು ಬಂದಿತ್ತು. ಪ್ರಯೋಗ ಮುಗಿಯುವವರೆಗೂ ಹುಮ್ಮಸ್ಸು ಯಾರಲ್ಲೂ ಸತ್ತಿರಲಿಲ್ಲ. ಆದರೆ ಕೊನೆ ಹಂತದಲ್ಲಿ ಪ್ರನಾಳವೇ ಒಡೆದು ಹೋದರೆ ಏನು ಗತಿ ?
ಬಿಬಿಎಂನಲ್ಲಿ ಅಂತಿಮ ವರ್ಷ, ಫೇಲಾಗಿಬಿಟ್ಟೆ. ಸತ್ಯವಾಗ್ಲೂ ಹೇಳ್ತೇನೆ, ಅವತ್ತು ನನ್ನೊಳಗಿನವ ಬಿದ್ದು ಬಿದ್ದು ನಕ್ಕಿದ್ದ. ಅದೂ ಅತ್ಯಂತ ಸಂತೋಷದಿಂದ. ಒಮ್ಮೆಲೆ ಕೇಕೆ ಹಾಕಿ ನಗತೊಡಗಿದ್ದ. ಅವನ ಕೇಕೆಗೆ ಅಂಗಳದ ಹೂವುಗಳ ದಳಗಳೂ ಸಾಥ್ ನೀಡಿದ್ದವು. ಜತೆಗೆ ಕೋರಸ್ ಸೇರಿಸುವಂತೆ ಎಲೆಗಳೂ ಸಹ.
ಸಪ್ಪೆ ಮೋರೆ ಹೊತ್ತುಕೊಂಡು ರೋಬೋಟ್ ಮನೆಗೆ ಬಂತು. ಅದರ ನಿಯಂತ್ರಕ ನಿಯಾಮಕನಿಗಿಂತ ಕಟುಕನಾಗಿ, ರುದ್ರ ಭೀಕರನಾಗಿದ್ದ. ಆ ಕಾಲೇಜಿಗೆ ಸೇರಿದ ಮೇಲೆ ಶಿವಮೊಗ್ಗೆಗೆ ಊರಿನ ಪೈಕಿ ರಾಮು ಮಧ್ಯಸ್ಥರ ಮಗಳ ಮದುವೆಗೆ ಬಂದವ ನನ್ನ ಕಾಲೇಜನ್ನೂ ಹುಡುಕಿಕೊಂಡು ಬಂದಿದ್ದ. ಆಗ ನಾನು ಅಂಗಡಿಯ ಬಳಿ ನಿಂತಿದ್ದೆ. ಅದೆಲ್ಲವೂ ಈಗ ಅವನಿಗೆ ನೆನಪಾಯಿತು ಅಂದುಕೊಂಡದ್ದಕ್ಕಿಂತ ನೆನಪಿಗೆ ತಂದುಕೊಂಡ. ಬಾಯಿಗೆ ಬಂದಂತೆ ಬೈದ, ಅದರಲ್ಲಿ ನಾನು ನಿಷ್ಪ್ರಯೋಜಕ, ಅಯೋಗ್ಯ ಎನ್ನುವುದೆಲ್ಲಾ ಪುಂಖಾನುಪುಂಖವಾಗಿ ಬಂದವು. ಮನೆಯ ಗದ್ದೆ ಕಳೆ ಕೀಳಲು ಬರುತ್ತಿದ್ದ ಅಚ್ಚಿ ಗಂಡನ ಮೇಲೆ ಒಮ್ಮೊಮ್ಮೆ ಪ್ರಯೋಗವಾಗುತ್ತಿದ್ದ ಪದಗಳು ಇವು ಎಂದು ನನ್ನಕ್ಕೆ ಹೇಳಿದ ನೆನಪು.
ಸುಮ್ಮನೆ ತಲೆ ತಗ್ಗಿಸಿಕೊಂಡು ನಿಂತಿದ್ದೆ. ಏನೂ ಮಾತನಾಡಲಿಲ್ಲ. ಅವನಿಗೆ ತನ್ನ “ಮಾಡೆಲ್’ ಯಶಸ್ವಿಯಾಗಲಿಲ್ಲ, ತಾನು ಸೋತೆ ಎಂಬ ಅಸಹನೆ, ಸಿಟ್ಟು ಇತ್ತು. ಜತೆಗೆ ಅಕ್ಕಪಕ್ಕದವರಿಂದ ಮೊದಲೇ ಬೀಸಿಕೊಂಡಿದ್ದ ಹೊಗಳಿಕೆಯ ಗಾಳಿ ಸಹ ಈಗ ಬಿಸಿಯ ಹವೆಯಾಗಿ ತಟ್ಟತೊಡಗಿತು. ಆಚಾರಿ ಬಿಟ್ಟಾನೆಯೇ, “ನಿಮ್ಮ ಹುಡುಗ ಪ್ರಯೋಜನ ಇಲ್ಲಾರೀ’ ಎಂದು ಬಿಟ್ಟಾನೆಂಬ ಭಯ ಅಪ್ಪನದು. ಅವನು ಬರೀ ಅಪ್ಪನಿಗಷ್ಟೇ ಹೇಳುವುದಿಲ್ಲ. ಊರಿಗೇ ಹೇಳುತ್ತಾರೆ ಎಂಬ ಅಳುಕೂ ಸಹ.
ಎಲ್ಲರ ಪ್ರಯೋಗ ಫೇಲಾಗಿತ್ತು ; ನನ್ನೊಳಗಿನವ ಪಾಸಾಗಿದ್ದ. ಅವೆರಲ್ಲರೂ ಸೋತಿದ್ದರು, ಅಂದು ಈಗಲೂ ನೆನಪಿದೆ. ನನ್ನೊಳಗಿನ ಹಣತೆ ಹಚ್ಚಿಕೊಳ್ಳುವ ಧೈರ್ಯ ಬಂತು. ಬೆಳಕಿನಲ್ಲಿ ಒಂದೊಂದೇ ಹೆಜ್ಜೆ ಇಡಲು ಅಭ್ಯಾಸ ಆರಂಭಿಸಿದೆ. ಅದಕ್ಕೆ ನೀನು ಬೇಕಾಗಿತ್ತು. ಆದರೆ…ನೀನಿರಲಿಲ್ಲ.
ಆ ಬೆಳಕಿನೂರಿನಲ್ಲಿ ಬಾಳಬೇಕೆಂಬ ಹಂಬಲ, ಬಾಳಬಹುದೆಂಬ ವಿಶ್ವಾಸ ಹುಟ್ಟಿಸಿದವಳು ನೀನು. ನನ್ನನ್ನು ನಾನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ತೊಡಗಿದಾಗ ಮಾದರಿಗಳು ಬೇಕಿತ್ತು. ಆಗ ಕಂಡದ್ದು ನೀನು. ಅಲ್ಲಿಯವರೆಗೂ ನಾನು ನಿನ್ನನ್ನು ಕಂಡದ್ದು ಹೊರಗಿನಿಂದಲೇ ; ಒಳಗಣ್ಣಿನಿಂದಲ್ಲ.
ನಿನ್ನನ್ನೇ ಹಿಂಬಾಲಿಸಿದೆ ; ಅನುಕರಿಸಿದೆ ; ಅನುಸರಿಸಿದೆ. ಇದ್ಯಾವುದೂ ನಿನಗೆ ತೋರಲಿಲ್ಲ. ಏಕಲವ್ಯನಂತೆ ಬೆಳೆದೆ. ನಿನ್ನಂತೆ ನಾನಾಗಬೇಕೆಂಬ ಹಂಬಲ ಯಾವುದೂ ನಕಲಲ್ಲ ಎಂಬುದನ್ನೇ ನಂಬಿಸಿಬಿಟ್ಟಿತು. ನಿನ್ನ ನಗು, ದುಃಖ, ಹರಟೆ, ಸಿಟ್ಟು ಎಲ್ಲವೂ ನನಗೆ ಬೇಕೆನಿಸುತ್ತಿತ್ತು. ಅದಕ್ಕಾಗಿ ಹಂಬಲಿಸಿದ್ದೆ, ಹೇಳುವ ಧೈರ್ಯ ಸೋತು ಹೋಗಿತ್ತು. ಅದೆಲ್ಲ ನನ್ನಾಗಿಸಿಕೊಳ್ಳಲು ಯಾವುದರ ಭಯವೂ ಇರಲಿಲ್ಲ. “ನಾನಾಗ’ ಬೇಕೆಂಬ ಪ್ರಕ್ರಿಯೆಯಲ್ಲಿ ಬೇರಾವುದರ ಪರಿವೆಯೂ ಇರಲಿಲ್ಲ. ಹಾಗಾಗಿ ನಿನ್ನ ಬೇರಾವುದೂ ನನಗೆ ಅರ್ಥವಾಗಲೇ ಇಲ್ಲ.

(ಹೊಸ ಕಥೆ, ಸ್ವಲ್ಪ ದೊಡ್ಡದಾಗಿದ್ದಕ್ಕೆ ಪೂರ್ವಾರ್ಧವಿದು)

ಯಶವಂತ

 ಜೋರಾದ ಗಾಳಿ ಬೀಸುತ್ತಿದ್ದ ದಿನಗಳವು.
ಮನೆಯ ಹೊರಗೆ ಗೇಟು ತೆಗೆದ ಶಬ್ದವಾಯಿತು. ಯಶವಂತ ಕಿಟಕಿಯಲ್ಲಿ ಇಣುಕಿ ನೋಡಿದ. ಅಂಚೆಯಣ್ಣ ಕೈಯಲ್ಲಿ ಕಾಗದ ಹಿಡಿದು ನಿಂತಂತಿತ್ತು. ಗೇಟಿf1400021.jpgನ ಚಿಲಕ ತೆಗೆಯಲು ಅಮ್ಮನ ಕಡೆ ನೋಡಿದ. ಅಡುಗೆ ಮನೆಯಲ್ಲಿದ್ದ ಅಮ್ಮ ಗೇಟು ತೆಗೆಯುತ್ತಿದ್ದಂತೆ ಅವ ಹೊರಗೆ ನುಗ್ಗಿದ.
ಕಾಗದ ಕಿತ್ತುಕೊಂಡವನೇ ಅಮ್ಮನಿಗೆ ಕೊಟ್ಟ. ಹೊರಗೆ ತಣ್ಣಗೆ ಗಾಳಿ ಬೀಸುತ್ತಿತ್ತು. ಆಹ್ವಾದಕರ ಪರಿಸರ, ಕೊಂಚ ಆಡೋಣ ಎನ್ನಿಸಿತು. “ಅಮ್ಮ, ಇಲ್ಲೇ ಸ್ವಲ್ಪ ಹೊತ್ತು ಆಡಿ ಬರುತ್ತೇನೆ’ ಎಂದ. ಅಮ್ಮನೂ ಒಪ್ಪಿಗೆ ಕೊಟ್ಟಳು ಷರತ್ತಿನೊಂದಿಗೆ. “ಬೇಗ ಬರಬೇಕು, ಗಾಳಿ ಇದೆ, ಹುಷಾರ್’.
ಬಾಗಿಲನ್ನು ಸರಿಸಿ ಅಡುಗೆ ಮನೆಯಲ್ಲಿ ಮಗ್ನಳಾದಳು ಅಮ್ಮ.ಗೇಟಿನ ಎದುರೇ ನಿಂತು ಕ್ಷಣಕಾಲ ಯೋಚಿಸಿದ ಯಶವಂತ, “ಎಲ್ಲಿಗೆ ಆಡಲು ಹೋಗುವುದು, ಯಾರಿದ್ದಾರೆ?’
ಅಷ್ಟರಲ್ಲಿ ಎದುರಿನ ಮರದಿಂದ ಉದುರಿದ ಒಂದು ಹಸಿರೆಲೆ “ನಾನಿದ್ದೀನಲ್ಲಾ” ಎಂದಿತು. “ಭಲೇ, ಭಲೇ’ ಎನ್ನಿಸಿತು ಅವನಿಗೆ. “ನಾನು ನಿನ್ನೊಂದಿಗೆ ಬರಲೇ” ಎಂದು ಕೇಳಿದ.
ಎಲೆಗೇನು ? “ಆಯಿತು’ ಎಂದಿತು. ಗೇಟಿನ ಹೊರಬಂದ ಕ್ಷಣವೇ ಪುಟ್ಟ ಎಲೆಯಾದ. ಅಚ್ಚರಿ ಎನಿಸಿತು ಆತನಿಗೆ. “ಸರಿ, ಎತ್ತ ಹೋಗೋಣ’ ಎಂದು ಪ್ರಶ್ನಿಸಿದ.
“ಎತ್ತಲಾದರೂ, ಗಾಳಿ ಕೊಂಡೊಯ್ದಲ್ಲಿಗೆ’ ಎಂದಿತು ಹಸಿರೆಲೆ. ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಮುದಿ ಎಲೆಯೊಂದು “ಹೀಗೆ ಬೀಸಿದರೆ ನಗರದ ದೊಡ್ಡದೊಂದು ತೊಟ್ಟಿಗೆ ಹೋಗಿ ಬೀಳಬಹುದು’ ಎಂದಿತು. ತಕ್ಷಣವೇ ಹಸಿರೆಲೆ, “ಹ್ಞಾಂ, ಅಲ್ಲಿ ನನ್ನ ನೂರಾರು ಗೆಳೆಯರಿದ್ದಾರೆ, ಸಮಕಾಲೀನರೇ’ ಎಂದು ದನಿಗೂಡಿಸಿತು.
“ಈ ದಿಕ್ಕಿನಲ್ಲಿ ಗಾಳಿ ಬೀಸಿದರೆ ಬಸ್ಸು ನಿಲ್ದಾಣದ ಬಾಗಿಲಿಗೆ ಹೋಗಬಹುದು’ ಎಂದದ್ದು ಮತ್ತೆ ಮುದಿ ಎಲೆಯೇ. ಒಂದುವೇಳೆ ಬಹಳ ಜೋರಾಗಿ ಗಾಳಿ ಬೀಸಿದರೆ ಆಕಾಶ ಮಾರ್ಗದಲ್ಲಿ ನಾವು ಕಾಣದ ಊರಿಗೆ ಹೋಗಿ ಬೀಳಬಹುದು ಎಂದಾಗ ಯಶವಂತನಿಗೆ ಅದೇ ಚೆನ್ನೆಸಿತು.
ಇಷ್ಟಕ್ಕೂ ಮಗ ಬರಲಿಲ್ಲ ಎಂದು ಅಮ್ಮ ಹೊರಬಂದು ನೋಡುತ್ತಾಳೆ, ಯಶವಂತನಿಲ್ಲ. ಗಾಬರಿಯಾಯಿತು. ದೂರದಲ್ಲಿದ್ದ ಎಲೆಗಳ ಮಾತುಕತೆ ಕೇಳಿಸಿ ಮಗನ ಸ್ವರ ಪತ್ತೆ ಹಚ್ಚಿದಳು. “ಬಾರೋ, ಎಲ್ಲಿಗೆ ಹೋಗ್ತೀದ್ದೀಯಾ? ಎನ್ನುತ್ತಲೇ ಅವನನ್ನು ಸೆಳೆದುಕೊಳ್ಳಲು ಮುಂದಾದಳು.
ತಮಾಷೆಯೆಂದರೆ ಗಾಳಿ ಬೀಸಿಯೇ ಬಿಡಬೇಕೇ, ತೊಟ್ಟಿಯ ಕಡೆಗೆ. ಗಾಳಿಯಲ್ಲಿ ಹಾರುತ್ತಾ ಹಾರುತ್ತಾ ಬಂದು ಬಿದ್ದದ್ದು ತೊಟ್ಟಿ ತುದಿಗೆ. ಮುದಿ ಎಲೆ “ಹೋಗಬೇಡಿ, ಅದರಲ್ಲಿ ಬೆಂಕಿ ಇದ್ದಂತಿದೆ. ಹೊಗೆ ಬರುತ್ತಿದೆ’ ಎಂದರೂ ಯಶವಂತ ಮತ್ತು ಹಸಿರೆಲೆ ಕೇಳಲಿಲ್ಲ. “ಬದುಕನ್ನು ಅನುಭವಿಸಬೇಕು, ತೊಟ್ಟಿಯೊಳಗೆ ಇಳಿಯಬೇಕು’ ಎಂದು ಹಠ ಹಿಡಿದವರಂತೆ ಇಳಿಯಲು ಹೋದರು.
ಹಿಂದೆಯೇ ಬಂದ ಅಮ್ಮ, ಮಗನೆಂದು ತಿಳಿದು ಹಸಿರೆಲೆಯನ್ನು ಎತ್ತಿಕೊಂಡವಳೇ ಸರಸರನೆ ಮನೆಯತ್ತ ಹೊರಟೇ ಬಿಟ್ಟಳು. ಯಶವಂತನೂ ಗೆಳೆಯನನ್ನೇ ಹಿಂಬಾಲಿಸಿದ. “ಬದುಕು ತೀರಾ ಸಣ್ಣದು, ಅದರಲ್ಲಿ ಅನುಭವಿಸುವುದೆಷ್ಟಿದೆ ?’ . ಅಷ್ಟರಲ್ಲಿ ಗಾಳಿ ದಿಕ್ಕು ಬದಲಿಸಿ ಹೊರಟಿತ್ತು. ಸಣ್ಣದೊಂದು ಗುಡುಗು, ಜತೆಗೆ ಮಳೆಯ ಹನಿ. ಹಸಿರೆಲೆ ಮತ್ತಷ್ಟು ಹನಿಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಿದ್ಧವಾಯಿತು. ಯಶವಂತ ಬಾಗಿಲಲ್ಲೇ ನೋಡುತ್ತಾ ನಿಂತ. (ಚಿತ್ರ  : ಪ್ರವೀಣ್ ಬಣಗಿ)

 

ಬಾನ ಪ್ರೀತಿ

“ಅವಳು ನಿನಗೆ ಸರಿಯಾದ ಜೋಡಿ’ ಎಂದ ಇವನು.
“ನನಗೂ ಹಾಗೆನಿಸುತ್ತಿದೆ’ ಎಂದ ಅವ.  “ಆದರೆ…’ ಮಾತು ಅರ್ಧಕ್ಕೆ ನಿಂತಿತು. “ಆದರೆ… ಯಾವುದರಲ್ಲಿ ಆಕೆ ನಿನಗಿಂತ ಕನಿಷ್ಠ’ ಎಂದು ಪ್ರಶ್ನೆ ಹಾಕಿದ ಇವನು.
ಅದಕ್ಕೆ ಅವನಲ್ಲಿ ಉತ್ತರವಿರಲಿಲ್ಲ. ಮನಸ್ಸಿನಲ್ಲೇ ತನಗೂ, ಅವಳಿಗೂ ಇರುವ ಸಾಮ್ಯವನ್ನು ಲೆಕ್ಕ ಹಾಕುತ್ತಾ ಹೋದ. ಒಂದು ಹಂತದಲ್ಲಿ ಎಲ್ಲದರಲ್ಲೂ ಆಕೆ ತನ್ನನ್ನೇ ಮೀರುತ್ತಾಳೆ ಎನಿಸಿತು. ಒಳಗಿನ ಮನಸ್ಸು ಅದಕ್ಕೆ ಒಪ್ಪಲಿಲ್ಲ.
“ಆದರೂ…’ ಮತ್ತೆ ರಾಗ ಎಳೆದ. ಇವನಿಗೆ ಅರ್ಥವಾಗಲಿಲ್ಲ.
“ಏನು ಬಣ್ಣವೇ…?’ ಪ್ರಶ್ನೆ ಇಟ್ಟ. ತಕ್ಷಣವೇ ಎಚ್ಚೆತ್ತುಕೊಂಡವನಂತೆ ಅವನು “ಬಣ್ಣ ಕಟ್ಟಿಕೊಂಡು ಬದುಕು ನಡೆಸಲಾಗುವುದೇ?’ ಆಧ್ಯಾತ್ಮಿಯಂತೆ ಮತ್ತೇ ಪ್ರಶ್ನೆಯನ್ನೇ ಸೃಷ್ಟಿಸಿದ.
ಮತ್ತೆ, “ಲಕ್ಷಣದಲ್ಲೋ?’ ಇವನದ್ದು ಹೊಸ ಪ್ರಶ್ನೆ.
ಅದಕ್ಕೂ ಇವನದ್ದೂ “ಅದೂ ಮುಖ್ಯವಲ್ಲ’ ಎಂದು ನೀಡಿದ್ದು ಮೊದಲ ಉತ್ತರ.
ಹಾಗಾದ್ರೆ ಸುಮ್ಮನೆ ತಡ ಮಾಡಬೇಡ. ಪ್ರಪೋಸ್ ಮಾಡಿ ಬಿಡು ಎಂದ ಈತ.
ನನ್ನ ಮನಸ್ಸಲ್ಲೇಕೋ ಹಿಂಜರಿಕೆ ಎಂದ ಆತ.
“ಸರಿ, ಅವಳೇ ಹೇಳಲಿ ಬಿಡು’ ಎಂದು ನಿರ್ಧಾರಕ್ಕೆ ಬಂದವನಂತೆ ಇವನೆಂದ.
“ನೋಡು, ಅವಳೂ ತನ್ನನ್ನು ತಾನು ಪ್ರೀತಿಸಿಕೊಳ್ಳುವಳೇ?’ ಎಂದು ಹೊಸ ಅನುಮಾನ ಇಟ್ಟ ಅವನು.
ವಿಚಿತ್ರವೆನಿಸಿತು. ಪ್ರೀತಿ ಪರಸ್ಪರವೋ, ಸ್ವಗತವೋ ಎಂಬ ಜಿಜ್ಞಾಸೆಗೆ ಜಾಗ ಸಿಕ್ಕಿತು.
ಅಷ್ಟರಲ್ಲಿ ಅವಳೇ ಬಂದು ಬಿಟ್ಟಳು. ಮುಗುಳ್ನಗೆ ಅವಳನ್ನು ಹಿಂಬಾಲಿಸಿತು.
ಅವನು ಸುಮ್ಮನೆ ನೋಡುತ್ತಲೇ ಇದ್ದ. ಇವನು ಜಿಜ್ಞಾಸೆಯಲ್ಲಿ ಮುಳುಗಿ ಒದ್ದೆಯಾಗಿದ್ದ.
ಆ ಮುಗುಳ್ನಗೆಯಲ್ಲಿ  ಒಲವಿನ ಪರಿಮಳವಿತ್ತು. ಅವನಿಗೆ ಅದು ತಿಳಿಯುವಷ್ಟರಲ್ಲಿ ಹೊರಗೆ ಜೋರಾದ ಮಳೆ. ಕೊಂಚ ಗುಡುಗೂ ಸಹ. ಆಕಾಶದ ಪ್ರೀತಿ ಹನಿ ಹನಿಯಾಗಿ ಭೂಮಿಯನ್ನು ಅಪ್ಪುತ್ತಲೇ ಇತ್ತು.
ಅದರ ಮಧ್ಯೆ ಅವಳು ಕರಗಿಹೋದಳು, ಮತ್ತೆ ಕಾಣಲೇ ಇಲ್ಲ.

ಅವಳು ಅತ್ತಳು

ಅವಳು ಅತ್ತಳು. ಹೌದು. ನಾವು ಅಳುವ ಹಾಗೆ. ಇಷ್ಟೊಂದು ದೊಡ್ಡವಳಾಗಿಯೂ ಅವಳು ಅಳುತ್ತಾಳೆ. ವರ್ಷಗಳೇ ಕಳೆದು ಹೋಗಿದ್ದವು. ವೆಂಕು ಅವಳು ಅತ್ತದ್ದನ್ನು ಕಂಡಿರಲಿಲ್ಲ. ಆದರೆ ಮೊನ್ನೆ ಅತ್ತಿದ್ದಾಳೆ, ಚಿಕ್ಕ ಮಕ್ಕಳ ಹಾಗೆ. 
*  *  *  *  *  *  *  *
ಬದುಕಿನ ಸೇತುವೆಯ ತುದಿಯಲ್ಲಿದ್ದಾಳೆ ಅವಳೀಗ. ಹತ್ತ್ಹೆಜ್ಜೆ ಇಟ್ಟರೆ ಬಹುಶಃ ಪಯಣ ಮುಗಿಯಬಹುದು ; ಒಂದು ತುದಿ ತಲುಪಿದಂತೆ. ಅಲ್ಲಿಂದ ಮತ್ತೊಂದು ತುದಿಯತ್ತ ಪಯಣಿಸುವುದು ನಂತರದ್ದು. ಮೊದಲಿನ ಹಾದಿಯಂತೂ ಪೂರ್ಣ.
ಅವಳ ಮನೆಯಲ್ಲೀಗ ಯುಗಳ ಗೀತೆ. ತಾನಾಯಿತು, ತನ್ನ ಪತಿಯಾಯಿತು, ಅಷ್ಟೇ. ಬದುಕೇ ಮತ್ತೊಂದು ಮಗ್ಗಲು ಬದಲಿಸಿದೆ. ಮೊನ್ನೆವರೆಗಿದ್ದ ಭಾವನೆಗಳೇ ಬೇರೆ. ಈಗಲೇ ಬೇರೆ. ಅಂದು ಇವರಿಬ್ಬರೂ ಬರೀ ಅಪ್ಪ-ಅಮ್ಮ. ಈಗ ಅಜ್ಜಿ-ತಾತನೂ ಆಗಿದ್ದಾರೆ. ಬೇರೆಯದೇ ಆದ ಜವಾಬ್ದಾರಿಗಳಿವೆ. ಅದಕ್ಕಾಗಿ ಒಂಟಿತನ ಎನಿಸುವುದಿಲ್ಲ.
ಹೇಮಂತ ಗಾನದಲ್ಲೇ ಲೀನವಾಗುತ್ತಲೇ ಅಸ್ತಿತ್ವವನ್ನು ಕಳೆದುಕೊಳ್ಳುವ ಮರ ಮತ್ತೆ ವಸಂತನ ಹಾಡಿಗೆ ಚಿಗುರುತ್ತಾ ಬರುವ ಹಾಗೆ, ಇವರೂ ಮೊಮ್ಮಕ್ಕಳ ಆರೈಕೆಯಲ್ಲಿ ಚಿಗುರುತ್ತಿದ್ದಾರೆ. ನಮ್ಮ ಹೊಣೆಯಿನ್ನೂ ಮುಗಿದಿಲ್ಲ ಎನ್ನುವ ಭಾವ ಇವರಿಬ್ಬರದ್ದೂ.
ಬೇಸರವಾಯಿತೆಂದರೆ ಮಾತನಾಡಲು ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ. ಅವರೊಂದಿಗೆ ನೆನೆಸಿಕೊಂಡಾಗಲೆಲ್ಲಾ ಆಡಲು ಅವಕಾಶವಿಲ್ಲದಿದ್ದರೂ ಮಾತನಾಡಬಹುದು. ಮಕ್ಕಳೆಲ್ಲಾ ಸೇರಿ ದೂರದ ಹಳ್ಳಿಯಲ್ಲಿರುವ ಅವಳ ಮನೆಗೆ ಫೋನ್ ಹಾಕಿಸಿದ್ದಾರೆ. ಅದುವೇ ಸಂಪರ್ಕ ಸೇತು. ಎಲ್ಲಿಯವರೆಗೆ ಮೊಮ್ಮಕ್ಕಳು ತಮ್ಮ ಅಜ್ಜಿಗೆ ಪಪ್ಪಿ ಕೊಡಬೇಕೆಂದರೂ ಫೋನ್ ಬೇಕು. ಅಲ್ಲಿಯವರೆಗೆ ಇದು ಸಂಪರ್ಕ ಸಾಧನ.
ಕೊರತೆ ಇವಳನ್ನೂ ಬಿಟ್ಟಿಲ್ಲ. ಬಹಳ ಸಾರಿ ಥೂ ಎಂಥಾ ಜೀವನ? ಹಡೆದ ಮಕ್ಕಳನ್ನು ಕಾಲ ಬಳಿ ಇರಿಸಿಕೊಳ್ಳೋದು ಒಂದು ಬದುಕೇ? ನೆನೆಸಿಕೊಂಡಾಗ ನೋಡಲಾಗದ್ದೂ ಜೀವನವೇ? ಎಂದೆಲ್ಲಾ ಅನಿಸಿದ್ದುಂಟು. ತಕ್ಷಣವೇ ಸಮರ್ಥನೆ ಅವಳನ್ನು ಆವರಿಸಿಕೊಂಡು ಬಿಡುತ್ತದೆ. ಬದುಕಿನಲ್ಲಿ ಭವಿಷ್ಯ ಹುಡುಕಿಕೊಂಡು ಹೋದವರೆಲ್ಲಾ ಒಂದಲ್ಲಾ ಒಂದು ಬಾರಿ ದಾರಿ ತಪ್ಪಲೇಬೇಕು. ಸಂತೋಷದ ಸಂಗತಿಯೆಂದರೆ ಭವಿಷ್ಯ ಸಿಕ್ಕ ಮೇಲಾದರೂ ದಾರಿಗೆ ಬರುತ್ತಾರಲ್ಲ ಅದು.
ಅಷ್ಟಕ್ಕೇ ಸುಮ್ಮನಾಗುತ್ತಾಳೆ. ಗಡಿಯಾರದ ಮುಳ್ಳು ನಿಂತಿರುವುದಿಲ್ಲ, ಓಡುತ್ತಲೇ ಇರುತ್ತದೆ. ಹಾಗೆಯೇ ಇವಳ ತಲೆಮೇಲಿನ ಒಂದು ಕಪ್ಪುಕೂದಲು ಬಹಳ ವರ್ಷದ ತಪಸ್ಸೆಂಬಂತೆ ಬೆಳ್ಳಗಾಗಿ ನಗುತ್ತಲಿರುತ್ತದೆ. ಕಲ್ಲಾದ ಅಹಲ್ಯೆಗೆ ಮತ್ತೆ ಜೀವವಾದ ಕ್ಷಣದಂತೆ ಈ ಕೂದಲಿಗೆ. 
ಆಗಾಗ್ಗೆ ಅಂದುಕೊಳ್ಳುತ್ತಾಳೆ ಇವಳು. “ನಾನೋ ವಾಸಿ. ನನ್ನ ಅಮ್ಮನ ಕಾಲದಲ್ಲಿ ಫೋನೆಲ್ಲಿತ್ತು? ಬಹಳ ಹತ್ತಿರವೆನಿಸುವ ಬೆಂಗಳೂರಿಗೂ ಹೋಗಲಿಕ್ಕೆ ಎರಡು ದಿನ ಬೇಕಿತ್ತಂತೆ. ಒಂದಾಣೆ ಗಳಿಸುವುದೂ ಕಷ್ಟವೆಂದಿದ್ದಾಗ ಬಸ್ಸಿನಲ್ಲಿ ಹೋಗುವುದೆಂದರೆ ಮೊನ್ನೆ ಮೊನ್ನೆಯ ಏರೋಪ್ಲೇನ್‌ನಲ್ಲಿ ಹೋದಷ್ಟೇ ದುಬಾರಿ. ಈಗ ಕಪ್ಪುಮಸಿಯಂತಿನ ಟಾರು ಬಳಿದ ರಸ್ತೆಗಳೆಲ್ಲಾ ಸಿಂಗರಿಸಿಕೊಂಡಿವೆ. ಅವುಗಳನ್ನು ಮೆಟ್ಟಿಕೊಂಡು ಹೋಗಲು ನೂರಾರು ಬಸ್ಸಿವೆ, ಪ್ರತಿ ಅರ್ಧಗಂಟೆಗೊಮ್ಮೆ ಶಿವಮೊಗ್ಗದ ಬಸ್ಸು ನಿಲ್ದಾಣದಿಂದ ಬೆಂಗಳೂರಿಗೆ ಬಸ್ಸು ಹೊರಡುತ್ತದೆ. ಕಂಡಕ್ಟರ್ ಕೂಗಿ ಕರೆಯುತ್ತಾನೆ, “ಬೆಂಗಳೂರಿಗೆ ಬರುವವರು ಬನ್ನಿ’ ಎಂದು. ಹೀಗೆ ಬೆಳೆದ ಊರಿನ ಕಥೆ.
ಊರು ಬೆಳೆದದ್ದು ನಿಜ, ಹಳ್ಳೆಯಲ್ಲಾ ಕರಗಿ ಪಟ್ಟಣವಾಗುವಾಗ ಬೆರಗಿನಿಂದ ಅದರ ಫಳಫಳ ಕಾಂತಿ ಕಂಡು ಮೂರ್ಛೆ ಹೋದವರಿದ್ದಾರೆ. ಅವರ ಕಣ್ಣಲ್ಲಿ ಇನ್ನೂ ಹೊಳಪು ಆರಿಲ್ಲ. ಆದರೆ ಇವಳಿಗೆ ವಯಸ್ಸಾಗಿದೆ. ಜತೆಗೆ ಇವಳ ಪತಿಗೂ.  ಮಕ್ಕಳೆಲ್ಲಾ ಈಗ ಬೆಂಗಳೂರಿನ ನಿವಾಸಿಗಳು. ಒಬ್ಬೊಬ್ಬರದೂ ಒಂದೊಂದು ಉದ್ಯೋಗ.
ಮೊದಲೇ ಹೇಳಿದಂತೆ ಮನೆಯಲ್ಲೀಗ ಇವರಿಬ್ಬರೇ. ಎಪ್ಪತ್ತೈದು ತುಂಬಿದ ಪತಿ, ಅರವತ್ತು ತುಂಬಿದ ಸತಿ ಅಂದರೆ ಇವಳು. ಮೊನ್ನೆವರೆಗೂ ಈತನೂ ಸುಮ್ಮನಿರಲಿಲ್ಲ. ಏನಾದರೊಂದು ಮಾಡುತ್ತಲೇ ಇದ್ದ. ಯಾವುದೂ ಕೈಗೆ ಹತ್ತಲಿಲ್ಲ ಎಂಬ ಬೇಸರಕ್ಕಿಂತಲೂ ಎಲ್ಲವನ್ನೂ ಪ್ರಯತ್ನಿಸಿದ್ದೇನೆ ಎಂಬ ಸಮಾಧಾನ ಅವನದ್ದು. ಹಾಗಾಗಿ ಬೇಸರದ ಭಾರ ಹೊತ್ತು ದಿನ ಕಳೆಯುತ್ತಿಲ್ಲ. ಅತ್ಯಂತ ಹಗುರಾಗಿ ತನ್ನ ಪ್ರಯತ್ನಶೀಲ ಮನೋಭಾವಕ್ಕೆ ಗ್ರೇಸ್ ಮಾರ್ಕ್ಸ್ ಕೊಟ್ಟುಕೊಂಡಿದ್ದಾನೆ. ಅವನ ಲೆಕ್ಕದಲ್ಲಿ ಪಾಸ್ !
 *  *  *  *  *  *  *  *
ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಇವಳು ಏನಾಗಿದ್ದಳು ? ತಲೆಯ ಮೇಲೆ ಮಕ್ಕಳ ಭವಿಷ್ಯ ರೂಪಿಸುವ ಹೊರೆ ಹೊತ್ತಿದ್ದಳು. ಅದನ್ನು ಇಳಿಸುವವರೆಗೂ ಅವಳದ್ದು ಕಷ್ಟದ ಜತೆಗೇ ದೋಸ್ತಿ. ಪೇಟೆಬೀದಿಯ ಬದಿಯಲ್ಲಿ ಪುಟ್ಟ ಅಂಗಡಿ ನಡೆಸುತ್ತಿದ್ದವಳು. ಅಪ್ಪ-ಅಮ್ಮ ಕಲಿಸಿದ್ದ ಆಗಿನ ಎಂಟನೇ ಇಯತ್ತೆಯಲ್ಲಿ ಕಲಿತ ಲೆಕ್ಕಗಳೆಲ್ಲವೂ ಇಲ್ಲಿ ಉಪಯೋಗಕ್ಕೆ ಬಂದಿತ್ತು. ಬದುಕಿನ ಲೆಕ್ಕಾಚಾರದಲ್ಲಿ ಸ್ವಲ್ಪ ಹಿಂದೆ ಮುಂದೆ ಆಗಿದ್ದರೂ ವ್ಯಾವಹಾರಿಕತನಕ್ಕೆ ಮೋಸವಿರಲಿಲ್ಲ. ಬೆಳ್ಳಂಬೆಳಗ್ಗೆ ಐದೂವರೆಗೆ ಅಂಗಡಿ ತೆಗೆದರೆ ರಾತ್ರಿ ೧೦ ರ ಕಡಿಮೆ ಮುಚ್ಚುವುದಿಲ್ಲ. ಅದರ ನಡುವೆಯೇ ಊಟ, ತಿಂಡಿ ಮಾಡಿಕೊಂಡರೆ ಕೈಗೆ ಬಂದ ಮಕ್ಕಳು ಮನೆ ನಿಭಾಯಿಸುತ್ತಾರೆ.
ಆಗಿನ ಎಂಟನೇ ಇಯತ್ತೆಯಂದರೆ ಈಗಿನ ಡಿಗ್ರಿಗೆ ಸಮಾನ. ಅವಳು ಪ್ರಾಥಮಿಕ ಶಾಲೆಯ ಟೀಚರ್ ಆಗಬೇಕಿತ್ತು. ಅದೂ ಅವಳಿಗೆ ಇಷ್ಟವಿತ್ತು. ಯಾಕೋ ಹಾಗಾಗಲಿಲ್ಲ. ಅದಕ್ಕೇ ಉದ್ಯಮಿಯಾಗಿದ್ದಳು. ಏನೆಲ್ಲಾ ಗೊಂದಲದ ಮಧ್ಯೆಯೂ ಬದುಕನ್ನು ತೂಗಿಸದಿದ್ದರೆ ಬಾಳಿದ್ದಕ್ಕೇನು ಸಾರ್ಥಕ ಎಂಬತಿದ್ದಳು. ಎಷ್ಟೋ ಬಾರಿ ಗೋಡೆಗೆ ಎದುರಾಗಿ ಅತ್ತಿದ್ದಾಳೆ, ಅವಳು.  ಅದನ್ನು ಕಂಡು ಮಕ್ಕಳೆಲ್ಲಾ ಅತ್ತಿವೆ, ಏನೂ ಅರ್ಥವಾಗದೇ, ಏನೂ ಮಾಡಲು ಸಾಧ್ಯವಾಗದೇ.
ಆತ ಪ್ರಯತ್ನಶೀಲತೆಯಲ್ಲಿ ಮುಳುಗಿದ್ದ. ಪ್ರಯತ್ನ ಫಲಕೊಡುವವರೆಗೆ ಹೊರೆ ಹೊರಬೇಕಾಗಿದ್ದವಳು ಇವಳೇ. ಆದರೆ ಪ್ರತಿಯೊಂದೂ ಪ್ರಯತ್ನವೇ ಆಗಿತ್ತು. ನೆಲದಲ್ಲಿ ಊರಿದ ಬೀಜ ಮೊಳೆಯುವ ಮೊದಲೇ ಒಣಗಿಬಿಟ್ಟರೆ, ಯಾವುದೋ ಹುಳು ತಿಂದು ಬಿಟ್ಟರೆ ಏನು? ಹೊರೆಯ ಭಾರ ಹೆಚ್ಚಾಗುತ್ತದಷ್ಟೇ. ಅಷ್ಟೇ ಆಗುತ್ತಿತ್ತು.
ಒಮ್ಮೆ ಕುಂಟುತ್ತಾ, ಮತ್ತೊಮ್ಮೆ ಅಕ್ಷರಶಃ ಬಿದ್ದೇ, ಮತ್ತೆ ಎದ್ದು ಹೇಗೋ ನಡೆದುಕೊಂಡು ಬಂದಿದ್ದಾಳೆ ಸೇತುವೆಯ ಒಂದು ತುದಿಗೆ. ಒಬ್ಬಳೇ ಬಂದಿಲ್ಲ, ಎಲ್ಲರನ್ನೂ ಸಂಗಡ ತಂದಿದ್ದಾಳೆ. ಅವರೆಲ್ಲಾ ಈಗ ದೂರದಲ್ಲಿದ್ದಾರೆ. ಇವರಿಬ್ಬರೇ ಹತ್ತಿರದಲ್ಲಿ, ಮುಖಾಮುಖಿ. ಅವಳಿಗನಿಸಿದ್ದನ್ನು ಇವನಿಗೆ ಹೇಳಬೇಕು. ಇವನ ಮಾತ ಕೇಳಬೇಕು. ದಿನ ಕಳೆಯುವುದಕ್ಕೆ ಅಷ್ಟಾದರೂ ಮಾಡಲೇಬೇಕು.
  *  *  *  *  *  *  *
ಕಾಲ ನೂಕಲಿಕ್ಕೆ ಟಿವಿ ಗೆ ಮೋರೆ ಹೋಗುತ್ತಾರೆ ಇಬ್ಬರೂ. ಅದೇ ಹಳಸಲು ಧಾರಾವಾಹಿಗಳು. ಪಾತ್ರಗಳಲ್ಲಿ ಜೀವಂತಿಕೆಯಿಲ್ಲ, ಜೀವವೂ ಇಲ್ಲ. ಜೀವನವೆಂದುಕೊಂಡು ಜೀವಿಸುತ್ತಾರೆ ; ಜೀವನದಲ್ಲಲ್ಲ. ಬಹಳ ಬೋರೋ ಬೋರು. ಅಲ್ಲಿನ ಒಂದೊಂದೂ ಪಾತ್ರ ಬದುಕಿನಿಂದ ಓಡಿಹೋಗಲು ಕಲಿಸುತ್ತಿವೆ ಎನಿಸುತ್ತದೆ. ಆತ ಹೇಳುತ್ತಾನೆ, “ಏನೇ, ಟಿ.ವಿ ಆಫ್ ಮಾಡು. ಎಂಥಾ ಕೆಟ್ಟ ಧಾರಾವಾಹಿ? ಸೀರಿಯಲ್ ಮಾಡೋವನಿಗೆ ಬದುಕಿನ ಕನಿಷ್ಟ ಅರ್ಥವೂ ತಿಳಿದಿರೋದಿಲ್ಲವಲ್ಲಾ?’ ಎನ್ನುತ್ತಾನೆ.
ಇವಳಿಗೂ ಹಾಗೆಯೇ ಅನಿಸುತ್ತದೆ. ಟಿ. ವಿ. ಆಫ್ ಮಾಡಿ ಮೂಲೆಗೆ ಸರಿದು ವರ್ತಮಾನ ಪತ್ರಿಕೆ ದಿಟ್ಟಿಸುತ್ತಾ ಕುಳಿತುಕೊಳ್ಳುತ್ತಾಳೆ. ಈತನೋ ಯಾವುದೋ ಧರ್ಮ ಜಿಜ್ಞಾಸೆಯ ಪುಸ್ತಕಕ್ಕೆ ಮೊರೆ ಹೋಗುತ್ತಾನೆ. ಯಾಕೆಂದರೆ ಜಿಜ್ಞಾಸೆಯಲ್ಲಿ ಮುಳುಗಿದವರಿಗೆ ಗಡಿಯಾರದ ಸದ್ದು ಕೇಳಿಸುವುದಿಲ್ಲ !
ವರ್ತಮಾನ ಪತ್ರಿಕೆಯಲ್ಲಿ ಏನಿದೆ? ಬದುಕಲಿಕ್ಕೆ ಏನಾದರೂ ಒಂಚೂರು. ಇಲ್ಲವಲ್ಲ ; ಅಲ್ಲೂ ಅದೇ, ಒಣಗಿದ ಪದಗಳು. ರಸವೂ ಇಲ್ಲ, ಆರ್ದ್ರವೂ ಇಲ್ಲ. ಸಾಯುವ ಮುನ್ನಾಗಿನ ವೈರಾಗ್ಯ ಕರುಣಿಸುವಂತೆ ಪತ್ರಿಕೆಗಳಿವೆ ಎಂದೆನಿಸುತ್ತದೆ . ಯಾಂತ್ರಿಕವಾಗಿ ಪುಟಗಳನ್ನು ತಿರುಗಿಸುತ್ತಾ ಹೋಗುತ್ತಾಳೆ. ಗಂಟೆ ಒಂಬತ್ತಾಗುವವರೆಗೂ ಇದನ್ನೇ ಮಾಡಬೇಕು.
ನಾವು ಬದುಕುತ್ತಿದ್ದಾಗ ಬದುಕು ಹೀಗಿತ್ತೇ? ಎಂದುಕೊಂಡವಳಿಗೆ ಏನೂ ಉತ್ತರ ಹೊಳೆಯುವುದಿಲ್ಲ. “ಏನ್ರೀ, ನಮ್ಮ ಕಾಲದಲ್ಲಿ ಬದುಕು ಹೀಗಿತ್ತಾ?’ ಎಂದು ಪತಿಯನ್ನು ಕೇಳುತ್ತಾಳೆ. “ನೋಡೇ, ಬದುಕು ಯಾವಾಗಲೂ ಹೀಗೆಯೇ ಇರುತ್ತದೆ. ಪ್ರತಿ ಹೂವು ಅರಳಿದಾಗಲೂ ಹೇಗಿರುತ್ತೇ ? ಮೊದಲ ಹೂವು ಅರಳಿದಂತೆ ತಾನೇ, ಅಂತೆಯೇ ಬದುಕೂ ಸಹ. ಕೆಲವೊಮ್ಮೆ ಬಿಸಿಲಿಗೆ ಬಾಡುತ್ತಿದ್ದೇನೆ ಎಂಬ ಭಾವ ಹೂವಿಗೆ ಬರುತ್ತೆ, ಉದುರಿ ಹೋಗುತ್ತೆ. ಹಾಗೆಯೇ ನಮಗೂ’ ಎಂದು ಅಧ್ಯಾತ್ಮದ ಶೈಲಿಯಲ್ಲಿ ಉತ್ತರ ಕೊಟ್ಟುಬಿಟ್ಟ.
ಇದರಿಂದ ತೃಪ್ತಿಯಾಗಲಿಲ್ಲ. ಮತ್ತೆ “ನಮ್ಮ ಕಾಲದಲ್ಲಿ ಬದುಕು ಹೀಗಿತ್ತಾ?’ ಎಂದು ತಲೆ ಕೆಡಿಸಿಕೊಂಡು ಕುಳಿತಳು. ಪುನಃ ಉತ್ತರ ಸಿಗಲಿಲ್ಲ. ವಾಸ್ತವವಾಗಿ ಉತ್ತರ ಸಿಗಲಿಕ್ಕೆ ಕಷ್ಟವಿದೆ. ಕಾರಣ ಗೊತ್ತೇ ಇದೆ. ಅವಳಿಗೆ ಬದುಕು ಹೇಗಿತ್ತು ಎಂದು ನೋಡಲಿಕ್ಕೆ ಪುರಸೊತ್ತಿರಲಿಲ್ಲ. ಅಂಗಡಿ, ಮನೆ, ಮಕ್ಕಳು, ಪತಿ ಎನ್ನುವುದರಲ್ಲೇ ದಿನ ಮುಗಿದು ಹೋಗುವಾಗ ಯಾವುದು ಹೇಗಿತ್ತು? ಎಂಬುದು ಅರ್ಥವಾಗೋದು ಹೇಗೆ?
ಆದರೂ ಬದುಕು ಹೀಗಿರಲಿಲ್ಲ. ಅಪ್ಪ-ಅಮ್ಮನನ್ನೇ ಮರೆತು ಬಿಟ್ಟಿದ್ದೇವೆ ಎಂಬಂತೆ ಮಕ್ಕಳು ಇರಲು ಸಾಧ್ಯವೇ ಇರುತ್ತಿರಲಿಲ್ಲ. ಕುಂದಾಪುರದ ಐತಾಳರ ಮಾಣಿ ಮನೆ ಗಲಾಟೆ ಸಾಕು ಅಂತ ಬೆಂಗಳೂರು ಪೇಟೆಗೆ ಓಡಿದ್ ಮಾಣಿ  ಹತ್ತೇ ದಿನಕ್ಕೆ ವಾಪಸ್ಸಾಗಿರಲಿಲ್ವಾ? ಎಲ್ಲಿಗೆ ಹೋಗಿದ್ದೀ ಅಂತಾ ಕೇಳಿದರೆ, ಬೆಂಗಳೂರಿಗೆ ಹೋಗಿದ್ದು ನಿಜ. ಆದರೆ ಅಲ್ಲಿ ಇರೋದು ಹೇಗೆ? ಹೋಟೆಲಿನಲ್ಲಿ ಬೆಳಗ್ಗೆ ಮೀಯಲಿಕ್ಕೆ ಬಿಸಿನೀರು ಕೋಡೋಕೆ ಮ್ಯಾನೇಜರ್ ಎಷ್ಟೆಲ್ಲಾ ಮಾತಾಡ್ತಾನೆ? ಅಂದ ಮಾಣಿಗೆ ಜ್ಞಾನೋದಯವಾಗಿತ್ತು, ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಹೀಗೇ ಇತ್ತು ಬದುಕು ಎಂಬ ತೀರ್ಮಾನಕ್ಕೆ ಬಂದಳು. ಆತನೂ ಗ್ರಂಥ ಮುಚ್ಚಿಟ್ಟು ಊಟಕ್ಕೆ ಸನ್ನದ್ಧನಾದ. ಅವಳು ಅವನನ್ನು ಹಿಂಬಾಲಿಸಿದಳು. ಅರ್ಧ ಗಂಟೆಯ ತರುವಾಯ ದೀಪಗಳೆಲ್ಲಾ ವಿಶ್ರಮಿಸಿದವು.
 *  *  *  *  *  *  *
ಬೆಂಗಳೂರಿನಲ್ಲಿ ಮಕ್ಕಳೆಲ್ಲಾ ಸ್ಟಿಲ್ ಆಗಿದ್ದಾರೆ, ಇದೀಗ ತಾನೇ ತೊಳೆಸಿಟ್ಟ ಛಾಯಾಚಿತ್ರದಂತೆ. ಕಂಪನಿ, ಮಕ್ಕಳ ವಿದ್ಯಭ್ಯಾಸ, ಮನೆ-ಮುಗಿಯಿತು. ಆ ಪಾಲಿಸಿ, ಈ ಪಾಲಿಸಿ, ಆ ಸೈಟು, ಈ ಸೈಟು ಎನ್ನುವುದಕ್ಕೆ ಹಣ ಹೊಂದಿಸುವುದರಲ್ಲಿ ಇದ್ದ ಮನೆಯೂ ಮರೆತು ಹೋಗುವ ಸಂದರ್ಭ. ಅಂತದ್ದರ ನಡುವೆ ಅವರಿಗೂ ಮಕ್ಕಳಿವೆ, ಓದುತ್ತಿದ್ದಾರೆ ಕಾನ್ವೆಂಟ್‌ಗಳಲ್ಲಿ. ಹೊಸ ಭಾಷೆ, ಹೊಸ ಪದ್ಯ ಕಂಠ ಪಾಠ ಮಾಡಿಕೊಂಡು ಬಂದ ಮಕ್ಕಳು ಅಜ್ಜ-ಅಮ್ಮಮ್ಮರಿಗೂ ಕಲಿಸುವುದುಂಟು. ಕಲಿಯದಿದ್ದರೆ “ಏನ್ ಅಜ್ಜ, ನೀನು ದಡ್ಡ’ ಎನ್ನುತ್ತವೆ. ಅಜ್ಜ ಹೌದೆನ್ನುವಂತೆ ತಲೆಯಾಡಿಸುತ್ತಾನೆ.
ಸರಿ, ಒಮ್ಮೆ ಹೀಗೇ ಕೂತಿದ್ದಾಗ ಇವಳಿಗೆ ಮಕ್ಕಳೊಂದಿಗೆ ಮಾತನಾಡಬೇಕೆನ್ನಿಸಿತು. ಫೋನ್ ರಿಂಗಾದಾಗ ಅತ್ತಲಿಂದ ಅವಳ ಆಹ್ವಾನಕ್ಕೆ ಉತ್ತರ ಬಂತು. “ಇಲ್ಲ ಅಮ್ಮಾ, ಆಫೀಸಿನಲ್ಲಿ ಕೆಲವರು ರಜೆ ಹಾಕಿದ್ದಾರೆ. ನನಗೆ ರಜೆ ಸಿಗೋದು ಮುಂದಿನ ವಾರವೇ. ಆಗ ಬರೋಣವೆಂದರೆ ಮಗಳಿಗೆ ಪರೀಕ್ಷೆ. ಅದಕ್ಕೆ ಸಿದ್ಧಪಡಿಸಬೇಕು. ಮುಂದಿನ ಬೇಸಿಗೆಯೊಳಗೆ ಒಮ್ಮೆ ಬರುತ್ತೇವೆ. ಬೇಸಿಗೆಗಂತೂ ಬಂದೇ ಬರುತ್ತೇವೆ’ ಎಂದ ಮಗ.
“ಹಾಗಲ್ಲ ಕಣೋ, ನೋಡಬೇಕು ಅನಿಸಿದೆಯಲ್ಲ. ಭಾನುವಾರ ಹತ್ತಿ ಬಂದು ಬಿಡು’ ಎಂಬುದಕ್ಕೆ ’ಅದು ಕಷ್ಟ. ಎರಡು ರಾತ್ರಿ ನಿರಂತರ ಪ್ರಯಾಣ ಮಾಡಿದರೆ ಸುಸ್ತು, ಮರುದಿನ ಕೆಲಸ ಮಾಡಲಾಗುವುದಿಲ್ಲ. ಹಾಗಾಗಿ ಬರ್‍ತೀನಿ, ಸದ್ಯದಲ್ಲೇ’ ಎನ್ನುತ್ತಾರೆ.
ಸ್ವಲ್ಪ ಸಿಟ್ಟಿಗೆದ್ದವನಂತೆ ಕಂಡು ಬಂದದ್ದಲ್ಲದೇ ಈಗಿನ ಬದುಕಿನ ಧಾವಂತ ಅರ್ಥವಾಗಿ ಒಪ್ಪಿಕೊಂಡ ಫೋಸಿನಲ್ಲಿ ಇವಳ ಪತಿ ಗುಡುಗುತ್ತಾನೆ-”ನಿನ್ನದೊಂದು, ಯಾವಾಗ ಆಗುತ್ತೋ ಆವಾಗ ಬರಲಿ ಬಿಡು. ಯಾಕೆ ಒತ್ತಾಯ ಮಾಡ್ತೀಯಾ?’
“ನಿಮಗೇನ್ರಿ, ನಾನು ಮಗನ ಜತೆಗೆ ಮಾತನಾಡ್ತೀರೋದು’ ಎಂದು ಪ್ರತಿ ಗುಡುಗುತ್ತಾಳೆ. ಕೊನೆಗೂ ಬರುವುದಿಲ್ಲ ಎಂಬ ಫಲ ಪಡೆದೇ ಫೋನ್ ಇಟ್ಟಳು.
“ನೋಡು, ಹಾಗೆಲ್ಲಾ ಒತ್ತಾಯ ಮಾಡಬಾರದು. ಅವರಿಗೆ ಏನೇನೋ ಕೆಲಸವೋ? ಒಮ್ಮೆ ಬಂದು ಹೋಗಬೇಕಂದರೂ ೫೦೦ ರೂ. ಬೇಕು. ಬರೀ ಬಸ್ಸಿಗೆ, ರೈಲಿಗೆ ದುಡ್ಡು ಹಾಕಿದ್ರೆ ಮನೆ, ಮಠ ಮಾಡೋದು ಯಾವಾಗ?’ ಎಂಬ ಅವನ ಮಾತನ್ನು ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಾಳೆ. “ಹೌದು, ಹತ್ತು ಸಾರಿ ಬರೋದು ಎರಡು ಸಾರಿ ಬಂದ್ರೆ ಸಮಾಧಾನ ಪಟ್ಟುಕೊಳ್ಳಬೇಕು. ನಮದೇನು ಮುಗಿದ ಕಥೆ. ಅವರಿದಿನ್ನೂ ಈಗ ಆರಂಭವಾಗಿದೆಯಲ್ಲ’ ಎಂದು ಚಾಳೀಸು ಏರಿಸಿಕೊಂಡು ಪತ್ರಿಕೆಗೆ ಮುಖಿಯಾಗುತ್ತಾಳೆ. ಹೊರಗೆ ಬೀದಿಯಲ್ಲಿ ಊರ ದೇವರ ಮೆರವಣಿಗೆ. ಗದ್ದಲವೋ ಗದ್ದಲ. ದೇವರು ನೋಡಲಿಕ್ಕೆ ಇಬ್ಬರೂ ಹೊರಗೆ ಬರುತ್ತಾರೆ. ಆ ಜನಜಂಗುಳಿಯಲ್ಲಿ ದೇವರು ಕಾಣಿಸುವುದಿಲ್ಲ !
  *  *  *  *  *  *  *
ಬೆಳಗ್ಗೆ ಏಳರ ಸುಮಾರಿಗೆ ಕಾರ್ಪೋರೇಷನ್ ನಲ್ಲಿಯಲ್ಲಿ ನೀರು ಬಂತು. ಕಳೆದ ತಿಂಗಳಿನವರೆಗೂ ನೀರು ತುಂಬುವುದು ವಯಸ್ಸಾದ ಇಬ್ಬರಿಗೂ ಅತ್ಯಂತ ತ್ರಾಸದಾಯಕವಾದ ಕೆಲಸವೇ. ಈಗ ಸ್ವಲ್ಪ ಸುಧಾರಿಸಿದೆ. ಚಿಕ್ಕ ನೀರೆತ್ತುವ ಪಂಪ್ ಫಿಕ್ಸ್ ಮಾಡಿದ್ದಾರೆ. ತೊಟ್ಟಿಯಲಿ ನೀರು ಸಂಗ್ರಹವಾದ ಮೇಲೆ ಸ್ವಿಚ್ ಹಾಕಿದರೆ ಪೈಪ್ ಮೂಲಕ ತಮಗೆ ಬೇಕಾದ ಕಡೆ ತುಂಬಿಸಬಹುದು. ಹೊತ್ತು ತರುವ ತೊಂದರೆಯಿಲ್ಲ.
ಇದಕ್ಕೆ ಮುನ್ನ ಇವಳು ಕುಡಿಯುವ ನೀರು ತುಂಬಿದ ನಂತರ ಅವನ ಕಾರುಬಾರು. ಒಂದಷ್ಟು ನೀರು ತುಂಬಿಕೊಟ್ಟರೆ ಇವಳು ಮತ್ತೊಂದು ಕಡೆಗೆ ಸುರಿದು ಬರುತ್ತಿದ್ದಳು. ಕೇವಲ ಮುಕ್ಕಾಲುಗಂಟೆ ಬರೋ ನೀರಿಗೆ ದಿನವೆಲ್ಲಾ ಆರಾಮ ಕೆಡಿಸಿಕೊಳ್ಳಬೇಕಿತ್ತು. ಒಮ್ಮೊಮ್ಮೆ ನೀರು ಬಿಡೋ ಮಹಾಶಯನಿಗೆ ಬೇಸರ ಬಂದಿದ್ರೆ ಅವತ್ತು ಆ ಕೇರೀಗೇ ನೀರಿಲ್ಲ. ಸುಮ್ಮನೆ ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ ಕೊಟ್ಟು ಇರಬೇಕು. ಕಾರಣ ಬಹುಪಾಲು ಮಂದಿ ನೀರು ಬಾರದಿದ್ದಕ್ಕೆ ಯಾರನ್ನೂ ಕೇಳೋದಿಲ್ಲ. ಪಕ್ಕದ ಮನೆ ಬಾವಿಯಿಂದ ನೀರು ಸುರಿದುಕೊಳ್ಳುತ್ತಾರೆ. ಅದನ್ನೇ ಇವರೂ ಮಾಡಬೇಕಿತ್ತು.
ಅವತ್ತೂ ಹಾಗೆ. ಬೆಳಗ್ಗೆ  ನೀರು ಬಂತು. ತಮಗೆ ಎಲ್ಲೆಲ್ಲಿಗೆ ಬೇಕೋ ಅಲ್ಲಿ ಭರ್ತಿ ಮಾಡಿದರು. ಅವಳು ಹಾಲ್‌ಬಿಸಿನೀರು ಸಿದ್ಧಪಡಿಸಿ ತಂದಾಗ ಫೋನ್ ರಿಂಗಾಯಿತು. ಬೆಳಗ್ಗೆಯೇ ಯಾರದ್ದಾಗಿರಬಹುದು ಫೋನ್? ಎಂಬ ಕುತೂಹಲ. ಅವನು ಫೋನ್ ತೆಗೆದುಕೊಂಡ. “ಮಾವ, ಅವ್ರಿಗೆ ಉಷಾರಿಲ್ಲ. ಏನೋ ಆಗಿದೆ. ಬಹಳ ಕಷ್ಟ ಪಡ್ತಾ ಇದ್ರೆ. ಏನ್ ಮಾಡೋದಂತ್ಲೇ ಅರ್ಥವಾಗ್ತಿಲ್ಲ. ಮಕ್ಕಳೀಗೂ ಪರೀಕ್ಷೆ. ನಾನು ಏನ್ ಮಾಡಲಿ?’ ಎಂಬ ಸೊಸೆ ಮಾತಿಗೆ ಇವನು ದಂಗಾಗಿ ಹೋದ. ಏನು ಮಾಡಬೇಕು ಎಂಬುದು ತೋಚಲಿಲ್ಲ, ಅವಳಿಗೆ ಫೋನ್ ವರ್ಗಾಯಿಸಿದ.
“ಹೇಳೇ’ ಎಂಬ ಪದ ಕೇಳಿ ಸೊಸೆ ಮತ್ತೆ ಮುಂದುವರಿಸಿದಳು. “ಇವ್ರಿಗೆ ನಾಲ್ಕೈದು ದಿವಸದಿಂದ ಉಷಾರಿಲ್ಲ. ನಾನು ಡಾಕ್ಟರಿಗೆ ತೋರಿಸ್ದೆ. ಔಷಧಿ ಕೊಡ್ತಾರೆ. ಆದ್ರೆ ಇವರು ಬಹಳ ಹೆದರಿಕೊಂಡಿದ್ದಾರೆ. ನಿಮ್ಮನ್ನೇ ಕನವರಿಸ್ತಾರೆ. ನಿನ್ನೆ ರಾತ್ರಿ ಎದ್ದು ಕೂತ್ಕೊಂಡು ಅಮ್ಮನತ್ತ ಕರ್‍ಕೊಂಡು ಹೋಗು ಅಂಥ ಹಠ ಮಾಡಿದ್ರು. ಮಧ್ಯರಾತ್ರೀಲಿ ನಾನು ಎಲ್ಲಿಗೆ ಹೋಗಲಿ. ನನಗೆ ಭಯವಾಗುತ್ತೆ , ಅತ್ತೆ’ ಎಂದಳು.
ಈಗ ಚಿಂತಾಕ್ರಾಂತಳಾಗುವ ಸರದಿ ಇವಳದ್ದು. “ನೀನೇನೂ ಭಯಪಡ್ಬೇಡ. ಎಲ್ಲಾ ಸರಿ ಹೋಗ್ತದೆ. ನಾನು ದೇವರಿಗೆ ಹರಕೆ ಹೊತ್ಕೊಳ್ತೀನಿ. ದೇವರು ನಮ್ಮ ಕೈಬಿಡುವುದಿಲ್ಲ. ಒಂದು ರೂ. ನಾಲ್ಕು ನಾಣ್ಯನ್ನಾ ನಿವಾಳಿಸಿ ಒಳ್ಳೇದಾಗಲಿ ಅಂತ ಕೇಳ್ಕೊಂಡು ಇಟ್ಬಿಡು. ಉಷಾರಾದ್ಮೇಲೆ ದೇವಸ್ಥಾನಕ್ಕೆ ಹೋಗಿಬಂದ್ರೆ ಆಯಿತು’ ಎಂದು ಆ ಹೊತ್ತಿನ ಸಮಾಧಾನ ನೀಡಿದಳು ಅತ್ತೆ. “ಒಂದ್ನಿಮಿಷ, ಅವ್ರು ಮಾತನಾಡ್ತಾರಂತೆ’ ಎಂದು ಸೊಸೆ ಹೇಳಿದಾಗ ಫೋನಿನಲ್ಲಿ ಮಗನ ಮಾತು ಕೇಳಿ ಅಳು ಬಂದದ್ದೇ ಇವಳಿಗೆ.
“ಏನ್ ಮಗ, ಹೇಗಿದ್ದೀಯಾ?’ ಎಂಬ ಪ್ರಶ್ನೆಗೆ ಅತ್ತಲಿಂದ ಉತ್ತರ ಬರಲಿಲ್ಲ. ಬರೀ ಅಳು ಬಂತು. ಇವಳನ್ನೂ ಬಿಡಲಿಲ್ಲ. ಆಗ ತಾನೇ ಸುರಿದ ಮಳೆಗೆ ತುಂಬಿ ಬಂದ ನದಿಯ ನೆರೆಯಂತೆ ಇವಳನ್ನೂ ವ್ಯಾಪಿಸಿಬಿಟ್ಟಿತು. ತಟಕ್ಕನೇ ಮಗನೇ ಫೋನಿಟ್ಟು ಬಿಟ್ಟ. ಇವಳೂ ರಿಸೀವರ್ ಹಿಡಿದುಕೊಂಡೇ, “ಏನ್ರೀ, ಸೂರಿ ಅಳುತ್ತಾನಲ್ರೀ. ಇದುವರೆಗೆ ಅವನು ಅತ್ತದ್ದೇ ಕೇಳಿರಲಿಲ್ಲ. ಸಹಿಸೋಕಾಗಲ್ರೀ’ ಅಂದಳು.
ಇದೆಲ್ಲವನ್ನೂ ನೋಡುತ್ತಾ ಕುಳಿತಿದ್ದ ಮತ್ತೊಬ್ಬ ಮಗ ವೆಂಕುಗೆ ನಿಜಕ್ಕೂ ಅಚ್ಚರಿ. ಇವನೂ ಅಮ್ಮ ಅತ್ತದ್ದನ್ನು ಕಂಡಿರಲಿಲ್ಲ. ಚಿಕ್ಕವನಿದ್ದಾಗ ನೋಡಿರಬಹುದು. ಆಗ ಅಳು ಅರ್ಥವಾಗಿರಬೇಕಿತ್ತಲ್ಲ. ಅಮ್ಮನ ಕಣ್ಣ ನೀರು ಮನೆಯನ್ನೇ ತುಂಗಿಕೊಂಡಂತಾಯಿತು. ಕೆಲವು ಕ್ಷಣ ಮನೆಯೆಲ್ಲಾ ತೇವ ತೇವ. ದೊಡ್ಡವರಾದ ಮೇಲೂ ಅಳುತ್ತಾರಲ್ಲ ಎನ್ನುವ ಹಾಗೆ ಅಮ್ಮನನ್ನು ದಿಟ್ಟಿಸಿದ ವೆಂಕುಗೆ ಈಗಲೂ ಸರಿಯಾಗಿ ಅರ್ಥವಾಗಲಿಲ್ಲ.
*  *  *  *  *  *  *
“ನಾನು ನಾಳೆ ವೆಂಕು ಜತೆಗೆ ಬೆಂಗಳೂರಿಗೆ ಹೋಗ್ತೀದ್ದೀನಿ. ರಾತ್ರಿಯೂ ಸೂರಿಯದ್ದೇ ಕನಸು. ಪಾಪ, ಅವನು ಯಾವತ್ತೂ ಅತ್ತಿರಲಿಲ್ಲ. ನನಗೆ ನೋಡಲೇಬೇಕೆನಿಸಿದೆ’ ನಿರ್ಧರಿಸಿದವಳಂತೆ ಪತಿಗೆ ಅಂದಳು. ಆತನೂ ಸುಮ್ಮನಿದ್ದ. “ಸರಿ, ಹಾಗೇ ಮಾಡು’ ಎಂದು ಸ್ವಲ್ಪ ಕುಂಕುಮ ಕಾಗದದಲ್ಲಿ ಕಟ್ಟಿ ಕೊಟ್ಟ. ವೆಂಕು ಜತೆಗೆ ಅವಳೂ ಹೊರಟು ನಿಂತಳು. ರೈಲಿನಲ್ಲ್ಲಿ ಕುಳಿತ ಅವಳಿಗೆ ಮಗನದ್ದೇ ಚಿಂತೆ.
ವೆಂಕೂಗೆ ಇನ್ನೂ ಅಚ್ಚರಿಯಾಗೇ ಉಳಿದಿದೆ. ಉಪಮೆಯಿಲ್ಲದವಳು ಅತ್ತದ್ದು ಅರ್ಥವಾಗಿಲ್ಲ. ಎಷ್ಟು ವಿಚಿತ್ರವೆಂದರೆ ಬದುಕಿನುದ್ದಕ್ಕೂ ಅತ್ತೂ ಅತ್ತೂ ಅಭ್ಯಾಸವಾಗಿ ಹೋಗಿದ್ದ ಇವಳಿಗೆ ಅಳು ಸುಲಭ ಎನಿಸಿದ್ದುಂಟು. ಕೆಲ ವರ್ಷ ಅಳದ ಇವಳಿಗೀಗ ಮತ್ತೆ  ಅತ್ತಳು ; ಚಿಕ್ಕ ಮಕ್ಕಳ ಹಾಗೆ. ದೊಡ್ಡವರು ಅತ್ತರೆ ಸಮಾಧಾನಗೊಳಿಸುವವರು ಯಾರು, ದೇವರೇ? ಎಂದು ವೆಂಕು ತನ್ನಷ್ಟಕ್ಕೇ ಕೇಳಿಕೊಂಡ. ಅಮ್ಮ ಮೆಲ್ಲಗೆ ನಿದ್ರೆ ಹೋಗಿದ್ದಳು ; ಏನೂ ಆಗೇ ಇಲ್ಲವೆಂಬಂತೆ.
ಅವಳು ಮತ್ತೆ ಮಗುವಾಗುತ್ತಿರುವುದನ್ನು ಕಂಡ ವೆಂಕುವಿಗೂ ದುಃಖ ಉಮ್ಮಳಿಸಿ ಬಂತು. ಅವಳ ಸೆರಗಿನಲಿ ಕಣ್ಣನ್ನೊರೆಸಿಕೊಂಡ. ತಟಕ್ಕನೆ ಎದ್ದ ಅವಳು “ಹಾಗೆ ಅಳಬಾರದು’ ಎಂದು ಸಂತೈಸಿದವಳು ಗದ್ಗದಿತಳಾಗಿ ಮುಖ ಬದಿಗೆ ಸರಿಸಿದಳು. ಸಮುದ್ರವೇ ಅಳುತ್ತಿದೆ, ದ್ವೀಪದಂತೆ ಬದುಕಲು ಭೂಮಿಯ ತುಂಡೂ ಇಲ್ಲ !
*  *  *  *  *  *  *

(“ಹಂಗಾಮ” ದಲ್ಲಿ ಹಿಂದೆ ಪ್ರಕಟವಾದ ಕತೆ)