ತಿರಸ್ಕರಿಸುವುದನ್ನು ಕಲಿಯೋಣ

candle-1ನಾವು ಸಂದೀಪನ ತಂದೆಗೆ ಭೇಷ್ ಹೇಳಬೇಕು !
ಹಾಗೆಯೇ ಹೇಮಂತ ಕರ್ಕರೆಯ ಕುಟುಂಬಕ್ಕೂ ಸಹ. ರಾಜಕಾರಣಿಗಳ ಭಿಕ್ಷೆ ನೀಡುವ ತಂತ್ರವನ್ನು ಅತ್ಯಂತ ದಾರ್ಷ್ಟ್ಯದಿಂದ ತಿರಸ್ಕರಿಸಿದ ವೀರರ ಕುಟುಂಬಕ್ಕೆ ನಾವೆಲ್ಲರೂ ವಂದಿಸಬೇಕು.

ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್, ಯಾರಿಗೋ ಉಪಕಾರಕ್ಕೆ ಎನ್ನುವಂತೆ ಸಂದೀಪನ ಮನೆಗೆ ಬಂದು ಸಾಂತ್ವನ ಹೇಳಲು ಬಂದಿದ್ದು ಮತ್ತೆ ರಾಜಕೀಯ ಉದ್ದೇಶಕ್ಕಾಗಿಯೇ ಹೊರತು ಮತ್ತೇನೂ ಅಲ್ಲ. ಅದಕ್ಕೆ ಸಂದೀಪನ ತಂದೆ “ನನ್ನ ಮಗ ಇಡೀ ದೇಶದವನು, ಒಂದು ರಾಜ್ಯದವನಲ್ಲ’ ಎಂದು ಹೇಳಿದ ಮಾತು ಕೇಳಿ ನನ್ನ ಹೃದಯ ತುಂಬಿ ಬಂದಿತು. ಟಿ. ವಿ. ಯಲ್ಲಿ ಆ ದೃಶ್ಯ ಕಂಡು ಮನಸ್ಸಿನಲ್ಲೇ ವಂದನೆ ಹೇಳಿದೆ.

ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಹೀಗೆ ಅವಮಾನಿಸಿ ಕಳುಹಿಸಬಹುದೇ ಎಂಬ ಮಾತು ಸಹಜವಾಗಿಯೇ ಬರಬಹುದು. ಆದರೆ ಸಾವಿನಲ್ಲೂ ರಾಜಕಾರಣವನ್ನು ಮಾಡುವವರನ್ನು ತಿರಸ್ಕರಿಸಬೇಕಾದುದನ್ನು ಸಂದೀಪನ ತಂದೆ ನಮಗೆ ಕಲಿಸಿಕೊಟ್ಟಿದ್ದಾರೆ.

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂಬಯಿ ಸ್ಫೋಟದಲ್ಲಿ ಸತ್ತ ಪೊಲೀಸರ ಕುಟುಂಬಕ್ಕೆ ಅಂದೇ ಒಂದು ಕೋಟಿ ರೂ. ಘೋಷಿಸಿದರು. ಅದನ್ನೂ ಹೇಮಂತ ಕರ್ಕರೆ ಕುಟುಂಬ ತಿರಸ್ಕರಿಸಿತು. ಇದು ನಿಜವಾಗಲೂ ರಾಜಕಾರಣಿಗಳಿಗೆ ಕಲಿಸುತ್ತಿರುವ ಸೂಕ್ತ ಪಾಠ. ನಮ್ಮ ರಾಜಕಾರಣಿಗಳಿಗೆ ಇದು ಅರ್ಥವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಸಾಕಷ್ಟು ಇರಿಸು ಮುರಿಸನ್ನಂತೂ ಮಾಡಿದೆ.

ಅಲ್ಲದೇ, ಸಂದೀಪನ ಮನೆಯಿಂದ ವಾಪಸು ತೆರಳಿದ ಅಚ್ಯುತಾನಂದನ್, “ಸಂದೀಪನ ಮನೆಯಲ್ಲದಿದ್ದರೆ ನಾಯಿಯೂ ಹೋಗುತ್ತಿರಲಿಲ್ಲ’ ಎಂದು ಹೇಳಿಕೆ ನೀಡಿದ್ದು ಮಾತ್ರ ಅಕ್ಷಮ್ಯ. ಜನರು ಸಂಘಟಿತರಾಗುತ್ತಿದ್ದಾರೆಂಬುದಕ್ಕೆ ಹಾಗೂ ರಾಜಕಾರಣಿಗಳ ತಂತ್ರವನ್ನು ಅರ್ಥೈಸುತ್ತಿಕೊಳ್ಳುತ್ತಿದ್ದಾರೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ದೇಶಾದ್ಯಂತ ಈ ಮಾತಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ತಮಾಷೆ ಎಂದರೆ, ಸದಾ “ದೊಡ್ಡವರ’ ಹಿತದತ್ತಲೇ ಗಮನಹರಿಸುವ ಮುಂಚೂಣಿಯಲ್ಲಿರುವ ಟಿ. ವಿ.ಗಳಲ್ಲಿ ಈ ಸುದ್ದಿ ಪರವಾದ ಯಾವ ಆಂದೋಲನವೂ ನಡೆಯಲಿಲ್ಲ. ಆದರೆ ಆಂಗ್ಲದ ಬೇರೆ ಟಿ. ವಿ. ಯೊಂದು ಮಾತ್ರ “ಈ ಹೇಳಿಕೆಯನ್ನೇ’ ಪ್ರಧಾನವಾಗಿರಿಸಿಕೊಂಡು ಜನಮತ ಸಂಗ್ರಹಿಸತೊಡಗಿತು. ಉಳಿದ ಮುದ್ರಣ ಮಾಧ್ಯಮಗಳೂ ಇದನ್ನು ಗಂಭೀರವಾಗಿ ತೆಗೆದುಕೊಂಡರು. ಹಾಗಾಗಿ ದೇಶಾದ್ಯಂತ ಪ್ರತಿಭಟನೆ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆ ಬೀರಬಹುದಾದ ಪರಿಣಾಮ ಅರಿತ ಪ್ರಕಾಶ್ ಕಾರಟ್, ತಮ್ಮ ಅಚ್ಯುತಾನಂದನ್ ಹೇಳಿಕೆಗೆ ಕ್ಷಮೆ ಕೇಳಿದರು. ಎಲ್ಲ ಮುಗಿದು ಬುಧವಾರ ಅಚ್ಯುತಾನಂದನ್ ಸಹ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಜನ ಜಾಗೃತಿಗೊಂಡ ಫಲವೇ ಹೊರತು ಮತ್ತೇನೂ ಅಲ್ಲ.

ಅದಕ್ಕೇ, ನಾವು ರಾಜಕಾರಣಿಗಳನ್ನು ತಿರಸ್ಕರಿಸುವುದನ್ನು ಕಲಿಯಬೇಕು. ಉಪೇಕ್ಷೆ ಮಾಡಬೇಕು. “ನೀನಿಲ್ಲದಿದ್ದರೂ ಬದುಕಬಲ್ಲೆವು, ವ್ಯವಸ್ಥೆ ಬದುಕುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಮನುಷ್ಯನ ಮೂಲ ನೆಲೆಯೇ ಅದು. ಒಂದು ವ್ಯವಸ್ಥೆಯಲ್ಲಿ ತನ್ನ ಪ್ರಸ್ತುತತೆ ಇಲ್ಲವೆಂದು ಅವನಿಗೆ ಅನಿಸಿದರೆ ಚಡಪಡಿಸುತ್ತಾನೆ. ಆಕ್ರೋಶಗೊಳ್ಳುತ್ತಾನೆ, ಸಿಡಿಯುತ್ತಾನೆ. ಕಬ್ಬಿಣ ಬಿಸಿಯಾದಾಗಲೇ ಬಡಿಯಬೇಕು. ಹಾಗೆಯೇ ರಾಜಕಾರಣಿಗಳು ಅಸಹನೆಗೊಳ್ಳುವಂತೆ ಮಾಡಿ ಬಡಿಯಬೇಕು’.

ಅಂಥ ಅಸಹನೀಯಗೊಳಿಸುವ ಕಾಲಕ್ಕೆ ಈಗ ನಾಂದಿ. ನಾವೀಗ ಮೊದಲು ಓಟಿನ ಹಿಂದೆ ಬೀಳುವ ರಾಜಕಾರಣಿಗಳ, ಅಧಿಕಾರ ಹಪಾಹಪಿಯ ಜನಗಳನ್ನು ತಿರಸ್ಕರಿಸುವುದನ್ನು ಕಲಿಯೋಣ, ತಿರಸ್ಕರಿಸೋಣ. ಮುಂಬಯಿನಲ್ಲಿ ನಡೆದಂಥ ಘಟನೆಯಲ್ಲಿ ನಮ್ಮ ಹಿತವನ್ನು ಮರೆಯುವ ಜನಕ್ಕೆ ಈ ರೀತಿಯಿಂದಲೂ ಪಾಠ ಕಲಿಸಬಹುದು. ಅದು ಒಂದು ರೀತಿಯಲ್ಲಿ ಹುತಾತ್ಮರಿಗೂ ಸಲ್ಲಿಸುವ ನಮನ.

ಈ ಬುಧವಾರದ ಕ್ರೌರ್ಯ !

ನಿಜಕ್ಕೂ ಘೋರ. ಬುಧವಾರ ರಾತ್ರಿ ೧೧ ರಿಂದ ಕಣ್ಣು ಕೀಳದೇ ಸುಮಾರು ಬೆಳಗಿನ ಜಾವ ೩. ೩೦ ವರೆಗೂ ಟಿ. ವಿ. ಮುಂದೆ ಕುಳಿತಿದ್ದೆ. ಪ್ರತಿ ಕ್ಷಣದ ಆತಂಕ ನಮ್ಮ ವ್ಯವಸ್ಥೆಯ ಬಗ್ಗೆಯೇ ಅಸಹನೆ ಹುಟ್ಟಿಸಿತು. ರೋಸಿ ಹೋಗಿ ಮಲಗಿಕೊಂಡೆ. ಗುರುವಾರ ಬೆಳಗ್ಗೆ ಎಲ್ಲವೂ ಮುಗಿದು, ಸಾವಿನ ಸಂಖ್ಯೆಗೂ ವಿರಾಮ ಸಿಕ್ಕಿ, ಒಳಗಿದ್ದ ಉಗ್ರರೆಲ್ಲಾ ಸತ್ತು ಇಲ್ಲವೋ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುತ್ತಾರೆಂದು ಬೆಳಗ್ಗೆ ೯ ಕ್ಕೆ ಟಿ. ವಿ. ಹಾಕಿದರೆ ಮತ್ತಷ್ಟು ವಿಷಾದ ಆವರಿಸಿಕೊಂಡಿತು. ನಂತರ ಮನೆಯ ಟಿ. ವಿ. ಆರಿಸಲಿಲ್ಲ. ಕಚೇರಿಗೆ ಬಂದ ಮೇಲೂ ಟಿ. ವಿ. ಮುಂದೆ ವಿಷಾದದಿಂದಲೇ ಪೊಲೀಸರ ಕಾರ್ಯಾಚರಣೆ ನೋಡುತ್ತಾ ಹತಾಶನಾದೆ.

“ಮುಂಬಯಿ ಮೇರೆ ಜಾನ್’ ನ ಹಲವು ದೃಶ್ಯಗಳು ಹಸಿ ಹಸಿಗೊಂಡಂತೆ ಅನಿಸಿತು. ನಿಜವಾಗಲೂ ಯಾರು ಏನು ಬೇಕಾದರೂ ತಿಳಿಯಲಿ. ಇದುವರೆಗೆ ಬಾಂಬ್ ಸ್ಫೋಟದಲ್ಲಿ ಭಾಗಿಯಾದವರಲ್ಲಿ ಒಂದಷ್ಟು ಮಂದಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲೇಬೇಕು. ಇಲ್ಲವಾದರೆ ಈ ಕೃತ್ಯಗಳು ನಿಲ್ಲುವುದಿಲ್ಲ, ಸರಣಿ ಮುಂದುವರಿಯುತ್ತದೆ.
ನಾವು ಜಾತ್ಯತೀತ ಹಣೆಪಟ್ಟಿಯನ್ನು ನಂತರ ಕಟ್ಟಿಕೊಳ್ಳೋಣ. ಸಾರ್ವಜನಿಕರ, ಅಮಾಯಕರ ಬದುಕನ್ನು ದಿನೇ ದಿನೇ ಬಲಿಗೊಡುತ್ತಾ, ಅಸಹನೀಯಗೊಳಿಸುತ್ತಾ ವಿಶ್ವದ ನಕಾಶೆಯಲ್ಲಿ “ಶಾಂತಿಯ ಭಾರತ’ ಎಂಬ ಕೀರ್ತಿ ಕಳೆದುಹೋಗುತ್ತದಲ್ಲಾ ಎಂದು ಆತಂಕ ಪಡುವ ಅಗತ್ಯವಿಲ್ಲ.

ಭಯೋತ್ಪಾದನೆಗೆ ಧರ್ಮವೂ ಇಲ್ಲ, ಜಾತಿಯೂ ಇಲ್ಲ. ಹಾಗಾಗಿಯೇ ಹೇಳಿದ್ದು. ಅಮಾಯಕರ ಬಲಿ ತೆಗೆದುಕೊಳ್ಳುವ ಭಯೋತ್ಪಾದಕರಿಗೆ ಹೀಗೆ ಉಗ್ರ ಶಿಕ್ಷೆ ವಿಧಿಸದಿದ್ದರೆ ಅಮಾಯಕರೂ ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ನಾವೆಲ್ಲರೂ-ಸರಕಾರ-ನಮ್ಮ ಜಾತ್ಯತೀತವಾದಿಗಳು…ಇತ್ಯಾದಿ… ಇತ್ಯಾದಿ- ರಾತ್ರಿಯೆಲ್ಲಾ ದುಃಖಗೊಂಡು ಬೆಳಗ್ಗೆ ಎದ್ದು ತಿಂಡಿ ತಿಂದು ರೈಲಲ್ಲೋ, ಬಸ್ಸಲ್ಲೋ ಕೆಲಸಕ್ಕೆ ಹೋಗಿ ಮರೆತು ಬಿಡುವುದು ನಮ್ಮ ಜಾಯಮಾನವಾಗಿ ಹೋಗಿದೆ. ನಮ್ಮನ್ನಾಳುವವರೂ ದೊಡ್ಡ ಘೋಷಣೆ ಕೊಟ್ಟು, ನಂತರ ಎಂದಿನ ನಾಟಕದ ಪಾತ್ರಗಳಿಗೆ ತೆರಳಿ ಬಿಡುತ್ತಾರೆ. ಬರೀ ಪ್ರದರ್ಶನ ನೋಡಿ ಚಪ್ಪಾಳೆ ತಟ್ಟಿ ಕುಳಿತುಕೊಳ್ಳುವುದು ನಮ್ಮ ಅಭ್ಯಾಸ.

೧೨೫ ಕ್ಕೂ ಹೆಚ್ಚು ಮಂದಿಯ ಮಾರಣಹೋಮ ನಡೆದದ್ದು ಉಗ್ರರಿಂದ. ಇಂಥ ಎಷ್ಟು ಬಾಂಬ್ ಸ್ಫೋಟಗಳು ನಡೆದಿಲ್ಲ ? ಕಳೆದ ಆರು ತಿಂಗಳಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳು ನಡೆದಿವೆ. ಅಷ್ಟಕ್ಕೂ ನಾವು ಕೈಗೊಂಡಿರುವುದೇನು ? ತಕ್ಷಣವೇ ಕಂಪ್ಯೂಟರ್ ಭಾವಚಿತ್ರ ತಯಾರಿಸಿ ಮಾಧ್ಯಮದಲ್ಲಿ ಹಾಕಿ, ಕೆಲವರನ್ನು ಹಿಡಿದು ತನಿಖೆ ಮಾಡಿ ಜೈಲಲ್ಲಿ ಒಳ್ಳೆ ಊಟ ಕೊಟ್ಟು ಕೂರಿಸುವುದು ಬಿಟ್ಟರೆ ಮಾಡಿರುವುದೇನು ? ಅದಕ್ಕೇ, ನಮ್ಮಲ್ಲಿ ಭಯೋತ್ಪಾದಕರು ಮತ್ತಷ್ಟು ಉಗ್ರರಾಗುತ್ತಿದ್ದಾರೆ !

ಅಮೆರಿಕದಲ್ಲಿ ಸೆಪ್ಟೆಂಬರ್ ೧೧ ರ ಘಟನೆ ನಂತರ ಹೇಳಿ, ನನ್ನ ಗಮನಕ್ಕೆ ಬಂದಂತೆ ಒಂದೇ ಒಂದು ಭಯೋತ್ಪಾದಕರ ದಾಳಿ ನಡೆದಿಲ್ಲ. ಲಾಡೆನ್ ಸಂತತಿ ಬೊಬ್ಬೆ ಹೊಡೆಯುತ್ತಿದೆಯೇ ಹೊರತು ಯಾವ ದಾಳಿಯೂ ನಡೆದಿಲ್ಲ. ಅದಕ್ಕೆ ಅಲ್ಲಿನ ಸರಕಾರ ಕೈಗೊಂಡ ದಿಟ್ಟ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ಚೀನಾದ ಒಲಿಂಪಿಕ್ಸ್ ಮುನ್ನಾ ದಿನಗಳಲ್ಲಿ ಸ್ಫೋಟ ನಡೆಯಿತು. ಎಲ್ಲರೂ ಒಲಿಂಪಿಕ್ಸ್‌ನಲ್ಲಿ ಭಾರಿ ದುರಂತವಿದ್ದೀತೆಂದು ಗಾಬರಿಯಾಗಿದ್ದರು. ಆದರೆ ಅಲ್ಲಿಯ ಸರಕಾರವೂ ತಕ್ಷಣವೇ ಕೈಗೊಂಡ ಕ್ರಮ ಹೇಗಿತ್ತೆಂದರೆ ಭಯೋತ್ಪಾದಕರಿರಲಿ, ಶಂಕಿತರಾರೂ ಆ ದುಸ್ಸಾಹಸಕ್ಕೆ ಯೋಚಿಸಲೂ ಹೋಗಲಿಲ್ಲ. ಇಂಥ ದಿಟ್ಟ ಕ್ರಮ ನಮ್ಮಲ್ಲಿ ಏಕೆ ಸಾಧ್ಯವಾಗದು ?

ನಮ್ಮಲ್ಲಿ ಇಂದಿಗೂ ಉಗ್ರರಿಗೂ ಭಯವಿಲ್ಲ. ಅವರಿಗೆ ಸಹಕರಿಸುವವರಿಗೂ ಭಯವಿಲ್ಲ. ತನಿಖೆಗೆ ಒಂದಿಷ್ಟು ವರ್ಷ, ಶಿಕ್ಷೆಗೆ ಮತ್ತಷ್ಟು ವರ್ಷ…ಹೀಗೆ ಕಳೆಯುವಷ್ಟರಲ್ಲಿ ಅಂಥದ್ದೇ ಕೃತ್ಯದಲ್ಲಿ ತೊಡಗಿದ ಮತ್ತಷ್ಟು ಮಂದಿ ಅಮಾಯಕರ ಆಯುಷ್ಯವನ್ನು ಹರಣ ಮಾಡಿರುತ್ತಾರೆ. ಆದರೂ ನಮಗದು ಏನೂ ಅನಿಸದು. ಅಮಾಯಕರು ಬಲಿಯಾಗಬಾರದೆಂಬ ಕಾಳಜಿಯ ಮಧ್ಯೆ ಅವರಲ್ಲಿ ಯಾವ ಜಾತಿಯ ಅಮಾಯಕರು ಎಂದು ಜಾತಿ ಹುಡುಕುವಂಥ ಹೀನ ಕೆಲಸ ನಮ್ಮ ಆಳುವವರಿಂದಲೇ ನಡೆಯುತ್ತಿದೆ. ಇದೇ ನಮ್ಮ ದೊಡ್ಡ ದುರಂತ.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕೆಂಬುದು ನಿಜ. ಅದರರ್ಥ ಆ ಪ್ರಯತ್ನದಲ್ಲಿ ಸಾವಿರಾರು ಮಂದಿ ಅನ್ಯಾಯವಾಗಿ ಬಲಿಯಾಗಬೇಕೆಂಬುದು ನಿಜಕ್ಕೂ ವ್ಯವಸ್ಥೆಯನ್ನೇ ಅಪಹಾಸ್ಯಕ್ಕೀಡು ಮಾಡುವ ಸಂಗತಿ. ಮುಂಬಯಿಯ ಬುಧವಾರದ ದಾರುಣ ಘಟನೆಯಂತೂ ನೆನಪಿಸಿಕೊಳ್ಳಲಾಗದು. ಇಡೀ ದಿನಪೂರ್ತಿ ಬದುಕಲು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಂಡ ಒತ್ತೆಯಾಳುಗಳ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ. ಕ್ಷಣ ಕಾಲ ಆ ಪಾತ್ರಗಳನ್ನು ನಿಮ್ಮೊಳಗೆ ತುಂಬಿಕೊಳ್ಳಿ. ಅವರ ಅಸಹಾಯಕತೆ ಅರ್ಥವಾಗುತ್ತದೆ. ಅಂಥ ಪರಿಸ್ಥಿತಿ ಯಾರಿಗೂ ಬರಬಾರದು !

ಹೀಗೆಲ್ಲಾ ಆದರೂ, ನಮ್ಮ ಆಳುವವರು ಮತ್ತೆ ವೋಟಿನ ಲೆಕ್ಕಾಚಾರ ಮಾಡುತ್ತಾರೆ. ಅವರ ತೂಗಿ ಅಳೆಯುವ ಲೆಕ್ಕಾಚಾರದಲ್ಲಿ ಲೆಕ್ಕಕ್ಕಿಲ್ಲದೇ ಸಾವಿರಾರು ಮಂದಿ ಅಮಾಯಕರು ಸರಿದು ಹೋಗುತ್ತಾರೆ. ಅದು ಅವರ ಲೆಕ್ಕಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲ ; ಯಾರ ಲೆಕ್ಕಕ್ಕೂ ಬಾರದು. ಬದುಕನ್ನು ಕಟ್ಟಿಕೊಳ್ಳಲು ಹೋದ ಮಂದಿ ಹೀಗೆ ಸದ್ದಿಲ್ಲದೇ ಸರಿದು ಹೋದರೆ ಹೇಗೆ…ಉತ್ತರ ಹೊಳೆಯುವುದಿಲ್ಲ. ಉತ್ತರವಿದ್ದರೂ ಪ್ರಶ್ನೆಯನ್ನೇ ಪ್ರೀತಿಸುವ ಮಂದಿಗೆ ಏನನ್ನೂ ಹೇಳಲು ಬಾರದು.

ಬುಧವಾರದ ದಾಳಿಯಲ್ಲಿ ಉಗ್ರರ ವಿರುದ್ಧ ಸೆಣಸುತ್ತಾ ಬಲಿಯಾದ ಪೊಲೀಸರಿಗೆ, ಯೋಧರಿಗೆ ನಾವೆಲ್ಲರೂ ಸದ್ಗತಿ ಕೋರಬೇಕು. ಇನ್ನಷ್ಟು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ತೆತ್ತವರಿಗೆ ನಮನ ಸಲ್ಲಿಸಬೇಕು. ಇವರ ಸಂಖ್ಯೆ ಹೆಚ್ಚಾಗಲಿ ಎಂದು ನಮ್ಮನ್ನಾಳುವ ಮಂದಿ ಮೊಸಳೆ ಕಣ್ಣೀರು ಸುರಿಸಿ ಹೇಳುತ್ತಾರೆ. ಅದರರ್ಥ “ಹೀಗೆ ನಮ್ಮ ಲೆಕ್ಕಾಚಾರಕ್ಕೆ ಸಾಯುವವರು ಹೆಚ್ಚಾಗಲಿ’ ಎಂಬುದು ಗೂಢಾರ್ಥ. ಈ ಮನಸ್ಸಿನೊಳಗಿನ ಕ್ರೌರ್ಯವನ್ನು ಎಲ್ಲರೂ ಖಂಡಿಸಬೇಕು. ಒಂದು ದಿನ ರೋಸಿ ಹೋದ ಜನ “ಎ ವೆಡ್ನೆಸ್ ಡೇ’ ಯನ್ನು ನಿಜಗೊಳಿಸಿ ಬಿಡುತ್ತಾರೇನೋ ಎನಿಸುತ್ತದೆ.

ಒಂದು ಸಂಘಟಿತ ವ್ಯವಸ್ಥೆಯ ವಿರುದ್ಧವೇ 24 ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಪ್ರತಿ ದಾಳಿ ನಡೆಸುವ ಮಟ್ಟಿಗೆ ಈ ಉಗ್ರರು ಶಸ್ತ್ರ ಸಜ್ಜಿತರಾಗಿದ್ದರೆಂದರೆ ನಮ್ಮ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯುವುದಿಲ್ಲವೇ? …ಒಟ್ಟಿನಲ್ಲಿ ಯಾರ ವೈಫಲ್ಯಕ್ಕೆ ಈ ಬಲಿ ?

ಅವನು ಸಾಯಲೆಂದೇ ಬದುಕುತ್ತಿದ್ದಾನೆ…

ಸಾವಿಗೆ ಕಾಯವುದು ಎಂದರೆ …!?
ಬಹಳ ಕಷ್ಟ. ಅದರಲ್ಲೂ ಬದುಕಬೇಕೆಂದು ಬಯಸಿದವ ಸಾವನ್ನು ನಿರೀಕ್ಷಿಸುತ್ತಾ ಕುಳಿತುಕೊಳ್ಳುವುದು ರಣಹಿಂಸೆ. ಈಗ ಆ ರಣಹಿಂಸೆಯನ್ನು ಅನುಭವಿಸಬೇಕಾದವ ಶ್ರದ್ಧಾನಂದ. ಇವನ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಆದರೂ ಕೊಂಚ ಮಾಹಿತಿ.
೧೯೯೧ ರ ಏಪ್ರಿಲ್ ೨೮ ರಂದು ತನ್ನ ಪತ್ನಿ ಬೇಗಂ ಶಕೀರಾ ನಮಾಜಿ ಅವರನ್ನು ಕೊಂದಿದ್ದ. ಇವನ ನಿಜವಾದ ಹೆಸರು ಮುರಳಿ ಮನೋಹರ್ ಮಿಶ್ರಾ. ಬೆಂಗಳೂರಿನ ರಿಚ್ಮಂಡ್ ರಸ್ತೆಯ ತನ್ನ ಬಂಗಲೆಯ ಕಾಂಪೌಂಡ್ ಮೂಲೆಯೊಂದರಲ್ಲಿ ಹೆಣವನ್ನು ಹೂತ. ಸರಿ, ಎಲ್ಲದರಂತೆ ಮುಚ್ಚಿ ಹೋಗಿತ್ತು. ನಂತರ ಶ್ರದ್ಧಾನಂದನನ್ನೇ ಸೆರೆ ಹಿಡಿದಾಗ ನಿಜ ಬಯಲಿಗೆ ಬಂತು. ೧೯೯೪ ರ ಏಪ್ರಿಲ್ ೩೦ ರಂದು ಬಂಧಿತನಾದ. ೨೦೦೫ ರಲ್ಲಿ ಹೈಕೋರ್ಟ್ ಆತನಿಗೆ ಮರಣ ದಂಡನೆ ವಿಧಿಸಿತು. ಮೇ ೨೧ ರಂದು ಆತ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋದ. ಅದೀಗ ಜು. ೨೨ ರಂದು ತೀರ್ಪು ನೀಡಿದೆ. ಅದರಂತೆ ಸಾವು ಬರುವವರೆಗೂ ಜೈಲಿನಲ್ಲಿಯೇ ಕಾಯಬೇಕು !

ಅಂದಹಾಗೆ ಚಿಕ್ಕ ಮಾಹಿತಿಯೆಂದರೆ ಪ್ರಸಿದ್ಧ ಆಡಳಿತಗಾರ ಮಿರ್ಜಾ ಇಸ್ಮಾಯಿಲ್‌ನ ಮೊಮ್ಮಗಳು ಈ ಶಕೀರಾ. ಈ ಪ್ರಕರಣ ಇಡೀ ರಾಜ್ಯವೇನು ? ದೇಶದಲ್ಲೇ ಕುತೂಹಲ ಹುಟ್ಟಿಸಿತ್ತು. ಸುಪ್ರೀಂಕೋರ್ಟ್‌ನ ತೀರ್ಪು ಬಂದ ಕೂಡಲೇ ಶ್ರದ್ಧಾನಂದ ಸ್ವಾಮಿ ಪ್ರತಿಕ್ರಿಯಿಸಿದ್ದು-”ಬಹುಶಃ ಪತ್ನಿಯನ್ನು ಕೊಂದದ್ದಕ್ಕೆ ಮರಣ ದಂಡನೆ ವಿಧಿಸಿದ ಉದಾಹರಣೆಗಳಿಲ್ಲ. ಹಾಗಾಗಿ ಸುಪ್ರೀಂಕೋರ್ಟ್ ಮತ್ತಷ್ಟು ಶಿಕ್ಷೆಯನ್ನು ಕಡಿಮೆಗೊಳಿಸಬಹುದು’ ಎಂದಿದ್ದ. ಅಷ್ಟೇ ಅಲ್ಲ. “ನನ್ನ ಆರೋಗ್ಯ ಎಷ್ಟು ವರ್ಷಗಳಿಗೆ ಸಹಕರಿಸೀತು ಎಂದು ನನಗೆ ತಿಳಿದಿಲ್ಲ. ಅದಾಗ್ಯೂ ಕೋರ್ಟ್ ಸಾಯುವವರೆಗೂ ಜೈಲಿನಲ್ಲಿರಬೇಕೆಂದರೆ ಏನೂ ಮಾಡುವಂತಿಲ್ಲ’ ಎಂದಿದ್ದ.

ನಾನು ಬೆಂಗಳೂರಿನಲ್ಲಿ ಅಪರಾಧ ವರದಿಗಾರನಾಗಿದ್ದಾಗ ಒಮ್ಮೆ ಜೈಲಿಗೆ ಭೇಟಿ ಕೊಟ್ಟಿದ್ದೆ. ಅದು ನನ್ನ ಮೊದಲ ಆರಿಯ ಜೈಲು ಭೇಟಿ. ನಮಗೂ ಒಳಗೆ ಬಿಡುವಾಗ ಪುಸ್ತಕದಲ್ಲಿ ಬರೆಸಿಕೊಂಡರು, ನಮಗೂ ಚೀಟಿ ಕೊಟ್ಟರು. ಸುಮ್ಮನೆ ಉದ್ದಕ್ಕೂ ಹೆಣದಂತೆ ಮಲಗಿದ್ದ ಜೈಲನ್ನು ನೋಡಿಕೊಂಡು ಬಂದೆ. ಎಲ್ಲ ನೋಡಿ ಜೈಲರ್ ಕಚೇರಿಗೆ ಬರುವಾಗ ಎದುರು ಬಿಳಿ ಅಂಗಿ, ಬಿಳಿ ಪಂಚೆ ಉಟ್ಟುಕೊಂಡು, ತಲೆ ಕೂದಲನ್ನು ಕತ್ತರಿಸಿಕೊಂಡ ವ್ಯಕ್ತಿಯೊಬ್ಬ ಕಂಡ. “ನಮಸ್ಕಾರ ಸಾರ್…’ ಎಂದು ಜೈಲರ್‌ಗೆ ಕೈ ಮುಗಿಯುತ್ತಿದ್ದ. ಕೈದಿಯೇನೋ ನಿಜ, ಆದರೆ ಇಷ್ಟೊಂದು ಸ್ವಾತಂತ್ರ್ಯನೇ ಎಂದೆನಿಸಿತ್ತು. ತಕ್ಷಣವೇ ಕಚೇರಿಯ ಒಳಗೆ ಹೋದ ಬಳಿಕ “ಅವನೇರಿ ಶ್ರದ್ಧಾನಂದ ಸ್ವಾಮಿ’ ಎಂದಿದ್ದರು. ಪ್ರಕರಣವೆಲ್ಲಾ ನೆನಪಿಗೆ ಬಂದಿತ್ತು.

ಎಷ್ಟು ವಿಚಿತ್ರ ನೋಡಿ. ಮರಣ ದಂಡನೆ ಕ್ರೂರವೋ ? ಸಾವನ್ನು ಕಾಯುತ್ತಾ ಕೂರುವುದು ಕ್ರೂರವೋ? ಒಮ್ಮೆ ಹೀಗನ್ನಿಸುತ್ತದೆ. ಬದುಕಬೇಕೆಂದು ಹಪಹಪಿಸುವವನಿಗೆ ಮರಣ ದಂಡನೆ ಕ್ರೂರವೆನಿಸಬಹುದು. ಅದೇ ಸಾಯಬೇಕೆಂದು ಬಯಸುವವನಿಗೆ ಅದೇ ಮರಣ ದಂಡನೆ ವರವೆನಿಸಬಹುದು. ಆದರೆ ಅದೆರಡೂ ಅಲ್ಲದ, ಕಾಯಿಲೆಗಳಿಂದ ಬಳಲುತ್ತಿರುವ ಶ್ರದ್ಧಾನಂದನಿಗೆ ಯಾವುದು ಕ್ರೂರವೋ ? ಗೊತ್ತಿಲ್ಲ.

ಮಾನವೀಯ ನೆಲೆಯಲ್ಲಿ ಚರ್ಚಿಸಬೇಕಾದರೆ ಇದು ಜಿಜ್ಞಾಸೆಯಂಥ ಪ್ರಶ್ನೆ. ಜೀವ ಇರುವವರೆಗೂ ತಾನು ಅಪರಾಧಿ, ಕೊಲೆಗಾರ ಎಂದು ನಿಂದನೆಗೆ ಗುರಿಯಾಗುತ್ತಲೇ ಬದುಕನ್ನು ಸವೆಸಬೇಕು. ಅಂದರೆ ಆನಂದವಾಗಿರಬಹುದಾದ ಕಾಲವೂ ಕೈ ತಪ್ಪುವುದು ನಿಶ್ಚಿತ. ಅದು ಬದುಕನ್ನು ಮತ್ತಷ್ಟು ರೌರವಗೊಳಿಸಿ ಸಾವನ್ನೇ ಎದುರುನೋಡುವ ಅನಿವಾರ್ಯತೆಯನ್ನು ಸೃಷ್ಟಿಸಬಲ್ಲದು. ಇಂಥ ಸಂದರ್ಭದಲ್ಲಿ ಮರಣ ದಂಡನೆಯೇ ಪರಮ ಸುಖ ಎಂದೆನಿಸುವುದಿಲ್ಲವೇ?

ಹಾಗೆಯೇ, ಯಾರು ಏನಾದರೂ ಹೇಳಲಿ. ಆಯುಷ್ಯ ಮುಗಿಯುವವರೆಗೆ ಬದುಕುತ್ತೇನೆ ಎಂದು ನಿರ್ಧರಿಸಿದವನಿಗೆ ಮರಣ ದಂಡನೆಯಂಥ ತೂಗು ಕತ್ತಿ ತಪ್ಪುವುದು ಖುಷಿ ತರಬಹುದು. ಆದರೆ ಜೈಲಿನ ಪರಿಸರ ಅಂಥ ಸಂತೋಷಕ್ಕೆ ಎಡೆ ಮಾಡಿಕೊಡುತ್ತದೆಯೇ ಎಂಬುದೂ ಪ್ರಶ್ನಾರ್ಥಕವೇ.

ಅದಕ್ಕಿಂತಲೂ ಮುಖ್ಯವಾಗಿ ಯಾವ ಹೊಸ ಕ್ಷಣಗಳೂ ಇಲ್ಲದೇ ಬದುಕನ್ನು ಸವೆಸುವುದು ಅತ್ಯಂತ ಕಷ್ಟ. ಬದುಕಿನಲ್ಲಿ ಹೊಸ ನಿರೀಕ್ಷೆಗಳಿರಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ ಎನ್ನುವ ನಂಬಿಕೆ ಬದುಕನ್ನು ಎಷ್ಟೋ ಬಾರಿ ಚಿರಂತನವಾಗಿಸುತ್ತದೆ. ಅಂಥ ನಂಬಿಕೆಯೇ ಇರದ ಬದುಕು ದುರ್ಭರವೇ, ಸಂಶಯವಿಲ್ಲ.

ಮರಣ ದಂಡನೆ ಯಾರಿಗೂ ನೀಡಬಾರದು ಎಂದೂ ಒಮ್ಮೊಮ್ಮೆ ಎನಿಸುತ್ತದೆ. ಮತ್ತೊಮ್ಮೆ ಹೀಗೆ ಹೆಚ್ಚುತ್ತಿರುವ ಅಪರಾಧಗಳನ್ನು ಕಂಡರೆ ಇಂಥದೊಂದು ಶಿಕ್ಷೆ ನೀಡುವುದು ಉಚಿತವೇ ಎಂದೂ ಅನಿಸುತ್ತದೆ. “ಭಯ’ದಿಂದ ಸಮಾಜ ಉದ್ಧಾರವಾಗಬಹುದೆಂಬ ಆಲೋಚನೆ ಇದಕ್ಕೆ ಕಾರಣ. ಇನ್ನೊಮ್ಮೆ “ಮನ ಪರಿವರ್ತನೆಯೇ ಸಮಾಜದ ಉದ್ಧಾರಕ್ಕೆ ಬುನಾದಿ’ ಎಂಬ ಅಹಿಂಸೆಯ ಮಾತನ್ನು ಕೇಳಿದಾಗ ಹೌದಲ್ಲವೇ ಎನಿಸುವುದುಂಟು. ಆದರೆ ಶ್ರದ್ಧಾನಂದನ ಸ್ಥಿತಿ ಕಂಡಾಗ ಏನು ಹೇಳುವುದಿದೆ ? ಅವನು ಬದುಕಬೇಕೆಂದು ಹಪಹಪಿಸುತ್ತಿರಬಹುದು, ಆದರೆ ಆರೋಗ್ಯ ಸಹಕರಿಸುತ್ತಿಲ್ಲ. ಗಲ್ಲನ್ನು ತಪ್ಪಿಸಿಕೊಳ್ಳಲು ಸುಪ್ರೀಂಕೋರ್ಟ್‌ಗೆ ಮೊರೆ ಹೋದ. ಕೋರ್ಟ್ ತೂಗಿ-ಅಳೆದು ಶಿಕ್ಷೆಯನ್ನು ಕಡಿಮೆಗೊಳಿಸಿದೆ. ಈಗಾಗಲೇ ಜೀವಾವಧಿ (೧೪ ವರ್ಷ) ಶಿಕ್ಷೆ ಅನುಭವಿಸಿರುವ ಶ್ರದ್ಧಾನಂದ ಮತ್ತೆ ಶಿಕ್ಷೆ ಅನುಭವಿಸಬೇಕು, ಬದುಕು ಇರುವವರೆಗೆ, ಬದುಕಿರುವವರೆಗೆ…

ಈಗ ನಿಜವಾಗಲೂ ನನಗೆ ಅನಿಸುವುದು ಅದೇ, ಮರಣ ದಂಡನೆಯೇ ಚೆನ್ನಿತ್ತೇನೋ. ಕಾರಣವಿಷ್ಟೇ. ಬದುಕುವ ಪ್ರತಿ ಕ್ಷಣವೂ ಸಾವಿಗಾಗಿ ಅಡವಿಡುವುದಿದೆಯಲ್ಲ, ಅದು ಬದುಕಿನ ಅತ್ಯಂತ ದುಸ್ತರ ಅವಸ್ಥೆ. ಸಾಯುವುದಕ್ಕಾಗಿಯೇ ಬದುಕುವುದು ಸಾಧ್ಯವೇ ಇಲ್ಲದ ಮಾತು. ಆದರೆ ಶ್ರದ್ಧಾನಂದ ಸಾಯುವುದಕ್ಕಾಗಿ ಬದುಕುತ್ತಿದ್ದಾನೆ. ಸಾವಿಗೆ ಕಾಯುತ್ತಿದ್ದಾನೆ.
ಈ ಲೇಖನ ತೀರ್ಪಿನ ವ್ಯಾಖ್ಯಾನವೂ ಅಲ್ಲ, ವಿಶ್ಲೇಷಣೆಯೂ ಅಲ್ಲ. ನನ್ನೊಳಗೆ ಮೂಡಿಬಂದ ಆಲೋಚನೆಗಳ ಅನಾವರಣವಷ್ಟೇ.

ಬ್ಲಾಗಿಗರ ಅಂಗಣದಿಂದ

ಬ್ಲಾಗ್ ಗಳಲ್ಲಿ ಏನು ಬರೆಯಬೇಕೆಂಬುದು ನನ್ನನ್ನು ಕಾಡುತ್ತಿದ್ದ ಸಂಗತಿ. ಅದರ ಬಗ್ಗೆ ಬರೆಯಬೇಕೆಂದನಿಸಿ ಏನನ್ನೋ ಬರೆದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಚಕೋರರು (ಬ್ಲಾಗಿಗರ ಅಂಗಣದಿಂದ) ಪ್ರಬುದ್ಧವಾದ ಲೇಖನ ಬರೆದಿದ್ದಾರೆ. ಅದನ್ನೇ ನಮ್ಮೊಳಗೆ (ಬ್ಲಾಗಿಷ್ಟರೊಳಗೆ) ಸಕಾರಾತ್ಮಕವಾದ, ಒಳ್ಳೆಯ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಚೇತನಾರೂ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಒಳ್ಳೆಯ ಚರ್ಚೆಗೆ ವೇದಿಕೆಯಾದ ಇವರಿಬ್ಬರಿಗೂ ಧನ್ಯವಾದಗಳು.

ನಾವಡ

ಬ್ಲಾಗೆಂಬ ಆಕಾಶ ಉಳಿಯಲಿ, ತಾರೆಗಳು ಹೊಳೆಯಲಿ !

ಇದು ಮಳೆ ನಿಂತ ಮೇಲಿನ ಹನಿ.

ಕೆಲ ದಿನಗಳಿಂದ ಬ್ಲಾಗ್‌ಗಳಲ್ಲಿ ಒಂದೇ ಬಗೆಯ ಚರ್ಚೆ. ಬ್ಲಾಗ್‌ಗಳಲ್ಲಿ ಏನನ್ನು ಬರೆಯಬೇಕು ? ವಿಚಾರವೋ ? ಭಾವ ಲಹರಿಯೋ ? ಮಾಹಿತಿಯೋ ? ಹೊಸ ಬಗೆಯ “ವರದಿ’ಗಳೋ?- ಏನು ? ಯಾವುದು ಬ್ಲಾಗ್‌ಗಳಿಗೆ ಆಹಾರವಾಗಬೇಕು?
ಬೆಂಗಳೂರಿನಲ್ಲಿ ಇತ್ತೀಚೆಗೆ ಮಹಾತ್ವಾಕಾಂಕ್ಷೆಯಿಂದ ಪ್ರಣತಿ ಆಯೋಜಿಸಿದ್ದ ಬ್ಲಾಗಿಗರ ಭೇಟಿಯಲ್ಲಿ ಎದುರಾದ ಪ್ರಶ್ನೆಗಳೂ ಇವೇ. ದಟ್ಸ್ ಕನ್ನಡದ ಎಸ್. ಕೆ. ಶಾಮಸುಂದರ್ “ಹಿರಿಯ ಪ್ರಜೆಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಎಲ್ಲೂ ಮಾಹಿತಿಯಿಲ್ಲ’ ಎಂದು ಹೇಳುವ ಮೂಲಕ ಅಂಥದೊಂದು ಬ್ಲಾಗ್ ಮಾಡಿದರೆ ಸೂಕ್ತ ಎಂದರು. ಅಂದರೆ ಮಾಹಿತಿ ಧಾಮವಾಗಲಿ ಎಂಬುದು ಆಶಯ. ಜತೆಗೆ ಬರೀ ಕಥೆ, ಕವನ ಬರೆದ್ರೆ ಏನು ಪ್ರಯೋಜನ ? ಎಷ್ಟು ದಿನ ಬರೀತೀರಿ ? ಬ್ಲಾಗ್ ನಲ್ಲೂ ಸಾಹಿತ್ಯ ಓದಬೇಕಾ? ಎಂದು ಕೇಳುವ ಧಾಟಿಯೂ ವ್ಯಕ್ತವಾಯಿತು.
ಸುಶ್ರುತ ತಮ್ಮ ಇತ್ತೀಚಿನ ಬರಹದಲ್ಲಿ ಅದೇ ಗೊಂದಲವನ್ನು ತೋಡಿಕೊಂಡು, ಯುಗಾದಿ ಬಗ್ಗೆ ಶುಭಾಶಯ ಹೇಳಿದ್ದಾರೆ. ಅಲ್ಲೂ ಒಂದು ಭಾವದ ಎಳೆ ತಂದು ಬರಹವನ್ನೇ ಸೊಗಸುಗೊಳಿಸಿದ್ದಾರೆ. ನನ್ನೊಳಗೂ ಬರೆಯಬೇಕಾದದ್ದು ಏನು ? ಬ್ಲಾಗ್ ಆರಂಭವಾಗಿದ್ದು ಏಕೆ ? ಇಂಥ ಪ್ರಶ್ನೆಗಳು ದೊಂಬರಾಟ ನಡೆಸುತ್ತಲೇ ಇವೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲರೂ ಓದುವುದನ್ನು ಬರೆದರೆ ಸಾಕು. ಅದು ಕವಿತೆ, ಕಥೆ ಎಂಬ ಭಾವವೇಕೆ? ಇಂದು ನಾವು ಕೊರತೆ ಅನುಭವಿಸುತ್ತಿರುವುದು ಅನುಭವದ ನೆಲೆಯ ಭಿನ್ನ ಭಿನ್ನ ಗ್ರಹಿಕೆಯನ್ನು. ನಮ್ಮ ಹಿರಿಯರ ದಿನಗಳಿಗೂ, ಈಗಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ
ನಾವೀಗ ಸಮಯವಿಲ್ಲವೆಂದು ತಿಳಿದುಕೊಂಡು “ಬ್ಯುಸಿ’ಯಾಗಿದ್ದೇವೆ.   ಮನುಷ್ಯರ ಮಧ್ಯೆ ಮುಖಾಮುಖಿ ಸಂಬಂಧ ಕ್ಷೀಣಿಸುತ್ತಾ, ಅದಕ್ಕಾಗಿ ನಾನಾ ಮಾಧ್ಯಮಗಳ ಸಾಧನಗಳನ್ನು ಆಶ್ರಯಿಸುತ್ತಾ ಬಂದಿದ್ದೇವೆ. ಇಂಥ ಸರಿಹೊತ್ತಿನಲ್ಲಿ ಕತ್ತಲೆಯ ಮಧ್ಯೆ ತೋರುವ ಮಿಣುಕು ಹುಳದಂತೆ ಕಂಡದ್ದು ಈ ಬ್ಲಾಗ್ ಸಹ. ಇದೂ ಅಂಥದೊಂದು ಸಂಬಂಧವನ್ನು ಹಸಿರಾಗಿಸಿಕೊಳ್ಳಲು ಹುಟ್ಟಿಕೊಂಡ ನೆಲೆಯೇ ಹೊರತು ಮತ್ತೇನೂ ಅಲ್ಲ.
ನಮ್ಮ ಬದುಕಿನ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತಾ, ಒಂಟಿತನದ ಬೇಗೆಯಿಂದ ಹೊರಬರಲು ರೂಪಿಸಿಕೊಂಡ ಮಾರ್ಗವೂ ಹೌದು. ೨೧ ನೇ ಶತಮಾನದ ತಲೆಮಾರಿನ ನಮಗೆ ಒಂಟಿತನ, ಏಕಾಂತ ಬಹು ಇಷ್ಟ. ಆದರೆ ಅದು ನಮ್ಮ ತಲೆ ಚಿಟ್ಟು ಹಿಡಿಸಲಾರದಷ್ಟಿರಲಿ ಎಂಬ ಆಶಯವೂ ಇದೆ. “ಫ್ರೀ ಸ್ಪೇಸ್’ ನಲ್ಲಿದ್ದ ಬಹಳಷ್ಟು ಮಂದಿ ಇಂದು ನಗರದಲ್ಲಿರುವುದರಿಂದ ಇಲ್ಲಿನ ಟ್ರಾಫಿಕ್ ಜಾಮ್, ಒತ್ತಡ ಎಲ್ಲವೂ ಹೊಸದೇ. ಅದಕ್ಕೇ ಆಗಾಗ್ಗೆ ನಮ್ಮ ಹಳ್ಳಿಗಳು, ನಮ್ಮೂರು ನೆನಪಾಗುತ್ತವೆ. ಅದನ್ನು ನೆಪ ಮಾಡಿಕೊಂಡು ಒಂದಷ್ಟು ನೆನಪುಗಳ ಜಾತ್ರೆಯನ್ನು ಹೊರಡಿಸುತ್ತೇವೆ. ಆ ಮೂಲಕ ನಮ್ಮೊಳಗೆ ಕಾಡತೊಡಗಿದ “ಹೋಮ್‌ಸಿಕ್‌ನೆಸ್’ ನ್ನು ಹಗುರ ಮಾಡಿಕೊಳ್ಳುತ್ತೇವೆ. ಇದು ನಮ್ಮ ಮಾಧ್ಯಮ ಸಹ.
ಆ ನೆಲೆ “ಹಳವಂಡ’ ವಾಗಿಯೂ ಬರಬಹುದು ಅಥವಾ ಕಥೆ, ಕವನಗಳ ಮೂಲಕ (ಸುಧನ್ವಾನ ಪೇಟೆ ಪಾಡ್ದನ ಇತ್ಯಾದಿ) ಹೊಸ ಬದುಕಿನ ನೆಲೆಗೆ ಮುಖಾಮುಖಿಯಾದಾಗಿನ ಅನುಭವ ಅನಾವರಣಗೊಳ್ಳಬಹುದು. ಅದು ಅವರವರ ಆಯ್ಕೆ. ಬರಿಯ ಪ್ರೀತಿ, ಪ್ರೇಮ, ಮರ ಸುತ್ತುವುದಕ್ಕೇ ಸೀಮಿತವಾಗದೇ ಹೊಸ ಬಗೆಯ ತಲ್ಲಣಗಳನ್ನು ದಾಖಲಿಸುವ ಮಾಧ್ಯಮವಾಗಿ ಬ್ಲಾಗ್ ಬರಬೇಕೆಂಬುದು ನನ್ನ ಆಶಯ ಸಹ.
ಇತ್ತೀಚೆಗೆ ನಮ್ಮ ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಇದೇ ಬ್ಲಾಗಿಗರ ಭೇಟಿ ಕುರಿತು ಪ್ರಸ್ತಾಪಿಸಿದರು. ಪ್ರಣತಿಯ ಮೊದಲ ಪುಸ್ತಕ ಬಿಡುಗಡೆಗೆ ಬಂದಿದ್ದ ಅವರು, ” ಈ ಭೇಟಿ ಬಗ್ಗೆ ನನಗೆ ಮಾಹಿತಿಯೇ ಲಭ್ಯವಾಗಲಿಲ್ಲ. ನನಗೂ ಬರಲು ಆಸೆಯಿತ್ತು’ ಎಂದರು. ಅವರು ಹೇಳಿದ ಮಾತಿದು. “ಮುಂದಿನ ಸಂದರ್ಭದಲ್ಲಿ ಇಲ್ಲಿನ ಬರಹಗಳೂ ಸಾಹಿತ್ಯದ ಮೌಲ್ಯವನ್ನು ಪಡೆಯಬಲ್ಲವು’.
ಹಾಗೆಂದು ನಾವೆಲ್ಲಾ ೨೦೪೦ ಕ್ಕೆ ಸಾಹಿತಿಗಳ ಪಟ್ಟ ಕಟ್ಟಿಕೊಳ್ಳುತ್ತೇವೆಂಬ ಅಭಿಪ್ರಾಯವಲ್ಲ. ಆದರೆ ಅವರ ವ್ಯಾಖ್ಯಾನ ಭಾಗಶಃ ಸತ್ಯವೂ ಹೌದು. ಒಂದೆಡೆ ಕುಳಿತು, ಬಿಡುವು ಮಾಡಿಕೊಂಡು ಮಹಾಕಾವ್ಯಬರೆಯುವವರು ತೋರುತ್ತಿಲ್ಲ. ಕುವೆಂಪು, ಕಾರಂತರು, ಅಡಿಗರು ಕಂಡ ವನ್ಯ ಪ್ರೇಮ ಇನ್ನು ಸಿಗಲಾರದು. ಪಶ್ಚಿಮ ಘಟ್ಟ, ಮಲೆ ಮಹದೇಶ್ವರ ಬೆಟ್ಟ -ಹೀಗೆ ಲ್ಲಾ ಕಾಡುಗಳು ಕರಗಿಹೋಗುತ್ತಿವೆ. ಕಾರಂತರ ಕಡಲಿದ್ದರೂ ಅಲ್ಲಿಯೂ ಏಕಾಂತವಿಲ್ಲ.  ನಮ್ಮ ತಲೆಮಾರು ಉದ್ಯೋಗದ ಅಗತ್ಯದೊಂದಿಗೇ ಅನುಭವವನ್ನು ದಾಖಲಿಸುವ ಅನಿವಾರ್ಯವನ್ನು ಸೃಷ್ಟಿಸಿಕೊಂಡದ್ದು.
ಈ ಎಲ್ಲಾ ಅಂಶಗಳ ಮೂಲಕ ನಾನು ಬ್ಲಾಗ್‌ಗಳು ಸಾಹಿತ್ಯಕ್ಕೆ, ಕಥೆ, ಕವಿತೆಗೆ ಮೀಸಲಾಗಿರಬೇಕೆಂದು ಪ್ರತಿಪಾದಿಸಲು ಹೊರಟಿಲ್ಲ. ಆದರೆ ಬ್ಲಾಗ್‌ನ ಅಗತ್ಯ ಹುಟ್ಟಿದ್ದು ಅಂಥದೊಂದು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಅಥವಾ ಹೇಳಿಕೊಳ್ಳುವ ತುಡಿತದಿಂದ ಎಂಬುದು ನನ್ನ ಅನಿಸಿಕೆ. 
ಪ್ರಸ್ತುತ ಇಂಥದೊಂದು ಬ್ಲಾಗ್ ಪ್ರಪಂಚದಲ್ಲಿ ಇರುವವರಲ್ಲಿ ಬಹುಪಾಲು ಮಂದಿ ತಂತ್ರಜ್ಞಾನ ಕ್ಷೇತ್ರದವರು, ತಂತ್ರಜ್ಞಾನವನ್ನು ನಿತ್ಯವೂ ಮುಖಾಮುಖಿಯಾಗುತ್ತಿರುವ ಕ್ಷೇತ್ರದವರು (ಮಾಧ್ಯಮ ಇತ್ಯಾದಿ). ಈ ಕ್ಷೇತ್ರ ನಮಗೆ ತೀರಾ ಹೊಸದು. ಹತ್ತು ವರ್ಷದಲ್ಲಿ ತಂತ್ರಜ್ಞಾನ ತಂದ ಬದಲಾವಣೆ ನಮ್ಮ ಜೀವನಶೈಲಿಯಿಂದ ಹಿಡಿದು ಎಲ್ಲ ಹಂತದಲ್ಲೂ ಪ್ರಭಾವ ಬೀರಿದೆ. ಅಷ್ಟೇ ಅಲ್ಲ, ಹಿರಿಯ ತಲೆಮಾರು ಕಂಗಾಲಾಗುವಂತೆ ಮಾಡಿದ್ದೂ ನಿಜ. ಮತ್ತೊಂದನ್ನು ಗಮನಿಸಬೇಕು. ಈ ಕ್ಷೇತ್ರದಲ್ಲಿರುವ ಬಹುತೇಕರೆಲ್ಲರೂ ಮಧ್ಯಮವರ್ಗದವರು. ಹಾಗಾಗಿ ನಾವು ಎದುರುಗೊಳ್ಳುತ್ತಿರುವ ಬದುಕಿನ ಹೊಸ ನೆಲೆಗೆ ಪ್ರತಿಕ್ರಿಯಿಸುವ ಬಗೆ ಬ್ಲಾಗ್‌ಗಳಲ್ಲಿ ಏಕೆ ಬರಬಾರದು ? ಹೊಸ ಅನುಭವದ ಗ್ರಹಿಕೆಯಲ್ಲಿ ಏರ್ಪಡುವ ಗೊಂದಲಗಳನ್ನು ಹೀಗೆ ಸಮಾನಾಸಕ್ತರ ಮಧ್ಯೆ ಬಗೆಹರಿಸಿಕೊಳ್ಳುವ ಸಂಕವೇಕಾಗಬಾರದು ? ಮತ್ತೆ ಹೇಳುತ್ತಿದ್ದೇನೆ. ಬ್ಲಾಗ್‌ಗಳಿಂದ ಕ್ರಾಂತಿ ಆಗಬೇಕೆಂದು ಏಕೆ ಬಯಸಬೇಕು ?
“ಆಕ್ಟಿವಿಸಂ’ ಬಗ್ಗೆಯೂ ಕೆಲವೆಡೆ ಚರ್ಚೆಯಾಗಿದೆ. ಅದರ ಬಗ್ಗೆ ನನ್ನ ತಕರಾರಿಲ್ಲ. ನಮ್ಮ ಹೊಸ ನೆಲೆಯ ಮಧ್ಯೆ   ಎದುರಾಗುವ ಸಮಸ್ಯೆಗಳಿಗೆ ಸಮಾನಾಸಕ್ತರು ಸೇರಿ ಚರ್ಚಿಸುವ, ಪರಿಹಾರ ಹುಡುಕಿಕೊಳ್ಳುವ ವೇದಿಕೆಯಾದರೆ ಚೆನ್ನ. ಅದನ್ನೇ ಗೊಂದಲಗಳ ಪರಿಹಾರದ ಸಂಕ ಎಂದದ್ದು. ಇದರೊಂದಿಗೆ ನಾಗರಿಕ ಪತ್ರಕರ್ತರಂತೆ ಕಾರ್ಯ ನಿರ್ವಹಿಸುವುದೂ ಸೂಕ್ತವೇ. ಬರಿಯ ಮಾಹಿತಿಯ ಖಜಾನೆ ಆಗಬೇಕೆಂಬ ವಾದ ನನಗೆ ರುಚಿಸದು.
ಹತ್ತು ವರ್ಷಗಳ ಹಿಂದೆ ಮಾಹಿತಿ ಕ್ರಾಂತಿಯಾಗಿರಲಿಲ್ಲ. ಆದರೆ ತಂತ್ರಜ್ಞಾನದ ನೆಲೆಯಲ್ಲಿ ಉಂಟಾದ ಕ್ರಾಂತಿ ಇಂದು ಏನೆಲ್ಲಾ ಉಂಟು ಮಾಡಿದೆ.  ನಮ್ಮ ಬೆರಳಿನ ತುದಿಯಲ್ಲಿ ಮಾಹಿತಿ ಖಜಾನೆ ಇಟ್ಟುಕೊಂಡಿದ್ದೇವೆ. ಒತ್ತಿದ್ದರೆ ತೆರೆಯುತ್ತದೆ, ಬೇಕಾದಾಗ ಸುರಿದುಕೊಳ್ಳಬಹುದು. ಇಂಥ ಸಂದರ್ಭದಲ್ಲಿ ನಮ್ಮ ಬ್ಲಾಗ್‌ಗಳಲ್ಲೂ ಇನ್ಪರ್ಮೇಷನ್ ಡೈಜೆಸ್ಟ್,ಸ್ಪರ್ಧಾತ್ಮಕ ಪರೀಕ್ಷಾ ಗೈಡ್, ಸರಕಾರಿ ಇಲಾಖೆಗಳ ವೆಬ್‌ಸೈಟ್‌ಗಳಾಗಬೇಕಾದ ಅಗತ್ಯವಿದೆಯೇ ? ಇದೇ ಸಂದರ್ಭದಲ್ಲಿ ಈ ಬ್ಲಾಗ್‌ಗಳನ್ನು ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು. ಉದಾಹರಣೆಗೆ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರದ ನಾವೆಲ್ಲರೂ ನಮ್ಮ ಭಾವ ಬರಹಗಳೊಂದಿಗೆ ಕ್ಷೇತ್ರದ ವಿಶೇಷತೆ, ಅಲ್ಲಿನ ಬೆಳವಣಿಗೆ, ಆಕರ ವಿಷಯವನ್ನು ಕನ್ನಡದಲ್ಲಿ ಕಟ್ಟಿಕೊಡಬಹುದು. ಆಗ ಕನ್ನಡವನ್ನು ವಿವಿಧ ನೆಲೆಗಳಲ್ಲಿ ಕಟ್ಟಿದಂತಾದೀತು.
ನಗರ ಕೇಂದ್ರಿತ ಅನುಭವಗಳನ್ನು ಬರಹಗಳಲ್ಲಿ ಕಟ್ಟಿ ಕೊಟ್ಟವರ ಪಟ್ಟಿಯಲ್ಲಿ ಯಶವಂತ ಚಿತ್ತಾಲರು, ಜಯಂತ ಕಾಯ್ಕಿಣಿ ಯಂಥ ಅನೇಕರಿದ್ದಾರೆ. ಇವರೆಲ್ಲರೂ ಇಂದಿನ ತಲೆಮಾರಿನವರಾಗಿದ್ದರೆ ತಮ್ಮ ಅಭಿವ್ಯಕ್ತಿಗೆ ಬ್ಲಾಗ್‌ಗಳನ್ನೇ ಬಳಸುತ್ತಿದ್ದರೇನೋ ? ಸಾಹಿತ್ಯದ ಹಣೆ ಪಟ್ಟಿ ಕಟ್ಟುವುದನ್ನು ಬಿಟ್ಟುಬಿಡೋಣ. ಅನುಭವದ ನೆಲೆಯಾಗಿಯಷ್ಟೇ ಅರ್ಥ ಮಾಡಿಕೊಳ್ಳುತ್ತಾ ಸಾಗೋಣ.
ಚಾರಣದ ಕುರಿತಾದ ಹಲವು ಬ್ಲಾಗ್‌ಗಳಿವೆ. ನಾನಂತೂ ನಿಜವಾಗಲೂ ಅವುಗಳನ್ನು ಮಾಹಿತಿಗೆ ಓದುವುದಿಲ್ಲ ; ಅದರ ಅನುಭವಕ್ಕಾಗಿ. ಕೊಡಚಾದ್ರಿ ಬೆಟ್ಟಕ್ಕೆ ಎಲ್ಲಿಂದ ಎಷ್ಟು ಕಿ. ಮೀ ಎಂಬ ಮಾಹಿತಿ ಅಲ್ಲಿ ಸ್ಥೂಲವಾಗಿರುತ್ತದೆಯೇ ಹೊರತು ಅದೇ ಬರಹದ ಸರ್ವಸ್ವವೂ ಅಲ್ಲ. ಹಾಗಾಗಿ ಕಥೆ, ಕವನ ಇತ್ಯಾದಿ ಶೀರ್ಷಿಕೆ ಕೈ ಬಿಟ್ಟು ಒಟ್ಟೂ ಅನುಭವಿಸುತ್ತಾ ಹೋಗೋಣ. ಇಲ್ಲವಾದರೆ ಮತ್ತೆ ಬ್ಲಾಗ್‌ಗಳೂ ಮಾಹಿತಿಯ ಹೊರೆಯಲ್ಲಿ  ಸೇರಿ ಹೋದೀತೆಂಬ ಭಯ ಸದಾ ನನ್ನನ್ನು ಕಾಡುವ ಅಂಶ . ನಾವೆಲ್ಲಾ ನಡೆಯುತ್ತಿರುವ ಭಿನ್ನ ಭಿನ್ನ ಹಾದಿಯಲ್ಲಿ ಈ ಬ್ಲಾಗ್ ಎಂಬ ಮಾಧ್ಯಮ ಒಂದು ಬೀದಿದೀಪವಿದ್ದಂತೆ. ಅದರ ಬೆಳಕು ಹರಿದಷ್ಟೂ ದೂರ ನಮ್ಮ ಹೆಜ್ಜೆ ಹಗುರಾದೀತಲ್ಲವೇ ? ಬ್ಲಾಗೆಂಬ ಆಕಾಶ ಉಳಿಯಲಿ, ನಮ್ಮೊಳಗಿನ ತಾರೆಗಳು ಹೊಳೆಯಲಿ !