ಮತ್ತೆ ಬರೆಯಬೇಕೆನಿಸಿದೆ !

ಇಷ್ಟು ದಿನ ಅಕ್ಷರಶಃ ನನ್ನ ಬ್ಲಾಗ್ “ಐಸಿಯು” ನಲ್ಲೇ ಇತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾರ್ಯ ಒತ್ತಡದ “ಕ್ಯಾನ್ಸರ್” ಆವರಿಸಿಕೊಂಡಿದ್ದು ನಿಜ. ಆಗಾಗ್ಗೆ ಇನ್ನೂ ಬ್ಲಾಗ್ ಬದುಕಿದೆ ಎನ್ನುವುದಕ್ಕೆ ಸಣ್ಣದೊಂದು ಲೇಖನವೋ, ಪದ್ಯವೋ ಹಾಕಿ ಮುಗಿಸುತ್ತಿದ್ದೆ. ಹಲವು ಕಾರ್ಯಗಳು ಒಮ್ಮೆಲೆ ನನ್ನೆದುರು ನಿಂತಿದ್ದರಿಂದ ಆ ಒತ್ತಡದಲ್ಲಿ ಮುಳುಗಿದ್ದೆ. ಹಾಗಾಗಿ ಬ್ಲಾಗ್ ನಲ್ಲಿ ಬರೆಯಲು ಅಷ್ಟೊಂದು ತಲೆ ಕೊಂಡಿರಲಿಲ್ಲ.

ಈಗ ನಾನೇನೂ ಫುಲ್ ಫ್ರೀ ಆಗಿಲ್ಲ. ಪತ್ರಿಕೆಯಲ್ಲೂ ಬರೆಯುವುದನ್ನು ಕಡಿಮೆ ಮಾಡಿದ್ದೆ. ಒಂದಿಷ್ಟು ದಿನ ಸುಮ್ಮನಿರಬೇಕೆನಿಸಿತ್ತು. ಎಲ್ಲವನ್ನೂ ಬರೆದು ಬರೆದು ಮುಗಿದು ಹೋದ ಮೇಲೆ ಏನು ಮಾಡೋದು ಎನ್ನೋ ಚಿಂತೆ ಬಾಧಿಸಿತ್ತು. ಇಂಕು ಬಾಟಲಿಯಲ್ಲಿನ ಕೊನೆ ಹನಿ ಹಾಗೇ ಉಳಿದಿರಲಿ, ತುರ್ತಿಗೆ ಆದೀತೆಂದು ಎಣಿಸಿದ್ದೆ. ಈಗ ಆ ಹನಿಯೂ ಒಣಗಿ ಹೋದೀತೆಂದು ಎನಿಸತೊಡಗಿದೆ. ಅದಕ್ಕೇ ಮತ್ತೆ ವಾರಕ್ಕೆ ಒಂದಿಷ್ಟು ಬರೆಯಬೇಕೆಂದು ನಿರ್ಧರಿಸಿದ್ದೇನೆ. ಹೊಸ ಬಗೆಯದ್ದು ಏನಾದರೂ ಬರೆಯಬಹುದೋ ಎಂಬ ಪ್ರಯತ್ನ ನಡೆದೇ ಇದೆ. ನೋಡಬೇಕು, ನನಗೂ ಗೊತ್ತಿಲ್ಲ.

ಒಂದು ವರ್ಷದಲ್ಲಿ ಏನೇನೋ ಎದುರಾದವು ನನ್ನೆದುರಿಗೆ. ನನ್ನ ಮಗ ಎರಡನೇ ತರಗತಿಗೆ ಹೊರಟ, ನನ್ನ ಪತ್ನಿ ಶಾಲೆ ಬದಲಾಯಿಸಿದಳು, ನನ್ನ ಅಮ್ಮನಿಗೆ ಮತ್ತೊಂದು ವರ್ಷ ತುಂಬಿತು, ಮಗಳು ಮಾತನಾಡತೊಡಗಿದ್ದಾಳೆ, ವೃತ್ತಿಯಲ್ಲೂ ಒಂದಿಷ್ಟು ನೀರು ಹರಿದು ಹೋಯಿತು, ಯೋಗರಾಜಭಟ್ಟರ ಪಂಚರಂಗಿಯೂ ಹಳೆಯದಾಯಿತು, ಗೆಳೆಯ ಕಲ್ಲರೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾನೆ, ಪ್ರವೀಣ ಬೆಂಗಳೂರಿನ ಸಮುದ್ರ ಸೇರಿಕೊಂಡ, ವಾದಿರಾಜ್ ಸಂಚಾರಿಗುಣವನ್ನು ಬಿಟ್ಟಿಲ್ಲ, ಟೀನಾ ಮೇಡಂರೊಂದಿಗೆ ಸಿನಿಮಾ ಚರ್ಚೆ ಮುಗಿಸಿಲ್ಲ, ಪರಮೇಶ್ ಸಾರ್ ಇನ್ನಷ್ಟು ವರ್ಕ್ ಶಾಪ್ ಗಳನ್ನು ಮುಗಿಸಿದರು…ಹೊಸ ಗೆಳೆಯರೂ ನನ್ನೊಳಗೆ ಬಂದರು ಅಥವಾ ನಾನೇ ಅವರೊಳಗೆ ಹೋದೆ…ಮೈಸೂರಿನಲ್ಲೇ ಹೊಸ ಜೀವನ ಆರಂಭವಾಗಿದೆ…ಹೀಗೆ ಕ್ಲೀಷೆಯ ಮಾತಲ್ಲೇ ಹೇಳುವುದಾದರೆ ಗಂಗಾ ಕಾವೇರಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಬಹಳ ಆಸಕ್ತಿದಾಯಕ ವಿಷಯವೆಂದರೆ “ಬ್ರಹ್ಮಚಾರಿಗಳ ಪುಟಗಳೆಲ್ಲವೂ’ ಗೃಹಸ್ಥವಾಗಿ ಮಾರ್ಪಟ್ಟಿವೆ !

ಮನೆಗೆ ಇಂಟರ್ ನೆಟ್ ಸಂಪರ್ಕ (ಆರು ತಿಂಗಳಾಗಿತ್ತು ಬಂದು) ಪಡೆದು ಸುಮ್ಮನಿದ್ದ ನಾನು, ಈಗ ನಿತ್ಯವೂ ಬೆಳಗ್ಗೆ ಒಂದಿಷ್ಟು ಹೊತ್ತು ಇದಕ್ಕೆಂದೇ ಪುರಸೊತ್ತು ಮಾಡಿಕೊಳ್ಳಬೇಕೆನಿಸಿದೆ. ಶರದ್ರುತು ಮುಗಿದು ಚೈತ್ರ ಬಂದಂತೆ, ಮರವೊಂದು ತನ್ನದೆಲ್ಲಾ ಉದುರಿಸಿಕೊಂಡು, ಮತ್ತೆ ಚಿಗಿತು ನಿಂತಂತೆ. ನನಗೂ ಮತ್ತೆ ಒಂದಿಷ್ಟು ಹಂಚಿಕೊಳ್ಳಬೇಕೆಂಬ ತುಡಿತ. ಅದಕ್ಕೇ ಮತ್ತೆ ಬರೆಯಬೇಕೆನಿಸಿದೆ !

ಬದುಕಲಿಕ್ಕೆ ಮತ್ತೊಂದು ವರ್ಷ ..!

೨೦೦೯…!
ಬದುಕಲಿಕ್ಕೆ ಮತ್ತೊಂದು ವರ್ಷ.
ಬದುಕಿನ ಹಾದಿ ದೊಡ್ಡದು ; ಅದರಲ್ಲಿ ನಡೆದು ಹೋಗುವ ನಾವೇ ಚಿಕ್ಕವರು. ಗಮ್ಯವನ್ನು ಹುಡುಕುತ್ತಲೇ ನಾವೆಲ್ಲೋ ಕಳೆದು ಹೋಗುತ್ತೇವೆ. ಸಾಗಿದ ದಿನಗಳನ್ನು ಲೆಕ್ಕ ಹಾಕುತ್ತಾ ಕುಳಿತಾಗ ದಿನಗಳಿರಲಿ ; ವರ್ಷಗಳೇ ಕಳೆದು ಹೋಗಿರುತ್ತವೆ. ಅವ್ಯಾವುದೂ ಲೆಕ್ಕಕ್ಕೆ ಉಳಿಯುವುದಿಲ್ಲ. ಇಟ್ಟ ಸಾವಿರಾರು ಹೆಜ್ಜೆಗಳಲ್ಲಿ ಎಲ್ಲೋ ಒಂದೆರಡು…ಇಲ್ಲದಿದ್ದರೆ ಮೂರೋ ನಾಲ್ಕು…ಮೈಲಿಗಲ್ಲುಗಳಾಗಿ ತೋರಬಹುದು.

ಅದೇ ಹಾದಿಯಲ್ಲಿ ನಂತರ ಸಾಗಿ ಹೋಗುವವರಿಗೆ ಕೈ ಮರದಂತೆ ತೋರಬಹುದು. ಆದರೆ ಅಂತ ನಾಲ್ಕೈದು ಹೆಜ್ಜೆ ಮೂಡಿಸುವುದೂ ಸುಲಭದ ಮಾತಲ್ಲ. ಕಾರಣವಿಷ್ಟೇ, ನಮ್ಮ ಬದುಕಿನ ಹಾದಿ ಮರಳಿನದು. ಅದರಲ್ಲಿ ಹೆಜ್ಜೆಗಳು ಮೂಡುವುದಿಲ್ಲ. ಮೂಡಿದ ಗುರುತುಗಳೂ ಕ್ಷಣಾರ್ಧದಲ್ಲಿ ಬೀಸಿ ಬರುವ ಗಾಳಿ ಅಳಿಸಿ ಹಾಕಿರುತ್ತದೆ. ಒಂದರ್ಥದಲ್ಲಿ ಅದರಲ್ಲೂ ಅಧ್ಯಾತ್ಮದ ನೆಲೆಯಲ್ಲಿ ಹೇಳುವುದಾದರೆ ಹಾಗೆ ಬದುಕುವುದೇ ನಿಜವಾದ ಬದುಕು. ಅಂದರೆ ಹೆಜ್ಜೆ ಮೂಡಿಸದೇ ಮೂಡಿಸಿದಂತೆ ಬದುಕಬೇಕು. ಹಕ್ಕಿಗಳದ್ದು ಅಂಥ ಹೆಜ್ಜೆ ಮೂಡದ ಹಾದಿ.
ಮತ್ತೊಂದು ಹೊಸ ವರ್ಷ ಎದುರಾಗಿದೆ. ಬದುಕುವ ಜೀವಕೆ ಹೊಸತೇನು ? ಹಳತೇನು ? ವಾಸ್ತವವಾಗಿ ಹೇಳುವುದಾದರೆ ಒಂದು ವರ್ಷ ಕಳೆದು ಮತ್ತೊಂದು ಬರುವುದೆಂದರೆ ಮೃತ್ಯುವಿಗೆ ಹತ್ತಿರವಾಗುವುದು. ಇದು ಕಟು ವಾಸ್ತವ. ನಮಗೆ ಒಮ್ಮೊಮ್ಮೆ ಈ ನೆಲೆಯ ದೃಷ್ಟಿ ನಕಾರಾತ್ಮಕ ಎನಿಸುತ್ತದೆ. ಅದಕ್ಕೆ ಉಳಿದ ಹಾದಿಯನ್ನೂ ಸಂಕಟಮಯ ಮಾಡಿಕೊಳ್ಳದಿರಲು ಅದಕ್ಕೊಂದು ಧನಾತ್ಮಕ ನೆಲೆಯನ್ನು ಒದಗಿಸುತ್ತೇವೆ. ಅದೇ ‘ಹೊಸ ವರ್ಷ’.

ಕಳೆದು ಹೋದ ವರ್ಷದಲ್ಲಿ ಮಾಡಿದ್ದೇನು ? ಎಂದು ನೆನಿಸಿಕೊಂಡರೆ ಶೂನ್ಯ ಎನಿಸಬಹುದು. ಹಾಗೆಂದು ಮುಂದಿನ ವರ್ಷವೂ ಶೂನ್ಯದತ್ತಲೇ ಪಯಣಿಸಬೇಕೆಂದೇನೂ ಇಲ್ಲ. ಹೊಸ ವರ್ಷದ ನೆಲೆಯಲ್ಲಿ ಒಂದಷ್ಟು ಸಾಧನೆಗೆ ಗುರಿ ಇಟ್ಟುಕೊಳ್ಳಬಹುದು. ಅದು ಗೊತ್ತಿಲ್ಲದ ಊರಿಗೆ ಹೋಗುವಾಗ ನಕ್ಷೆ ಇಟ್ಟುಕೊಂಡದ್ದಕ್ಕೆ ಸಮ. ನಡೆಯುವಾಗ ದಾರಿ ತಪ್ಪಿದಂತೆ ಎನಿಸಿದಾಗಲೆಲ್ಲಾ ನಕ್ಷೆ ನೋಡಿ ಖಚಿತಪಡಿಸಿಕೊಂಡು ಮುಂದಡಿ ಇಡುವುದು. ಎಷ್ಟು ರೋಚಕವಲ್ಲವೇ ಬದುಕುವೆಂದರೆ ?

ಹೊಸ ವರ್ಷವೆಂದರೆ ಹೊಸ ಸೂರ್ಯ ಬರುವುದಿಲ್ಲ, ಚಂದಿರನೂ ಅಷ್ಟೇ. ಪ್ರಕೃತಿ ಮತ್ತು ಪ್ರಕೃತಿಯೊಳಗಿನ ನಾವಷ್ಟೇ ಹೊಸ ರೂಪ ಪಡೆಯುವುದು. ಹೇಮಂತನ ಗಾನಕ್ಕೆ ಮನಸೋತು ಕಳೆದು-ಕರಗಿ ಹೋಗುವ ಪ್ರಕೃತಿ ಮತ್ತೆ ವಸಂತನ ಕೊಳಲಗಾನದ ನಾದ ಕೇಳುತ್ತಲೇ ಹೊಸರೂಪ ತಳೆದು ಕಂಗೊಳಿಸಲು ತೊಡಗುತ್ತಾಳೆ. ಬದುಕು ಮತ್ತೆ ಚಿಗುರುತ್ತದೆ ; ಹೂವಂತೆ ಅರಳುತ್ತದೆ ; ಪಟ್ಟ ಪರಿಶ್ರಮವೆಲ್ಲಾ ಕಾಯಾಗಿ, ಹಣ್ಣಾಗಿ ಮಾಗುತ್ತದೆ. ಅದರ ಸವಿಯನ್ನೂ ಸವಿಯುವಷ್ಟರಲ್ಲಿ ವರ್ಷ ಮುಳುಗುತ್ತದೆ ; ನಿತ್ಯದ ಸೂರ್ಯ ಮುಳುಗುವವನಂತೆ.
ಎಷ್ಟೊಂದು ವಿಚಿತ್ರ. ನಾವು ಮತ್ತೆ  ಏಳಬೇಕು, ಹೊಸ ಉತ್ಸಾಹದಲ್ಲಿ. ವೈಫಲ್ಯದ ಕಹಿ ನೆನಪು ಮರೆತು ಸಜ್ಜಾಗಬೇಕು. ಮನುಷ್ಯ ಹಾಗೆಯೇ. ವಿನಾಶದತ್ತಲೇ ಕಾಲಿಡುತ್ತಾ ಉಳಿವಿಗಾಗಿ ಪ್ರಯತ್ನಿಸಿದ. ಅವನ ಇಡೀ ಇತಿಹಾಸ ಅದನ್ನೇ ಹೇಳುತ್ತದೆ. ಕಾಡಿನಲ್ಲಿ ಹುಟ್ಟಿ, ಅರಳಿ, ಬೆಳೆದು, ಒಂದು ದಿನ ಅಳಿದು ಹೋಗುವ ಮರದಂತೆಯೇ ಬದುಕಿತ್ತು. ಅದೇ ಎಷ್ಟೋ ಸೊಗಸು ಎನ್ನುವಂತಿತ್ತು. ಈಗಿನ ಸ್ಥಿತಿ (ಯುದ್ಧ, ಭಯೋತ್ಪಾದನೆ, ಅನ್ಯಾಯಗಳನ್ನು ಕಂಡಾಗ) ಕಂಡರೆ ಅದುವೇ ಸೊಗಸು ಎನ್ನಿಸುವುದಂತೂ ನಿಜ. ಆದರೂ ಮನುಷ್ಯ ಹೊಸ ನಡೆ ಇಟ್ಟಲು ಪಣ ತೊಟ್ಟ. ಏನೇನೋ ಹುಡುಕಿ ಬೆಂಕಿಯನ್ನು ಶೋಧಿಸಿದ. ವಿಪರ್ಯಾಸವೆಂದರೆ ಅದರ ಬೆಳಗುವ ಮತ್ತು ಬೇಯಿಸುವ ಗುಣವನ್ನು ಅರಿಯದೇ ಹೋದ. ಇಂದಿನ ಕತ್ತಲ ದಿನ ಕಂಡರೆ ಅದನ್ನು ಬೆಳಕಾಗಿಸಿಕೊಂಡದ್ದೇ ಕಡಿಮೆ. ಆದರೂ ಮನುಷ್ಯನ ಉತ್ಸಾಹ ಕುಂದಿಲ್ಲ. ಶೋಧನೆಯಲ್ಲಿ ತೊಡಗಿ, ತೊಡಗಿ, ಪರ್ಯಟನೆಯ ಜಗತ್ತು ಅಂಗೈಯಲ್ಲಿ ಬಂದು ನಿಂತಿದೆ. ತಂತ್ರಜ್ಞಾನದ ನೆಲೆ ಭೂಮಿಯನ್ನೇ ಚಿಕ್ಕದಾಗಿಸಿದೆ. ಇದೆಲ್ಲಾ ಇಂಥದೇ ಒಂದೊಂದು ಹೊಸ ವರ್ಷದಲ್ಲಿ ಘಟಿಸಿದ್ದು.

ಅದಕ್ಕೇ ಹಿರಿಯರು ಹೇಳುವ ಮಾತೊಂದಿದೆ. ಭವಿಷ್ಯಕ್ಕೆ ಇತಿಹಾಸ ಪ್ರಮುಖ ಬುನಾದಿ. ಭವಿಷ್ಯದತ್ತ ದೃಷ್ಟಿ ನೆಟ್ಟವ ಇತಿಹಾಸವನ್ನು ತಿರುಗಿ ನೋಡುವ ಸೌಜನ್ಯ, ಕುತೂಹಲ ಉಳಿಸಿಕೊಂಡಿರಬೇಕು. ಕಾರಣವಿಷ್ಟೇ, ಭವಿಷ್ಯ ಒಂದು ಕಲ್ಪನೆ, ಇತಿಹಾಸ ನಮ್ಮೆದುರು ಘಟಿಸಿದ ವಾಸ್ತವ. ಅಂಥದೊಂದು ವಾಸ್ತವದಿಂದ ಭವಿಷ್ಯದ ನಡೆಯನ್ನು ಸ್ಪಷ್ಟಗೊಳಿಸಿಕೊಳ್ಳಬಹುದು. ಆ ಮತ್ತೊಂದು ಅವಕಾಶ ಎದುರಿಗೆ ಬಂದಿದೆ. ಈಗ ಮತ್ತೆ ನಡೆಯೋಣ….ಒಂದಿಷ್ಟು ದೂರದವರೆಗೆ ಸಾಗೋಣ…ಆಯಾಸವಾದರೆ ಕ್ಷಣ ಹೊತ್ತು ನಿಲ್ಲೋಣ…ಮತ್ತೆ ನಡೆಯೋಣ…ಗುರಿ ಮುಟ್ಟದಿದ್ದರೂ ಪರವಾಗಿಲ್ಲ ; ಗುರಿಗೆ ಹತ್ತಿರವಾಗೋಣ.

ನಿರೀಕ್ಷೆಯ ಗಾಳಿಪಟ ಎಂದಿಗೂ ಕೆಳಗೆ ಇಳಿಯುವುದಿಲ್ಲ ; ಆಕಾಶದಲ್ಲಿ ಎತ್ತರೆತ್ತರಕ್ಕೆ ಹಾರುತ್ತಲೇ ಇರುತ್ತದೆ. ಗೋತಾ ಹೊಡೆಯುವ ಸಂದರ್ಭದಲ್ಲೂ ತನ್ನನ್ನು ಉಳಿಸುವ ಮತ್ತೊಂದು ಗಾಳಿಯ ನಿರೀಕ್ಷೆಯಲ್ಲಿರುತ್ತದೆ. ಅದಕ್ಕೇ ಬದುಕೆಂದರೆ ಅಂಥದ್ದೇ ಒಂದು ಗಾಳಿಪಟ. ಅದನ್ನು ನಾವು ಬಾನೆತ್ತರಕ್ಕೆ ಹಾರಿಸೋಣ…ನಾವೂ ಹಾರೋಣ. ಹೊಸ ವರ್ಷದ ಶುಭಾಷಯಗಳು.

ಸಂಪಿಗೆ ಸಂಸಾರ

ಹೆಸರು ನಂಜಮ್ಮ. ಸುಮಾರು ಎಂಬತ್ತರ ಪ್ರಾಯ. ಸುಕ್ಕು ಗಟ್ಟಿದ ಮುಖ. ಒಳಗೆ ಹೆಪ್ಪುಗಟ್ಟಿದ ದುಃಖ. ಅದರ ಮಧ್ಯೆಯೂ ತೆಳ್ಳಗೆ ಬೆಳ್ಳಿಗೆರೆಯ ಹಾಗೆ ತೇಲಿ ಬರುವ ಪುಟ್ಟದೊಂದು ನಗೆ. ಅದು ಮುಖದ ಅಂದವನ್ನೇ ಬದಲಿಸುವಷ್ಟು ಸಾಮರ್ಥ್ಯವುಳ್ಳದ್ದು.

ಕೆ.ಆರ್. ಮಾರುಕಟ್ಟೆಯ ಒಳಗೆ ಪ್ರವೇಶಿಸುವಾಗಲೇ ಅವಳು ಎಲ್ಲರನ್ನೂ ಎದುರುಗೊಳ್ಳುತ್ತಾಳೆ. ತನ್ನೆದುರಿಗಿದ್ದ ಸಂಪಿಗೆ ರಾಶಿಯನ್ನು ಕಾಣುತ್ತಲೇ ಜೀವನ ಸವೆಸುತ್ತಾಳೆ. ಕೆಂಡಸಂಪಿಗೆಯಂತೆ ಎದುರಿಗೆ ಬಂದ ಗಿರಾಕಿಯ ಕಂಡು ನಗುತ್ತಾಳೆ. ಐದು ರೂ. ಗೆ ಏಳರಿಂದ ಎಂಟು, ಹತ್ತು ರೂ. ಗೆ ಈ ಲೆಕ್ಕಕ್ಕಿಂತ ಇನ್ನೂ ಕೊಂಚ ಹೆಚ್ಚು. ಇದು ಅವಳ ಗಣಿತ.

ಸಂಪಿಗೆಯನ್ನೇ ನಂಬಿಕೊಂಡು ಬದುಕುತ್ತಿರುವುದು ಇಂದು-ನಿನ್ನೆಯಲ್ಲ. ಸುಮಾರು ನಲ್ವತ್ತು ವರ್ಷಗಳಿಂದ. ಹೋದವರ ಬಳಿಯೆಲ್ಲಾ ತನ್ನ “ಕಂಪಿ’ನ ಕಥೆ ಹೇಳಿಕೊಳ್ಳುವುದಿಲ್ಲ. ಅವಳಿಗೆ ಮಗಳಿದ್ದಾಳೆ, ಮಗನೂ ಇದ್ದಾನೆ. ಮೊಮ್ಮಕ್ಕಳೂ ಕಣ್ಣ ತುಂಬಿಕೊಂಡಿವೆ. ಅಜ್ಜಿ ತನ್ನ ಉದುರದ ಕೂದಲಿನ ತುರುಬು ಕಟ್ಟಿಕೊಂಡು ಬೆನ್ನು ಸೆಟೆಸಿಕೊಂಡು ಕುಳಿತಿರುತ್ತಾಳೆ. ಸಂಪಿಗೆಯ ಕೆಂಪೇ-ಕಂಪೇ ನಿಮ್ಮನ್ನು ಅಲ್ಲಿಗೆ ಕರೆದೊಯ್ಯಬೇಕು. ಅಂದ ಹಾಗೆ ಇವಳು ಬಿಟ್ಟರೆ ಸಂಪಿಗೆ ಮಾರುವವರು ಅಲ್ಲಿಲ್ಲ.

ಅವಳ ಎದುರಿರುವ ಕೆಂಪಗಿನ ರಾಶಿಯನ್ನೇ ನೋಡಬೇಕು ; ಖುಷಿಯಾಗುತ್ತದೆ. ಅವಳೊಳಗಿನ ದುಃಖವನ್ನು ಕೇಳಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಇನ್ನೇನು ಕೆಳಗೆ ಹನಿಯಾಗಿ ಉದುರೀತು ಎನ್ನುವಾಗ ಆಕೆಯೇ “ಹೇಳಿ ಸ್ವಾಮಿ, ಎಷ್ಟು ರೂಪಾಯಿಗೆ ಹೂ. ಬೇಕು ?’ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಕಣ್ಣಂಚಿನಲ್ಲಿ ಬಂದ ಹನಿ ಆಚೆ ಹೋಗಿ ನಿಲ್ಲುತ್ತದೆ.
“ನಮ್ಮ ಯಜಮಾನರ ಕಾಲದಿಂದಲೂ ಇದೇ ಹೂ ಮಾರೋದು. ಹಿಂದೆ ಮೈಸೂರಿನಲ್ಲೆಲ್ಲಾ ಸಂಪಿಗೆ ಹೂಗಳ ರಾಶಿಯೇ ಹೆಚ್ಚು. ಈಗ ಕಡಿಮೆಯಾಗ್ತಿದೆ. ಈಗೀಗ ಹೂ ಸಿಗೋದೂ ಕಡಿಮೆಯೇ. ಎಲ್ಲರೂ ಪರಿಮಳದ ಕಾರ್ಖಾನೆಗೆ ಒಯ್ಯುತ್ತಾರೆ. ಹೀಗೆ ಮಾರೋಕ್ಕೆ ಕೊಡೋಲ್ಲ’ ಎಂದಳು ಆ ಅಮ್ಮ.

ಅಲ್ಲಮ್ಮಾ, ಹೀಗೆ ಒಂದೇ ಹೂ ಮಾರಿ ಬೋರ್ ಬರೋದಿಲ್ವೇ? ಎಂದು ಕೇಳಿದೆ. “ಅದೇನೋ ಅಪ್ಪಾ, ನಮಗೆ ಬದುಕೋಕೆ ಗೊತ್ತಿರೋದು ಒಂದೇ ದಾರಿ. ಸಂಪಿಗೆ ಹೂ ಮಾರೋದು. ಬೇರೆ ಹೂವು ಯಾಕೋ ಹಿಡಿಸಾಕಿಲ್ಲ’ ಎಂದಳು ಅಜ್ಜಿ ನಗು ನಗುತ್ತಲೇ. ಮಕ್ಕಳು-ಮೊಮ್ಮಕ್ಕಳು-ಸಂಸಾರದ ಕಥೆ ಕೇಳಿದೆ. “ಮಗಳಿದ್ದಾಳೆ. ಅವಳೂ ಹೂ ಮಾರ್‍ತಾಳೆ. ಅದರಲ್ಲೂ ಸಂಪಿಗೆ ಹೂಗಳನ್ನೇ’ ಎಂದಳು. ನಾನೂ ಈ ಹೂವಿನ ಮೋಹಕ್ಕೆ ಒಳಗಾಗಿದ್ದಕ್ಕೂ ಒಂದು ನೆವವಿದೆ.

ಭದ್ರಾವತಿಯಲ್ಲಿ ಓದುತ್ತಿರುವಾಗ ಗಾಂಧಿ ಪಾರ್ಕ್‌ನಲ್ಲಿ ಬರೀ ಸಂಪಿಗೆ ಮರಗಳೇ. ಶಾಲೆ ಬಿಟ್ಟ ಕೂಡಲೇ ಪಾರ್ಕ್‌ನ್ನು ಹೊಕ್ಕುತ್ತಿದ್ದ ನಾವು ಹತ್ತುತ್ತಿದ್ದುದು ಸಂಪಿಗೆ ಮರಗಳನ್ನು. ಒಂದೊಂದಾಗಿ ಮೊಗ್ಗನ್ನೇ ಕೊಯ್ದು ಜೇಬಿಗಿಳಿಸುತ್ತಿದ್ದೆವು. ಎಷ್ಟೋ ಬಾರಿ ರಸ್ತೇಲಿ ಹೋಗುತ್ತಿದ್ದ ದಾರಿಹೋಕರೆ ಈ ಮರದ ಮಾಲೀಕರಾಗಿ ಬಿಡುತ್ತಿದ್ದರು. “ಇಳೀರಲೇ…’ ಎಂದು ಗದರಿಸುತ್ತಿದ್ದರು. ನಾವು ಓಡಿ ಹೋಗುತ್ತಿದ್ದರೂ, ಮತ್ತೆ ಕೊಂಚ ಸಮಯದ ನಂತರ ಹತ್ತುತ್ತಿದ್ದುದು ಮರವನ್ನೇ.

ಅದರ ಎಸಳನ್ನು ಪುಸ್ತಕದಲ್ಲಿಟ್ಟುಕೊಂಡು ನಾಲ್ಕೈದು ದಿನ ಬಿಟ್ಟು ಕೆಂಪಗಾದದ್ದನ್ನು ಕಾಣುವ ತವಕ ನಮಗೆ. ಅಕ್ಕನಿಗೂ ತಂದು ಕೊಡುತ್ತಿದ್ದೆ ಮೊಗ್ಗುಗಳನ್ನು. ಒಮ್ಮೆಯಂತೂ ನನ್ನ ಮಾಸ್ಟರ್ ನೋಡಿ ಕ್ಲಾಸ್‌ನಲ್ಲಿ “ಕ್ಲಾಸ್’ ತೆಗೆದುಕೊಂಡಿದ್ದರು.
ಹೀಗೆ ನಂಜಮ್ಮ ಆ ಎಲ್ಲ ನೆನಪನ್ನೂ ನನ್ನ ಮುಂದೆ ತಂದು ಸುರಿದಳು. ಅಂದಿನಿಂದ ವಾರಕ್ಕೆ ಮೂರು ಬಾರಿ ಮಾರುಕಟ್ಟೆಗೆ ಹೋದಾಗ ಅವಳ ಮುಂದೆ ನಿಲ್ಲುತ್ತೇನೆ. ಪರಿಮಳ ನನ್ನನ್ನು ಆವರಿಸುತ್ತದೆ. ಆಕೆ ಆಯಾಚಿತವಾಗಿ ಐದು ರೂ. ಗಳಿಗೆ ಹೂವನ್ನು ಕಟ್ಟಿ ಕೊಡುತ್ತಾಳೆ.

ನಾನು ಅದರೊಂದಿಗೆ ಹೊರಡುತ್ತೇನೆ. ಆ ಹೂವಿನ ಪರಿಮಳ ನನ್ನನ್ನೇ ಹಿಂಬಾಲಿಸುತ್ತದೆ. ಜತೆಗೆ ಆ ಸಂಪಿಗೆಯ ಪುಟ್ಟ ಸಂಸಾರದ ದುಃಖ, ಶ್ರಮ, ಬದುಕಲೇಬೇಕೆಂಬ ಜೀವನಪ್ರೀತಿ, ಅದಮ್ಯ ಉತ್ಸಾಹ ಸಹ.

ಕನಸುಗಾರನ ಕೈ ಕುಲುಕಿದೆ !

ಅಂಥದೊಂದು ಪುಳಕ ಅನುಭವಿಸಲು ಆರು ವರ್ಷದಿಂದ ಕಾಯುತ್ತಿದ್ದೆ !
ಹಿರಿಯ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗುತ್ತಾರೆಂಬ ಸುದ್ದಿ ಹರಡಿದಾಗ ಆದ ಖುಷಿ ಅಷ್ಟಿಷ್ಟಲ್ಲ. ದೇವರಲ್ಲಿ ಬೇಡಿಕೊಂಡಿದ್ದೂ ಅದನ್ನೇ. ಕಾರಣವಿಷ್ಟೇ. ಇದುವರೆಗೆ ಬಹುಪಾಲು ವಯೋವೃದ್ಧ ರಾಜಕೀಯ ನಿರಾಶ್ರಿತರು ಈ ಪಟ್ಟ ಕಟ್ಟಿಕೊಂಡು ಮೆರೆದರೇನೋ ನಿಜ. ಆದರೆ  ರಾಷ್ಟ್ರಕ್ಕೆ ಆದ ಲಾಭ ಅಷ್ಟಕಷ್ಟೇ. ಒಂದು ಸಂದರ್ಭದಲ್ಲಂತೂ ರಾಷ್ಟ್ರಪತಿ ಹುದ್ದೆ ಎಂದರೆ “ರಬ್ಬರ್ ಸ್ಟ್ಯಾಂಪ್’ ಎನ್ನುವಂತಾಗಿತ್ತು.

ಈ ಹುದ್ದೆಗೆ ಆಯ್ಕೆಯಾದವರು ಶೈಕ್ಷಣಿಕವಾಗಿ ಉತ್ತಮವಾಗಿರಬಹುದು. ಆದರೆ ಭಾರತದ ಬಗ್ಗೆ ಕನಸು ಕಟ್ಟಿಕೊಂಡಿರಲಿಲ್ಲ. ತನ್ನ ಕನಸನ್ನು ಉಳಿದವರಿಗೂ ಹಂಚಿರಲಿಲ್ಲ. ಇಷ್ಟೆಲ್ಲಾ ಇರಲಿ, ನೀವೂ ಕನಸು ಕಾಣಿ, ಅದರಲ್ಲೂ ದೊಡ್ಡ ಕನಸು ಕಾಣಿ ಎಂದು ಕೂಗಿ ಹೇಳಿರಲಿಲ್ಲ.

“ಹೇಗಿದ್ದರೂ ಕನಸು ಕಾಣುತ್ತೀರಿ. ಹಾಗಾದ್ರೆ ಛೋಟಾ ಕನಸೇಕೆ ? ದೊಡ್ಡದೇ ಕಾಣಿರಲ್ಲ?’ ಎಂದು ಎಲ್ಲರಲ್ಲೂ ಕನಸು ಕಾಣುವುದನ್ನು ಬಿತ್ತಿದವರು ಅಬ್ದುಲ್ ಕಲಾಂ. ಅದುವರೆಗಿನ ರಾಷ್ಟ್ರಪತಿಗಳಲ್ಲಿ ಬಹುತೇಕರು ಅವಧಿ ಮುಗಿಸಿದರೆ ಸಾಕು ಎಂದುಕೊಂಡು ಭವನವನ್ನು ಹೊಕ್ಕವರು. ಅಂದರೆ ಅಂಥದೊಂದು ಜನರಲ್ಲಿ ಉತ್ಸಾಹ ಬಿತ್ತುವ, ಗುರಿ ನಿಗದಿಪಡಿಸಿ ಬನ್ನಿ, ಸಾಗೋಣ ಎಂದು ಕರೆದೊಯ್ಯುವ ಸಾಹಸವನ್ನು ಮಾಡುವುದಿರಲಿ, ಯೋಚಿಸಿಯೂ ಇರಲಿಲ್ಲ.

ಕಲಾಂ ಈ ವಿಷಯಕ್ಕೇ ಇಷ್ಟವಾಗುತ್ತಾರೆ. ತಮ್ಮ ಅವಧಿಯಲ್ಲಿ ಹೋದಲೆಲ್ಲಾ ಜನರೊಳಗೆ “ನೈತಿಕ ಶಕ್ತಿ’ ಯನ್ನು ವೃದ್ಧಿಸಲು ಪಣ ತೊಟ್ಟವರು. ಅದನ್ನು ಈಗಲೂ ನಡೆಸುತ್ತಲೇ ಇದ್ದಾರೆ. ಎಲ್ಲ ಕಾರ್‍ಯಕ್ರಮದಲ್ಲೂ ಅದಕ್ಕೆ ಸಂಬಂಧಿಸಿದಂತೆ ಯುವಶಕ್ತಿಗೆ ಪ್ರಮಾಣ ವಚನ ಬೋಧಿಸುತ್ತಾ, ನೈತಿಕ ನೆಲೆಯೊಳಗೆ ಬಂಧಿಸುತ್ತಿದ್ದಾರೆ ಎನ್ನುವುದು ಅಕ್ಷರಶಃ ಸತ್ಯ. ಹೀಗೆ ಹೇಳಿದ ಮಾತ್ರಕ್ಕೆ ಎಲ್ಲರೂ ಒಳ್ಳೆಯವರಾಗುತ್ತಾರೆಯೇ ? ಎಂದು ಕೇಳಬೇಡಿ. ಆದರೆ ನಮ್ಮ ಮನಸ್ಸಿನೊಳಗೆ ಪರಿವರ್ತನೆಗೆ ಅಡಿಗಲ್ಲು ಹಾಕುವುದಂತೂ ನಿಜ.

ಬೆಂಗಳೂರಿನಲ್ಲಿದ್ದಾಗ ಐಟಿ ಮೇಳವನ್ನು ಉದ್ಘಾಟಿಸಲು ಕಲಾಂ ಬಂದಿದ್ದರು. ಅದೇ ಮೊದಲು, ಅಷ್ಟೊಂದು ಹತ್ತಿರದಿಂದ ಅವರನ್ನು ನೋಡಿದ್ದು. ಕಂಠೀರವ ಕ್ರೀಡಾಂಗಣದಲ್ಲಿ ಮಕ್ಕಳೆಲ್ಲಾ ತುಂಬಿದ್ದರು. ಸಾಮಾನ್ಯವಾಗಿ ಮಾಧ್ಯಮದವರಿಗೆ ವೇದಿಕೆಯ ಸುತ್ತಮುತ್ತ ಆಸನದ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಈ ಕಾರ್‍ಯಕ್ರಮದಲ್ಲಿ ಮೈಲಿಯಷ್ಟು ದೂರ. ಕಲಾಂ ಅವರನ್ನು ಹತ್ತಿರದಿಂದ ನೋಡಬಹುದು, ಸಿಕ್ಕರೆ ಮಾತನಾಡಿಸಬಹುದು, ಕೈ ಕುಲುಕಬಹುದು-ಹೀಗೆಲ್ಲಾ ಅಂದುಕೊಂಡ ಬಂದ ನನಗೆ ಆಸನದ ವ್ಯವಸ್ಥೆ ಕಂಡೇ ಸಿಟ್ಟು ಬಂದಿತ್ತು. ಕಲಾಂ ಬಂದರು, ಕೈ ಬೀಸಿದರು, ಪ್ರಮಾಣ ವಚನ ಬೋಧಿಸಿದರು. ಮಕ್ಕಳು ಇದ್ದಲ್ಲೆಲ್ಲಾ ನಡೆದು, ಕೆನ್ನೆ ಚಿವುಟಿ ಮಾತನಾಡಿಸಿದರು. ಆಗ, ನನ್ನೊಳಗೆ ಆ ಮಕ್ಕಳನ್ನು ಕಂಡು ಹೊಟ್ಟೆ ಉರಿದದ್ದು ಸತ್ಯ. “ನಾನು ಅವರಲ್ಲಿ ಒಬ್ಬರಾಗಿದ್ದರೆ’ ಎಂದೆನಿಸಿತ್ತು.

ಒಂದು ಮಾತು. ಇವರಷ್ಟು ಇಷ್ಟವಾದವರು ಬೇರೊಬ್ಬರಿಲ್ಲ. ತುಂಬಿದ ಕೊಡಕ್ಕೆ ತಕ್ಕಂತೆ ವಿನಯ, ಕಾಳಜಿ, ಶ್ರದ್ಧೆ, ತಾಳ್ಮೆ. ಒಳ್ಳೆಯ ಮನುಷ್ಯನಲ್ಲಿರಬೇಕಾದ ಎಲ್ಲ ಗುಣಗಳೂ ಅವರಲ್ಲಿದೆ. ನಂತರ ಮತ್ತೆರಡು ಬಾರಿ ಬೆಂಗಳೂರಿನಲ್ಲೇ ಅವರ ಕಾರ್‍ಯಕ್ರಮದ ವರದಿ ಬರೆಯಲು ಅವಕಾಶ ಸಿಕ್ಕಿದರೂ ಅವರನ್ನು “ತಲುಪುವ’ ಅವಕಾಶ ಸಿಕ್ಕಿರಲಿಲ್ಲ. ಅಷ್ಟರಲ್ಲಿ ಅವರ ಅವಧಿ ಮುಗಿಯಿತು. ಮತ್ತೊಂದು ಅವಧಿಗೆ ಮುಂದುವರಿಯದೆಂದು ಆಸೆ ಇಟ್ಟುಕೊಂಡಿದ್ದೆ. ರಾಜಕೀಯ ಲೆಕ್ಕಾಚಾರಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಮನಸ್ಸಿಗೆ ಆ ದಿನ ಬಹಳ ಬೇಸರವಾಗಿತ್ತು.

ತಾವಿದ್ದ ಅವಧಿಯಲ್ಲಿ ಅವರು ಏನು ಮಾಡಿದರು ಎಂದು ಕೇಳಬೇಡಿ. ಕ್ಷುಲ್ಲಕ ರಾಜಕೀಯದಲ್ಲಿ ತಲೆ ಹಾಕಲಿಲ್ಲ, ದುಡ್ಡು ಮಾಡಲಿಲ್ಲ. ಅತ್ಯಂತ ಶುಭ್ರವಾಗಿ ಬದುಕಿ, ಯಾರೂ ಬೆರಳೆತ್ತಿ ತೋರಿಸಿದಂತೆ ಭವನದಿಂದ ಹೊರ ಬಂದುಬಿಟ್ಟರು. ಆದರೆ ಆ ಐದೂ ವರ್ಷ ಓಡಾಡಿದಲ್ಲೆಲ್ಲಾ ಕನಸುಗಾರರನ್ನು ಬೆಳೆಸಿದರು, ಯುವಶಕ್ತಿಯನ್ನು ಸಂಘಟಿಸಲು ಸನ್ನದ್ಧರಾದರು. ನಮ್ಮ ಮುಂದೆ ಗುರಿಯೊಂದು ಇಟ್ಟು (ಭಾರತ ೨೦೨೦) ನಾವು ಮುಟ್ಟುತ್ತೇವೆ ಎಂಬ ಆತ್ಮವಿಶ್ವಾಸವನ್ನು ತುಂಬಿದರು. ಒಬ್ಬ ರಾಷ್ಟ್ರಪತಿಯಾದವರು ಮಾಡಬೇಕಾದದ್ದು ಅದನ್ನೇ ಎಂಬುದು ನನ್ನ ಅಭಿಮತ.

ಹೀಗೆ ನನ್ನೊಳಗೂ ಕನಸು ತುಂಬಿದ ಕನಸುಗಾರ ಮೊನ್ನೆ (ಜೂ.೨೭) ಮೈಸೂರಿನ ಜೆಎಸ್‌ಎಸ್ ಕಾಲೇಜಿನ ಕಾರ್‍ಯಕ್ರಮಕ್ಕೆ ಬಂದರು. ಅವರನ್ನು ಕಾಣಲೆಂದು ಅಲ್ಲಿಗೆ ಹೋಗಿದ್ದೆ. ಆದರೆ ಅವರ ಭೇಟಿಯಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲ. ಹತ್ತಿರದಿಂದ ಕಂಡೆ. ಅದೇ ಉತ್ಸಾಹ, ಹುಮ್ಮಸ್ಸು, ಖುಷಿ-ತಮಾಷೆಯೆಂದರೆ ರಾಷ್ಟ್ರಪತಿಯಾದಾಗ ನೋಡಲೆಷ್ಟು ಮಂದಿ ಬರುತ್ತಿದ್ದರೋ ಅಷ್ಟೇ ಮಂದಿ ಅಂದೂ ನೆರೆದಿದ್ದರು. ಮಕ್ಕಳದ್ದು ಸಂತೆಯೇ ಸರಿ.

ಒಂದು ಒಳ್ಳೆಯ ಭಾಷಣ ಮಾಡಿ, ಪ್ರಮಾಣ ವಚನ ಬೋಧಿಸಿದರು. ನಾನೂ ಸ್ವೀಕರಿಸಿದೆ. “ಮೊದಲು ಒಳ್ಳೆ ಮನುಷ್ಯರಾಗಿ. ನಂತರ ಒಳ್ಳೆ ವೈದ್ಯ, ಎಂಜಿನಿಯರ್, ಉದ್ಯಮಿ ಎಲ್ಲವೂ ಆಗಬಹುದು ಎಂದರು. ಆ ಮಾತು ಸತ್ಯ. ಅಂದು ಬಿಡುಗಡೆಯಾಗಿದ್ದ ಅವರ ಉಪನ್ಯಾಸದ “ಹಾರ್ಟ್ ಟು ಹಾರ್ಟ್’ ಪುಸ್ತಕ ಖರೀದಿಸಿ ಹೊರಟೆ.

ನಂತರ ಜೆಎಸ್‌ಎಸ್ ವೈದ್ಯ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದವಿತ್ತು. ಅದೂ ಮುಗಿಯಿತು. ಪಕ್ಕದಲ್ಲೇ ಕಲಾಂ ಅವರೊಂದಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನನಗೆ ಅಲ್ಲಿ ಅವಕಾಶ ಕೇಳಲು ಹಿಂಜರಿಕೆ. ಅಷ್ಟರಲ್ಲಿ ಸಂಯೋಜಕರೊಬ್ಬರು ನಮ್ಮನ್ನು ಗುರುತಿಸಿ (ನಮ್ಮೊಂದಿಗೆ ಗೆಳೆಯರೊಬ್ಬರಿದ್ದರು)ಒಳಗೆ ಕರೆದರು. ಮನಸ್ಸು ಉಲ್ಲಸಿತಗೊಂಡಿತು. ತಡ ಮಾಡಲಿಲ್ಲ. ಒಳ ಹೊಕ್ಕೆ. ಕೆಲವೇ ಗಜಗಳ ದೂರದಲ್ಲಿ ಅವರೂ ಊಟ ಮಾಡುತ್ತಿದ್ದರು, ನಾವೂ ಸಹ. ನಮ್ಮದು ಮುಗಿಯುವಷ್ಟರಲ್ಲಿ ಅವರು ಪಟಪಟನೆ ಹೊರಟೇ ಬಿಟ್ಟರು. ನಾನು ಭೇಟಿ ಮಾಡುವ ಅವಕಾಶ ಕಳೆದುಕೊಂಡೆ ಎಂದುಕೊಂಡೆ. ತಕ್ಷಣವೇ ನಾನೂ ಕೈ ತೊಳೆದು ಹೋಗುವಾಗ ಅವರು ಹತ್ತಿರದ ಕೋಣೆಯಲ್ಲಿ ವಿಶ್ರಮಿಸುತ್ತಿದ್ದರು. ಹಾಗಾಗಿ ನಮ್ಮ ಸಂಪಾದಕರಾದ ಶ್ರೀ ವಿಶ್ವೇಶ್ವರ್ ಭಟ್ ಅವರೂ ಹೊರಗೆ ನಿಂತಿದ್ದರು.

ನಾನು ಅಲ್ಲಿಗೆ ಹೋದವನೇ, “ಸಾರ್, ಅವರ ಆಟೋಗ್ರಾಫ್ ಬೇಕಿತ್ತು ಎಂದೆ’. ಹೋಗ್ರೀ, ಪಡೆಯಿರಿ. ಹಾಕ್ತಾರೆ’ ಎಂದರು ಸಂಪಾದಕರು. “ನೀವು ಇನ್‌ಫ್ಲುಯೆನ್ಸ್ ಮಾಡಿ’ ಎಂದೆ. ಅದಕ್ಕೆ ಅವರು, “ಅದರ ಅವಕಾಶವಿಲ್ಲ’ ಎಂದರು. ಕಲಾಂ ಅವರು ಹೊರ ಬರುವ ಸೂಚನೆ ಕಂಡಿತು. ರಕ್ಷಣಾ ದಳದವರು ಒಳಗೆ ಬಿಡದೇ ತಕರಾರು ತೆಗೆಯುತ್ತಿದ್ದ. ಜತೆಗೆ ಹೋಗಿ ಎಂದು ಅಕ್ಷರಶಃ ಒಳಗೆ ತಳ್ಳಿದರು. ಹೋಗಿ ನಿಂತಿದ್ದು ಅವರೆದುರಿಗೇ ಪುಸ್ತಕ ಹಿಡಿದು. ನಗುತ್ತಾ, ನನ್ನ ಪೆನ್ನು ಕೇಳಿದರು, ಕೊಟ್ಟೆ. ಚೆಂದದೊಂದು ಆಟೋಗ್ರಾಫ್ ಮಾಡಿ ನಕ್ಕರು. ಕೈ ಕೊಟ್ಟೆ, ಕುಲುಕಿ ಹೊರ ನಡೆದರು. ನನಗೆ ಧನ್ಯನಾದೆ ಎನಿಸಿತು. ಬೇರೆ ಪತ್ರಿಕೆಯ ಸಹೋದ್ಯೋಗಿಗಳು ಕಲಾಂ ಅವರನ್ನು ಪ್ರಶ್ನೆ ಕೇಳಲು ದುಂಬಾಲು ಬಿದ್ದಿದ್ದರು. ಆಗ ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ, ಪತ್ರಕರ್ತನಾಗಿರಲಿಲ್ಲ. ಆ ಬಗ್ಗೆಯೂ ನಂತರ ಆಲೋಚಿಸಿದೆ, ನಾನು ಮಾಡಿದ್ದು ತಪ್ಪೇ ? ಪತ್ರಕರ್ತನಾಗಿ ಉತ್ತರಗಳನ್ನು ಬರೆದುಕೊಳ್ಳಬೇಕಿತ್ತೇ?-ಹೀಗೆಲ್ಲಾ ಯೋಚಿಸಿದೆ. ತಪ್ಪಿರಬಹುದು.
ಅಂದೇ ಅವರ ಇ ಮೇಲ್ ಗೆ ಪ್ರಶ್ನೆ ಕಳುಹಿಸಿದೆ. ೨೪ ಗಂಟೆಯೊಳಗೆ ಉತ್ತರ ಬಂತು. “ನೀನು ಪತ್ರಕರ್ತನಾಗಿದ್ದೀಯ. ಗ್ರಾಮೀಣ ಭಾರತದ ಯಶಸ್ಸನ್ನೇ ನಿನ್ನ ಯಶಸ್ಸೆಂದು ಸಂಭ್ರಮಿಸು, ಹರ್ಷ ಪಡು’ ಎಂದು ಉತ್ತರಿಸಿದ್ದರು. ಮತ್ತೊಂದು ಕನಸು ಕೊಟ್ಟ ಆ ಕನಸುಗಾರನ ಕೈ ಕುಲುಕಿದ ಸಂಭ್ರಮ ಅಂದು ನನ್ನನ್ನು ಆವರಿಸಿತ್ತು. ಈ ಗಳಿಗೆಗೆ ಆರು ವರ್ಷದಿಂದ ಕಾದಿದ್ದೆ !

ನೀವೂ ಅವರ ವೆಬ್ ಸೈಟ್ ಗೆ ಭೇಟಿ ಕೊಡಿ, ಅಲ್ಲಿ ಕನಸುಗಳೆಲ್ಲಾ ಹರಡಿಕೊಂಡಿವೆ, ನಿಮಗೆ ಬೇಕಾದದ್ದನ್ನು ಹೆಕ್ಕಿಕೊಳ್ಳಿ.