1
“ಯಾನ” ಹೊಸ ಕೃತಿಯ ಕುರಿತು ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಕ್ಲುಪ್ತ ಸಂದರ್ಶನವಿದು.
ನಿಮ್ಮ ಹೊಸ ಕಾದಂಬರಿ ’ಯಾನ’ ಸಿದ್ಧವಾಗಿದೆ. ಮುಂದಿನ ವಾರದಲ್ಲಿ ಓದುಗರ ಕೈಗೆ ಸಿಗಲಿದೆ. ಈ ಹೊತ್ತಿನಲ್ಲಿ ಹೊಸ ಕಾದಂಬರಿ ಬಗ್ಗೆ ಹೇಳ್ತೀರಾ?
ಹೇಳುವುದೇನೂ ಇಲ್ಲ. ಹೇಳಬೇಕಾದದ್ದನ್ನು ಕೃತಿಯಲ್ಲಿ ಬರೆದಿದ್ದೇನೆ. ಒಂದಂತೂ ನಿಜ. ಈ ಕಾದಂಬರಿ ನನಗೂ ಹೊಸ ಲೋಕವನ್ನು ಪರಿಚಯಿಸಿದ್ದು ನಿಜ. ಇದೂ ಒಂದು ಪಯಣವೇ. ನನ್ನ ಕಾದಂಬರಿ ಯಾನ ವೂ ಸಹ ಒಂದು ಪಯಣದ ಕುರಿತಾದದ್ದೇ. ಯಾನ ಅಂದರೂ ಪಯಣವೆಂದೇ ಅರ್ಥ. ಇದು ಬಾಹ್ಯಾಕಾಶ ಯಾನ (ಸ್ಪೇಸ್ ಟ್ರಾವೆಲ್). ಒಂದು ಬಗೆಯ ಕಲ್ಪನೆಯ ಯಾನ. ವಾಸ್ತವವಾಗಿ, ಸೂರ್‍ಯನಿಗೆ ಅತ್ಯಂತ ಹತ್ತಿರವಿರುವ ಪ್ಲಾನೆಟ್ ಅಂದರೆ ಪ್ರಾಕ್ಷಿಮಾ ಸೆಂಟಾರಿಸ್ (ಠಿಡಿoximಚಿ ಛಿeಟಿಣಚಿಡಿi). ಆ ಪರಸ್ಪರ ದೂರ ೪.೨೫ ಬೆಳಕಿನ ವರ್ಷಗಳು. ಅಲ್ಲಿಗೆ ನಮ್ಮಲ್ಲಿಂದ ನಕ್ಷತ್ರ ನೌಕೆ (ಸ್ಟಾರ್ ಶಿಪ್)ನಲ್ಲಿ ತಲುಪಲು ಒಂದು ಸಾವಿರ ವರ್ಷಗಳು ಬೇಕು. ಇದು ಆಕಾಶ ನೌಕೆಯಲ್ಲ ; ನಕ್ಷತ್ರ ನೌಕೆ. ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಹೋಗಲು ಅನುಕೂಲವಾಗುವಂಥದ್ದು. ಈ ಪ್ರಯಾಣಕ್ಕೆ-ಯಾನ_ ಇಬ್ಬರನ್ನು ನಿಗದಿಪಡಿಸಲಾಗುತ್ತದೆ. ಈ ಕಾರ್‍ಯಕ್ಕೆ ನಿಯೋಜಿಸುವ ಮತ್ತು ಕಳುಹಿಸುವ ಹಾಗೂ ನಂತರದಲ್ಲಿ ಎಲ್ಲರಲ್ಲೂ (ಯಾತ್ರಿಗಳಲ್ಲೂ ಮತ್ತು ಅಂಥದೊಂದು ಪರಿಸರವನ್ನು ರೂಪಿಸುವವರಲ್ಲೂ) ಏಳುವ ಸಾವಿರಾರು ನೈತಿಕ ಪ್ರಶ್ನೆಗಳೇ ನನ್ನ ಹೊಸ ಕೃತಿ.
ಕಾಲದಾಚೆ, ನಿಗದಿತ ಸಮಯದಾಚೆ ಇರುವವರಿಗೂ ನೈತಿಕ ಪ್ರಶ್ನೆಗಳಿವೆಯಾ?
ಅದೇ ನನ್ನ ಕಾದಂಬರಿ. ಹೇಗೆ ವಿಜ್ಞಾನದ ತತ್ವ್ತಗಳನ್ನೂ ಖಭೌತದ ನೆಲೆಗೆ (ಆಸ್ಟ್ರೋಫಿಸಿಕ್ಸ್) ವಿಸ್ತರಿಸುವಂತೆಯೇ, ನಮ್ಮಲ್ಲಿರುವ (ಭೂಮಿಯಲ್ಲಿ) ನೈತಿಕ ಪ್ರಶ್ನೆಗಳನ್ನೂ ಅನ್ಯ ಗ್ರಹ-ನಕ್ಷತ್ರಗಳ ನೆಲೆಗೂ ವಿಸ್ತರಿಸಲು ಪ್ರಯತ್ನಿಸಿದ್ದೇನೆ. ಅಲ್ಲಿಗೂ ಅನ್ವಯಿಸಲು ಸಾಧ್ಯವೇ ಎಂಬುದು ನನ್ನ ಪ್ರಶ್ನೆ. ಅದನ್ನೇ ಇಲ್ಲೂ ಸಹ ಕೈಗೊಂಡಿರುವುದು.

ಸರಿ, ಕಾದಂಬರಿಯ ಹೊಳಹು ಹೊಳೆದಾಗ ಪ್ರಶ್ನೆಗಳಾಗಿದ್ದವುಗಳಿಗೆ ಈಗ ಉತ್ತರ ಸಿಕ್ಕಿದೆಯೇ?
ನನ್ನ ಎಲ್ಲ ಕಾದಂಬರಿಯ ಮೂಲಗುಣಗಳೇ ಪ್ರಶ್ನೆಗಳನ್ನು ಶೋಧಿಸುವುದು. ಒಂದು ಬಗೆಯಲ್ಲಿ ಪ್ರಶ್ನೆಗಳ ಅನ್ವೇಷಣೆ. ಎಂದಿಗೂ ನಾನು ಉತ್ತರಗಳನ್ನು ಕೊಡಲು ಹೋಗುವುದಿಲ್ಲ. ಅದು ಈ ಕಾದಂಬರಿಯಲ್ಲಷ್ಟೇ ಅಲ್ಲ ; ಎಲ್ಲದರಲ್ಲೂ ನೀವು ಗಮನಿಸಬಹುದು.
ಉತ್ತರ ಕೊಡದೇ ಪ್ರಶ್ನೆಗಳನ್ನು ಮಾತ್ರ ಹುಟ್ಟು ಹಾಕುವುದು ಒಬ್ಬ ಲೇಖಕನ/ ಸೃಜನಶೀಲ ಕಲಾವಿದನ ಉದ್ದೇಶಪೂರ್ವಕ ಯತ್ನವೋ? 
ನನ್ನದು ಉದ್ದೇಶಪೂರ್ವಕ ನೆಲೆಯೇ. ಒಂದು ನಿರ್ದಿಷ್ಟ ಉತ್ತರ ಎಲ್ಲದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, ಸಮಸ್ಯೆ ಎಷ್ಟೊಂದು ಸಂಕೀರ್ಣವಾಗಿರುತ್ತದೆದಂದರೆ ಅದಕ್ಕೆ ಒಂದು ಉತ್ತರವನ್ನು ಕಂಡುಕೊಳ್ಳುವಷ್ಟು ಸಾಧ್ಯವಿಲ್ಲ. ಅಂದರೆ, ಒಂದು ನಿರ್ದಿಷ್ಟ ಗುರಿಯತ್ತ ಸಾಗುವುದು ಬಹಳ ಕಷ್ಟ. ನನಗೆ ಆ ಉತ್ತರವನ್ನು ಕಂಡುಕೊಂಡೆ ಎನ್ನುವ ಸಂತೃಪ್ತ ನೆಲೆಗಿಂತಲೂ, ಇಡೀ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ-ಸಮಸ್ಯೆಯ ಸಂಕೀರ್ಣತೆಯನ್ನು ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದಷ್ಟೇ ಸಾಕು. ಅದಷ್ಟೇ ನಾನು ಬಯಸುವುದು. ಯಾವುದಕ್ಕೂ ಪರಿಪೂರ್ಣ ಉತ್ತರ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ನನ್ನ ಅರಿವು.
ಚರಿತ್ರೆ, ಇತಿಹಾಸದ ಮೂಸೆಯಿಂದ ಕಥಾವಸ್ತುಗಳನ್ನು ಶೋಧಿಸಿಕೊಳ್ಳುತ್ತಿದ್ದ ನೀವು ಇದ್ದಕ್ಕಿದ್ದಂತೆ ಆಕಾಶದತ್ತ ಜಿಗಿದದ್ದು ಏಕೆ?
ಹಾಗೇನೂ ಇಲ್ಲ. ಈ ಕಥಾವಸ್ತು ಎನ್ನುವುದಕ್ಕಿಂತ ಅನ್ಯಗ್ರಹಗಳ ಯಾನ ಹಲವು ವರ್ಷಗಳಿಂದ ಕಾಡುತ್ತಿದ್ದ ಸಂಗತಿ. ಬಹುಶಃ ೩೦-೪೦ ವರ್ಷಗಳೇ ಇರಬಹುದು. ಅಮೆರಿಕದವರು ಚಂದ್ರನ ಮೇಲೆ ಮನುಷ್ಯನನ್ನು ಕಳಿಸಿ ವಾಪಸು ಕರೆಸಿಕೊಂಡಾಗ ನನ್ನಲ್ಲಿ ಸಮಸ್ಯೆ ಹುಟ್ಟಿಕೊಂಡಿತ್ತು. ನಂತರ ವಯೋಜಸ್ (ಒನ್ ಮ್ಯಾನ್ಡ್) ಕಳಿಸಿದಾಗಲೂ ಅಷ್ಟೇ. ಮನುಷ್ಯ ಆಗಲೇ ಕಲ್ಪಿಸಿಕೊಂಡಿದ್ದ. ಈ ಭೂಮಿ ಮುಂದಿನ ದಿನಗಳಲ್ಲಿ ಸಾಕಾಗದು, ಅಷ್ಟೇ ಅಲ್ಲ. ಬದುಕಲೂ ಅನರ್ಹವೂ ಆಗಿಬಿಡಬಹುದು. ನಂತರ ಏನು? ಎಂದುಕೊಂಡು ಅನ್ಯಗ್ರಹಗಳ ಬಗ್ಗೆ ಆಸಕ್ತಿ ಹುಟ್ಟಿಸಿಕೊಂಡ. ಈಗ ಮಂಗಳ ಗ್ರಹಕ್ಕೆ ಸುರಕ್ಷಿತವಾಗಿ ಹೋಗಿ ಬರುವ ಪ್ರಯತ್ನ ನಡೆದಿದೆ. ಆ ಸ್ಥಳ ವಾಸಕ್ಕೆ ಯೋಗ್ಯವೆಂಬುದನ್ನೂ ಕಂಡುಕೊಳ್ಳಲಾಗುತ್ತಿದೆ. ಇದು ಒಂದು ಬಗೆಯಲ್ಲಿ ವಸಾಹತುಕರಣ . ಅಮೆರಿಕದವರು ಮೊದಲು ಹೋಗಿ ಒಂದಷ್ಟು ಜಾಗ ಗುರುತು ತನ್ನದೆಂದು ಗುರುತು ಹಾಕಿಕೊಂಡಿದೆ. ಈಗ ಇನ್ನಷ್ಟು ದೇಶಗಳು. ಅಮೆರಿಕದ, ನಾರ್ತ್ ಅಮೆರಿಕದ ಮುಂತಾದವೆಲ್ಲಾ ಹೀಗೆಯೇ. ಶೋಧನೆಗೆಂದು ಹೋದವರು ನಂತರ ತಮ್ಮದೇ ಜಾಗವೆಂದು ಹಕ್ಕು ಪ್ರತಿಷ್ಠಾಪಿಸಿದರು. ಇದರ ಕುರಿತಾದ ಪ್ರಶ್ನೆಗಳನ್ನೇ ಇಲ್ಲಿ ಪ್ರಸ್ತಾಪಿಸಿದ್ದೇನೆ.
ಜತೆಗೆ ಯಾವ ಕಥಾವಸ್ತು (ಥೀಮ್) ಯಾವಾಗ ಮನಸ್ಸಿನಲ್ಲಿ ಬೆಳೆಯುತ್ತದೆ ಎಂದು ಹೇಳಲಾಗದು. ಪರ್ವದಂಥ ಕಾದಂಬರಿ ಬರೆದವನು ಸಂಗೀತದ ಬಗ್ಗೆ ಕುರಿತಾದ ’ಮಂದ್ರ’ ಬರೆದೆ. ನನಗೆ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿಯಿತ್ತು. ಅದು ’ಮಂದ್ರ’ ಕ್ಕೆ ಕಾರಣವಾಗಿರಬಹುದು.
ಸಾಮಾನ್ಯವಾಗಿ, ಒಬ್ಬ ಲೇಖಕನ ವಿವಿಧ ಕೃತಿಗಳು ಸರಣಿಯ ನೆಲೆಯನ್ನು ನೆನಪಿಸುತ್ತವೆ. ಬದುಕಿನ ಅನುಭವಗಳ ಮುಂದುವರಿದ ನೆಲೆ ಎನಿಸುವುದೂ ಉಂಟು. ಒಂದು ಕಥಾವಸ್ತುವಿನ ಮಂದುವರಿಕೆಯಂತೆ ಬರುವುದುಂಟು (ಪರಸ್ಪರ ಸಂಬಂಧ). ಆದರೆ ನಿಮ್ಮದು ತೀರಾ ಭಿನ್ನ. ಒಂದರಿಂದ ಮತ್ತೊಂದಕ್ಕೆ ಬದಲಾಗುವುದು ಉದ್ದೇಶಪೂರ್ವಕ ಪ್ರಯತ್ನವೇ?
ಹೌದು. ನನಗೆ ಒಂದು ಕಥಾವಸ್ತು ಮತ್ತೆ ಪುನರಾವರ್ತಿಸಲು ಇಷ್ಟವಿಲ್ಲ. ಅದು ಸುತರಾಂ ನನಗೆ ಆಗದ ಆಲೋಚನೆ. ಹಾಗಾಗಿ ಒಂದೆ ಥೀಮ್‌ನ್ನು ಪುನರ್ ಶೋಧನೆಗೆ ತೊಡಗುವುದಿಲ್ಲ. ಬೇರೆ ಕಥಾವಸ್ತುವನ್ನು ಆಯ್ದುಕೊಂಡಾಗ ಮತ್ತೊಂದು ನೆಲೆಯ ಅನುಭವವಾಗುತ್ತದೆ. ಅದು ನನಗಾಗುವ ಲಾಭ. ಮತ್ತೆ ಪುನರಾವರ್ತನೆಯಲ್ಲಿ ತೊಡಗಿದರೆ ಸೃಜನಶೀಲವಾದುದನ್ನು ಸೃಷ್ಟಿಸಲಾಗದು. ಶಿವರಾಮ ಕಾರಂತರು ತಮ್ಮ ಕೃತಿಗಳಲ್ಲಿ ದಕ್ಷಿಣ ಕನ್ನಡದ ಆ ಹೊತ್ತಿನ ಜೀವನ, ಪ್ರಕೃತಿ ಮುಂತಾದವುಗಳನ್ನು ಬಿಟ್ಟು ಹೊರಗೆ ಹೋಗಿಲ್ಲ. ಒಂದುವೇಳೆ ಮುಂಬಯಿಗೆ ಸಂಬಂಧಿಸಿದ ಒಂದು ಪಾತ್ರ ಬಂದರೂ ಅವನು ಮತ್ತೆ ದಕ್ಷಿಣ ಕನ್ನಡದವನೇ ಆಗಿರುತ್ತಾನೆ. ಆದರೆ, ನನ್ನ ಮಂದ್ರ ದಲ್ಲಿ ಬರುವ ಬಹಳ ಮಟ್ಟಿನ ಪಾತ್ರಗಳು-ಬಹುತೇಕ ಎನ್ನಲೂ ಬಹುದು- ಮುಂಬಯಿಯದ್ದು. ಮಹಾರಾಷ್ಟ್ರದಲ್ಲಿ ಕನ್ನಡದಲ್ಲಿ ಬಂದಿರುವ ಮರಾಠಿ ಕಾದಂಬರಿ ಎನ್ನುತ್ತಾರೆ. ನನ್ನ ದೃಷ್ಟಿಯಲ್ಲಿ ನಾನು ಮುಂಬಯಿಯ ಬದಕನ್ನು ಶೋಧಿಸುವಾಗ, ಅಲ್ಲಿನ ಗುಣಧರ್ಮದ ಪಾತ್ರಗಳೇ ಬೇಕು. ಆಗ ಮಾತ್ರ ಆ ಪಾತ್ರಗಳಲ್ಲೂ ಒಂದು ಬಗೆಯ ತಾಜಾತನ (ಫ್ರೆಶ್ ನೆಸ್) ಇರಲು ಸಾಧ್ಯ.
ಸುಮಾರು ನಾಲ್ಕು ವರ್ಷದ ನಂತರ ಯಾನ ಸಿದ್ಧವಾಗಿದೆ. ಇದಕ್ಕೆ ಮಾಡಿಕೊಂಡ ಸಿದ್ಧತೆ ಏನು ಮತ್ತು ಹೇಗೆ?
ಆಗಲೇ ಹೇಳಿದಂತೆ ಹೊಳಹು ಬಹಳ ವರ್ಷಗಳಿಂದಲೂ ನನ್ನನ್ನು ಕಾಡುತ್ತಿತ್ತು. ಆದರೆ ೨೦೧೧ ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯವರು (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್) ಎರಡು ತಿಂಗಳಿಗಾಗಿ ನನ್ನನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ಆಹ್ವಾನಿಸಿದರು. ಸಾಮಾನ್ಯವಾಗಿ ಅವರು ಆಗಾಗ್ಗೆ ಕೆಲವು ವಿಜ್ಞಾನೇತರ ವ್ಯಕ್ತಿಗಳನ್ನೂ ಕರೆದು ಅತಿಥ್ಯ ನೀಡಿ ಎರಡು ತಿಂಗಳ ಕಾಲ ಚರ್ಚೆಗೆ ತಮ್ಮನ್ನು ಒಳಗು ಮಾಡಿಕೊಳ್ಳುತ್ತಾರೆ. ಆ ಎರಡೂ ತಿಂಗಳಲ್ಲಿ ಎರಡು ಉಪನ್ಯಾಸಗಳನ್ನು ನೀಡಬೇಕು ಹಾಗೂ ಅಲ್ಲಿನ ಸಂಶೋಧನಾ ನಿರತರು ಮತ್ತಿತರರಿಗೆ ಲಭ್ಯವಾಗಿರಬೇಕು. ಅವರೊಂದಿಗೆ ಚರ್ಚೆ, ಸಂವಾದವನ್ನು ನಡೆಸಬೇಕು. ಈ ಅವಕಾಶದ ಸಂದರ್ಭದಲ್ಲಿ ನನಗೆ ಅಲ್ಲಿ ಏರೋಸ್ಪೇಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ ರಘುನಂದನ್ ಎಂಬವರು ಪರಿಚಯವಾದರು. ಅವರೊಂದಿಗೆ ನನ್ನ ಈ ಕಥಾವಸ್ತುವಿನ ನೆಲೆಯಲ್ಲಿ ಚರ್ಚಿಸಿದೆ. ಅದಲ್ಲದೇ, ಅಮೆರಿಕದಲ್ಲಿ ಹೋದಾಗಲೆಲ್ಲಾ  ಅಲ್ಲಿನ ಮ್ಯೂಸಿಯಂಗಳಿಗೆ ಭೇಟಿ ನೀಡುತ್ತಿದ್ದೆ. ಅಲ್ಲಿ ಗಮನಿಸುತ್ತಿದ್ದೆ. ಏರೋಸ್ಪೇಸ್ ಕುರಿತಾದ ಸಿನಿಮಾಗಳನ್ನು ನೋಡುತ್ತಿದ್ದೆ. ಅಲ್ಲಿಯೂ ಒಂದಿಷ್ಟು ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದೆ. ನಂತರ ಈ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಅನುಭವ ಮತ್ತಷ್ಟು ಒಳ್ಳೆಯದಾಯಿತು. ಅಲ್ಲಿನವರು ನೀಡಿದ ಮಾರ್ಗದರ್ಶನ ಮತ್ತು ಸಲಹೆಗಳನ್ನು ತೆಗೆದುಕೊಂಡೆ. ಜತೆಗೆ ಇಸ್ರೋದ ಪಿಎಸ್ ಎಲ್ ವಿ ಯೋಜನೆಯಲ್ಲಿ ಭಾಗಿಯಾಗಿದ್ದ ವಿಜ್ಞಾನಿ ಸತೀಶ್ ಎಂಬವರು ಪರಿಚಯವಾದರು. ಅವರೊಂದಿಗೂ ಚರ್ಚೆಇಸಿದೆ. ಹೀಗೆ ಥೀಮ್ ಎಂಬುದು ಒಂದು ಸ್ಪಷ್ಟರೂಪ ಪಡೆಯಿತು. ನಂತರ ಬರೆಯ ತೊಡಗಿದೆ. ಅಂತಿಮವಾಗಿ ಸತೀಶ್ ಮತ್ತು ರಘುನಂದನ್ ಅವರಿಗೆ ನನ್ನ ಕಾದಂಬರಿಯ ಕರಡು ಪ್ರತಿ ಕೊಟ್ಟು ಅಭಿಪ್ರಾಯ ಪಡೆದುಕೊಂಡೆ. ನನ್ನ ಕಾದಂಬರಿ ಕಲ್ಪನೆಯ ನೆಲೆಯಲ್ಲೇ ಇದ್ದರೂ ಅಲ್ಲಿ ಉಲ್ಲೇಖಿಸುವ ಅಂಶಗಳು ನಿಖರವಾಗಿರಬೇಕು. ಕಥೆ ಕಲ್ಪನೆಯದ್ದಾದರೂ ವೈಜ್ಞಾನಿಕ ಲೆಕ್ಕಾಚಾರ-ಪರಿಕಲ್ಪನೆಗಳು-ತತ್ತ್ವಗಳು ತಪ್ಪಾಗಿರಬಾರದಲ್ಲವೇ? ಅದಕ್ಕಾಗಿ ಆ ಮುನ್ನೆಚ್ಚರಿಕೆ ವಹಿಸಿದೆ. ಒಟ್ಟೂ ಯಾನ ಸಿದ್ಧಗೊಂಡಿತು.
ಬಹುಶಃ ಈ ಪುಸ್ತಕದ ಬಿಡುಗಡೆಗೂ ಸಮಾರಂಭವಿಲ್ಲವೆನಿಸುತ್ತದೆ. ಯಾಕೆ ? ಲೇಖಕನಿಗೆ ಈ ಸಮಾರಂಭ, ಪ್ರಚಾರ ಎಲ್ಲವೂ ಬೇಡವೇ? ಅಥವಾ ತಪ್ಪೇ?
ತಪ್ಪೆಂದು ನಾನು ಹೇಳಲಾರೆ. ಆರಂಭದಲ್ಲಿ ಬೇಕಾಗಬಹುದೇನೋ. ನನ್ನ ಯಾವ ಕಾದಂಬರಿಗಳ ಬಿಡುಗಡೆಗೂ ಸಮಾರಂಭವನ್ನು ಏರ್ಪಡಿಸಿಲ್ಲ. ನನ್ನ ದೃಷ್ಟಿಯಲ್ಲಿ ಅವು ಅಗತ್ಯವಿಲ್ಲವೆನಿಸುತ್ತದೆ. ಇನ್ನು ಅವೆಲ್ಲವನ್ನೂ ಮಾಡಬೇಕಾದದ್ದು ಮತ್ತು ಅಗತ್ಯವಿರುವಂಥದ್ದು ಪ್ರಕಾಶಕರಿಗೆ. ಅವರೇ ಸುಮ್ಮನಾದರೆ, ಲೇಖಕನಾದ ನಾನೇಕೆ ಪ್ರಶ್ನಿಸಬೇಕು. ನನಗೂ ಅಗತ್ಯವಿಲ್ಲವೆನಿಸಿದೆ. ಹಾಗಾಗಿ, ನೇರವಾಗಿ ಓದುಗರಿಗೆ ಲೇಖಕನ ಕೃತಿ ಸಕಾಲದಲ್ಲಿ ತಲುಪಿದರೆ ಸಾಕು.