ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೊಸ ಮುಖ ಬೇಕಾಗಿದೆ. ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಗುಪ್ತಗಾಮಿನಿಯಂತೆ ಇದ್ದ ಸಿನಿಮಾ ಚಳವಳಿಗೆ ಒಂದು ವೇಗ ಕೊಡಲು ರಾಜ್ಯ ಸರಕಾರ ಅಕಾಡೆಮಿಯನ್ನು ರಚಿಸಿತು. ಮೊದಲ ಅವಧಿಗೆ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದರ ಚುಕ್ಕಾಣಿ ಹಿಡಿದರು. ಈಗ ಅವರ ಅವಧಿ ಮುಗಿದಿದೆ.
ಅಕಾಡೆಮಿಯ ಮೊದಲ ಅವಧಿಯ ಸಾಧನೆಯನ್ನು ತುಲನೆ ಮಾಡಿದರೆ ಬಹಳಷ್ಟು ನಿರೀಕ್ಷೆ ಈಡೇರದಿದ್ದರೂ, ನಿರಾಶೆ ಮೂಡದು. ಸಾಮಾನ್ಯವಾಗಿ ಒಂದು ಸಂಸ್ಥೆಯ ಮೊದಲ ಒಂದೆರಡು ವರ್ಷ ಕಂಡ ಕನಸಿಗೆ ಮೂರ್ತ ರೂಪ ನೀಡುವ ಪ್ರಯತ್ನವಷ್ಟೇ ನಡೆಯುತ್ತದೆ. ಬಹಳ ನೇರವಾಗಿ ಹೇಳುವುದಾದರೆ, ಕನಸಿಗೆ ಕಾಲು, ಕೈ, ಮೂಗು-ಬಾಯಿ ಮೂಡಿಸುವ ಹೊಣೆ. ಎಷ್ಟೋ ಬಾರಿ ಹೀಗೂ ಆಗುವುದುಂಟು. ಮೂರ್ತ ರೂಪ ಕೊಡುವ ಹೊಣೆ ಹೊತ್ತ ಮಂದಿ ಕಾಲು, ಕೈ-ಮೂಗು-ಬಾಯಿ ಎಲ್ಲವನ್ನೂ ಕೊಟ್ಟು ಹೃದಯವನ್ನು ಕೊಡುವುದನ್ನೇ ಮರೆಯುವ ಅಪಾಯವಿದ್ದೇ ಇರುತ್ತದೆ. ಅಂಥ ಅವಘಡ ಈ ಅಕಾಡೆಮಿಯ ಸಂದರ್ಭದಲ್ಲಿ ಘಟಿಸಿಲ್ಲ. ಬೆಳೆಯಬೇಕಾದ ಅಂಗಗಳು ಕ್ರಮಬದ್ಧವಾಗಿ ಬೆಳೆಯದಿರಬಹುದು, ಹೃದಯವನ್ನು ಕೊಡಲು ಮರೆತಿಲ್ಲವೆಂಬುದೇ ಸದ್ಯದ ಸಮಾಧಾನ.
ಅಕಾಡೆಮಿ ಸಿನಿಮಾ ಚಳವಳಿಯನ್ನು ಪ್ರೋತ್ಸಾಹಿಸಲು, ರಾಜ್ಯಾದ್ಯಂತ ಬೆಳ್ಳಿಸಾಕ್ಷಿ-ಬೆಳ್ಳಿ ಮಂಡಲದಂಥ ಕಲ್ಪನೆಗಳ ಮೂಲಕ ಫಿಲ್ಮ್ ಸೊಸೈಟಿಗಳನ್ನು ಸೃಷ್ಟಿಸಲು ಪ್ರಯತ್ನಿಸಿತು. ಈ ಪ್ರಯತ್ನದಲ್ಲಿ ಶೇ. ೭೦ ರಷ್ಟು ಯಶಸ್ವಿಯಾಗಿದೆ. ಕೆಲವೆಡೆ ಬೆಳ್ಳಿ ಸಾಕ್ಷಿ-ಬೆಳ್ಳಿಮಂಡಲಗಳು ಬಹಳ ಸಕ್ರಿಯವಾಗಿದ್ದರೆ, ಕೆಲವೆಡೆ ಇನ್ನೂ ಎದ್ದೇ ಇಲ್ಲ. ಇದು ಬಿತ್ತಿದ ಎಲ್ಲವೂ ಮೊಳಕೆಯೊಡೆಯುವುದಿಲ್ಲವೆಂಬ ಮಾತಿಗೆ ನಿದರ್ಶನ. ಉಳಿದಂತೆ ನಮ್ಮ ಹಿಂದಣವನ್ನು ನೆನಪಿಸಿಕೊಳ್ಳಲು ‘ಬೆಳ್ಳಿಹೆಜ್ಜೆ’ ಎಂಬ ಕಾರ್‍ಯಕ್ರಮ ನಡೆಸಿತು. ಕನ್ನಡದ ಹಿರಿಯ ನಟ-ನಟಿ, ನಿರ್ದೇಶಕರೂ ಸೇರಿದಂತೆ ಸಿನಿ ಜಗತ್ತಿನ ಮಹನೀಯರನ್ನು ಕರೆದು ಕುಳ್ಳಿರಿಸಿ, ಅವರ ಅನುಭವವನ್ನು ಕೇಳುವಂಥ ಕಾರ್‍ಯಕ್ರಮ. ಇದು ಕೊಂಚ ಜನಪ್ರಿಯತೆ ತಂದುಕೊಟ್ಟಿದೆ. ಉಳಿದಂತೆ ನಡೆಯುವ ಮಾರ್ಗದ ನಕ್ಷೆಯನ್ನು ರೂಪಿಸಿಕೊಂಡಿದ್ದು ದೊಡ್ಡದು, ಮುಟ್ಟಿದ್ದು ಕಡಿಮೆ. Continue reading

