ಚೆಂಡೆಮದ್ದಳೆ
ಕಡಲಿಗೆ ಹೆಬ್ಬಾಗಿಲುಗಳಿಲ್ಲ…

ಬ್ರಹ್ಮಚಾರಿಗಳ ಪುಟಗಳು-ಎರಡು

ಮೊದಲೇ ಹೇಳಿದ್ದೇನೆ. ಇವು ಮಸುಕು ನೆನಪುಗಳೆಂದು. ಹಾಗಾಗಿ ಸರಿಯಾಗಿ ಉಜ್ಜಿ ತೊಳೆದರೆ ನೆನಪೇ ಅಳಿಸಿಹೋಗುವ ಭಯವಿದೆ, ನೆನೆದು ಹೋದ ಪುಸ್ತಕದ ಹಾಳೆ ಅಸ್ತಿತ್ವ ಕಳೆದುಕೊಳ್ಳುವ ಹಾಗೆ. ಇಲ್ಲಿನ ಪಾತ್ರದಲ್ಲಿ ಒಬ್ಬನಾದ ಅರವಿಂದ ಸಿಗದಾಳ್‌ಗೆ ಫೋನ್ ಮಾಡಿದ್ದೆ. ಅವನೂ ಕೆಲ ನೆನಪುಗಳನ್ನು ಸರಿಪಡಿಸಿದ.

ಅದರಂತೆ ಯೋಗೇಶ್ ಮೂಲನಿವಾಸಿಗಳಲ್ಲಿ ಒಬ್ಬರು. ಹಲಸೂರಿನ ಮನೆಯಲ್ಲಿ ಮೂಲನಿವಾಸಿಗಳೆಂದರೆ ಏಳು ಮಂದಿ. ನವೀನ್, ಹರ್ಷ, ಅರವಿಂದ ಸಿಗದಾಳ್, ನಾನು, ಅರುಣ್ ಕುಮಾರ್, ಯೋಗೀಶ್, ಚಂದ್ರಶೇಖರ ಕುಳಮರ್ವ. ಹಲಸೂರು ಮನೆ ಹೊಕ್ಕ ಮೇಲೆ ಕುಳಮರ್ವ ಬಂದು ಸೇರಿದರು. ಅವರನ್ನೂ ಮೂಲ ನಿವಾಸಿಗಳೆಂದು ತಿಳಿಯಬಹುದಂತೆ (ತಮಾಷೆಯಿಂದ). ನಂತರ ಉಳಿದವರೆಲ್ಲಾ ಬಂದು ಸೇರಿದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನವರೆಲ್ಲಾ ಇದ್ದರು. ಅರವಿಂದ ಸಿಗದಾಳನ ಊರು ಶೃಂಗೇರಿ ಬಳಿಯ ಸಿಗದಾಳ್. ನನ್ನದು ಮೂಲ ಉಡುಪಿ, ಬೆಳೆದದ್ದು ಭದ್ರಾವತಿ. ನವೀನದ್ದು ಬಂಟ್ವಾಳ ಬಳಿಯ ಅಮ್ಮೆಂಬಳ. ಹರ್ಷನದ್ದು ಮೂಲ ಮಂಗಳೂರು ಹಾಗೂ ಕುದುರೆಮುಖ. ಚಂದ್ರಶೇಖರ ಕುಳಮರ್ವನವರದ್ದು ಮಂಜೇಶ್ವರ. ಯೋಗೀಶನದ್ದೂ ಕುದುರೆಮುಖವೇ. ರಮೇಶ್ ಕುಮಾರ್ ನಾಯಕರದ್ದು ಹೊನ್ನಾವರ ಬಳಿಯ ಮಂಕಿ. ಶ್ರೀನಿಧಿಯದ್ದು ಭದ್ರಾವತಿ. ಇದು ಈ ಪಾತ್ರಗಳ ಊರು ಪುರಾಣ.

ಹಲಸೂರು ಮನೆಯಲ್ಲಿ ನಾವೆಲ್ಲಾ ಒಟ್ಟಾದ ಬಗ್ಗೆ ನಮಗೂ ಕುತೂಹಲವಿದೆ. ಹೇಗೆ ಸಂಬಂಧಗಳು, ಸ್ನೇಹಗಳು ತನ್ನ ಹಸ್ತವನ್ನು ಚಾಚಿಕೊಂಡು ಬರಸೆಳೆದುಕೊಳ್ಳುತ್ತವೆ ಎನ್ನುವುದಕ್ಕೆ ನಮ್ಮದೂ ಉದಾಹರಣೆ. ಬೆಂಗಳೂರಿನಂಥ ಊರಿನಲ್ಲಿ ಒಬ್ಬೊಬ್ಬರೇ ಪ್ರತ್ಯೇಕ ರೂಮ್‌ಗಳನ್ನು ಮಾಡಿಕೊಂಡು ಬದುಕುವಷ್ಟು ಆರ್ಥಿಕವಾಗಿ ಶಕ್ತರಾಗಿರಲಿಲ್ಲ. ಈಗಲೂ ಇದ್ದಾರಲ್ಲಾ ಬಹಳಷ್ಟು ಮಂದಿ. ಜತೆಗೆ ಬ್ರಹ್ಮಚಾರಿಗಳೆಂದರೆ ಹಾಗೇ ತಾನೇ.

ಸಾಫ್ಟ್‌ವೇರ್ ಹಾಗೂ ಐಟಿ ವಲಯ ಬಲಗೊಂಡ ಮೇಲೆ ಬ್ರಹ್ಮಚಾರಿಗಳಿಗೆ ಬಲ ಬಂದಿದೆ. ಬ್ರಹ್ಮಚಾರಿಗಳೆಂದರೆ ಮದುವೆಗೆ ಸಿದ್ಧತೆ ನಡೆಸಿರುವವರು ಎನ್ನುವ ಅರ್ಥ ಬಂದಿದೆ. ನಮ್ಮದು ಬಿಡಿ, ಬಹಳಷ್ಟು ಮಂದಿ ಮದುವೆ ಎಂಬುದನ್ನೇ ಆಲೋಚಿಸುತ್ತಿರಲಿಲ್ಲ. ನಮ್ಮ ಕಾಲಿನ ಮೇಲೆ ನಿಂತದ್ದಕ್ಕಿಂತ ಮತ್ತೊಬ್ಬರ ಬೆನ್ನ ಮೇಲೆ ಕೂತದ್ದೇ ಹೆಚ್ಚು. ನನ್ನ ವಿಷಯದಲ್ಲಂತೂ ನೂರಕ್ಕೆ ನೂರರಷ್ಟು ಸತ್ಯ.

ಆದರೂ ಅನಿವಾರ್ಯತೆ ಮತ್ತು ಅಸಹಾಯಕತೆ ಬೆಸೆಯುವ ಸಂಬಂಧ ಅನನ್ಯವೇ. ಎರಡು ಮಾತಿಲ್ಲ. ಬಹುಶಃ ನನಗೆ ಅನ್ನಿಸುವುದೂ ಇದೇ. ಇಂಥದೊಂದು ಅನಿವಾರ್ಯತೆ ನಮ್ಮೆಲ್ಲರನ್ನೂ ಬೆಸೆದಿತ್ತು. ನಾನು ಹೊಸದಿಗಂತ ಪತ್ರಿಕೆಯಲ್ಲಿ, ನವೀನ್ ಉದಯವಾಣಿಯಲ್ಲಿ ಹಾಗೂ ಹರ್ಷ ಸಹ ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದೆವು. ದಯವಿಟ್ಟು ಇಸವಿ, ತಿಂಗಳು, ವಾರಗಳನ್ನು ಕೇಳಬೇಡಿ. ಅವೆಲ್ಲಾ ಸಾಫ್ ಮಾಡಿ ನೋಡಲಾಗದಷ್ಟು ಮಸುಕಾಗಿವೆ. ಏನೂ ಕಾಣದು. ಎಲ್ಲೆಲ್ಲೋ ಇಸವಿಗಳು ಅಸ್ಪಷ್ಟವಾಗಿರಬಹುದು ಅಷ್ಟೇ.

ಮೂವರೂ ಅಪರಾಧ ವಿಷಯದ ವರದಿಗಾರರೇ (ಕ್ರೈಮ್ ರಿಪೋರ್ಟರ್‍ಸ್). ನಾನು ತ್ಯಾಗರಾಜ ನಗರದಲ್ಲಿ ಅರವಿಂದ ಸಿಗದಾಳ್‌ನೊಂದಿಗೆ ರೂಮ್ ಮಾಡಿಕೊಂಡಿದ್ದೆ. ಅವನು ಅವೆನ್ಯೂ ರಸ್ತೆಯ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ. ನಿತ್ಯವೂ ನಾವೂ ಮೂವರು ಮಂದಿ ಅಪರಾಧ ಸುದ್ದಿಗಾಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಂಧಿಸುತ್ತಿದ್ದೆವು. ನಮ್ಮದು ಒಂದು ಸಿಂಡಿಕೇಟ್. ಸಾಮಾನ್ಯವಾಗಿ ಯಾರಾದರೂ ವಿಶೇಷ ಸುದ್ದಿಗೆಂದು ಹೋದರೆ ಅವರಿಗೆ (ರೋಟೀನ್ ಕ್ರೈಮ್ಸ್) ಎಂದಿನ ಅಪರಾಧ ಸುದ್ದಿಗಳನ್ನು ಕೊಡಬೇಕಿತ್ತು. ಇದು ವಿನಿಮಯದ ವಿಧಾನ.  ಎಂದಿಗೂ ನಿಯಮ ಮುರಿಯುವ ಪ್ರಯತ್ನ ನಡೆಯುತ್ತಿರಲಿಲ್ಲ.

ನನ್ನ ಕಚೇರಿ ಕ್ವೀನ್ಸ್ ರೋಡ್‌ನಲ್ಲಿತ್ತು. ಹರ್ಷನದ್ದೂ ಸಹ ಅಲ್ಲಿಯೇ ಹತ್ತಿರ. ನವೀನದ್ದು ಮಣಿಪಾಲ್ ಸೆಂಟರ್‌ನಲ್ಲಿ. ಹೀಗಿರುವಾಗ ನನಗೆ ಕೆಲಸ ಮುಗಿಸಿ ತ್ಯಾಗರಾಜ ನಗರಕ್ಕೆ ಹೋಗಿ ಬರುವುದು ಕೊಂಚ ತ್ರಾಸು ಎನಿಸುತ್ತಿತ್ತು. ಆದರೆ ಯಾರಾದರೂ ಜತೆಗೆ ಸೇರುವ ಅಥವಾ ಪ್ರತ್ಯೇಕವಾಗಿ ರೂಮ್ ಮಾಡುವಷ್ಟು ಆರ್ಥಿಕವಾಗಿ ಸಬಲನಾಗಿರಲಿಲ್ಲ. ಒಮ್ಮೊಮ್ಮೆ ನನಗೆ ಶಕ್ತಿ ತುಂಬುತ್ತಿದ್ದವ ಸಿಗದಾಳನೇ. ಹಾಗೆಂದೂ ಅವನ ಆರ್ಥಿಕ ಸ್ಥಿತಿಯೂ ಬಹಳ ಚೆನ್ನಾಗಿರಲಿಲ್ಲ, ಆದರೆ ನನಗಿಂತ ಕೊಂಚ ಪರವಾಗಿಲ್ಲ. ಅಂದರೆ ಒಂದೆಳೆಯಷ್ಟೇ.

ಈಗ ಕೋಣೆ ಗೋಡೆಯ ಪ್ರತಿ ಹದವೂ ನೆನಪಾಗುತ್ತಿದೆ. ಮನೆಯ ಉಪ್ಪರಿಗೆ ಮೇಲೆ ಕುಳಿತ ಮಗು ರಸ್ತೆಯಲ್ಲಿ ಹೋಗುತ್ತಿರುವ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವ, ಸಂಭ್ರಮಿಸುವಂತೆ ತೋರುತ್ತಿದೆ. ಆದರೆ ಮೆರವಣಿಗೆ ಬಹಳ ದೂರಕ್ಕೆ ಸಾಗಿ ಹೋಗಿದೆ                                                        (ಸಶೇಷ)

10 Responses to “ಬ್ರಹ್ಮಚಾರಿಗಳ ಪುಟಗಳು-ಎರಡು”

  1. ಧಾರಾವಾಹಿ ಸಖತ್ ಇಂಟರೆಸ್ಟಿಂಗ್ ಆಗಿದೆ… ಮುಂದಿನ ಕಂತಿಗಾಗಿ ಕಾತರದಿಂದ ಎದುರು ನೋಡುತ್ತಿರುವೆ…

    ಶುಭದಾ

  2. ಸದ್ಯವೇ ಬರೆಯುತ್ತೇನೆ. ಪ್ರೋತ್ಸಾಹಕ್ಕೆ ಧನ್ಯವಾದ.
    ನಾವಡ

  3. ನಾವಡರಿಗೆ
    ನಮಸ್ಕಾರ..

    ನಿಮ್ಮ ನೆನಪುಗಳು ಯಾವುದೂ ಮುಸುಕಾಗಿಲ್ಲ. ಮುಸುಕಾಗಿದ್ದರೆ ಇಷ್ಟು ಚೆನ್ನಾಗಿ ಹೇಳಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲವೇನೋ? ಎಲ್ಲವೂ ಹೊಸತಾಗಿ ಹೇಳಿದಂತಿದೆ. ಇದೆಲ್ಲಾ ಸುಮ್ಮನೆ, ಇದರಲ್ಲೇನೂ ಅಂತಹ ವಿಶೇಷ ಇಲ್ಲ ಅಂತ ಬರೆಯಲು ಹೊರಟಾಗಲೇ ಅನೇಕ ವಿಶೇಷಗಳು ಕಾಣಸಿಗುವುದು. ಬ್ರಹ್ಮಚಾರಿಯ ಬದುಕಿನ್ನೊದ್ದಕ್ಕೂ ಪ್ರಾಮಾಣಿಕ ಅಭಿವ್ಯಕ್ತಿಯಿದೆ. ಇಷ್ಟವಾಯಿತು. ಮುಂದಿನ ಕಂತಿಗಾಗಿ ಎದುರು ನೋಡುತ್ತೇನೆ.

    ಧನ್ಯವಾದಗಳು.

    ಜೋಮನ್.

  4. ನಮಸ್ಕಾರ,

    ಚೆನ್ನಾಗಿ ಬರ್ತಾ ಇದೆ. ಹೊಸತನ ಇದೆ. ಇನ್ನೂ ಬರೆಯಿರಿ.

  5. ಜೋಮನ್ ಮತ್ತು ಮನಸ್ವಿನಿಯವರಿಗೆ,
    ಸುಮ್ಮನೆ ಹೀಗೆ ಬರೆಯಲು ಹೋದೆ. ಬರುತ್ತಿರುವ ಪ್ರೋತ್ಸಾಹ ಕಂಡ್ರೆ ಖುಷಿಯಾಗುತ್ತೆ. ಅಭಿಪ್ರಾಯಕ್ಕೆ ಧನ್ಯವಾದ.
    ನಾವಡ

  6. serial bareyoke shuru madiddira?!!! chennagide. barithiri sir…

  7. ನಾವಡರೇ ನಮಸ್ಕಾರ.
    ಬ್ರಹ್ಮಚಾರಿಯ ಪುಟಗಳು ತುಂಬಾ ಚೆನ್ನಾಗಿ ಬರುತ್ತಿವೆ. ಈ ಬ್ರಹ್ಮಚಾರಿ ಕುಟುಂಬದ ಸದಸ್ಯನಾಗಿ ನಾನೂ ಇದರಲ್ಲೊಂದು ಪಾತ್ರವಾಗಿರುವುದು ಹೆಮ್ಮೆ, ಖುಶಿ ಅನಿಸುತ್ತಿದೆ. ಮೊದಲ ಮುಊರು ದಿನ ಬ್ಲಾಗ್ ಗೆ ಬರಲಾಗಲಿಲ್ಲ. ಇಂದು (ಭಾನುವಾರ ರಾತ್ರಿ) ಕಚೇರಿ ಕೆಲಸ ಮುಗಿಸಿ ಬ್ಲಾಗ್ ಗೆ ಭೇಟಿ ಮಾಡಿದೆ. ಎಲ್ಲ ನಾಲ್ಕು ಪುಟಗಳನ್ನೂ ಒಟ್ಟಿಗೇ ಓದಿ ಮುಗಿಸಿದೆ.
    ದ್ಯೆನಿಕ ಜಂಜಾಟಗಳಲ್ಲಿ ಮಸುಕಾಗಿರುವ ನೆನಪುಗಳಿಗೆ ಸಾಣೆ ಹಿಡಿದು ಹೊಳಪು ನೀಡುವ ಒಳ್ಳೆಯ ಪ್ರಯತ್ನ ಖುಶಿ ಕೊಟ್ಟಿತು. ಎಂದೋ ಕೇಳಿದ ಹಳೆಯ ಚಿತ್ರಗೀತೆಯೊಂದು ನೆನಪಾಗುತ್ತಿದೆ…
    ಎಂಥ ದಿನಗಳು ಕಳೆದವೋ
    ಮತ್ತೆಂದೂ ಮರಳಿ ಬಾರವೋ…

    ಉಳಿದ ಸಾಲುಗಳು ನೆನಪಿಗೆ ಬರುತ್ತಿಲ್ಲ. ನಮಸ್ಕಾರ, ಮತ್ತೆ ಬರುವೆ.

  8. ನಮಸ್ಕಾರ,

    ನೀವು ನಮ್ಮೂರಿನವರೇ (ಭದ್ರಾವತಿ)! ಇಷ್ಟು ದಿನದಿಂದ ಓದುತ್ತಿದ್ದೆ ನಿಮ್ಮ ಬ್ಲಾಗು.. ಗೊತ್ತೇ ಇರಲಿಲ್ಲ ನೋಡಿ.!

  9. ಶೀನಿಧಿ, ಕುಳಮರ್ವರಿಗೆ ಧನ್ಯವಾದ.
    ವಿಕಾಸ್ ಹೆಗಡೆಯವರೇ, ನೀವೂ ಭದ್ರಾವತಿಯವರಾ? ಎಲ್ಲಿ ? ನಾನು ಬೆಳೆದದ್ದು ಭದ್ರಾವತಿಯ ಹೊಸಮನೆ ಪ್ರದೇಶದಲ್ಲಿ.
    ನಾವಡ

  10. ಹೌದು.. ನಾವು ಮೊದಲು ಇದ್ದದ್ದು ನ್ಯೂಟೌನ್ ಸಿಲ್ವರ್ ಜುಬಿಲಿ ಸ್ಕೂಲ್ ಹತ್ತಿರ. ಆಮೇಲೆ ಹೊಸ ಸೇತುವೆ ರಸ್ತೆ ಹತ್ತಿರದಲ್ಲಿ. ಈಗಲೂ ಅಲ್ಲೇ ಇರುವುದು ಮನೆ.;)


Leave a Reply