ಮತ್ತೊಂದು ಅಂಶವನ್ನು ಸ್ಪಷ್ಟಪಡಿಸುವುದಾದರೆ ಸರಕಾರಕ್ಕೂ ನೈತಿಕತೆಯಿಲ್ಲ. ಅದು ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ, ಬಿಜೆಪಿ ಆಗಲೀ, ಯಾವುದೇ ಪಕ್ಷದ ಸರಕಾರವು ನಕ್ಸಲ್ ಚಳವಳಿಯನ್ನು ಬೆಂಬಲಿಸದು. ವಾಸ್ತವ ಹೀಗಿರುವಾಗ ಬಿಜೆಪಿ ಸರಕಾರವಂತೂ ನೇಮಿಸಲೇ ಬಾರದಿತ್ತು. ಆದರೂ ಒಬ್ಬ ನಕ್ಸಲ್ ಸಹಾನುಭೂತಿಯವರನ್ನು ರಂಗಾಯಣಕ್ಕೆ ನೇಮಿಸುವ ಮೂಲಕ ಸರಕಾರವೂ ನಕ್ಸಲ್ ಚಳವಳಿಯನ್ನು ನೈತಿಕವಾಗಿ ಬೆಂಬಲಿಸಿದಂತಾಗಿದೆ.
ಹಾಗಾದರೆ ಯಾರು ಬಂಡವಾಳಶಾಹಿಗಳು ? -ಈ ಪ್ರಶ್ನೆಯೇ ಸದಾ ನನ್ನನ್ನು ಕಾಡುತ್ತಿರುವಂಥದ್ದು. ಮಂಗಳವಾರ ರಾಜ್ಯ ಸರಕಾರ ಮೈಸೂರಿನ ರಂಗಾಯಣಕ್ಕೆ ನಾಟಕಕಾರ ಲಿಂಗದೇವರು ಹಳೆಮನೆಯವರನ್ನು ನೇಮಕ ಮಾಡಲು ನಿರ್ಧರಿಸಿದ ಮೇಲೆ ಹಾಗೂ ಅದನ್ನು ಅವರು ಒಪ್ಪಿಕೊಂಡ ಮೇಲೆ ಮತ್ತೆ ಅದೇ ಪ್ರಶ್ನೆ ಕಾಡುತ್ತಿದೆ.

ಸರಕಾರದ ನೇಮಕವನ್ನು ಪ್ರಶ್ನಿಸುವ ಉದ್ದೇಶವಲ್ಲ, ಆದರೆ ಅದರ ಹಿಂದಿನ ನಿರುದ್ದೇಶದ ಆಷಾಢಭೂತಿತನವನ್ನು ಪ್ರಶ್ನಿಸುವಂಥದ್ದು. ಸದಾ ತನ್ನ ವಿರೋಧಿಗಳನ್ನು ತನ್ನ ಹಂಗಿನ ಅರಮನೆಯಲ್ಲಿ ಬಂಧಿಸಲು ಹವಣಿಸುತ್ತಿರುವ ಸರಕಾರದೊಂದಿಗೆ ರಾಜಿಗಿಳಿಯುವವರ ಬಗ್ಗೆ ನನ್ನ ಪ್ರಶ್ನೆ. ಇಲ್ಲಿ ಹಳೆಮನೆಯವರೂ ನೆಪ ಮಾತ್ರ. ಆದರೆ ರಾಜಕಾರಣ-ಆಡಳಿತ ಪಕ್ಷಕ್ಕೆ ಹತ್ತಿರವಿದ್ದು, ಜನರೆದುರು ದೂರವಿದ್ದಂತೆ ನಟಿಸುವ ಆಷಾಢಭೂತಿಗಳು ತಾವೇ ಒದಗಿಸಿಕೊಳ್ಳುವ ಅವಕಾಶಗಳಿಗೆ ‘ಪ್ರತಿಭೆ’, ‘ಅರ್ಹತೆ’ಯ ಹಣೆಪಟ್ಟಿ ಕಟ್ಟುವ ಅವಕಾಶವಾದಿಗಳು ಬಹಳ ಮಂದಿ ಇದ್ದಾರೆ. ಇಂಥ ‘ಗಿರಗಟ್ಲಿ‘ಗಳು (ಗಾಳಿಗೆ ಬಂದ ಕಡೆ ತಿರುಗುವವರು) ಪ್ರತಿ ಸರಕಾರದ ಸಂದರ್ಭದಲ್ಲೂ ಇರುತ್ತಾರೆ. ಸರಕಾರಕ್ಕೂ, ತಮ್ಮನ್ನು ಟೀಕಿಸುವವರಿಂದಲೇ ಶಹಭಾಷ್ ಗಿರಿ ಪಡೆಯಬೇಕೆಂಬ ಚಟ. ಅದನ್ನು ನಗದಾ (ಎನ್‌ಕ್ಯಾಶ್)ಗಿಸಿಕೊಳ್ಳುವ ಮಂದಿಗೆ ಅದು ಕೊಳ್ಳೆ ಹೊಡೆಯುವ ಅವಕಾಶ.
ಬಂಡವಾಳಶಾಹಿಗೆ ಲಾಭಕೋರತನ ಮುಖ್ಯವೇ ಹೊರತು ಮತ್ತೇನೂ ಅಲ್ಲ. ಸಿದ್ಧಾಂತವಿಲ್ಲ, ಪಕ್ಷವಿಲ್ಲ. ಎಲ್ಲರಿಗೂ ಶತ್ರು, ಎಲ್ಲರಿಗೂ ಮಿತ್ರ. ಗಾಳಿಗೆ ತಕ್ಕಂತೆ ತೂರಿಕೊಳ್ಳುವ ಜಾಯಮಾನ. ಯಾವುದಾದರೂ ಮೂಲದಿಂದ ಎಲ್ಲ ಅವಕಾಶವೂ ತನಗೇ ಸಿಗಲೆಂದು ಹಪಹಪಿಸುವ ಮತ್ತು ದಕ್ಕಿಸಿಕೊಳ್ಳಲೆತ್ನಿಸುವ ಏಕಮೇವ ನಿಷ್ಠೆ ಅವನದ್ದು. ಇಂಥವನ ಚಹರೆ ಈ ನೇಮಕದಲ್ಲಿ ಸ್ಟಷ್ಟ. Continue Reading »
